ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡುತ್ತಾರೆಯೇ?: ಉದ್ಧವ್ ಠಾಕ್ರೆ
ʻಈಶಾನ್ಯ ರಾಜ್ಯದ ಪರಿಸ್ಥಿತಿ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡುತ್ತಾರೆಯೇ?,ʼ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬುಧವಾರ (ಜೂನ್ 12) ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʻಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಸ್ಪಷ್ಟವಾದ ಬದಲಾವಣೆಗಳು ಆಗಿವೆಯೇ? ಜೀವಗಳು ಬಲಿಯಾಗುತ್ತಿವೆ. ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಯಾರು ಹೊಣೆ?,ʼ ಎಂದು ಪ್ರಶ್ನಿಸಿದರು.
ಮಣಿಪುರದಲ್ಲಿ ಒಂದು ವರ್ಷದ ನಂತರವೂ ಶಾಂತಿ ಸ್ಥಾಪನೆ ಆಗದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಭಾಗವತ್ ಅವರು, ಕಲಹಪೀಡಿತ ಈಶಾನ್ಯ ರಾಜ್ಯದ ಪರಿಸ್ಥಿತಿ ಯನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕು ಎಂದು ಹೇಳಿದ್ದರು. ʻನನಗೆ ದೇಶದ ಭವಿಷ್ಯದ ಬಗ್ಗೆ ಕಾಳಜಿ ಇದೆಯೇ ಹೊರತು ಎನ್‌ಡಿಎ ಸರ್ಕಾರದ ಭವಿಷ್ಯದ ಬಗ್ಗೆ ಅಲ್ಲʼ ಎಂದು ಉದ್ಧವ್ ಹೇಳಿದರು.
ʻವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ), ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಒಳಗೊಂಡಿರುವ ಮಹಾ ವಿಕಾಸ್ ಅಘಾಡಿಯಲ್ಲಿ ಯಾವು ದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದು, ನಿಗದಿತ ಸಮಯದೊಳಗೆ ನಾಮಪತ್ರ ಸಲ್ಲಿಸಬೇಕು,ʼ ಎಂದರು.
ಜೂನ್ 26 ರಂದು ಮತದಾನ ನಡೆಯಲಿದ್ದು,ಜುಲೈ 1 ರಂದು ಫಲಿತಾಂಶ ಪ್ರಕಟವಾಗಲಿದೆ.