Tirupati laddu ‌row| ಸನಾತನ ಧರ್ಮ ತೊಡೆದುಹಾಕಲು ಪ್ರಯತ್ನಿಸಿದರೆ ನಾಶ: ಪವನ್ ಕಲ್ಯಾಣ್
x

Tirupati laddu ‌row| ಸನಾತನ ಧರ್ಮ ತೊಡೆದುಹಾಕಲು ಪ್ರಯತ್ನಿಸಿದರೆ ನಾಶ: ಪವನ್ ಕಲ್ಯಾಣ್

ಲಡ್ಡು ಕಲಬೆರಕೆ ವಿಷಯ ʻಮಂಜುಗಡ್ಡೆಯ ತುದಿʼ. ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ತೆಗೆದುಕೊಂಡ ಹಲವು ನಿರ್ಧಾರ ಕುರಿತು ತನಿಖೆ ಮಾಡಬೇಕು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.


ತಿರುಪತಿ ಲಡ್ಡು ಕಲಬೆರಕೆ ವಿಷಯವನ್ನು ಸನಾತನ ಧರ್ಮದ ಮೇಲಿನ ದಾಳಿ ಎಂದು ಬಣ್ಣಿಸಿರುವ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಸನಾತನವನ್ನು ವೈರಸ್‌ಗೆ ಹೋಲಿಸಿದ್ದ ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ʻಸನಾತನ ಧರ್ಮವು ವೈರಸ್‌ನಂತೆ ಮತ್ತು ಅದು ನಾಶವಾಗುತ್ತದೆ ಎಂದು ಹೇಳಿದ್ದಿರಿ. ಯಾರು ಏನು ಹೇಳಿದರೂ, ಸನಾತನ ಧರ್ಮವನ್ನು ತೊಡೆದುಹಾಕಲು ಸಾಧ್ಯವಿಲ್ಲ. ಅಂಥ ಪ್ರಯತ್ನ ಮಾಡಿದವರು ನಾಶವಾಗುತ್ತಾರೆ,ʼ ಎಂದು ಪವನ್ ಕಲ್ಯಾಣ್ ಅವರು ತಿರುಪತಿಯಲ್ಲಿ ಹೇಳಿದರು.

ʻಸನಾತನ ಧರ್ಮವನ್ನು ರಕ್ಷಿಸಲು ರಾಷ್ಟ್ರೀಯ ಶಾಸನ ತರಬೇಕು; ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸನಾತನ ಧರ್ಮ ಸಂರಕ್ಷಣಾ ಮಂಡಳಿಗಳನ್ನು ಸ್ಥಾಪಿಸಬೇಕಿದೆ. ನಾನು ಸನಾತನ ಹಿಂದೂ.ಧರ್ಮವನ್ನು ಜೀವ ತೆತ್ತು ರಕ್ಷಿಸುತ್ತೇನೆ. ನಿಮ್ಮಂಥವರು [ಉದಯನಿಧಿ] ಬರಬಹುದು, ಹೋಗಬಹುದು. ಆದರೆ, ಸನಾತನ ಧರ್ಮವು ಶಾಶ್ವತವಾಗಿರುತ್ತದೆ. ಅದು ನಿಲ್ಲುವುದಿಲ್ಲ,ʼ ಎಂದರು.

ಕಲಬೆರಕೆ ʻಮಂಜುಗಡ್ಡೆಯ ತುದಿʼ: ʻ ಲಡ್ಡು ಕಲಬೆರಕೆ ವಿಷಯ ಮಂಜುಗಡ್ಡೆಯ ತುದಿ. ಹಿಂದಿನ ವೈಎಸ್ಆರ್ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ಹಲವು ನಿರ್ಧಾರಗಳನ್ನು ತನಿಖೆ ಮಾಡಬೇಕಿದೆ. ಐದು ವರ್ಷಗಳಲ್ಲಿ ಎಷ್ಟು ಕೋಟಿ ರೂ. ಸಂಗ್ರಹಿಸಿದ್ದಾರೆ ಎಂಬುದರ ತನಿಖೆ ಮಾಡಬೇಕಿದೆ. ಕಲಬೆರಕೆಗೆ ಜಗನ್ ಮೋಹನ್ ರೆಡ್ಡಿ ಅವರನ್ನು ವೈಯಕ್ತಿಕವಾಗಿ ದೂಷಿಸುತ್ತಿಲ್ಲ; ಆದರೆ, ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದ ಹಿಂದಿನ ಮಂಡಳಿಯನ್ನು ದೂಷಿಸುತ್ತಿದ್ದೇನೆ,ʼ ಎಂದು ಹೇಳಿದರು.

ನಾಯ್ಡು ಆರೋಪ ಸತ್ಯ: ತಿರುಪತಿ ಲಡ್ಡುವನ್ನು ಕಲಬೆರಕೆ ತುಪ್ಪ ಬಳಸಿ ತಯಾರಿಸಲಾಗಿದೆ ಎಂಬ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆರೋಪ ನಿಜ ಎಂದು ಅವರು ಹೇಳಿದರು. ಆದರೆ, ನಾಯ್ಡು ಅವರ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಪ್ರಯೋಗಾಲಯದ ವರದಿ ʻಸ್ಪಷ್ಟವಾಗಿಲ್ಲʼ. ತಿರಸ್ಕರಿಸಿದ ತುಪ್ಪವನ್ನುʼ ಕೂಡ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸುಪ್ರೀಂ ಹೇಳಿದೆ.

ಲಡ್ಡುಗಳ ಕಲಬೆರಕೆಗೆ ಸಂಬಂಧಿಸಿದಂತೆ 11 ದಿನಗಳ ಪ್ರಾಯಶ್ಚಿತ್ತ ಆಚರಣೆ ಭಾಗವಾಗಿ ತಿರುಮಲಕ್ಕೆ ಮೂರು ದಿನಗಳ ಭೇಟಿ ನೀಡಿರುವ ಪವನ್ ಕಲ್ಯಾಣ್, ಬುಧವಾರ ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

Read More
Next Story