ಇಂಡಿಯಾ ಒಕ್ಕೂಟದಿಂದ  ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ
x

ಇಂಡಿಯಾ ಒಕ್ಕೂಟದಿಂದ 'ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ'

ಮೋದಿ ಅವರಲ್ಲಿ ಮಿತ್ರಪಕ್ಷಗಳನ್ನು ಒಟ್ಟಿಗೆ ಕರೆದೊಯ್ಯಬಲ್ಲ ಮತ್ತು ಚೌಕಾಶಿಗೆ ಸಮ್ಮತಿಸದ ಮನಸ್ಥಿತಿ ಇರುವುದರಿಂದ, ಎನ್‌ಡಿಎ ಒಕ್ಕೂಟದಲ್ಲಿ ಬಿರುಕು ಮೂಡುವವರೆಗೆ ಕಾಯುವುದು ವಿವೇಕಯುತ ಎಂದು ಇಂಡಿಯ ಒಕ್ಕೂಟದ ಹೆಚ್ಚಿನ ನಾಯಕರು ಅಭಿಪ್ರಾಯಪಟ್ಟರು


ಇಂಡಿಯ ಒಕ್ಕೂಟವು ಸರಳ ಬಹುಮತದಿಂದ 40 ಸ್ಥಾನ ಕಡಿಮೆ ಇದ್ದು, ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.

ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಮರಳುವುದನ್ನು ಪ್ರತಿಪಕ್ಷಗಳು ತಡೆಯುವುದಿಲ್ಲ ಎಂದು ಇಂಡಿಯ ಒಕ್ಕೂಟದ ಪರವಾಗಿ ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಶ್ವಾಸನೆ ನೀಡಿದರು. ಆದರೆ, ಖರ್ಗೆಯವರ ಆಶ್ವಾಸನೆ ಯು ಎಚ್ಚರಿಕೆಯ ಸೂಚನೆಯಾಗಿದೆ. ಎನ್‌ಡಿಎ ಕೇವಲ 21 ಸ್ಥಾನಗಳ ತೆಳು ಬಹುಮತ ಹೊಂದಿದೆ.

ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರನ್ನು ಇಂಡಿಯ ಒಕ್ಕೂಟ ಸೆಳೆಯಲು ಪ್ರಯ ತ್ನಿಸಬಹುದು ಎಂಬ ಊಹಾಪೋಹದ ನಡುವೆಯೇ ಖರ್ಗೆ ಅವರ ಈ ಹೇಳಿಕೆಯು ಒಕ್ಕೂಟದ ಹಿರಿಯ ನಾಯಕರ ನಡುವಿನ ಎರಡು ಗಂಟೆಗಳ ಚರ್ಚೆಯ ಫಲಿತಾಂಶವಾಗಿದೆ. ಖರ್ಗೆ ಅವರ ದೆಹಲಿಯ ರಾಜಾಜಿ ಮಾರ್ಗದ ನಿವಾಸದಲ್ಲಿ ನಡೆದ ಮಾತುಕತೆ ವೇಳೆ ʻಕೆಲವು ಎನ್‌ಡಿಎ ಪಾಲುದಾರರನ್ನು ಸೆಳೆಯುವ ಸಾಧ್ಯತೆ ಕುರಿತು ಚರ್ಚಿಸಲಾಗಿದೆ ಮತ್ತು ಈಗ ಅಂತಹ ಯಾವುದೇ ಪ್ರಯತ್ನ ಮಾಡುವುದಿಲ್ಲʼ ಎಂಬ ನಿರ್ಧಾರಕ್ಕೆ ಬರಲಾಯಿತು ಎಂದು ಮೂಲಗಳು ʻದ ಫೆಡರಲ್‌ʼ ಗೆ ತಿಳಿಸಿವೆ.

ಎನ್‌ಡಿಎ ಎದುರಿಸಲು ಸಕಲ ಸಿದ್ಧತೆ: ಎನ್‌ಡಿಎ ಒಕ್ಕೂಟವನ್ನು ಸುಲಭವಾಗಿ ಬಿಡುವುದಿಲ್ಲ ಎಂದು ಖರ್ಗೆ ಅವರು ʻಸ್ಪಷ್ಟ ಪದಗಳಲ್ಲಿ ಹೇಳಬೇಕುʼ ಎಂದು ಸಭೆಯಲ್ಲಿ ಭಾಗವಹಿಸಿದ್ದ 30 ಕ್ಕೂ ಹೆಚ್ಚು ನಾಯಕರು ಒತ್ತಾಯಿಸಿದರು. ನಂತರ ಮಾಧ್ಯಮಗಳಿಗೆ ಖರ್ಗೆ ಅವರು ನೀಡಿದ ಹೇಳಿಕೆಯು ಮೂರು ಪ್ರಮುಖ ಅಂಶಗಳಿಗೆ ಒತ್ತು ನೀಡಿದೆ;

ಮೊದಲಿಗೆ, ಜನಾದೇಶವು ʻಬಿಜೆಪಿಯ ದ್ವೇಷ, ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ರಾಜಕೀಯಕ್ಕೆ ತಕ್ಕ ಪ್ರತ್ಯುತ್ತರʼ ಮತ್ತು ಮೋದಿಯವರ ʻರಾಜಕೀಯ ಮತ್ತು ನೈತಿಕ ಸೋಲುʼ.

ಎರಡನೆಯದಾಗಿ, ಫಲಿತಾಂಶವು ಸಂವಿಧಾನದ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಉಳಿವಿನ ಪರ ಮತ್ತು ಬೆಲೆ ಏರಿಕೆ, ನಿರುದ್ಯೋಗ, ಕ್ರೋನಿ ಕ್ಯಾಪಿಟಲಿಸಂ ವಿರುದ್ಧಇದೆ; ಇಂಡಿಯ ಒಕ್ಕೂಟವು ʻಮೋದಿ ನೇತೃತ್ವದ ಬಿಜೆಪಿಯ ಫ್ಯಾಸಿಸ್ಟ್ ಆಡಳಿತದ ವಿರುದ್ಧ ಹೋರಾಟವನ್ನು ಮುಂದುವರಿಸುತ್ತದೆ.

ಮೂರನೆಯದಾಗಿ, ಬಿಜೆಪಿ ಸರ್ಕಾರದಿಂದ ಆಳಿಸಿಕೊಳ್ಳುವುದಿಲ್ಲ ಎಂಬ ಜನರ ಬಯಕೆಯನ್ನು ಸಾಕಾರಗೊಳಿಸಲು ಇಂಡಿಯ ಒಕ್ಕೂಟವು ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ.

ಸಭೆಯಲ್ಲಿ ಭಾಗವಹಿಸಿದ ವಿವಿಧ ನಾಯಕರೊಂದಿಗೆ ʻದ ಫೆಡರಲ್ʼ ಮಾತಾಡಿದ್ದು, ಪ್ರಮುಖ ಅಂಶಗಳು ಇಲ್ಲಿವೆ:

1. ಹೊಸ ಮಿತ್ರಪಕ್ಷಗಳಿಗೆ ಸ್ವಾಗತ: ʻಸಂವಿಧಾನದ ಮುನ್ನುಡಿಯಲ್ಲಿ ಪ್ರತಿಪಾದಿಸಿದ ಮೌಲ್ಯಗಳಿಗೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕೆ ಬದ್ಧತೆ ಹೊಂದಿರುವ ಎಲ್ಲ ಪಕ್ಷಗಳನ್ನು ಸ್ವಾಗತಿಸಲಾಗುತ್ತದೆ,ʼ ಎಂದು ಖರ್ಗೆ ಹೇಳಿದರು. ಆದರೆ, ಎನ್‌ಡಿಎ ಮಿತ್ರ ಪಕ್ಷಗಳ ಬೇಟೆಗೆ ಹೋಗಬಾರದು ಎಂಬುದಕ್ಕೆ ಒಮ್ಮತವಿತ್ತು.

ನಾಯ್ಡು ಮತ್ತು ನಿತೀಶ್ ಬಣ ಬದಲಿಸಿದರೂ, ಇಂಡಿಯ ಒಕ್ಕೂಟಕ್ಕೆ ಸರಳ ಬಹುಮತಕ್ಕೆ ಇನ್ನೂ ಹನ್ನೆರಡು ಸ್ಥಾನಗಳ ಕೊರತೆ ಆಗಲಿದೆ. ಮೋದಿ ಅವರು ಮಿತ್ರಪಕ್ಷಗಳನ್ನು ಒಟ್ಟಿಗೆ ಕರೆದೊಯ್ಯುವ ಮತ್ತು ಚೌಕಾಶಿಗೆ ಸಿದ್ಧವಿಲ್ಲದ ಮನಸ್ಥಿತಿ ಹೊಂದಿರುವುದರಿಂದ, ಎನ್ಡಿಎ ಒಕ್ಕೂಟದಲ್ಲಿ ಬಿರುಕು ಕಾಣಿಸಿಕೊಳ್ಳುವವರೆಗೆ ಕಾಯುವುದು ಸೂಕ್ತ ಎಂದು ಹೆಚ್ಚಿನವರು ಅಭಿಪ್ರಾಯ ಪಟ್ಟರು. ನಾಯ್ಡು, ನಿತೀಶ್ ಮತ್ತು ಮೋದಿ ನಡುವಿನ ಹಿಂದಿನ ವೈಮನಸ್ಸು ಎನ್‌ಡಿಎಗೆ ಸಮಸ್ಯೆಯಾಗಲಿದೆ; ನಾಯ್ಡು ಮತ್ತು ನಿತೀಶ್ ಅವರ ಚುನಾವಣೆ ಭರವಸೆಗಳು ಮೋದಿ ಯವರ ರಾಜಕೀಯ ನಿಲುವಿಗೆ ಹೊಂದಿಕೆಯಾಗುವುದಿಲ್ಲ ಎಂದು ಕೆಲವು ನಾಯಕರು ಸೂಚಿಸಿದರು.

2. ಬಣದ ಬಗ್ಗೆ ಜಾಗೃತೆ: ಇಂಡಿಯ ಒಕ್ಕೂಟದ ಮಿತ್ರ ಪಕ್ಷಗಳ ಏಕತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಖರೀದಿ ಪ್ರಯತ್ನಗಳಿಂದ ರಕ್ಷಿಸಿಕೊಳ್ಳಬೇಕು ಎಂದು ಖರ್ಗೆ, ಸೋನಿಯಾ ಗಾಂಧಿ ಮತ್ತು ಶರದ್ ಪವಾರ್ ಮತ್ತಿತರರು ಸೂಚಿಸಿದರು. ಮೋದಿ ಆಡಳಿತದ ವೈಫಲ್ಯಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ಪಕ್ಷ ತೊರೆದು ಬಿಜೆಪಿಗೆ ಸೇರಿದವರೊಂದಿಗೆ ಹೊಂದಾಣಿಕೆಯ ಸಾಧ್ಯತೆಯನ್ನುಕಂಡುಕೊಳ್ಳಬೇಕು ಎಂದು ನಿರ್ಧರಿಸಲಾಯಿತು.

3. ಸಂಸತ್ತಿನ ಒಳಗೆ-ಹೊರಗೆ ಪ್ರಶ್ನೆ: ಬೆಲೆ ಏರಿಕೆ, ನಿರುದ್ಯೋಗ, ಸಂವಿಧಾನ ಮತ್ತು ಮೀಸಲು ಬದಲಾವಣೆ, ಜಾತಿ ಜನಗಣತಿ, ಕ್ರೋನಿ ಕ್ಯಾಪಿಟಲಿಸಂ ಇತ್ಯಾದಿ ಚರ್ಚೆಯನ್ನು ಜೀವಂತವಾಗಿಡಬೇಕು. ಈ ಸಂಬಂಧ ಸಂಸತ್ತಿನ ಒಳಗೆ ಮತ್ತು ಹೊರಗೆ ಆಡಳಿತ ಪಕ್ಷದಿಂದ ಉತ್ತರ ಕೇಳುತ್ತಲೇ ಇರಬೇಕು ಎಂದು ತೀರ್ಮಾನಿಸಲಾಯಿತು.

ಅದಾನಿ ಸಮೂಹದ ಹಣಕಾಸು ಅವ್ಯವಹಾರ, ಪಿಎಂ ಕೇರ್ಸ್‌ ನಿಧಿ ಮತ್ತು ಚುನಾವಣಾ ಬಾಂಡ್‌ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆಗೆ ಒತ್ತಾಯಿಸಬೇಕು ಎಂದು ತೀರ್ಮಾನಿಸಲಾಯಿತು. ಸ್ಟಾಕ್‌ ಮಾರುಕಟ್ಟೆಯ ಅವ್ಯವಹಾರ ಕುರಿತು ಜೆಪಿಸಿ ತನಿಖೆಯಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ (ಜೂನ್ 6) ಒತ್ತಾಯಿಸಿದ್ದಾರೆ. ʻಪ್ರಧಾನಿ ಮತ್ತು ಗೃಹ ಸಚಿವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದರು; ಜೂನ್ 4 ರಂದು ಮಾರುಕಟ್ಟೆ ಉನ್ನತ ಮಟ್ಟದಲ್ಲಿರಲಿವೆ ಎಂದು ಭರವಸೆ ನೀಡಿದರು. ಇದರಿಂದ ಚಿಲ್ಲರೆ ಹೂಡಿಕೆದಾರರು 30 ಲಕ್ಷ ಕೋಟಿ ರೂ. ಕಳೆದುಕೊಂಡರು,ʼ ಎಂದು ರಾಹುಲ್ ದೂರಿದರು.

Read More
Next Story