HAPPINESS INDEX | ಫಿನ್ಲೆಂಡಿಗೆ  7ನೇ ಬಾರಿ ಅಗ್ರಸ್ಥಾನ; ಭಾರತಕ್ಕೆ 126ನೇ ಸ್ಥಾನ!
x

HAPPINESS INDEX | ಫಿನ್ಲೆಂಡಿಗೆ 7ನೇ ಬಾರಿ ಅಗ್ರಸ್ಥಾನ; ಭಾರತಕ್ಕೆ 126ನೇ ಸ್ಥಾನ!

ವಿಶ್ವಸಂಸ್ಥೆ, ಮಾ.20- ವಿಶ್ವಸಂಸ್ಥೆ ಬಿಡುಗಡೆಗೊಳಿಸಿದ ವರ್ಲ್ಡ್ ಹ್ಯಾಪಿನೆಸ್ ವರದಿ ಪ್ರಕಾರ, ಫಿನ್‌ಲ್ಯಾಂಡ್ ಸತತ ಏಳನೇ ಬಾರಿ ಜಗತ್ತಿನ ಅತ್ಯಂತ ಸಂತೋಷಕರ ರಾಷ್ಟ್ರವಾಗಿ ಹೊರಹೊಮ್ಮಿದೆ. . ಭಾರತಕ್ಕೆ 126ನೇ ಸ್ಥಾನ, 143 ದೇಶಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನ ಕೊನೆಯಲ್ಲಿ!


ವಿಶ್ವಸಂಸ್ಥೆ, ಮಾ.20- ವಿಶ್ವಸಂಸ್ಥೆ ಬಿಡುಗಡೆಗೊಳಿಸಿದ ವರ್ಲ್ಡ್ ಹ್ಯಾಪಿನೆಸ್ ವರದಿ ಪ್ರಕಾರ, ಫಿನ್‌ಲ್ಯಾಂಡ್ ಸತತ ಏಳನೇ ಬಾರಿ ಜಗತ್ತಿನ ಅತ್ಯಂತ ಸಂತೋಷಕರ ರಾಷ್ಟ್ರವಾಗಿ ಹೊರಹೊಮ್ಮಿದೆ.

ಸಂತೋಷದ ಸೂಚ್ಯಂಕದಲ್ಲಿ ಭಾರತ 126 ನೇ ಶ್ರೇಯಾಂಕದಲ್ಲಿದ್ದು, ಎರಡನೇ ಬಾರಿಗೆ ಕಳಪೆ ಪ್ರದರ್ಶನ ನೀಡಿದೆ. ಅಮೆರಿಕ ಮತ್ತು ಜರ್ಮನಿ ಮೊದಲಿನ 20 ದೇಶಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ; ಬದಲಾಗಿ, 23 ಮತ್ತು 24 ನೇ ಸ್ಥಾನಕ್ಕೆ ಜಾರಿವೆ. ಒಂದು ದಶಕದ ಹಿಂದೆ ಯುಎನ್ ಸಂತೋಷದ ವರದಿಯನ್ನು ಪ್ರಕಟಿಸಲು ಪ್ರಾರಂಭಿಸಿದ ನಂತರ ಇದೇ ಮೊದಲ ಬಾರಿಗೆ ಅಮೆರಿಕ ಮತ್ತು ಜರ್ಮನಿ ಮೊದಲಿನ 20 ರಾಷ್ಟ್ರಗಳಲ್ಲಿ ತಮ್ಮ ಸ್ಥಾನ ಕಳೆದುಕೊಂಡಿವೆ.

ಫಿನ್‌ಲ್ಯಾಂಡ್ ಹೊರತುಪಡಿಸಿ, ಇತರ ನಾರ್ಡಿಕ್ ದೇಶಗಳು ಪಟ್ಟಿಯ ಮೊದಲ 10 ಸ್ಥಾನಗಳಲ್ಲಿ ಇವೆ. ಡೆನ್ಮಾರ್ಕ್, ಐಸ್‌ಲ್ಯಾಂಡ್ ಮತ್ತು ಸ್ವೀಡನ್ ದೇಶಗಳು ಫಿನ್‌ಲ್ಯಾಂಡ್‌ನ ಹಿಂದೆ ಇವೆ. ಕೋಸ್ಟರಿಕಾ 12 ಮತ್ತು ಕುವೈತ್ 13 ನೇ ಸ್ಥಾನ ಪಡೆದುಕೊಂಡು, ಮೊದಲ 20 ದೇಶಗಳ ಪಟ್ಟಿಯನ್ನು ಪ್ರವೇಶಿಸಿವೆ.

ಮತ್ತೊಂದು ಗಮನಾರ್ಹ ಬೆಳವಣಿಗೆಯೆಂದರೆ, ಹೆಚ್ಚು ಜನಸಂಖ್ಯೆಯಿರುವ ಯಾವುದೇ ದೊಡ್ಡ ದೇಶ ಮೊದಲ 10 ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ ಎಂದು ವರದಿ ಹೇಳಿದೆ. ʻಮೊದಲ 10 ದೇಶಗಳಲ್ಲಿ ನೆದರ್ಲೆಂಡ್‌ ಮತ್ತು ಆಸ್ಟ್ರೇಲಿಯ ಮಾತ್ರ 15 ದಶಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿವೆ. ಮೊದಲಿನ 20 ರಲ್ಲಿ ಕೆನಡಾ ಮತ್ತು ಇಂಗ್ಲೆಂಡ್‌ ಮಾತ್ರ 30 ದಶಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿವೆ, ʼ ಎಂದು ವರದಿ ಹೇಳಿದೆ.

ಪೂರ್ವ ಯೂರೋಪಿಯನ್ ದೇಶಗಳಾದ ಸರ್ಬಿಯಾ, ಬಲ್ಗೇರಿಯಾ ಮತ್ತು ಲಾಟ್ವಿಯಾದ ಸಂತೋಷ ಸೂಚ್ಯಂಕದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಆದರೆ, ಅಫ್ಘಾನಿಸ್ತಾನ್, ಲೆಬನಾನ್ ಮತ್ತು ಜೋರ್ಡಾನ್‌ನಂತಹ ಕಲಹಪೀಡಿತ ರಾಷ್ಟ್ರಗಳ ಸೂಚ್ಯಂಕ ತೀವ್ರ ಕುಸಿತ ಕಂಡಿದೆ.

ಫಿನ್ಲೆಂಡಿನವರು ಸಂತೋಷವಾಗಿರಲು ಕಾರಣವೇನು?: ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಮತ್ತು ಕೆಲಸ-ಜೀವನದ ಆರೋಗ್ಯಕರ ಸಮತೋಲನದಂತಹ ಅಂಶಗಳು ತೃಪ್ತಿ-ಸಂತೋಷಕ್ಕೆ ಪ್ರಮುಖ ಕಾರಣ. ಇದರ ಜೊತೆಗೆ, ಬಲಿಷ್ಠ ಕಲ್ಯಾಣ ರಾಜ್ಯ, ರಾಜ್ಯದ ಮೇಲೆ ನಂಬಿಕೆ, ಕಡಿಮೆ ಭ್ರಷ್ಟಾಚಾರ ಮತ್ತು ಉಚಿತ ಆರೋಗ್ಯ- ಶಿಕ್ಷಣ ಅವರ ಸಂತೋಷಕ್ಕೆ ಕಾರಣವಾದ ಇತರ ಅಂಶಗಳಾಗಿವೆ.

ʻಫಿನ್ನಿಷ್ ಸಮಾಜವು ನಂಬಿಕೆ, ಸ್ವಾತಂತ್ರ್ಯ ಮತ್ತು ಉನ್ನತ ಮಟ್ಟದ ಸ್ವಾಯತ್ತೆಯ ಪ್ರಜ್ಞೆ ಹೊಂದಿದೆʼ ಎಂದು ಹೆಲ್ಸಿಂಕಿ ವಿಶ್ವವಿದ್ಯಾನಿಲ ಯದ ಸಂಶೋಧಕ ಜೆನ್ನಿಫರ್ ಡಿ. ಪಾವೊಲಾ ಹೇಳಿದ್ದಾರೆ. ʻಫಿನ್ಲೆಂಡಿನವರು ಮತ್ತು ಅಮೆರಿಕನ್ನರು ಯಶಸ್ಸನ್ನು ಹೇಗೆ ನೋಡುತ್ತಾರೆ ಎಂಬುದರಲ್ಲಿ ಮೂಲಭೂತ ವ್ಯತ್ಯಾಸವಿದೆ. ಫಿನ್ಲೆಂಡಿನವರು ಯಶಸ್ವಿ ಜೀವನ ಎಂದರೇನು ಎಂಬ ಕುರಿತು ಹೆಚ್ಚು ತಿಳಿವಳಿಕೆ ಹೊಂದಿ ದ್ದು, ಅಮೆರಿಕನ್ನರು ಯಶಸ್ಸನ್ನು ಆರ್ಥಿಕ ಲಾಭದೊಂದಿಗೆ ಸಮೀಕರಿಸುತ್ತಾರೆʼ ಎಂದಿದ್ದಾರೆ.

ಪೀಳಿಗೆಗಳ ನಡುವ ವ್ಯತ್ಯಾಸ: ವರದಿ ಪೀಳಿಗೆಗಳ ನಡುವಿನ ವ್ಯತ್ಯಾಸಗಳನ್ನು ವಿಶ್ಲೇಷಿಸಿದೆ; ಪ್ರಪಂಚದ ಹೆಚ್ಚಿನ ಪ್ರದೇಶದಲ್ಲಿ ಯುವ ಪೀಳಿಗೆ ಸಂತೋಷವಾಗಿರುವುದನ್ನು ಪತ್ತೆಹಚ್ಚಿದೆ. ಉದಾಹರಣೆಗೆ, ಮಧ್ಯ ಮತ್ತು ಪೂರ್ವ ಯುರೋಪಿನ ಎಲ್ಲ ವಯೋಮಾನದ ಜನರಲ್ಲಿ ಸಂತೋಷದ ಮಟ್ಟ ಗಣನೀಯವಾಗಿ ಹೆಚ್ಚಿದೆ ಮತ್ತು ಪಶ್ಚಿಮ ಯುರೋಪಿನಲ್ಲಿ ಕೂಡ ಅದೇ ಮಟ್ಟದ ಸಂತೋಷವಿದೆ ಎಂದು ವರದಿ ಹೇಳಿದೆ.

ಆದರೆ, ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಹಳೆಯ ಪೀಳಿಗೆಗೆ ಹೋಲಿಸಿದರೆ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿಸಂತೋಷದ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ಆತಂಕಕರ ಪ್ರವೃತ್ತಿ: ಸಂತೋಷದ ಅಸಮಾನತೆಯು ಪ್ರದೇಶಗಳನ್ನು ಮೀರಿ ವ್ಯಾಪಿಸಿದೆ. ಇದು ʻಆತಂಕಕರ ಪ್ರವೃತ್ತಿʼ ಎಂದು ವರದಿ ಹೇಳಿದೆ. ವರದಿ ಪ್ರಕಾರ, ಸಂತೋಷದ ಅಸಮಾನತೆಯು ಆಫ್ರಿಕದ ಹಳೆಯ ಮತ್ತು ಉಪ ಸಹರಾದ ಆಫ್ರಿಕದಲ್ಲಿ ಏರಿದೆ. ʻಆದಾಯ, ಶಿಕ್ಷಣ, ಆರೋಗ್ಯ ರಕ್ಷಣೆ, ಸಾಮಾಜಿಕ ಸ್ವೀಕಾರ, ನಂಬಿಕೆ ಮತ್ತು ಕುಟುಂಬದಿಂದ ಬೆಂಬಲ, ಸಾಮಾಜಿಕ ಪರಿಸರದಲ್ಲಿ ಅಸಮಾನತೆ, ಸಮುದಾಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಸಮಾನತೆ ಚಾಲ್ತಿಯಲ್ಲಿವೆ. 143 ದೇಶಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನ ಕೆಳ ಭಾಗದಲ್ಲಿದೆ.

ನಾಗರಿಕರ ವೈಯಕ್ತಿಕ ಜೀವನ ತೃಪ್ತಿಯ ಸ್ವಯಂ ಮೌಲ್ಯಮಾಪನ ಮತ್ತು ತಲಾವಾರು ಜಿಡಿಪಿ, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರದಂತಹ ಅಂಶಗಳನ್ನು ಗಣಿಸಿ, ದೇಶಗಳ ಮೌಲ್ಯಮಾಪನ ಮಾಡುತ್ತದೆ.

Read More
Next Story