ಕಂಗನಾ ಸ್ಪರ್ಧೆ: ಮಂಡಿ ಕ್ಷೇತ್ರಕ್ಕೆ ಕಾಲಿಟ್ಟ ಸೆಲೆಬ್ರಿಟಿ ಸಂಸ್ಕೃತಿ
x

ಕಂಗನಾ ಸ್ಪರ್ಧೆ: ಮಂಡಿ ಕ್ಷೇತ್ರಕ್ಕೆ ಕಾಲಿಟ್ಟ ಸೆಲೆಬ್ರಿಟಿ ಸಂಸ್ಕೃತಿ


ರಾಜ ಮನೆತನದ ಕೇಂದ್ರವಾಗಿದ್ದ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರವೀಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಪ್ರವೇಶದಿಂದ ನಾಟಕೀಯವಾಗಿ ಬದಲಾಗಿದೆ.

ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ ಸಾಧಿಸಿರುವಂತೆ ಕಂಡುಬಂದರೂ, ರಜಪೂತ ಸಮುದಾಯದ ಕಂಗನಾ ಅಭ್ಯರ್ಥಿಯಾಗಿರುವುದು ಹಲವು ವಿವಾದಗಳಿಗೆ ಕಾರಣವಾಗಿದೆ. ಕಣಿವೆ ರಾಜ್ಯದ ನಾಲ್ಕು ಲೋಕಸಭಾ ಕ್ಷೇತ್ರಗಳ ಪೈಕಿ ಒಂದಾದ ಮಂಡಿ, ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿದೆ. ಆಡಳಿತಾರೂಢ ಕಾಂಗ್ರೆಸ್ ಈ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹೆಸರಿಸಿಲ್ಲ.

ಕಂಗನಾಳನ್ನು ಕಣಕ್ಕಿಳಿಸಿದ ಬಿಜೆಪಿ, ವಿವಾದಗಳಲ್ಲಿ ಸಿಲುಕಿಕೊಂಡಿದೆ. ಜನಪ್ರಿಯ ನಟಿಗೆ ಅಭಿಮಾನಿಗಳು ಮಾತ್ರವಲ್ಲದೆ, ಟೀಕಾಕಾರರೂ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಂಗನಾ, ನಿರಂತರವಾಗಿ ಟ್ರೋಲ್‌ಗೆ ಒಳಗಾಗುತ್ತಾರೆ. ಅವರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿರ್ವಹಿಸುತ್ತಿರುವವರು ಕಠಿಣ ಹೋರಾಟ ನಡೆಸಬೇಕಾಗಿ ಬಂದಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ, ಹೋರಾಟ ಬೇರೆ ರೂಪ ಪಡೆಯುತ್ತದೆ.

ವಿಐಪಿ ಕ್ಷೇತ್ರ: ಮಂಡಿ ಕ್ಷೇತ್ರದಿಂದ ಈವರೆಗೆ ಸಾಮಾನ್ಯ ಹಿನ್ನೆಲೆಯಿಂದ ಬಂದವರು ಸ್ಪರ್ಧಿಸಿಲ್ಲ. ರಾಜಮನೆತನದ ಮಹೇಶ್ವರ್ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಪಂಡಿತ್ ಸುಖ್ ರಾಮ್ ತಲಾ ಮೂರು ಬಾರಿ ಹಾಗೂ ವೀರಭದ್ರ ಸಿಂಗ್ ಮತ್ತು ಅವರ ಪತ್ನಿ ಪ್ರತಿಭಾ ಸಿಂಗ್ ತಲಾ ಎರಡು ಬಾರಿ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ. ವೀರಭದ್ರ ಸಿಂಗ್ ಅವರು ಬುಶೆಹರ್ ರಾಜ ಮನೆತನಕ್ಕೆ ಸೇರಿದವರು; ಮಹೇಶ್ವರ್ ಸಿಂಗ್ ಕುಲ್ಲುವಿನಿಂದ ಮತ್ತು ಸುಖ್ ರಾಮ್ ಮಂಡಿ ಜಿಲ್ಲೆಯಿಂದ ಬಂದವರು.

ಅನುಭವಿ ಜೈರಾಮ್ ಠಾಕೂರ್ ಮಂಡಿಯಿಂದ ಪರಾಭವಗೊಂಡಿದ್ದರು. ಆದರೆ, ಮುಖ್ಯಮಂತ್ರಿಯಾದ ನಂತರ ಅವರು ಅಲ್ಲಿ ಭದ್ರವಾದ ನೆಲೆ ಸ್ಥಾಪಿಸಿದ್ದರಿಂದ, ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದ್ದ ರಾಮ್ ಸ್ವರೂಪ್ 2019 ರಲ್ಲಿ ಸುಲಭವಾಗಿ ಗೆದ್ದರು.

ಬಿಜೆಪಿಯ ಟ್ರಂಪ್ ಕಾರ್ಡ್: ಮಂಡಿ ಕ್ಷೇತ್ರ ಪ್ರತಿ ಬಾರಿಯೂ ಹೊಸ ದಿಕ್ಕು, ಆಯಾಮ ಪಡೆದುಕೊಳ್ಳುತ್ತದೆ. ನಟಿ ಕಂಗನಾ ಮೇಲೆ ಬಿಜೆಪಿ ಪಣ ತೊಟ್ಟಿದೆ. ತಾವು ಸ್ಪರ್ಧಿಸುವುದಿಲ್ಲ ಎಂದು ಪ್ರತಿಭಾ ಸಿಂಗ್, ಕಂಗನಾ ಹೆಸರು ಘೋಷಣೆಗೆ ಮುನ್ನ ಹೇಳಿದ್ದರು. ಮೋದಿ ಅಲೆ ಹಿನ್ನೆಲೆಯಲ್ಲಿ ಪ್ರತಿಭಾ ಸ್ಪರ್ಧಿಸಲು ನಿರಾಕರಿಸಿದರು ಎಂದು ನಂಬಲಾಗಿದೆ. ಇದರಿಂದಾಗಿಯೇ ಅವರು ತಮ್ಮದೇ ಸರ್ಕಾರ ಕಾರ್ಮಿಕರನ್ನು ನಿರ್ಲಕ್ಷಿಸಿರುವುದನ್ನು ಖಂಡಿಸಿದರು.

ಮಂಡಿಯ ಬಿಜೆಪಿ ಕಾರ್ಯಕರ್ತರು ಕಂಗನಾ ಅವರನ್ನು ನೋಡಿ ಪುಳಕಗೊಂಡಿದ್ದರೆ, ಪಕ್ಷದ ಹಿರಿಯ ನಾಯಕರು ಅವರ ಉಪಸ್ಥಿತಿಯಿಂದ ಬದಿಗೆ ತಳ್ಳಲ್ಪಟ್ಟಿದ್ದಾರೆ. ತನ್ನ ವಿರುದ್ಧದ ಆರೋಪಗಳನ್ನು ಕಂಗನಾ ತಳ್ಳಿಹಾಕಿದ್ದರೂ, ಪಾಂಗಿ, ಲಾಹುಲ್, ರಾಂಪುರ್, ಛತ್ರಿ, ಸರಾಜ್ ಮತ್ತು ಮಂಡಿ ಉಪಭಾಷೆ ಗಳನ್ನು ಮಾತನಾಡುವ ಮತದಾರರು ಕಂಗನಾ ಅವರ ಬಿಲಾಸ್ಪುರಿ ಮತ್ತು ಸರ್ಕಾಘಾಟಿ ಉಪಭಾಷೆಯ ಮಾತುಗಳಿಂದ ಗೊಂದಲಕ್ಕೆ ಸಿಲುಕಿದ್ದಾರೆ. ಈ ಸ್ಥಳೀಯ ಆಡುಭಾಷೆಗಳನ್ನು ಮಾತನ್ನಾಡುವುದು ಕಂಗನಾ ಅವರಿಗೆ ಸವಾಲಾಗಿ ಪರಿಣಮಿಸಿದೆ.

ಪ್ರಮುಖ ಸವಾಲು: ಮಂಡಿ ಸಂಸದೀಯ ಕ್ಷೇತ್ರವು ಕುಲ್ಲು ಜಿಲ್ಲೆಯ ನಾಲ್ಕು ಮತ್ತು ಚಂಬಾ, ಕಿನ್ನೌರ್, ಲಾಹೌಲ್-ಸ್ಪಿತಿ ಮತ್ತು ಶಿಮ್ಲಾ ಜಿಲ್ಲೆಗಳ ತಲಾ ಒಂದರಂತೆ 17 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. ಆರು ಜಿಲ್ಲೆಗಳಲ್ಲಿ ಆರು ವಿಭಿನ್ನ ಉಪಭಾಷೆಗಳಿವೆ. ಈ 17 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ.

ಜೈರಾಮ್ ಠಾಕೂರ್ ಅವರ ಕ್ಷೇತ್ರವಾದ ಸರಾಜ್‌, ಅನಿಲ್ ಶರ್ಮಾ ಅವರ ಕ್ಷೇತ್ರವಾದ ಮಂಡಿ, ಜನಕ್ ರಾಜ್ ಅವರ ಭರ್ಮಾರ್‌ ಮತ್ತು ರಾಕೇಶ್ ಜಮ್ವಾಲ್ ಅವರ ಸುಂದರನಗರ ಕ್ಷೇತ್ರದಿಂದ ಬಿಜೆಪಿ ಗಣನೀಯ ಮತ ಪಡೆಯುತ್ತದೆ. ನಟಿ ಮತ್ತು ಮೋದಿ ಅಭಿಮಾನಿಯಾದ, ಕಂಗನಾ ಅವರಿಗೆ ತಮ್ಮದೇ ಆದ ರಾಜಕೀಯ ತೂಕವಿದೆ.

ಆದರೆ, ಸವಾಲುಗಳು ಕಡಿಮೆ ಇಲ್ಲ. ಪ್ರಚಾರ ವೇಗ ಗಳಿಸಿದಂತೆ, ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸಲಿದೆ. ಕಂಗನಾ ಅವರ ಸಿನಿಮಾ, ಬಹಿರಂಗ ಹೇಳಿಕೆಗಳು ಅಥವಾ ಅವರ ಆಹಾರ ಮತ್ತು ಜೀವನಶೈಲಿಗೆ ಸಂಬಂಧಿಸಿದ ಪ್ರಶ್ನೆಗಳು ತಲೆಯೆತ್ತುತ್ತವೆ.

ಸಂಭವನೀಯ ಅಡಚಣೆ: ಕುಲ್ಲುವಿನ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಂಸದ ಮಹೇಶ್ವರ್ ಸಿಂಗ್ ನೇತೃತ್ವದ ದೇವ್ ಸಮುದಾಯದ ಅಸಮಾಧಾನವು ಕಂಗನಾ ಅವರ ಹಾದಿಯನ್ನು ಕಠಿಣಗೊಳಿಸಿದೆ. ಒಂದುವೇಳೆ ವೀರಭದ್ರ ಸಿಂಗ್‌ ಅವರ ಕುಟುಂಬ ಅಖಾಡಕ್ಕೆ ಧುಮುಕಿದರೆ, ರಾಜ ಮನೆತನದ ಒಗ್ಗಟ್ಟು ಮತ್ತು ದೇವ್ಲು ಸಮುದಾಯದ ಪ್ರಭಾವ ಪರಿಣಾಮ ಬೀರುತ್ತದೆ. ಕಂಗನಾರ ಗ್ಲ್ಯಾಮರ್ ನಿಂದ ದೊಡ್ಡ ನಾಯಕರಿಗೆ ಪ್ರಾಮುಖ್ಯತೆ ಕಡಿಮೆಯಾಗಿದೆ. ಈ ಸಮಸ್ಯೆ ಕೂಡ ಪರಿಣಾಮ ಬೀರಬಹುದು.

ನೆಚ್ಚಿನ ನಟಿ: ಕಂಗನಾ ಯುವಜನತೆಯ ಫೇವರಿಟ್. ಈ ದೃಷ್ಟಿಕೋನದಿಂದ ನೋಡಿದರೆ ಬಿಜೆಪಿ ಕಾರ್ಯಕರ್ತರ ಮತಗಳು ಆಕೆಗೆ ಸಿಗದಿದ್ದರೂ, ಅಭಿಮಾನಿಗಳ ಮತಗಳು ಖಾತ್ರಿಯಾಗಿ ಬೀಳಲಿದೆ. ಕಾಂಗ್ರೆಸ್ ಇನ್ನೂ ಜನರ ಮನೋಭಾವವನ್ನು ಅಳೆಯುತ್ತಿದೆ ಎನ್ನಲಾಗಿದೆ. ಸ್ವಲ್ಪ ವಿಳಂಬದ ನಂತರ ಅಭ್ಯರ್ಥಿಯನ್ನು ಘೋಷಿಸಲಿದೆ. ಪ್ರತಿಭಾ ಸಿಂಗ್ ಅಥವಾ ವಿಕ್ರಮಾದಿತ್ಯ ಸಿಂಗ್ ಕಾಂಗ್ರೆಸ್ ಅಭ್ಯರ್ಥಿ ಆಗಬಹುದು. ಒಂದುವೇಳೆ ವಿಕ್ರಮಾದಿತ್ಯ ಸಿಂಗ್ ಕಣಕ್ಕೆ ಇಳಿದರೆ, ಕಂಗನಾ ಅವರ ಕಷ್ಟಗಳು ಹೆಚ್ಚಲಿವೆ. ತಂದೆಯಂತೆ ವಿಕ್ರಮಾದಿತ್ಯ ಸಿಂಗ್ ಕೂಡ ಯುವಜನರಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ.

ಕಂಗನಾ ಅಥವಾ ಮೋದಿ ಅಲೆ?: 2014ರಲ್ಲಿ ಬಿಜೆಪಿಯ ರಾಮ್ ಸ್ವರೂಪ್ 3,62,824 ಮತ ಹಾಗೂ ಕಾಂಗ್ರೆಸ್‌ನ ಪ್ರತಿಭಾ ಸಿಂಗ್ 3,22,968 ಮತ ಗಳಿಸಿದ್ದರು. 2019 ರಲ್ಲಿ ಬಿಜೆಪಿಯ ರಾಮ್ ಸ್ವರೂಪ್ ಶರ್ಮಾ 6,47,189 ಮತ್ತು ಕಾಂಗ್ರೆಸ್‌ನ ಆಶ್ರಯ್ ಶರ್ಮಾ 2,41,730 ಮತ ಪಡೆದರು. 2021 ರ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರತಿಭಾ ಸಿಂಗ್ 3,65,650 ಮತ್ತು ಬಿಜೆಪಿಯ ಖುಶಾಲ್ ಸಿಂಗ್ 3,56,664 ಮತ ಗಳಿಸಿದ್ದರು.

ಕಂಗನಾ ಅವರ ಖ್ಯಾತಿ ಮತ್ತು ಅವರ ಸಾಮಾಜಿಕ ಮಾಧ್ಯಮ ನಿರ್ವಹಣೆಯು ಕ್ಷೇತ್ರದಲ್ಲಿ ಮೋದಿ ಅಲೆಯನ್ನು ಮರೆಮಾಡುತ್ತದೆಯೇ? ಕಂಗನಾ ವಿವಾದಗಳನ್ನು ಬದಿಗಿಟ್ಟು ರಾಜಕೀಯದಲ್ಲಿ ತಮ್ಮದೇ ಸ್ಥಾನ ಗಳಿಸುತ್ತಾರಾ? ಜೂನ್ 4 ರಂದು ಗೊತ್ತಾಗಲಿದೆ.

Read More
Next Story