ಕೊನೆಯುಸಿರು ಇರುವವರೆಗೆ ಮೋದಿ ನೀತಿ ವಿರುದ್ಧ ಹೋರಾಟ: ಸಂಸದ ಎಂಜಿನಿಯರ್ ರಶೀದ್
ಜಮ್ಮು- ಕಾಶ್ಮೀರದಲ್ಲಿ ದಯನೀಯವಾಗಿ ವಿಫಲವಾಗಿರುವ ಪ್ರಧಾನಿಯವರ 'ನಯಾ ಕಾಶ್ಮೀರ' ನಿರೂಪಣೆ ವಿರುದ್ಧ ಹೋರಾಡುತ್ತೇನೆ. ಅವರು 2019 ರ ಆಗಸ್ಟ್ 5 ರಂದು ಮಾಡಿದ್ದನ್ನು ಜನರು ತಿರಸ್ಕರಿಸಿದ್ದಾರೆ ಎಂದು ರಶೀದ್ ಹೇಳಿದರು.
ತಿಹಾರ್ ಜೈಲಿನಿಂದ ಬುಧವಾರ ಹೊರಬಂದ ಬಾರಾಮುಲ್ಲಾ ಸಂಸದ ಇಂಜಿನಿಯರ್ ರಶೀದ್, ನನ್ನ ಕೊನೆಯ ಉಸಿರು ಇರುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳ ವಿರುದ್ಧ ಹೋರಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.
ನವದೆಹಲಿಯ ನ್ಯಾಯಾಲಯವು ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಅಕ್ಟೋಬರ್ 2 ರವರೆಗೆ ಮಧ್ಯಂತರ ಜಾಮೀನು ನೀಡಿದೆ.
ಪ್ರಧಾನಿಗೆ ಸಂದೇಶ: ಜೈಲಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನನ್ನ ಜನರನ್ನು ನಿರಾಸೆಗೊಳಿಸುವುದಿಲ್ಲ. ಜಮ್ಮು- ಕಾಶ್ಮೀರದಲ್ಲಿ ದಯನೀಯವಾಗಿ ವಿಫಲವಾಗಿರುವ ಪ್ರಧಾನಿಯವರ 'ನಯಾ ಕಾಶ್ಮೀರ' ನಿರೂಪಣೆ ವಿರುದ್ಧ ಹೋರಾಡುತ್ತೇನೆ. ಜನರು ಅವರು 2019 ರ ಆಗಸ್ಟ್ 5 ರಂದು ಮಾಡಿದ್ದನ್ನು ತಿರಸ್ಕರಿಸಿದ್ದಾರೆ. ಕಾಶ್ಮೀರ ಸಮಸ್ಯೆಯ ಶಾಂತಿಯುತ ಪರಿಹಾರಕ್ಕಾಗಿ, ನನ್ನ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ. ನಾನು ಮೋದಿಯವರಿಗೆ ʻಹೆದರಬೇಡಿ, ಹೆದರಿಸಬೇಡಿ, ನಾವು ಭಯಪಡುವುದಿಲ್ಲ ಎಂದು ಹೇಳಲು ಬಯಸುತ್ತೇನೆ,ʼ ಎಂದು ಹೇಳಿದರು.
ʻನಾನು ಐದೂವರೆ ವರ್ಷ ಕಾಲ ಜೈಲಿನಲ್ಲಿದ್ದೆ. ನಾನು ಜನರನ್ನು ಒಗ್ಗೂಡಿಸಲು ಬರುತ್ತಿದ್ದೇನೆ; ಅವರನ್ನು ವಿಭಜಿಸಲು ಅಲ್ಲ. ಕಾಶ್ಮೀರ ನಮಗೆ ಸೇರಿದ್ದು. ನಾವು ಯಾವ ತ್ಯಾಗಕ್ಕಾದರೂ ಸಿದ್ಧರಿದ್ದೇವೆ,ʼ ಎಂದು ಸುದ್ದಿಗಾರರಿಗೆ ತಿಳಿಸಿದರು
ʻಕಾಶ್ಮೀರದ ಜನರಿಂದ ಮತ ಕೇಳಲು ರಶೀದ್‌ಗೆ ಜಾಮೀನು ನೀಡಲಾಗಿದೆ,ʼ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮಂಗಳವಾರ ಹೇಳಿದ್ದಾರೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ರಶೀದ್ ಅವರ ಅವಾಮಿ ಇತ್ತೆಹಾದ್ ಪಕ್ಷವನ್ನು ಬಿಜೆಪಿಯ ಪ್ರತಿನಿಧಿ ಎಂದು ಬಣ್ಣಿಸಿದ್ದರು. ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ರಶೀದ್, ʻನನ್ನ ಹೋರಾಟ ಬಹಳ ದೊಡ್ಡದು. ಓಮರ್ ಹೋರಾಟ ಕುರ್ಚಿಗಾಗಿ, ನನ್ನ ಹೋರಾಟ ಜನರಿಗಾಗಿ,ʼ ಎಂದರು.
ʻನಾನು ಬಿಜೆಪಿಯ ಬಲಿಪಶು; ಕೊನೆಯುಸಿರು ಇರುವವರೆಗೂ ನಾನು ಮೋದಿಯವರ ನೀತಿಗಳ ವಿರುದ್ಧ ಹೋರಾಡುತ್ತೇನೆ. ಏಕೆಂದರೆ, ಅವರು ಈಗಾಗಲೇ ಕಾಶ್ಮೀರದ ಜನರನ್ನು ನಿರಾಸೆಗೊಳಿಸಿದ್ದಾರೆ. ಕಾಶ್ಮೀರವನ್ನು "ನಾಶಗೊಳಿಸಿದ್ದಾರೆ,ʼ ಎಂದು ರಶೀದ್ ಆರೋಪಿಸಿದರು.
ರಶೀದ್ ಯಾರು?: ಇಂಜಿನಿಯರ್ ರಶೀದ್ ಎಂದು ಜನಪ್ರಿಯರಾಗಿರುವ ಶೇಖ್ ಅಬ್ದುಲ್ ರಶೀದ್, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ 2017ರಲ್ಲಿ ಬಂಧಿಸಲ್ಪಟ್ಟು, 2019 ರಿಂದ ಜೈಲಿನಲ್ಲಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಬಾರಾಮುಲ್ಲಾದಲ್ಲಿ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದರು. ಅವರ ಪಕ್ಷವಾದ ಅವಾಮಿ ಇತ್ತೆಹಾದ್ ಪಾರ್ಟಿ (ಎಐಪಿ) ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.