ರಕ್ಷಾಬಂಧನ: ಟ್ರೋಲ್ ಆದ ಸುಧಾ ಮೂರ್ತಿ ವಿಡಿಯೋ
ರಾಜ್ಯಸಭೆ ಸದಸ್ಯೆ ಮತ್ತು ಇನ್ಫೋಸಿಸ್ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಸುಧಾ ಮೂರ್ತಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋ, ಟ್ರಾಲ್ ಆಗಿದೆ. ಅವರು ರಕ್ಷಾ ಬಂಧನದ ಮೂಲವನ್ನು ಮೊಘಲ್ ಚಕ್ರವರ್ತಿ ಹುಮಾಯೂನ್‌ಗೆ ಜೋಡಿಸಿದ್ದರು.
16ನೇ ಶತಮಾನದಲ್ಲಿ ರಾಣಿ ಕರ್ಣಾವತಿ ಬೆದರಿಕೆಗೆ ಒಳಗಾದಾಗ, ಮೊಘಲ್ ದೊರೆ ಹುಮಾಯೂನ್‌ಗೆ ಸಹಾಯ ಕೋರಿ ಒಂದು ಎಳೆಯನ್ನು ಕಳುಹಿಸಿದ್ದಳು. ಅಂದಿನಿಂದ, ಸಹೋದರನ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಕಟ್ಟುವ ಸಂಪ್ರದಾಯ ಮುಂದುವರಿದಿದೆ ಎಂದು ಹೇಳಿದ್ದರು.
ಐತಿಹಾಸಿಕ ಹಿನ್ನೆಲೆ: ʻರಕ್ಷಾಬಂಧನ ಅಥವಾ ರಾಖಿಯು ಸಹೋದರಿ ದಾರವನ್ನು ಕಟ್ಟುವ ಪ್ರಮುಖ ಹಬ್ಬಗಳಲ್ಲಿ ಒಂದು. ಇದು ಭಾರಿ ಅಲ್ಲದ, ಆದರೆ ಕಷ್ಟದ ಸಮಯದಲ್ಲಿ ಸಹಾಯ ಮಾಡಲು ಇರಬೇಕೆಂದು ಸೂಚಿಸುವ ಸರಳ ಎಳೆಯಾಗಿದೆ, ʼ ಎಂದು ಹೇಳಿದ್ದರು.
ʻಸಣ್ಣದೊಂದು ರಾಜ್ಯದ ರಾಣಿ ಕರ್ಣಾವತಿ ಮೇಲೆ ಆಕ್ರಮಣ ಮಾಡಿದಾಗ, ಮೊಘಲ್ ಚಕ್ರವರ್ತಿ ರಾಜ ಹುಮಾಯೂನ್‌ಗೆ ಒಂದು ಎಳೆಯನ್ನು ಕಳುಹಿಸಿದಳು. ಅಪಾಯದಲ್ಲಿದ್ದೇನೆ. ನನ್ನನ್ನು ನಿಮ್ಮ ಸಹೋದರಿ ಎಂದು ಪರಿಗಣಿಸಿ ನನ್ನನ್ನು ರಕ್ಷಿಸಿ ಎಂದು ಕೋರಿದಳು,ʼ ಎಂದು ಬರೆದಿದ್ದರು.
ʻದಾರದೆಳೆ ಬಗ್ಗೆ ಅರಿವಿಲ್ಲದ ಹುಮಾಯೂನ್, ಸ್ಥಳೀಯರನ್ನು ವಿಚಾರಿಸಿದಾಗ ಅದು ಸಹೋದರಿಯಿಂದ ಬಂದ ಕರೆ ಎಂದು ತಿಳಿಯಿತು. ನಾನು ರಾಣಿ ಕರ್ಣಾವತಿಗೆ ನೆರವಾಗುತ್ತೇನೆ ಎಂದು ಹೇಳಿ, ಆಕೆಯ ರಾಜ್ಯಕ್ಕೆ ಹೋದ. ಆದರೆ, ಅಷ್ಟರಲ್ಲಿ ತಡವಾಗಿತ್ತು,ʼ ಎಂದು ಬರೆದಿದ್ದರು. .
ಎಕ್ಸ್ ಬಳಕೆದಾರರಿಂದ ಟೀಕೆ: ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಹುಟ್ಟುಹಾಕಿತು.
ʻಈ ಕಥೆಯ ಮೂಲ ಯಾವುದು?! ಸನಾತನ ಧರ್ಮದ ಪ್ರತಿಯೊಂದು ಆಚರಣೆಯ ಬಗ್ಗೆ ಶಂಕಾಸ್ಪದ ಕಥೆಗಳನ್ನು ನೀವು ಏಕೆ ಸೃಷ್ಟಿಸಬೇಕೆಂದು ನನಗೆ ಅರ್ಥವಾಗುವುದಿಲ್ಲ!! ನಿಮ್ಮ ನಿಲುವಿನ ಬಗ್ಗೆ ಐತಿಹಾಸಿಕ ಪುರಾವೆ ಒದಗಿಸಬೇಕು. ನಿಮ್ಮಲ್ಲಿರುವ ಹಣದಿಂದ ನೀವು ಅದನ್ನು ಸುಲಭವಾಗಿ ಮಾಡಬಹುದು,ʼ ಎಂದು ಒಬ್ಬರು ಬರೆದಿದ್ದಾರೆ.
ʻನೀವು ಈ ಅಸಂಬದ್ಧ ಕಥೆಯನ್ನು ನಂಬಿದರೆ, ನಿಮಗೆ ಭಾರತೀಯ ಹಬ್ಬಗಳು ಮತ್ತು ಸಂಸ್ಕೃತಿ ಬಗ್ಗೆ ಏನೂ ತಿಳಿದಿಲ್ಲ ಎಂದಾಗುತ್ತದೆ. ಮಕ್ಕಳಿಗೆ ನಿಮ್ಮ ಪುಸ್ತಕ ಶಿಫಾರಸು ಮಾಡಿದ್ದಕ್ಕೆ ನಾನು ವಿಷಾದಿಸುತ್ತೇನೆ. ದಯವಿಟ್ಟು ಶ್ರೀಕೃಷ್ಣನಿಗೆ ದ್ರೌಪದಿಯ ರಕ್ಷಾ ಸೂತ್ರ ಮತ್ತು ಶ್ರಾವಣ ಪೂರ್ಣಿಮೆ ಬಗ್ಗೆ ಓದಿ,ʼ ಎಂದು ಮತ್ತೊಬ್ಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
ಅನು ಸತೀಶ್ ಎಂಬುವರು, ʻನೀವು ಬರಹಗಾರರಾಗಿ ಕ್ಷುಲ್ಲಕವಾದುದನ್ನು ಹೇಳುತ್ತಿರುವುದು ನಿಜವಾಗಿಯೂ ಆಶ್ಚರ್ಯವಾಗಿದೆ. ರಕ್ಷಾ ಬಂಧನ ಕೃಷ್ಣ ಮತ್ತು ದ್ರೌಪದಿಗೆ ಸಂಬಂಧಿಸಿದೆ. ದಯವಿಟ್ಟು ಓದಿʼ.
ʻಇದು ಸಂಭವಿಸದ ಘಟನೆ. ನಿಮ್ಮ ಐತಿಹಾಸಿಕ ಜ್ಞಾನವನ್ನು ಸುಧಾರಿಸಲು, ವಾರಕ್ಕೆ 100 ಗಂಟೆ ಕಾಲ ಓದಬೇಕು,ʼ ಎಂದು ಇನ್ನೊಬ್ಬರು ಬರೆದಿದ್ದಾರೆ.