ಮೂರು ಹೊಸ ಕ್ರಿಮಿನಲ್ ಕಾನೂನುಗಳ ಜಾರಿ ತಡೆಹಿಡಿಯಿರಿ: ಕೇಂದ್ರಕ್ಕೆ ಸ್ಟಾಲಿನ್ ಪತ್ರ
x

ಮೂರು ಹೊಸ ಕ್ರಿಮಿನಲ್ ಕಾನೂನುಗಳ ಜಾರಿ ತಡೆಹಿಡಿಯಿರಿ: ಕೇಂದ್ರಕ್ಕೆ ಸ್ಟಾಲಿನ್ ಪತ್ರ


ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜುಲೈ 1 ರಿಂದ ಜಾರಿಗೆ ಬರಲಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳ ಆಕ್ಷೇಪಗಳು ಮತ್ತು ಕಾರ್ಯಾಚರಣೆ ಸಮಸ್ಯೆ ಕುರಿತು ಕೇಂದ್ರಕ್ಕೆ ಮಂಗಳವಾರ ಪತ್ರ ಬರೆದಿದ್ದಾರೆ.

ಸಂಸತ್ತು ಅಂಗೀಕರಿಸಿದ ಮೂರು ಕಾಯಿದೆಗಳು ಸಂವಿಧಾನದ ಪಟ್ಟಿ 3 (ಸಹವರ್ತಿ ಪಟ್ಟಿ) ವ್ಯಾಪ್ತಿಗೆ ಬರಲಿವೆ. ಹೀಗಿದ್ದರೂ, ಹೊಸ ಕಾನೂನುಗಳ ಅಧ್ಯಯನ ಮತ್ತು ಹಿಮ್ಮಾಹಿತಿ ನೀಡಲು ರಾಜ್ಯಗಳು ಮತ್ತು ವಿರೋಧ ಪಕ್ಷಗಳಿಗೆ ಸಾಕಷ್ಟು ಸಮಯ ನೀಡಿಲ್ಲ ಎಂದು ಅವರು ಹೇಳಿದ್ದಾರೆ. ಆದ್ದರಿಂದ ಕೇಂದ್ರ ಈ ಕಾನೂನುಗಳ ಜಾರಿಗೊಳಿಸುವಿಕೆಯನ್ನು ತಡೆಹಿಡಿಯಬೇಕು ಹಾಗೂ ರಾಜ್ಯಗಳು ಮತ್ತು ಪ್ರಮುಖ ಭಾಗಿದಾರರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಂಡು ಪುನರ್‌ ವಿಮರ್ಶೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಸ್ಟಾಲಿನ್ ಅವರ ಪತ್ರದಲ್ಲಿ ಏನಿದೆ?: ಭಾರತೀಯ ದಂಡ ಸಂಹಿತೆ 1860, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ 1973 ಹಾಗೂ ಭಾರತೀಯ ಸಾಕ್ಷ್ಯ ಕಾಯಿದೆ 1872 ಗಳ ಬದಲು ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1, 2024ರಿಂದ ಜಾರಿಗೆ ಬರುವ ಸಾಧ್ಯತೆಯಿದೆ.

1. ಹೊಸ ಕಾಯಿದೆಗಳ ಬಗ್ಗೆ ಸಾಕಷ್ಟು ಚರ್ಚೆ ಮತ್ತು ಸಮಾಲೋಚನೆ ನಡೆದಿಲ್ಲ. ಇವು ಸಹವರ್ತಿ ಪಟ್ಟಿಯಲ್ಲಿ ಬರುವುದರಿಂದ, ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ಮಾಡಬೇಕಿತ್ತು. ಆದರೆ, ರಾಜ್ಯಗಳಿಗೆ ಹೆಚ್ಚು ಸಮಯ ನೀಡದೆ ಮತ್ತು ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ಈ ಕಾನೂನುಗಳನ್ನು ಸಂಸತ್ತು ಅಂಗೀಕರಿಸಿದೆ.

2. ಈ ಕಾಯಿದೆಗಳ ಹೆಸರು ಸಂಸ್ಕೃತದಲ್ಲಿದೆ. ಇದು ಸಂವಿಧಾನದ 348 ನೇ ವಿಧಿಯ ಸ್ಪಷ್ಟ ಉಲ್ಲಂಘನೆ. ಸಂಸತ್ತು ಅಂಗೀಕರಿಸಿದ ಎಲ್ಲ ಕಾಯಿದೆಗಳು ಇಂಗ್ಲಿಷ್‌ನಲ್ಲಿರುವುದು ಕಡ್ಡಾಯ.

3. ಈ ಕಾಯಿದೆಗಳಲ್ಲಿ ಕೆಲವು ಮೂಲಭೂತ ದೋಷಗಳಿವೆ. ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ್‌ ಸುರಕ್ಷ ಸಂಹಿತೆಯ ಕೆಲವು ನಿಬಂಧನೆಗಳು ಅಸ್ಪಷ್ಟ ಅಥವಾ ಸ್ವಯಂ-ವಿರೋಧಾಭಾಸಗಳಾಗಿವೆ.

4. ಹೊಸ ಕಾನೂನುಗಳ ಅನುಷ್ಠಾನಕ್ಕೆ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಚರ್ಚೆ ಮತ್ತು ಕಾನೂನು ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಪರಿಷ್ಕರಣೆ ಅಗತ್ಯವಿದೆ. ನ್ಯಾಯಾಂಗ, ಪೊಲೀಸ್, ಕಾರಾಗೃಹ, ಪ್ರಾಸಿಕ್ಯೂಷನ್ ಮತ್ತು ಫೋರೆನ್ಸಿಕ್‌ ಗೆ ಸಾಕಷ್ಟು ಸಂಪನ್ಮೂಲ ಮತ್ತು ಸಮಯ ಬೇಕಾಗುತ್ತದೆ. ಹೊಸ ನಿಯಮ ರೂಪಿಸುವುದು, ಅರ್ಜಿ ನಮೂನೆಗಳು ಮತ್ತು ಕಾರ್ಯಾಚರಣೆ ಕಾರ್ಯವಿಧಾನ(ಎಸ್‌ ಒಪಿ)ಗಳನ್ನು ಪರಿಷ್ಕರಿಸಬೇಕಿದೆ. ಇದನ್ನು ತರಾತುರಿಯಲ್ಲಿ ಮಾಡಲಾಗುವುದಿಲ್ಲ.

ಈ ಹಿನ್ನೆಲೆಯಲ್ಲಿ ಹೊಸ ಕಾಯಿದೆಗಳನ್ನು ಪರಿಶೀಲಿಸಬೇಕು ಮತ್ತು ಅಧಿನಿಯಮಗಳನ್ನು ತಡೆಹಿಡಿಯಬೇಕು ಎಂದು ಮನವಿ ಮಾಡುತ್ತೇನೆ ಎಂದು ಸ್ಟಾಲಿನ್‌ ಅವರು ಬರೆದಿದ್ದಾರೆ.

Read More
Next Story