ʻಜಗನ್ನಾಥ ದೇವರು ಮೋದಿ ಅವರ ಭಕ್ತʼ ಹೇಳಿಕೆ: ಸಂಬಿತ್ ಪಾತ್ರಾ ಕ್ಷಮೆಯಾಚನೆ
x

ʻಜಗನ್ನಾಥ ದೇವರು ಮೋದಿ ಅವರ ಭಕ್ತʼ ಹೇಳಿಕೆ: ಸಂಬಿತ್ ಪಾತ್ರಾ ಕ್ಷಮೆಯಾಚನೆ


ಭಗವಾನ್ ಜಗನ್ನಾಥ ಪ್ರಧಾನಿ ನರೇಂದ್ರ ಮೋದಿಯವರ ಭಕ್ತ ಎಂದು ಹೇಳಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಒಡಿಶಾದ ಪುರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ, ಬಾಯಿತಪ್ಪಿ ಆಡಿದ ಮಾತಿಗೆ ಕ್ಷಮೆ ಯಾಚಿಸಿದ್ದಾರೆ ಮತ್ತು ಪ್ರಾಯಶ್ಚಿತ್ತವೆಂದು ಮೂರು ದಿನ ಉಪವಾಸ ಆಚರಿ ಸುವುದಾಗಿ ಹೇಳಿದರು.

ಪತ್ರಾ ಅವರು ಮಂಗಳವಾರ (ಮೇ 21) ಎಕ್ಸ್‌ನಲ್ಲಿ ಬರೆದ ಪೋಸ್ಟ್‌ನಲ್ಲಿ, ʻಮಹಾಪ್ರಭುವಿನ ಪಾದಗಳಿಗೆ ತಲೆಬಾಗಿ ಕ್ಷಮೆ ಕೋರುತ್ತೇನೆ. ಪ್ರಾಯಶ್ಚಿತ್ತವಾಗಿ 3 ದಿನಗಳ ಕಾಲ ಉಪವಾಸ ಮಾಡುತ್ತೇನೆ,ʼ ಎಂದು ಬರೆದಿದ್ದಾರೆ.

ಸುದ್ದಿ ಸಂಸ್ಥೆಯೋದರ ಜೊತೆ ಮಾತನಾಡಿ, ʻಇದು ಅಸಾಧ್ಯ.ಸ್ವಸ್ಥ ಮನಸ್ಸಿನ ಯಾವ ವ್ಯಕ್ತಿಯೂ ದೇವರು ಇನೊಬ್ಬ ಮನುಷ್ಯನ ಭಕ್ತ ಎಂದು ಹೇಳಲು ಸಾಧ್ಯವಿಲ್ಲ. ಹೇಳಿಕೆಯಿಂದ ಕೆಲವರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದನ್ನು ಒಪ್ಪುತ್ತೇನೆ. ಆದರೆ, ಅರಿವಿಲ್ಲದೆ ಮಾಡಿದ ತಪ್ಪನ್ನು ಭಗವಂತ ಕೂಡ ಕ್ಷಮಿಸುತ್ತಾನೆ. ಸಾವಿರಾರು ಓಡಿಯಾಗಳಂತೆ ನಾನು ಕೂಡ ಜಗನ್ನಾಥ ಸ್ವಾಮಿಯ ಕಟ್ಟಾ ಭಕ್ತನಾಗಿರುವುದರಿಂದ ಕ್ಷಮೆ ಕೋರುತ್ತೇನೆ,ʼ ಎಂದು ಹೇಳಿದ್ದಾರೆ.

ಹೇಳಿಕೆಗೆ ವ್ಯಾಪಕ ಖಂಡನೆ: ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ʻಜಗನ್ನಾಥ ಭಗವಾನ್ ಪ್ರಧಾನಿ ಮೋದಿಯ 'ಭಕ್ತ' ಎಂದು ಸೋಮವಾರ‌ ಪಾತ್ರಾ ಹೇಳಿದ್ದರು. ಹೇಳಿಕೆಗೆ ವ್ಯಾಪಕ ಟೀಕೆಯಲ್ಲದೆ, ವಿವಾದ ಸೃಷ್ಟಿಯಾಗಿತ್ತು.ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ,ʻಪಾತ್ರಾ ಜಗನ್ನಾಥನ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆʼ ಎಂದು ಖಂಡಿಸಿದ್ದರು.

Read More
Next Story