ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆ ಕಸದ ಬುಟ್ಟಿಗೆ: ರಾಹುಲ್ ಗಾಂಧಿ
x

ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆ ಕಸದ ಬುಟ್ಟಿಗೆ: ರಾಹುಲ್ ಗಾಂಧಿ


ಮಹೇಂದ್ರಗಢ (ಹರಿಯಾಣ), ಮೇ 22 - ‘ಹಿಂದೂಸ್ತಾನದ ಸೈನಿಕರನ್ನು ಕಾರ್ಮಿಕರನ್ನಾಗಿ ಮಾಡಲಾಗುತ್ತಿದೆ. ಇಂಡಿಯ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆಯನ್ನು ಕಸದ ಬುಟ್ಟಿಗೆ ಎಸೆಯಲಾಗುತ್ತದೆ,ʼ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದರು.

ಹರಿಯಾಣದಲ್ಲಿ ತಮ್ಮ ಮೊದಲ ಚುನಾವಣೆ ಸಭೆಯಲ್ಲಿ ಮಾತನಾಡಿ,ʻಅಗ್ನಿವೀರ್ ಮೋದಿಯವರ ಯೋಜನೆಯೇ ಹೊರತು ಸೇನೆಯ ಯೋಜನೆ ಅಲ್ಲ; ಸೇನೆಗೆ ಇದು ಬೇಕಾಗಿಲ್ಲ. ಇಂಡಿಯ ಒಕ್ಕೂಟ ಸರ್ಕಾರ ರಚಿಸಿದರೆ, ಯೋಜನೆ ಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ,ʼ ಎಂದು ಮಹೇಂದ್ರಗಢ-ಭಿವಾನಿ ಲೋಕಸಭೆ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಹೇಳಿದರು.

ʻದೇಶದ ಗಡಿಗಳು ದೇಶದ ಯುವಜನರಿಂದ ಸುರಕ್ಷಿತವಾಗಿವೆ. ನಮ್ಮ ಯುವಕರ ಡಿಎನ್‌ಎಯಲ್ಲಿ ದೇಶಭಕ್ತಿ ಇದೆ. ಮೋದಿ ಅವರು ಹಿಂದೂಸ್ತಾನದ ಸೈನಿಕರನ್ನು ಕಾರ್ಮಿಕರನ್ನಾಗಿ ಮಾಡಿದ್ದಾರೆ. ಅವರ ಪ್ರಕಾರ ಹುತಾತ್ಮರಲ್ಲಿ ಎರಡು ವಿಧಗಳಿವೆ - ಒಬ್ಬರು ಸಾಮಾನ್ಯ ಯೋಧ, ಮತ್ತೊಬ್ಬರು ಅಧಿಕಾರಿ. ಅಧಿಕಾರಿಗಳು ಪಿಂಚಣಿ, ಸ್ಥಾನಮಾನ ಸೇರಿದಂತೆ ಎಲ್ಲ ಸೌಲಭ್ಯ ಪಡೆಯುತ್ತಾರೆ. ಆದರೆ, ಬಡ ಕುಟುಂಬದ ಅಗ್ನಿವೀರರು ಹುತಾತ್ಮರ ಸ್ಥಾನಮಾನ ಪಡೆಯುವುದಿಲ್ಲ, ಪಿಂಚಣಿ, ಕ್ಯಾಂಟೀನ್ ಸೌಲಭ್ಯವಿಲ್ಲ,ʼ ಎಂದರು.

2022 ರಲ್ಲಿ ಮೂರೂ ಸೇವೆಗಳಲ್ಲಿ ಕಡಿಮೆ ವಯಸ್ಸಿನವರ ನೇಮಕದ ಉದ್ದೇಶದಿಂದ ಸಶಸ್ತ್ರ ಪಡೆಗಳಿಗೆ ಅಗ್ನಿಪಥ್ ನೇಮಕ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆ ಸೇನೆಗೆ 17.5ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಅವಕಾಶ ಒದಗಿಸುತ್ತದೆ ಮತ್ತು ಅವರಲ್ಲಿ ಶೇ.25ರಷ್ಟನ್ನು 15 ವರ್ಷ ಉಳಿಸಿಕೊಳ್ಳುವ ಅವಕಾಶವಿದೆ.

ʻಮೋದಿ ಸರ್ಕಾರ 22 ಅರಬ್ಬಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಜೂನ್ 4ರಂದು ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲ ಮನ್ನಾ ಮಾಡುತ್ತೇವೆ. ಕೃಷಿ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ, ಸಾಲ ಮನ್ನಾ ಆಯೋಗವನ್ನು ತರುತ್ತೇವೆ,ʼ ಎಂದು ಹೇಳಿದರು.

Read More
Next Story