
ರೋಹಿತ್ ವೇಮುಲಾ ಕಾಯಿದೆಯಿಂದ ಶಿಕ್ಷಣ ಸಂಸ್ಥೆಗಳಲ್ಲಿ ಬೇರೂರಿರುವ ಜಾತಿ ತಾರತಮ್ಯ ತೊಲಗುತ್ತದೆಯೇ?
ಕರ್ನಾಟಕದ ದಲಿತ, ಆದಿವಾಸಿ ಮತ್ತು ಒಬಿಸಿ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಶುಕ್ರವಾರ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ, ಶಿಕ್ಷಣದಲ್ಲಿ ಜಾತಿ ತಾರತಮ್ಯದ ವಿರುದ್ಧದ ಹೋರಾಟ ಬೆಂಬಲಿಸುವಂತೆ ಅವರೆಲ್ಲರೂ ರಾಹುಲ್ ಅವರನ್ನು ಕೇಳಿಕೊಂಡಿದ್ದರು.
ವಿದ್ಯಾಸಂಸ್ಥೆಗಳಲ್ಲಿ ಬೇರೂರಿರುವ ಜಾತಿ ತಾರತಮ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ರೋಹಿತ್ ವೇಮುಲಾ ಕಾಯಿದೆಯನ್ನು (Rohit Vemula Act) ಜಾರಿಗೆ ತರಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದೆ. ರೋಹಿತ್ ವೇಮುಲಾ ಕಾಯಿದೆಯನ್ನು ಶೀಘ್ರದಲ್ಲೇ ಕರ್ನಾಟಕ ವಿಧಾನಸಭೆ ಅಂಗೀಕರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಘೋಷಿಸಿದ್ದಾರೆ. ಅಂದ ಹಾಗೆ ಇದು ಕಾಂಗ್ರೆಸ್‌ನ ಹಿರಿಯ ನಾಯಕ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ (Rahul Gandhi) ಅವರ ಆಶಯ.
ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದ ರೋಹಿತ್ ವೇಮುಲಾ, ಜಾತಿ ತಾರತಮ್ಯದ ವಿರುದ್ಧ ಹೋರಾಡಿ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಹೋರಾಟಕ್ಕೆ ಸ್ಫೂರ್ತಿಯಾಗಿ ಮತ್ತು ಕಾಂಗ್ರೆಸ್ ನೀಡಿರುವ ಭರವಸೆಯ ಪ್ರಕಾರ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಕಾಯಿದೆ ಜಾರಿಯಾಗಲಿದೆ.
ಕರ್ನಾಟಕದ ದಲಿತ, ಆದಿವಾಸಿ ಮತ್ತು ಒಬಿಸಿ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಶುಕ್ರವಾರ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ, ಶಿಕ್ಷಣದಲ್ಲಿ ಜಾತಿ ತಾರತಮ್ಯದ ವಿರುದ್ಧದ ಹೋರಾಟ ಬೆಂಬಲಿಸುವಂತೆ ಅವರೆಲ್ಲರೂ ರಾಹುಲ್ ಅವರನ್ನು ಕೇಳಿಕೊಂಡಿದ್ದರು . ತಕ್ಷಣವೇ ರಾಹುಲ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರುವಂತೆ ಕೋರಿದ್ದರು. ಶೈಕ್ಷಣಿಕ ಕೇಂದ್ರಗಳಲ್ಲಿ ಯಾವುದೇ ವಿದ್ಯಾರ್ಥಿ ಜಾತಿ ತಾರತಮ್ಯ ಎದುರಿಸಬಾರದು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರವನ್ನು ಅವರು ಏಪ್ರಿಲ್ 16 ರಂದು 'X' ನಲ್ಲಿ ಪೋಸ್ಟ್ ಮಾಡಿದ್ದರು.
"ರೋಹಿತ್ ವೇಮುಲಾ (ತೆಲಂಗಾಣ), ಪಾಯಲ್ ತಡ್ವಿ (ಮಹಾರಾಷ್ಟ್ರ) ಮತ್ತು ದರ್ಶನ್ ಸೋಲಂಕಿ (ಮುಂಬೈ) ಅವರಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ." ಇದಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. "ಅಂಬೇಡ್ಕರ್, ರೋಹಿತ್ ಮತ್ತು ಇತರ ಕೋಟ್ಯಂತರ ಮಕ್ಕಳಂತೆ ಬೇರೆ ಯಾವುದೇ ವಿದ್ಯಾರ್ಥಿ ತಾರತಮ್ಯ ಎದುರಿಸದಂತೆ ಕರ್ನಾಟಕ ಸರ್ಕಾರ ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ತರಬೇಕೆಂದು ನಾನು ಒತ್ತಾಯಿಸುತ್ತೇನೆ" ಎಂದು ರಾಹುಲ್ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ.
ರಾಹುಲ್ ಮನವಿಗೆ ಕರ್ನಾಟಕ ಸರ್ಕಾರ ಸ್ಪಂದನೆ
ರಾಹುಲ್ ಗಾಂಧಿಯವರ ಮನವಿಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. "ಕರ್ನಾಟಕದಲ್ಲಿ ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರುವ ದೃಢ ನಿರ್ಧಾರ ನಮ್ಮ ಸರ್ಕಾರದ್ದು. ಯಾವುದೇ ವಿದ್ಯಾರ್ಥಿ ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಎದುರಿಸಬಾರದು ಎಂದು ಖಚಿತಪಡಿಸಿಕೊಳ್ಳಲಾಗುವುದು. ಗೌರವಕ್ಕೆ ಅರ್ಹರಾದ ಅಸಂಖ್ಯಾತ ಇತರರ ಕನಸುಗಳನ್ನು ನನಸು ಮಾಡಲು ನಾವು ಈ ಕಾನೂನನ್ನು ಆದಷ್ಟು ಬೇಗ ತರುತ್ತೇವೆ" ಎಂದು ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಇದು ಒಂದು ಹೆಜ್ಜೆಯಾಗಲಿದೆ ಎಂದೂ ಹೇಳಿದ್ದಾರೆ.
ಕರ್ನಾಟಕ ಸರ್ಕಾರಕ್ಕೆ ಸವಾಲು
ರೋಹಿತ್ ವೇಮುಲ ಕಾಯಿದೆ ಜಾರಿ ಮಾಡುವುದು ಸಂಖ್ಯಾಬಲ ಇರುವ ಕರ್ನಾಟಕ ಸರ್ಕಾರಕ್ಕೆ ಮೇಲ್ನೋಟಕ್ಕೆ ಸುಲಭ. ಆದರೆ, ಪ್ರತಿಪಕ್ಷ ಬಿಜೆಪಿಯಿಂದ ಭಾರೀ ವಿರೋಧ ವ್ಯಕ್ತವಾಗುವುದು ನಿಶ್ಚಿತ. ರೋಹಿತ್ ವೇಮುಲಾ ಪ್ರಕರಣದಲ್ಲಿ ನೇರವಾಗಿ ಟೀಕೆಗೆ ಒಳಗಾಗಿರುವುದು ಬಿಜೆಪಿ ಹಾಗೂ ಎಬಿವಿಪಿ. ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠವಾಗಿದೆ ಹಾಗೂ ಅದರ ವಿದ್ಯಾರ್ಥಿ ಘಟಕ ಎಬಿವಿಪಿಯೂ ಅಷ್ಟೇ ಗಟ್ಟಿ ತಳವನ್ನು ಹೊಂದಿದೆ. ಹೀಗಾಗಿ ವೇಮುಲಾ ಕಾಯಿದೆಗೆ ಪ್ರತಿರೋಧ ನಿರೀಕ್ಷಿತ.
ಕರ್ನಾಟಕ ಸರ್ಕಾರ ಈಗ ಜಾತಿ ಗಣತಿಯನ್ನೂ ಜಾರಿಗೆ ಮಾಡಲು ಮುಂದಾಗಿ ಇಕ್ಕಟ್ಟಿನ ಸ್ಥಿತಿಯಲ್ಲಿದೆ. ಆಡಳಿತ ಪಕ್ಷದ ನಾಯಕರೇ ಸಿಎಂ ಸಿದ್ದರಾಮಯ್ಯ ಅವರ ಈ ಯೋಜನೆಗೆ ಬಲವಾಗಿ ವಿರೋಧ ವ್ಯಕ್ತಪಡಿಸುತ್ತಿವೆ. ಬಲಿಷ್ಠ ಜಾತಿಗಳ ಸಚಿವರುಗಳು ಇದನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ಅಬ್ಬರಿಸುತ್ತಿದ್ದಾರೆ. ಅದೂ ಅಲ್ಲದೆ, ಸರ್ಕಾರ ಜಾತಿಗಳ ನಡುವಿನ ಸಾಮರಸ್ಯ ಹಾಳು ಮಾಡುತ್ತಿದೆ ಎಂಬ ಆರೋಪ ಹೊತ್ತುಕೊಂಡಿದೆ. ಇಂಥ ಸಂದರ್ಭದಲ್ಲಿ ವೇಮುಲಾ ಕಾಯಿದೆ ಮತ್ತೊಂದು ಸಮಸ್ಯೆ ತಂದೊಡ್ಡಬಹುದು ಎಂದು ಹೇಳಲಾಗುತ್ತಿದೆ.
ಅಧ್ಯಯನ ಅಗತ್ಯ
ರೋಹಿತ್ ವೇಮುಲಾ ಕಾಯಿದೆ ಜಾರಿಗೆ ಕೆಲವೊಂದು ಅಧ್ಯಯನಗಳು ಅಗತ್ಯವಿದೆ. ಪ್ರಮುಖವಾಗಿ ತೆಲಂಗಾಣದಲ್ಲಿ ನಡೆದಂಥ ಘಟನೆಗಳು ಕರ್ನಾಟಕದಲ್ಲಿ ಇದುವರೆಗೆ ನಡೆದಿಲ್ಲ. ಆದಾಗ್ಯೂ ತಾರತಮ್ಯ ಪ್ರಕರಣಗಳನ್ನು ದಾಖಲಿಕರಣ ಮಾಡಬೇಕು ಅದಕ್ಕೊಂದು ಪರಿಹಾರ ಸೂಚಿಸುವ ಅಧ್ಯಯನವೂ ನಡೆಯಬೇಕಾಗುತ್ತದೆ. ಲಾಭೇತರ ಸಂಸ್ಥೆಗಳು ಹಾಗೂ ಶೈಕ್ಷಣಿಕ ಕ್ಷೇತ್ರದ ಪರಿಣತರ ಅಭಿಪ್ರಾಯವಿಲ್ಲದೇ ಅದನ್ನು ರಚಿಸಲು ಸಾಧ್ಯವೇ ಇಲ್ಲ. ಹೀಗಾಗಿ ಹಲವು ಸವಾಲುಗಳನ್ನು ದಾಟುವ ಅನಿವಾರ್ಯತೆ ಕರ್ನಾಟಕ ಸರ್ಕಾರದ ಮುಂದಿದೆ.
ರೋಹಿತ್ ವೇಮುಲ ಯಾರು?
ರೋಹಿತ್ ವೇಮುಲಾ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದರು. ವಿಶ್ವವಿದ್ಯಾನಿಲಯವು ಜುಲೈ 2015ರಿಂದ ರೋಹಿತ್ ಅವರಿಗೆ ನೀಡಬೇಕಾದ 25,000 ರೂ. ವಿದ್ಯಾರ್ಥಿವೇತ ನಿಲ್ಲಿಸಿತ್ತು. ರೋಹಿತ್ ವೇಮುಲಾ ಈ ಹಿಂದೆ ಕ್ಯಾಂಪಸ್‌ನಲ್ಲಿ ಕೆಲವು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು ಎಂಬ ಆರೋಪಗಳ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪಗಳಿವೆ. ಅದೂ ಅಲ್ಲದೆ, ಆಗಸ್ಟ್ 5 ರಂದು, ಎನ್. ಸುಶೀಲ್ ಕುಮಾರ್ ಎಂಬ ವಿದ್ಯಾರ್ಥಿ ರೋಹಿತ್ ವೇಮುಲಾ ಮತ್ತು ಇತರ ನಾಲ್ವರು ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿರುವುದಾಗಿ ದೂರಲಾಗಿದೆ. ಆ ಘಟನೆಯ ನಂತರ, ಆಗಿನ ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ ಅವರು ಆಗಿನ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಪತ್ರ ಬರೆದು, ವಿಶ್ವವಿದ್ಯಾಲಯದಲ್ಲಿ ಜಾತಿವಾದಿ, ಉಗ್ರಗಾಮಿ ಮತ್ತು ರಾಷ್ಟ್ರವಿರೋಧಿ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ್ದರು. ತಾವು 'ಅಂಬೇಡ್ಕರ್ ವಿದ್ಯಾರ್ಥಿ ಸಂಘ'ದ ಸದಸ್ಯನಾಗಿದ್ದರಿಂದ ಕೆಲವರು ಉದ್ದೇಶಪೂರ್ವಕವಾಗಿ ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ರೋಹಿತ್ ಸ್ನೇಹಿತರ ಬಳಿ ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಅವರ ವಿದ್ಯಾರ್ಥಿವೇತನ ರದ್ದಾಯಿತು ಎಂಬ ಆರೋಪಗಳಿವೆ.
ವಿಶ್ವವಿದ್ಯಾನಿಲಯವು ಈ ಆರೋಪಗಳನ್ನು ನಿರಾಕರಿಸಿದೆ. ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸಲು "ದಾಖಲೆಗಳ ಸಲ್ಲಿಕೆಯ" ವಿಳಂಬವೇ ಕಾರಣ ಎಂದು ಹೇಳಿದೆ. ಕೇಂದ್ರ ಸಚಿವರ ಮಧ್ಯಪ್ರವೇಶ ಮತ್ತು ತನಿಖೆಯ ನಂತರ, ವಿಶ್ವವಿದ್ಯಾನಿಲಯವು ರೋಹಿತ್ ಮತ್ತು ಇತರ ಐದು ವಿದ್ಯಾರ್ಥಿಗಳನ್ನು ಅಮಾನತುಗೊಳಿತ್ತು. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿಶ್ವವಿದ್ಯಾಲಯವು ಡಿಸೆಂಬರ್ 17 ರಂದು ಸ್ಪಷ್ಟಪಡಿಸಿತ್ತು.ಈ ಎಲ್ಲ ಅವಮಾನಗಳಿಂದ ಸಹಿಸಲಾಗದೆ ರೋಹಿತ್, 201ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ರೋಹಿತ್ ಆತ್ಮಹತ್ಯೆಯ ನಂತರ ದೇಶಾದ್ಯಂತ ಪ್ರತಿಭಟನೆಗಳು ಮತ್ತು ಧರಣಿಗಳು ನಡೆದಿದ್ದವು. ಈ ಆತ್ಮಹತ್ಯೆಯನ್ನು ದಲಿತರ ಮೇಲಿನ ತಾರತಮ್ಯಕ್ಕೆ ಉದಾಹರಣೆ ಎಂದು ಬಣ್ಣಿಸಲಾಗಿದೆ. ವಿಶ್ವವಿದ್ಯಾಲಯ ಆಡಳಿತ, ಬಿಜೆಪಿ ನಾಯಕತ್ವ ಮತ್ತು ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಕಿರುಕುಳದಿಂದ ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಅಂಬೇಡ್ಕರ್ ವಿದ್ಯಾರ್ಥಿ ಸಂಘ (ASA) ಈ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅಂದಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಂತಹ ನಾಯಕರು ಹೈದರಾಬಾದ್ಗೆ ಬಂದು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ಆದರೆ, ಬಿಜೆಪಿ ಮತ್ತು ಎಬಿವಿಪಿ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು, ರೋಹಿತ್ ಆತ್ಮಹತ್ಯೆಗೂ ವಿಶ್ವವಿದ್ಯಾಲಯ ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿಲ್ಲ, ರೋಹಿತ್ ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅದು ಜಾತಿ ಆಧಾರಿತವಲ್ಲ ಎಂದು ಹೇಳಿದ್ದವು. ಅಂತಿಮವಾಗಿ, 'ರೋಹಿತ್ ದಲಿತನಲ್ಲ' ಎಂದು ಬಿಜೆಪಿ ವಾದಿಸಿತು. ಈ ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಹಾಸ್ಟೆಲ್ ವಾರ್ಡನ್ ಮತ್ತು ವಿದ್ಯಾರ್ಥಿ ಸಂಘದ ನಾಯಕ ದೋಂತ ಪ್ರಶಾಂತ್ ನೀಡಿದ ದೂರಿನ ಮೇರೆಗೆ ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯವು, ಬಿಜೆಪಿ ನಾಯಕರನ್ನು ಪ್ರಕರಣಕ್ಕೆ ತಳುಕು ಹಾಕಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿ ಪ್ರಕರಣವನ್ನು ವಜಾಗೊಳಿಸಿತ್ತು. 2024ರವರೆಗೆ ನಡೆಯುತ್ತಿದ್ದ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗುತ್ತಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಮಾಡಿದ್ದರು. ಈ ವಿವಾದವೂ ಭುಗಿಲೆದ್ದಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ರೋಹಿತ್ ಅವರ ತಾಯಿ ಮುಖ್ಯಮಂತ್ರಿ, ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಪ್ರಕರಣದ ತನಿಖೆ ಮುಂದುವರಿಸುವಂತೆ ವಿನಂತಿಸಿದ್ದರು. ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಮರು ತನಿಖೆ ಮಾಡಲು ಸಿದ್ಧವಾಗಿದೆ.
ಕಾಂಗ್ರೆಸ್ ನಿರ್ಣಯ
ವಿಶ್ವವಿದ್ಯಾನಿಲಯಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ಮುಂದುವರಿದಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಪಕ್ಷವು, 2023ರಲ್ಲಿ ರಾಯ್‌ಪುರದಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ, ಎಚ್‌ಸಿಯು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಘಟನೆಗಳ ಬಗ್ಗೆಯೂ ಚರ್ಚಿಸಿತು.
ರೋಹಿತ್ ವೇಮುಲಾ ಸಮಸ್ಯೆಯ ಜೊತೆಗೆ, 2019ರ ಮೇ 22ರಂದು ಮಹಾರಾಷ್ಟ್ರದ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ಎರಡನೇ ವರ್ಷದ ನಿವಾಸಿ ಡಾ. ಪಾಯಲ್ ಸಲೀಂ ತಡ್ವಿ ಅವರ ಆತ್ಮಹತ್ಯೆ ಮತ್ತು 2023ರ ಫೆಬ್ರವರಿ 12ರಂದು ಐಐಟಿ-ಬಾಂಬೆಯಲ್ಲಿ 18 ವರ್ಷದ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರ ಆತ್ಮಹತ್ಯೆಯನ್ನು ಸಭೆಯಲ್ಲಿ ಚರ್ಚಿಸಲಾಗಿತ್ತು.