ಉತ್ತರಾಖಂಡ್: ಹಲ್ದ್ವಾನಿ ಗಲಭೆಗೆ ಕಾರಣವೇನು? ಸರ್ಕಾರ ಹೇಳುತ್ತಿರುವುದೇನು?
x
ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಭೇಟಿ ಮಾಡಿದ ಹಲ್ದ್ವಾನಿ ಶಾಸಕ ಸುಮಿತ್ ಹೃದಯೇಶ್

ಉತ್ತರಾಖಂಡ್: ಹಲ್ದ್ವಾನಿ ಗಲಭೆಗೆ ಕಾರಣವೇನು? ಸರ್ಕಾರ ಹೇಳುತ್ತಿರುವುದೇನು?

ಅಕ್ರಮವಾಗಿ ನಿರ್ಮಿಸಲಾಗಿದೆಯೆಂದು ಮದರಸಾ ಹಾಗೂ ನಮಾಝ್‌ ಮಾಡುವ ಕಟ್ಟಡವನ್ನು ಧ್ವಂಸಗೊಳಿಸಿದ ಬಳಿಕ ಉತ್ತರಾಖಂಡ್‌ನ ಹಲ್ದ್ವಾನಿ ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.


ಉತ್ತರಾಖಂಡ್‌ನ ಹಲ್ದ್ವಾನಿ ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕರ್ಫ್ಯೂ ವಿಧಿಸಿ ಮತ್ತು ಹಿಂಸಾಚಾರಕ್ಕೆ ಕೈಹಾಕುವವರ ವಿರುದ್ಧ ಕಂಡಲ್ಲಿ ಗುಂಡು ಹಾರಿಸಲು ಆದೇಶಿಸಲಾಗಿದೆ.

ಏನಿದು ಘಟನೆ?

ಗುರುವಾರ (ಫೆಬ್ರವರಿ 8) ಅಕ್ರಮ ನಿರ್ಮಾಣ ಎಂದು ಹೇಳಲಾದ ಮದರಸಾವನ್ನು ಕೆಡವಿದ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದು, 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ನೋಂದಣಿಯಾಗದ ಎರಡು ಕಟ್ಟಡಗಳನ್ನು ಕೆಡವಿದ 30 ನಿಮಿಷಗಳ ನಂತರ ಪ್ರದೇಶದ ನಿವಾಸಿಗಳಿಂದ ಗಲಭೆ ಪ್ರಾರಂಭವಾಯಿತು ಎಂದು ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ವಂದನಾ ಸಿಂಗ್ ಹೇಳಿದ್ದಾರೆ. ಉದ್ರಿಕ್ತರ ಗುಂಪು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದೆ. ಬಂಭೂಲ್‌ಪುರ ಪೊಲೀಸ್ ಠಾಣೆಯ ಮೇಲೂ ಅವರು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ಎರಡು ಕಟ್ಟಡಗಳನ್ನು ಕೆಡವಲು ಪ್ರಾರಂಭಿಸುತ್ತಿದ್ದಂತೆ ಕೋಪಗೊಂಡ ಸ್ಥಳೀಯ ನಿವಾಸಿಗಳು ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬ್ಯಾರಿಕೇಡ್‌ಗಳನ್ನು ಮುರಿದ ಉದ್ರಿಕ್ತರು ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ಜಗಳ ಮಾಡಿದ್ದಾರೆ ಎನ್ನಲಾಗಿದೆ.

ಪೊಲೀಸರ ಪ್ರತಿಕ್ರಿಯೆ ಏನು?

ಆತ್ಮರಕ್ಷಣೆಗಾಗಿ ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್ ಮೀನಾ ಹೇಳಿದ್ದಾರೆ.

“ಬಾಂಬ್ ಎಸೆದ ಜನಸಮೂಹವನ್ನು ಹೆಚ್ಚಿನ ಬಲವನ್ನು ಬಳಸದೆ ಪೊಲೀಸರು ನಿಯಂತ್ರಿಸಿದರು. ಆದರೆ ಅವರು ಪೊಲೀಸ್ ಠಾಣೆಗೆ ಬಂದು ಬೆಂಕಿ ಹಚ್ಚಿದಾಗ ಪ್ರತಿದಾಳಿ ನಡೆಸಬೇಕಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಗಲಭೆಕೋರರು ಪೊಲೀಸ್ ಸಿಬ್ಬಂದಿಯನ್ನು ಜೀವಂತವಾಗಿ ಸುಟ್ಟುಹಾಕಲು ಪ್ರಯತ್ನಿಸಿದರು. ಕೊನೆಗೆ ರಕ್ಷಣೆಗಾಗಿ ಪೊಲೀಸ್ ಠಾಣೆ ಒಳಗೆ ಓಡಿ ಹೋಗಬೇಕಾಯಿತು” ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಹೇಳುವುದೇನು?

ಎಸ್‌ಎಸ್‌ಪಿ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಂದನಾ ಸಿಂಗ್, ಕಟ್ಟಡಗಳು ಅತಿಕ್ರಮಣಗೊಂಡ ಸರ್ಕಾರಿ ಜಮೀನಿನಲ್ಲಿದೆ. ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಮೊದಲೇ ಸೂಚನೆ ನೀಡಿ, ನಂತರ ಅವುಗಳನ್ನು ನೆಲಸಮ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮುನ್ಸಿಪಲ್ ಕಾರ್ಪೊರೇಷನ್ ಎರಡು ಕಟ್ಟಡಗಳನ್ನು ಸಂಪೂರ್ಣವಾಗಿ ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಂಡ ನಂತರವೇ ನೆಲಸಮ ಕಾರ್ಯಾಚರಣೆ ಪ್ರಾರಂಭವಾಯಿತು ಎಂದು ಅವರು ಹೇಳಿದ್ದಾರೆ.

ಪೊಲೀಸರು ಮತ್ತು ಪ್ರಾಂತೀಯ ಸಶಸ್ತ್ರ ಕಾನ್ಸ್‌ಟೇಬ್ಯುಲರಿ (ಪಿಎಸಿ) ಸಿಬ್ಬಂದಿಗಳನ್ನು ನಿಯೋಜಿಸಿದ ಬಳಿಕ ಕಟ್ಟಡ ಧ್ವಂಸ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಸದ್ಯದ ಪರಿಸ್ಥಿತಿ ಏನು?

ಕರ್ಫ್ಯೂ ವಿಧಿಸಿರುವುದರಿಂದ ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸುಮಾರು 1,100 ಪೊಲೀಸ್ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.

ಗುರುವಾರ (ಫೆಬ್ರವರಿ 8) ಹಿಂಸಾಚಾರ ಉಲ್ಬಣಗೊಂಡಿದ್ದರಿಂದ ಹಲ್ದ್ವಾನಿಯಲ್ಲಿ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿತ್ತು. ಕರ್ಫ್ಯೂ ಹೇರಿದ ನಂತರ, ನಗರ ಮತ್ತು ಸುತ್ತಮುತ್ತಲಿನ ಎಲ್ಲಾ ಶಾಲೆಗಳನ್ನು ಕೂಡಾ ಮುಚ್ಚಲಾಗಿದೆ.

Read More
Next Story