ರೈತ ಹೋರಾಟ | ದಿಲ್ಲಿಯತ್ತ ಯಾಕೆ ಮತ್ತೆ ಬಂದರು ರೈತರು? ಈ ಬಾರಿ ಚಲೋ ದಿಲ್ಲಿಗೆ ಕಾರಣವೇನು?
x
ದೆಹಲಿಗೆ ಆಗಮಿಸುತ್ತಿರುವ ರೈತರು |ಫೋಟೋ: x

ರೈತ ಹೋರಾಟ | ದಿಲ್ಲಿಯತ್ತ ಯಾಕೆ ಮತ್ತೆ ಬಂದರು ರೈತರು? ಈ ಬಾರಿ ಚಲೋ ದಿಲ್ಲಿಗೆ ಕಾರಣವೇನು?

ನೊಯ್ಡಾ ಮತ್ತು ಗ್ರೇಟರ್ ನೋಯ್ಡಾದ 140 ಕ್ಕೂ ಹೆಚ್ಚು ಹಳ್ಳಿಗಳ ರೈತರು ರಾಷ್ಟ್ರ ರಾಜಧಾನಿಗೆ ಹೊರಟಿದ್ದು, ದೆಹಲಿ-ನೋಯ್ಡಾ ಗಡಿಯಲ್ಲಿ ಪೊಲೀಸರು ರೈತರನ್ನು ತಡೆದಿದ್ದಾರೆ.


ಐತಿಹಾಸಿಕ ದೆಹಲಿ ರೈತ ಹೋರಾಟದ ಮೂರು ವರ್ಷಗಳ ಬಳಿಕ ವಿವಿಧ ರಾಜ್ಯಗಳ ರೈತರು ಮತ್ತೊಮ್ಮೆ ರಾಷ್ಟ್ರರಾಜಧಾನಿಯಲ್ಲಿ ಹೋರಾಟದ ಕಹಳೆ ಮೊಳಗಿಸಿದ್ದಾರೆ.

ನೊಯ್ಡಾ ಮತ್ತು ಗ್ರೇಟರ್ ನೋಯ್ಡಾದ 140 ಕ್ಕೂ ಹೆಚ್ಚು ಹಳ್ಳಿಗಳ ರೈತರು ರಾಷ್ಟ್ರ ರಾಜಧಾನಿಗೆ ಹೊರಟಿದ್ದು, ಚಲೋ ದಿಲ್ಲಿ ಹೋರಾಟ ಆರಂಭಿಸಿದ್ದಾರೆ. ಆದರೆ, ರೈತರ ಪ್ರತಿಭಟನೆಗೆ ಬೆಚ್ಚಿರುವ ಸರ್ಕಾರ, ದೆಹಲಿ ಗಡಿಗಳನ್ನು ಮುಚ್ಚಿದ್ದು, ನೋಯ್ಡಾ ಗಡಿಯಲ್ಲಿ ಪೊಲೀಸರು ನಿಯೋಜಿಸಿ ರೈತರನ್ನು ತಡೆದು ನಿಲ್ಲಿಸಿದೆ.

ಉತ್ತರಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ನಾಲ್ಕು ಪ್ರತಿಭಟನೆಗಳು ನಡೆದಿದ್ದು, ಜೈ ಜವಾನ್ ಜೈ ಕಿಸಾನ್ ಸಂಘಟನೆ, ಅಖಿಲ ಭಾರತ ಕಿಸಾನ್ ಸಭಾ, ಭಾರತೀಯ ಕಿಸಾನ್ ಪರಿಷತ್ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಈ ಸಂಘಟನೆಗಳು ಬುಧವಾರ ರೈತ ಮಹಾಪಂಚಾಯತ್ ನಡೆಸಿದ್ದು, ತಮ್ಮ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಗುರುವಾರ ಸಂಸತ್ತಿಗೆ ಮೆರವಣಿಗೆ ನಡೆಸಲು ನಿರ್ಧರಿಸಿದ್ದವು.

ಈ ಬಾರಿ ರೈತರ ಬೇಡಿಕೆ ಏನು?

ಅಭಿವೃದ್ಧಿ ಯೋಜನೆಗಳಿಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ಮತ್ತು ಅವರ ಕುಟುಂಬಗಳಿಗೆ ಅಭಿವೃದ್ಧಿ ಹೊಂದಿದ ಭೂಮಿಯಲ್ಲಿ ವಸತಿ ನಿವೇಶನಗಳಲ್ಲಿ ಶೇ.೧೦ ರಷ್ಟನ್ನು ಮೀಸಲಿಡಬೇಕು ಎಂದು ಪ್ರತಿಭಟನಾನಿರತ ರೈತರು ಎರಡು ಬೇಡಿಕೆಗಳನ್ನು ಇಟ್ಟಿದ್ದಾರೆ.

ಅಭಿವೃದ್ಧಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ತಮ್ಮನ್ನು ಭೂರಹಿತರನ್ನಾಗಿ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದು, ತಾವು ಪರಿಹಾರವಾಗಿ ಪಡೆಯುವ ಪ್ರಸ್ತುತ ದರವು ಅಸಮರ್ಪಕವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ನೋಯ್ಡಾ ಪ್ರಾಧಿಕಾರ, ಗ್ರೇಟರ್ ನೋಯ್ಡಾ ಪ್ರಾಧಿಕಾರ ಮತ್ತು ಯಮುನಾ ಪ್ರಾಧಿಕಾರವು ರೈತರಿಗೆ, ಒಟ್ಟು ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಶೇ.5, 6 ಮತ್ತು ೭ ರಷ್ಟನ್ನು ನೀಡುತ್ತದೆಯಾದರೂ, ಇದು ರೈತರಿಗೆ ತೃಪ್ತಿ ನೀಡುತ್ತಿಲ್ಲ. ಇದಲ್ಲದೆ, ಹಿಂದೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಹೆಚ್ಚುವರಿ ಪರಿಹಾರವನ್ನು ಸಹ ರೈತರು ಕೇಳುತ್ತಿದ್ದಾರೆ. ವರ್ಷಗಳ ಹಿಂದೆ ಕಡಿಮೆ ದರದಲ್ಲಿ ಭೂಮಿಯನ್ನು ಸ್ವಾಧೀನಪಡಿಸಲಾಗಿತ್ತು, ಇದರಿಂದ ತಾವು ನಷ್ಟಕ್ಕೀಡಾಗಿದ್ದೇವೆ ಎಂದು ರೈತರು ಆರೋಪಿಸಿದ್ದಾರೆ.

ಇದಲ್ಲದೆ, ಪ್ರತಿಭಟನಾನಿರತ ರೈತರು ತಮ್ಮ ಕುಟುಂಬಗಳಿಗೆ ಉದ್ಯೋಗ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒತ್ತಾಯಿಸುತ್ತಿದ್ದಾರೆ. ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ಮಧ್ಯಸ್ಥಗಾರರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ನಿಷೇಧಾಜ್ಞೆ, ಕಾಂಕ್ರೀಟ್‌ ತಡೆಗೋಡೆ

ದೆಹಲಿಯಲ್ಲಿ ಫೆ.13ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯ ಸಿಂಘು, ಘಾಜಿಪುರ್ ಮತ್ತು ಟಿಕ್ರಿ ಗಡಿ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ದೆಹಲಿ ಪ್ರವೇಶದಲ್ಲಿ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಲಾಗಿದೆ. ಅಲ್ಲದೆ, ಒಂದು ತಿಂಗಳ ಕಾಲ ದೆಹಲಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ದೆಹಲಿ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕದ ರೈತರು ವಶಕ್ಕೆ

ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಕರ್ನಾಟಕದ ರೈತರನ್ನು ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ಇವರಲ್ಲಿ, ಧಾರವಾಡ ಜಿಲ್ಲೆಯ 16 ರೈತರು ಕೂಡ ಸೇರಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ 70 ರೈತರು ದೆಹಲಿಗೆ ತೆರಳುತ್ತಿದ್ದರು.

Read More
Next Story