300 ಕೋಟಿ ರೂ. ಆಸ್ತಿ: ಮಾವನ ಹತ್ಯೆಗೆ ಮಹಿಳೆಯಿಂದ ಸುಪಾರಿ
x

300 ಕೋಟಿ ರೂ. ಆಸ್ತಿ: ಮಾವನ ಹತ್ಯೆಗೆ ಮಹಿಳೆಯಿಂದ ಸುಪಾರಿ

ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕಿ ಅರ್ಚನಾ ಮನೀಶ್‌ ಪುಟ್ಟೇವಾರ್‌ ಸೇರಿದಂತೆ ಐವರು ಆರೋಪಿಗಳನ್ನು ಕಳೆದ ವಾರ ಬಂಧಿಸಲಾಗಿದೆ.


300 ಕೋಟಿ ರೂ. ಮೌಲ್ಯದ ಕುಟುಂಬದ ಆಸ್ತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸೊಸೆ, ಮಾವನ ಹತ್ಯೆಗೆ ಸುಪಾರಿ ನೀಡಿದ ಪ್ರಕರಣ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ.

ಪುರುಷೋತ್ತಮ ಪುಟ್ಟೇವಾರ್(82) ಮೇ 22ರಂದು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಪೊಲೀಸರು ಗುದ್ಲುದೋಡು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ, ಹೆಚ್ಚಿನ ತನಿಖೆಯಿಂದ ಇದು ಪೂರ್ವಯೋಜಿತ ಕೊಲೆ ಮತ್ತು ಸುಪಾರಿ ಹತ್ಯೆ ಎಂದು ತಿಳಿದು ಬಂದಿದೆ.

ನಗರ ಯೋಜನೆ ಸಹಾಯಕ ನಿರ್ದೇಶಕಿಯಾಗಿರುವ ಅವರ ಸೊಸೆ ಅರ್ಚನಾ ಮನೀಶ್ ಪುಟ್ಟೇವಾರ್ ಅವರು ಮಾವನ ಹತ್ಯೆಗೆ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. ಕಳೆದ ವಾರ ಅರ್ಚನಾ ಅವರನ್ನು ಬಂಧಿಸಲಾಗಿದೆ.

ಕೊಲೆಗೆ 1 ಕೋಟಿ ರೂ. ಖರ್ಚು: ಅರ್ಚನಾ ಬಾಡಿಗೆ ಕೊಲೆಗಡುಕರಿಗೆ 1 ಕೋಟಿ ರೂ. ಕೊಟ್ಟಿದ್ದಾರೆ. ಹತ್ಯೆಗೆ ಬಳಸಿದ ಕಾರು ಖರೀದಿಸಲು ಆರೋಪಿಗೆ ಹಣ ನೀಡಿದ್ದಾರೆ. ಕೊಲೆಯನ್ನು ಅಪಘಾತದಂತೆ ತೋರಿಸಲು ಹೀಗೆ ಮಾಡಲಾಗಿದೆ,ʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಅರ್ಚನಾ ತನ್ನ ಪತಿಯ ಚಾಲಕ ಸಾರ್ಥಕ್ ಬಾಗ್ಡೆ (29) ಮತ್ತು ಇನ್ನಿಬ್ಬರು ಆರೋಪಿಗಳಾದ ನೀರಜ್ ಈಶ್ವರ್ ನಿಮ್ಜೆ (30) ಮತ್ತು ಸಚಿನ್ ಮೋಹನ್ ಧಾರ್ಮಿಕ್ (29) ಜೊತೆ ಸೇರಿ ಕೊಲೆಗೆ ಯೋಜನೆ ರೂಪಿಸಿದ್ದರು. ಇನ್ನೊಬ್ಬ ಆರೋಪಿ ಪಾಯಲ್ ನಾಗೇಶ್ವರ್ (28), ಅರ್ಚನಾ ಅವರ ಆಪ್ತ ಸಹಾಯಕ. ಧಾರ್ಮಿಕ್‌ ಗೆ ಬಾರ್ ಲೈಸನ್ಸ್ ನೀಡುವುದಾಗಿ ಅರ್ಚನಾ ಆಮಿಷ ಒಡ್ಡಿದ್ದರು. ಹೀಗಾಗಿ, ಆತ ನಾಗೇಶ್ವರ್ ಮತ್ತು ಬಾಗ್ಡೆ ಜೊತೆಗೆ ಕೈ ಜೋಡಿಸಿದ್ದ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಹಾಗೂ ಮೋಟಾರು ವಾಹನ ಕಾಯ್ದೆಯ ನಾನಾ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆಯ ಆರೋಪ ಹೊರಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಎಂಎಸ್‌ಎಂಇ ನಿರ್ದೇಶಕ ಪ್ರಶಾಂತ್ ಪರ್ಲೇವಾರ್ (59) ಅವರನ್ನು ಸುಪಾರಿ ಹತ್ಯೆಗೆ ಸಂಬಂಧಿಸಿದಂತೆ ಜೂನ್ 15 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಅರ್ಚನಾ ವಿರುದ್ಧ ದೂರು: ಕೊಲೆ ಪ್ರಕರಣದ ತನಿಖೆ ವೇಳೆ ಅರ್ಚನಾ ಅವರು ಕಾರ್ಯ ನಿರ್ವಹಿಸುತ್ತಿದ್ದ ನಗರ ಯೋಜನಾ ವಿಭಾಗದಲ್ಲಿ ಭಾರಿ ಅಕ್ರಮಗಳು ಬೆಳಕಿಗೆ ಬಂದಿವೆ. ಆಕೆ ವಿರುದ್ಧ ಹಲವು ದೂರುಗಳಿದ್ದರೂ, ರಾಜಕೀಯ ಸಂಪರ್ಕಗಳಿಂದಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಅರ್ಚನಾ ಅವರನ್ನು ಗುರುವಾರ (ಜೂನ್ 13) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳಿಂದ ಎರಡು ಕಾರು, ಒಂದು ಎಸ್‌ಯುವಿ, 140 ಗ್ರಾಂ ಚಿನ್ನ, 3 ಲಕ್ಷ ರೂ. ನಗದು, ಏಳು ಮೊಬೈಲ್ ಫೋನ್‌ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Read More
Next Story