
ಈ ಗ್ರಾಮದಲ್ಲಿ ಆಜಾನ್ ಕೂಗುವವನೂ ಒಬ್ಬನೇ, ನಮಾಜ್ ಮಾಡುವವನೂ ಒಬ್ಬನೆ!
ಒಂದು ಕಾಲದಲ್ಲಿ ಮುಸ್ಲಿಂ ಬಾಹುಳ್ಯವಿದ್ದ ಈ ಗ್ರಾಮದಲ್ಲಿ ಈಗ ಉಳಿದಿರುವುದು ಏಕೈಕ ಇಸ್ಲಾಂ ಅನುಯಾಯಿ. ಯಾಕೆ, ಏನು ಅವರ ಜೀವನ ಹೇಗೆ ನಡೆಯುತ್ತದೆ ಎಂಬೆಲ್ಲ ಆಸಕ್ತಿಕಾರಕ ಸಂಗತಿ ಈ ಲೇಖನದಲ್ಲಿದೆ. ಓದಿ...
ಬಿಹಾರದ ನಳಂದಾದ ಶರೀಫ್ ಬ್ಲಾಕ್ ವ್ಯಾಪ್ತಿಯ ಸರ್‌ಬಹದಿ ಗ್ರಾಮದಲ್ಲಿ 45 ವರ್ಷದ ಜಾಹಿದ್ ಅನ್ಸಾರಿ ಎಂಬುವರು ದಿನಕ್ಕೆ ಐದು ಬಾರಿ ಸ್ಥಳೀಯ ಮಸೀದಿಯಲ್ಲಿ ಆಜಾನ್ ಕೂಗುತ್ತಾರೆ. ವಿಶೇಷ ಎಂದರೆ ಅವರಿಗೆ ಪ್ರತಿಕ್ರಿಯೆ ಕೊಡುವುದಕ್ಕೆ ಅಥವಾ ಅವರೊಂದಿಗೆ ಕೂಡಿಕೊಂಡು ನಮಾಜ್ ಮಾಡುವುದಕ್ಕೆ ಆ ಗ್ರಾಮದಲ್ಲಿ ಯಾರೂ ಇಲ್ಲ. ಯಾಕೆಂದರೆ, ಜಾಹಿದ್ ಆ ಸಣ್ಣ ಗ್ರಾಮದಲ್ಲಿ ಇರುವ ಏಕೈಕ ಇಸ್ಲಾಂ ಧರ್ಮದ ಅನುಯಾಯಿ. ಹೀಗಾಗಿ ಹಲವು ವರ್ಷಗಳಿಂದ ಅವರೇ ಆಜಾನ್ ಕೂಗಿ, ಅವರೇ ನಮಾಜ್ ಮಾಡುತ್ತಾರೆ...
ಒಂದು ಕಾಲದಲ್ಲಿ ಮುಸ್ಲಿಂ ಬಾಹುಳ್ಯವಿದ್ದ ಈ ಗ್ರಾಮದಲ್ಲಿ, 2011ರ ಜನಗಣತಿಯ ಪ್ರಕಾರ, ಸುಮಾರು 680 ಮುಸ್ಲಿಂ ಕುಟುಂಬಗಳಿದ್ದವು. ಆದರೆ ಈಗ ಉಳಿದಿರುವುದು ಒಬ್ಬರೇ ಒಬ್ಬರು! ಉಳಿದವರೆಲ್ಲರೂ ಗ್ರಾಮ ತೊರೆದು ಪಟ್ಟಣ ಸೇರಿದ್ದಾರೆ.
ಸರ್‌ಬಹದಿಯಲ್ಲೇ ಹುಟ್ಟಿ ಬೆಳೆದ ಜಾಹಿದ್ ಅವರ ತಂದೆ, ಎರಡು ಶತಮಾನಗಳಷ್ಟು ಹಳೆಯ ಮಸೀದಿಯಲ್ಲಿ ಮುಹಜ್ಜೀನ್ ಆಗಿ ಕೆಲಸ ಮಾಡುತ್ತಿದ್ದರು. ತಂದೆಯನ್ನು ನೋಡಿಕೊಂಡೇ ಬೆಳೆದ ಜಾಹಿದ್, ಅವರ ರೀತಿಯಲ್ಲಿಯೇ ಧಾರ್ಮಿಕ ಕರ್ತವ್ಯ ಕಲಿತರು. 2012ರಲ್ಲಿ ತಂದೆ ಮೃತಪಟ್ಟ ಬಳಿಕವೂ ಅದನ್ನೇ ನಂಬಿಕೊಂಡರು. ಎಲ್ಲರಂತೆ ಹಳ್ಳಿ ಬಿಟ್ಟು ಪಟ್ಟಣ ಸೇರಲಿಲ್ಲ. ಜಾಹಿದ್ ಇಂದಿಗೂ ಮಸೀದಿಯಲ್ಲಿಯೇ ವಾಸಿಸುತ್ತಿದ್ದು, ಮುಸ್ಲಿಂ ಸಮುದಾಯದ ಜನರು ಬಿಟ್ಟಿಹೋಗಿರುವ ಆಸ್ತಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜಾಹಿದ್ ತಮ್ಮ ತಂದೆಗೆ “ಈ ಮಸೀದಿಯನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ ” ಎಂದು ವಾಗ್ದಾನ ನೀಡಿದ್ದರು. ಅದನ್ನು ಯಥಾವತ್ ಪಾಲಿಸುತ್ತಿದ್ದಾರೆ.
ತಮ್ಮ ನೆರವಿಗೆ ಯಾರೂ ಇಲ್ಲದೆ, ಸಮುದಾಯದ ಜೊತೆಗಾರರು ಯಾರೂ ಇಲ್ಲದ ಸ್ಥಿತಿಯಲ್ಲಿ ಜಾಹಿದ್ ಜೀವನ ನಡೆಸುತ್ತಾರೆ. ಬೆಳಗ್ಗೆ ಎದ್ದು ಮಸೀದಿಯ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಿ ಅಜಾನ್ ಕೂಗುತ್ತಾರೆ. ಮತ್ತೆ ನಾಲ್ಕು ಹೊತ್ತು ಪುನರಾವರ್ತಿಸುತ್ತಾರೆ. ರಾತ್ರಿ ಗ್ರಾಮದ ಜನರು ನಿದ್ರೆಗೆ ಜಾರಿದಾಗ, ಅಲ್ಲಿನ ಶಾಲೆಯ ನೈಟ್ ವಾಚ್ಮನ್ ಆಗಿ ಕೆಲಸ ಮಾಡುತ್ತಾರೆ.
ಶುಕ್ರವಾರ ಮತ್ತು ಹಬ್ಬಗಳ ಸಮಯದಲ್ಲಿ ಅವರು ಹತ್ತಿರದ ಇನ್ನೊಂದು ಗ್ರಾಮಕ್ಕೆ ತೆರಳಿ ಸಾಮೂಹಿಕ ನಮಾಜ್‌ನಲ್ಲಿ ಭಾಗವಹಿಸುತ್ತಾರೆ. ವಿಶೇಷ ಏನೆಂದರೆ ಜಾಹಿದ್, ಧಾರ್ಮಿಕವಾಗಿ ಏಕಾಂಗಿಯಾಗಿದ್ದರೂ ಬೇರೆ ಧರ್ಮದ ಜನರೊಂದಿಗೆ ಸಾಮರಸ್ಯ ಕಾಪಾಡಿಕೊಂಡಿದ್ದಾರೆ.
ನಲವತ್ತು ವರ್ಷಗಳ ಹಿಂದೆ ಸರ್‌ಬಹದಿಯಲ್ಲಿ ಮುಸ್ಲಿಂ ಸಮುದಾಯ ಬಲಿಷ್ಠವಾಗಿತ್ತು. ಈ ಗ್ರಾಮದಲ್ಲಿ ನಜ್ಜೋ ಬಾಬೋ ಎಂಬ ಮುಸ್ಲಿಂ ಜಮೀನ್ದಾರರು ಇದ್ದರು. ಅವರಿಗೆ ಭಿಖಾರಿ ಮೆಹ್ತೋ ಎಂಬ ಹಿಂದೂ ಸ್ನೇಹಿತರೊಬ್ಬರು ಇದ್ದರು. ಅವರ ಸ್ನೇಹವನ್ನು ಗ್ರಾಮವಾಸಿಗಳು ಈಗಲೂ ಹೊಗಳುತ್ತಾರೆ. ಅವರು ಹಳ್ಳಿಯಲ್ಲಿ ಎಂದಿಗೂ ಧಾರ್ಮಿಕ ದ್ವೇಷ ಅಥವಾ ಹಿಂಸಾಚಾರ ನಡೆಯಲು ಬಿಟ್ಟಿರಲಿಲ್ಲ ಎಂದು ಜನರು ಈಗಲೂ ಮಾತನಾಡುತ್ತಾರೆ.
“ಇಲ್ಲಿನ ಗ್ರಾಮಸ್ಥರು ಎಲ್ಲ ಧರ್ಮದ ಹಬ್ಬಗಳನ್ನು ಜತೆಯಾಗಿ ಆಚರಿಸುತ್ತಿದ್ದರು,” ಎಂದು ಜಾಹಿದ್ *ದ ಫೆಡರಲ್* ಜತೆ ಮಾತನಾಡುತ್ತಾ ಹೇಳಿದ್ದಾರೆ. ದುರದೃಷ್ಟವಶಾತ್, 1981ರಲ್ಲಿ ಬಿಹಾರ್ ಶರೀಫ್‌ನಲ್ಲಿ ಕೋಮು ಗಲಭೆ ನಡೆದಿತ್ತು. ದಳ್ಳುರಿಯಲ್ಲಿ 45ಕ್ಕೂ ಹೆಚ್ಚು ಜನರು ಮೃತಟ್ಟಿದ್ದರು ಹಾಗೂ 70 ಕ್ಕೂ ಹೆಚ್ಚು ಗಾಯಗೊಂಡಿದ್ದರು. ಆ ಬಳಿಕ ಗ್ರಾಮದಲ್ಲಿ ಜನರ ಮನಸ್ಸಿನ ನಡುವೆ ಬಿರುಕು ಸೃಷ್ಟಿಯಾಗಿತ್ತು. ಮುಸ್ಲಿಂ ಸಮುದಾಯದ ಹಲವರು ಗ್ರಾಮ ತೊರೆದರೆ, ಇನ್ನೂಕೆಲವರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗಿದ್ದರು.
“ಗಲಭೆಗಳ ನಂತರ, ಜನರು ಶಾಂತಿ ಬಯಸಿ ಗ್ರಾಮದ ಹೊರಗೆ ಹೋಗಲಾರಂಭಿಸಿದರು,” ಎಂದು 60ರ ವರ್ಷದ ಸಂತೋಷ್ ಪಾಸ್ವಾನ್ 'ದ ಫೆಡರಲ್'ಜತೆ ಮಾತನಾಡುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.
“ಇಂದಿಗೂ ಇಲ್ಲಿ ಮುಸ್ಲಿಂ ಸಮುದಾಯದ ಹಳೆಯ ಕುರುಹುಗಳಾದ ಕಬರ್ಸ್ತಾನ, ಇಮಾಮ್ ಬಾರಾ ಮುಂತಾದವುಗಳಿವೆ. ಆದರೆ, ಜನರು ತಮ್ಮ ಮನೆ ಮಾರಿ ಹೊರಟು ಹೋಗಿದ್ದಾರೆ,'' ಎಂದು ಅವರು ವಿಷಾಧಿಸಿದ್ದಾರೆ.
ತಂದೆ ನಿಧನವಾದ ನಂತರ ಜಾಹಿದ್, ಏಕಾಂಗಿಯಾದರು. ಅವರು ಪತ್ನಿಯಿಂದಲೂ ಬೇರ್ಪಟ್ಟರು. ಅವರ ಸಹೋದರರು ನಗರಗಳಿಗೆ ಸ್ಥಳಾಂತರಗೊಂಡರು. ಆದರೆ ಜಾಹಿದ್ ತಮ್ಮ ತಂದೆಗೆ ನೀಡಿದ ವಚನದಂತೆ ಗ್ರಾಮದಲ್ಲಿಯೇ ಉಳಿದರು. “ಈ ಮಸೀದಿಯನ್ನು ಜೀವಂತ ಇರುವವರೆಗೆ ನೋಡಿಕೊಳ್ಳುತ್ತೇನೆ ಎಂದು ತಂದೆಗೆ ನಾನು ಮಾತು ಕೊಟ್ಟಿದ್ದೇನೆ. ಅದನ್ನು ಉಳಿಸುತ್ತೇನೆ,” ಎಂದು ಜಾಹಿದ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇಲ್ಲಿ ಉಳಿದಿರುವ ಏಕೈಕ ಮುಸ್ಲಿಮರಾಗಿದ್ದರೂ, ಜಾಹಿದ್ ಈ ಗ್ರಾಮದ ಶಾಂತಿಯ ಧೂತನಾಗಿ ಕೆಲಸ ಮಾಡುತ್ತಾರೆ. ಯಾರದ್ದೇ ಮನೆಯಲ್ಲಿ ಹಬ್ಬವಿರಲಿ, ಮದುವೆಯಾಗಲಿ. ಜಾಹಿದ್‌ಗೆ ಆಹ್ವಾನ ಉಂಟೇ ಉಂಟು. ಅವರು ಅಸ್ವಸ್ಥಗೊಂಡರೂ ಅವರ ಉಪಚಾರ ಮಾಡುವುದು ಗ್ರಾಮದ ಇತರ ಸಮುದಾಯಗಳ ಜನರು. “ಜಾಹಿದ್‌ಗೆ ಏನೇ ಬೇಕಾದರೂ ನಮ್ಮ ಬಳಿಗೆ ಬರುತ್ತಾರೆ. ಅವರಿಗೆ ಸಹಾಯ ಮಾಡುವುದು ಸಂತೋಷದ ವಿಷಯ ,” ಎಂದು ಸಂತೋಷ್ ಹೇಳುತ್ತಾರೆ.
ಮಸೀದಿಗೆ ಸ್ವಂತ ನೀರಿನ ಮೂಲ ಇಲ್ಲ. ಹೀಗಾಗಿ ಗ್ರಾಮಸ್ಥರೇ ನೀರು ಪೂರೈಕೆ ಮಾಡುತ್ತಾರೆ. ಹ್ಯಾಂಡ್‌ಪಂಪ್ ಹಾಕೋಣವೆಂದು ಗ್ರಾಮದ ಜನರು ಪ್ರಸ್ತಾವನೆ ಮಾಡಿದ್ದರು. ಆದರೆ ಜಾಹಿದ್ ಸುತಾರಾಂ ಬೇಡ ಅನ್ನುತ್ತಾರೆ. ಪಂಪ್ನಲ್ಲಿ ನೀರು ಬಂದರೆ ಎಲ್ಲರೂ ಅದನ್ನೇ ಬಳಸಲು ಶುರು ಮಾಡುತ್ತಾರೆ. ಮಸೀದಿ ಸುತ್ತಲೂ ಗಲೀಜಾಗುವ ಸಾಧ್ಯತೆಗಳಿವೆ ಎಂದು ಅವರು ನೀರಿನ ಯೋಜನೆಯನ್ನೇ ನಿರಾಕರಿಸಿದ್ದಾರೆ.
“ಜಾಹಿದ್ ಇಲ್ಲಿನ ಮುಸ್ಲಿಂ ಸಮುದಾಯದ ಮಂದಿ ಪಟ್ಟಣಕ್ಕೆ ಹೋಗುವಾಗ ಬಿಟ್ಟು ಹೋಗಿರುವ ಆಸ್ತಿಗಳನ್ನು ನೋಡಿಕೊಳ್ಳುತ್ತಾರೆ. ಕೆಲವೊಮ್ಮೆ ಆಸ್ತಿ ಸಂಬಂಧಿತ ಸಮಸ್ಯೆಗಳು ಬರುವುದಿದೆ. ಆದರೆ ನಾವು ಅವರು ನ್ಯಾಯಯುತವಾಗಿ ಪರಿಹರಿಸಿಕೊಳ್ಳುತ್ತೇವೆ,” ಎಂದು ಸಂತೋಷ್ ಹೇಳಿದ್ದಾರೆ.
ಗ್ರಾಮದ 2,200 ಎಕರೆ ಭೂಮಿ ಮುಸ್ಲಿಮರ ಮಾಲಿಕತ್ವದಲ್ಲಿದೆ. ಜಾಹಿದ್ ಈ ಆಸ್ತಿಗಳನ್ನು ನೋಡಿಕೊಳ್ಳುತ್ತಿದ್ದು, ಬೀಬಿ ಸೋಗ್ರಾ ವಕ್ಫ್ ಎಸ್ಟೇಟ್ನಿಂದ ತಿಂಗಳಿಗೆ 3000 ರೂಪಾಯಿ ವೇತನ ಪಡೆಯುತ್ತಾರೆ. ಆದರೆ ಆಸ್ತಿಗಳು ನಿರ್ಲಕ್ಷಿತವಾಗಿರುವುದರಿಂದ ಕೆಲವೊಮ್ಮೆ ಅತಿಕ್ರಮಣಕಾರರ ಸಮಸ್ಯೆ ಎದುರಾಗುತ್ತದೆ. ಗ್ರಾಮ ಪಂಚಾಯಿತಿ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತದೆ.
“ಇಮಾಮ್ ಬಾರಾ, ಕಬರಸ್ತಾನ್ ಜಾಗವನ್ನು ಕೆಲವರು ಅನಗತ್ಯ ಕೆಲಸಕ್ಕೆ ಬಳಸುತ್ತಾರೆ. ಆದರೆ, ಗ್ರಾಮ ಪಂಚಾಯಿತಿ ನನ್ನ ಬೆಂಬಲಕ್ಕೆ ನಿಲ್ಲುತ್ತದೆ,” ಎಂದು ಜಾಹಿದ್ ಖುಷಿಯಿಂದ ಹೇಳುತ್ತಾರೆ.
''ನಮ್ಮೆಲ್ಲರ ಸಂಬಂಧ ಹಳೆಯದು. ನಾನು ಮತ್ತು ಜಾಹಿದ್ ಅವರ ತಂದೆ ಸ್ನೇಹಿತರಾಗಿದ್ದೇವೆ. ಅವರ ತಾತನೂ ಪರಿಚಿತರಾಗಿದ್ದರು. ನಾವು ಒಂದೇ ಕುಟುಂಬದವರಂತೆ ಬಾಳುತ್ತಿದ್ದೆವು,” ಎಂದು 80 ವರ್ಷದ ಅಶೋಕ್ ಮೆಹ್ತೋ ಸ್ಮರಿಸಿಕೊಂಡಿದ್ದಾರೆ.
ಕೆಲವರ ಆಕ್ಷೇಪವೂ ಉಂಟು
ಹಾಗೆಂದು ಇಲ್ಲಿಯೂ ಕೆಲವರು ಜಾಹಿದ್ ಬಗ್ಗೆ ಆಕ್ಷೇಪ ಎತ್ತುವುದು ಉಂಟು. ಧರ್ಮ ವೈವಿಧ್ಯತೆಯನ್ನು ಖಂಡಿಸುತ್ತಾರೆ. ''ನೀನು ಇಲ್ಲಿ ಉಳಿಯುವುದಿದ್ದರೆ ಹಿಂದೂಗಳಂತೆ ಬದುಕಬೇಕು. ಬದಲಾಗಿ ಬಂಗ್ಲಾದೇಶದ ಹಿಂದೂಗಳಂತೆ ನಿನ್ನ ಸ್ಥಿತಿಯಾಗಬಾರದು” ಎಂದೆಲ್ಲ ವ್ಯಂಗ್ಯ ಮಾಡುತ್ತಾರೆ. ಇದು ಸೋಶಿಯಲ್ ಮೀಡಿಯಾಗಳ ಪರಿಣಾಮ ಎಂಬುದು ಜಾಹಿತ್ ಅವರ ಅಭಿಪ್ರಾಯ.
“ನಾನು ಅಜಾನ್ ಕೂಗುವುದನ್ನು ಏನಾದರೂ ಅನಿವಾರ್ಯ ಕಾರಣದಿಂದ ನಿಲ್ಲಿಸಿದರೆ ಗ್ರಾಮಸ್ಥರು ಕರೆದು ವಿಚಾರಿಸುತ್ತಾರೆ. ಏನು ಆಯ್ತು, ಯಾಕೆ ಅಜಾನ್ ಕೇಳಿಸಲಿಲ್ಲ,'' ಎಂದು ಪ್ರಶ್ನಿಸುತ್ತಾರೆ ಎಂದು ಜಾಹಿದ್ ಹೇಳಿಕೊಂಡಿದ್ದಾರೆ.
ಗ್ರಾಮಸ್ಥರಿಗೂ ಅಜಾನ್ ಒಂದು ಆಪ್ಯಾಯಮಾನ ಸಂಗತಿ. “ನಾವು ಬಾಲ್ಯದಿಂದಲೇ ಆಜಾನ್ ಕೇಳುತ್ತಲೇ ಬೆಳೆದಿದ್ದೇವೆ. ಈಗ ಕೇಳಿಸದಿದ್ದರೆ ಏನೋ ಇಲ್ಲದಂತಾಗುತ್ತದೆ,” ಅಶೋಕ್ ಅವರು ಹೇಳುತ್ತಾರೆ.
ಅಶೋಕ್ ಮತ್ತು ಜಾಹಿದ್ ಇಬ್ಬರೂ ಹೇಳುವಂತೆ, “ಈ ಗ್ರಾಮದಲ್ಲಿ ಮುಸ್ಲಿಂ ಸಂಖ್ಯೆ ಕಡಿಮೆಯಾಗಿರುವುದು ಬೇಸರದ ಸಂಗತಿ. ಎಲ್ಲರೂ ಮತ್ತೆ ಒಟ್ಟಾಗಿ ವಾಸಿಸುವಂತಾದರೆ ಸಂತೋಷ''.
ಹಳೆಯ ನೆನೆಪುಗಳು ಮತ್ತು ಸ್ನೇಹಿತರ ನಿರ್ಗಮನದ ದುಃಖ ಇದ್ದರೂ, ಇಂದಿಗೂ ಹಲವರ ಮನದಲ್ಲಿ ಒಂದೇ ಪ್ರಶ್ನೆ ಹಾಗೆಯೇ ಉಳಿದಿದೆ.
ಈ ಗ್ರಾಮದ ಕೊನೆಯ ಮುಸ್ಲಿಂ ಕೂಡ ಇಲ್ಲದಾದಾಗ ಏನಾಗಲಿದೆ?