ವಿಶ್ವಾದ್ಯಂತ ಎಕ್ಸ್ ಸ್ಥಗಿತ: ಕ್ಲೌಡ್‌ಫ್ಲೇರ್ ಸಮಸ್ಯೆಯಿಂದಾಗಿ ಭಾರೀ ವ್ಯತ್ಯಯ
x

ವಿಶ್ವಾದ್ಯಂತ 'ಎಕ್ಸ್' ಸ್ಥಗಿತ: ಕ್ಲೌಡ್‌ಫ್ಲೇರ್ ಸಮಸ್ಯೆಯಿಂದಾಗಿ ಭಾರೀ ವ್ಯತ್ಯಯ

ತಾಂತ್ರಿಕ ದೋಷಗಳನ್ನು ಪತ್ತೆಹಚ್ಚುವ ವೆಬ್‌ಸೈಟ್ 'ಡೌನ್‌ಡಿಟೆಕ್ಟರ್' ಪ್ರಕಾರ, ಸಂಜೆ 5:15 ರ ವೇಳೆಗೆ 11,500 ಕ್ಕೂ ಹೆಚ್ಚು ಬಳಕೆದಾರರು 'ಎಕ್ಸ್' ಸ್ಥಗಿತಗೊಂಡಿರುವ ಬಗ್ಗೆ ವರದಿ ಮಾಡಿದ್ದಾರೆ.


Click the Play button to hear this message in audio format

ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' (ಹಿಂದಿನ ಟ್ವಿಟರ್) ಮಂಗಳವಾರ ಸಂಜೆ ವಿಶ್ವಾದ್ಯಂತ ತೀವ್ರ ತಾಂತ್ರಿಕ ಸಮಸ್ಯೆಗೆ ಒಳಗಾಗಿದ್ದು, ಕೋಟ್ಯಂತರ ಬಳಕೆದಾರರು ಪರದಾಡುವಂತಾಯಿತು. ಲಾಗಿನ್ ಆಗಲು, ಹೊಸ ಪೋಸ್ಟ್‌ಗಳನ್ನು ನೋಡಲು ಹಾಗೂ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡನ್ನೂ ಬಳಸಲು ಸಾಧ್ಯವಾಗದೆ ಬಳಕೆದಾರರು ಗೊಂದಲಕ್ಕೀಡಾದರು. ಕೆಲವೇ ನಿಮಿಷಗಳಲ್ಲಿ "Twitter down" ಮತ್ತು "X down" ಎಂಬ ಹ್ಯಾಶ್‌ಟ್ಯಾಗ್‌ಗಳು ಗೂಗಲ್‌ನಲ್ಲಿ ಟ್ರೆಂಡ್ ಆದವು.

ತಾಂತ್ರಿಕ ದೋಷಗಳನ್ನು ಪತ್ತೆಹಚ್ಚುವ ವೆಬ್‌ಸೈಟ್ 'ಡೌನ್‌ಡಿಟೆಕ್ಟರ್' ಪ್ರಕಾರ, ಸಂಜೆ 5:15 ರ ವೇಳೆಗೆ 11,500 ಕ್ಕೂ ಹೆಚ್ಚು ಬಳಕೆದಾರರು 'ಎಕ್ಸ್' ಸ್ಥಗಿತಗೊಂಡಿರುವ ಬಗ್ಗೆ ವರದಿ ಮಾಡಿದ್ದಾರೆ. ಶೇಕಡ 47 ರಷ್ಟು ಮಂದಿ ಫೀಡ್ ಸಮಸ್ಯೆಯ ಬಗ್ಗೆ, ಶೇಕಡ 30 ರಷ್ಟು ವೆಬ್‌ಸೈಟ್ ಸಮಸ್ಯೆಯ ಬಗ್ಗೆ ಮತ್ತು ಶೇಕಡ 23 ರಷ್ಟು ಸರ್ವರ್ ಸಂಪರ್ಕದ ಬಗ್ಗೆ ದೂರು ನೀಡಿದ್ದಾರೆ. ಆದರೆ, ಈ ಬಗ್ಗೆ 'ಎಕ್ಸ್' ಸಂಸ್ಥೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ವ್ಯತ್ಯಯಕ್ಕೆ ಕಾರಣವೇನು?

ಈ ಜಾಗತಿಕ ಸ್ಥಗಿತದ ಹಿಂದೆ ವೆಬ್ ಮೂಲಸೌಕರ್ಯ ಒದಗಿಸುವ ಪ್ರಮುಖ ಕಂಪನಿ 'ಕ್ಲೌಡ್‌ಫ್ಲೇರ್' (Cloudflare)ನಲ್ಲಿ ಉಂಟಾದ ತಾಂತ್ರಿಕ ದೋಷವೇ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. 'ಕ್ಲೌಡ್‌ಫ್ಲೇರ್' ಜಾಲತಾಣಗಳಿಗೆ ಸೈಬರ್ ದಾಳಿಯಿಂದ ರಕ್ಷಣೆ ನೀಡುವುದು ಮತ್ತು ಟ್ರಾಫಿಕ್ ನಿರ್ವಹಣೆಯಂತಹ ಪ್ರಮುಖ ಸೇವೆಗಳನ್ನು ಒದಗಿಸುತ್ತದೆ. ಇದರಲ್ಲಿನ ಸಮಸ್ಯೆಯಿಂದಾಗಿ 'ಎಕ್ಸ್' ಮಾತ್ರವಲ್ಲದೆ, 'ಲೆಟರ್‌ಬಾಕ್ಸ್‌ಡ್' (Letterboxd) ನಂತಹ ಇತರ ಹಲವು ಜಾಲತಾಣಗಳೂ ಸ್ಥಗಿತಗೊಂಡಿದ್ದವು.

ಬಳಕೆದಾರರಿಗೆ ಕಂಡ ದೋಷ ಸಂದೇಶ

ಸ್ಥಗಿತಗೊಂಡಿದ್ದ ಜಾಲತಾಣಗಳಿಗೆ ಭೇಟಿ ನೀಡಿದ ಬಳಕೆದಾರರಿಗೆ "Cloudflare's network ನಲ್ಲಿ ಆಂತರಿಕ ಸರ್ವರ್ ದೋಷವಿದೆ, ದಯವಿಟ್ಟು ಕೆಲವು ನಿಮಿಷಗಳ ನಂತರ ಮತ್ತೆ ಪ್ರಯತ್ನಿಸಿ" ಎಂಬ ಸಂದೇಶ ಕಾಣಿಸುತ್ತಿತ್ತು. ಸ್ವತಃ 'ಡೌನ್‌ಡಿಟೆಕ್ಟರ್' ವೆಬ್‌ಸೈಟ್ ಕೂಡ ಈ ಸಮಸ್ಯೆಯಿಂದಾಗಿ ಕೆಲಕಾಲ ಸ್ಥಗಿತಗೊಂಡಿತ್ತು.

ಕ್ಲೌಡ್‌ಫ್ಲೇರ್‌ನ ಸ್ಪಷ್ಟನೆ

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ 'ಕ್ಲೌಡ್‌ಫ್ಲೇರ್', "ಹಲವು ಗ್ರಾಹಕರ ಮೇಲೆ ಪರಿಣಾಮ ಬೀರಿರುವ ಸಮಸ್ಯೆಯ ಬಗ್ಗೆ ನಮಗೆ ತಿಳಿದಿದೆ ಮತ್ತು ನಾವು ಅದನ್ನು ತನಿಖೆ ಮಾಡುತ್ತಿದ್ದೇವೆ. ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ವಿವರಗಳನ್ನು ಒದಗಿಸಲಾಗುವುದು," ಎಂದು ತಿಳಿಸಿದೆ.

Read More
Next Story