ಐಟಿ ರಿಟರ್ನ್ಸ್ ಸಲ್ಲಿಸುವುದು ಯಾವಾಗ, ಅದು ಯಾವಾಗ ಐಚ್ಛಿಕ ಅಥವಾ ರಿಟರ್ನ್ಸ್ ಸಲ್ಲಿಸುವುದರಿಂದ ಆಗುವ ಅನುಕೂಲಗಳೇನು ಎಂಬ ಮಾಹಿತಿ ಅನೇಕರಿಗೆ ಇರುವುದಿಲ್ಲ.

ಮಾಲಿನಿ ಗೃಹಿಣಿ. ಅವರ ನಿವ್ವಳ ವಾರ್ಷಿಕ ಆದಾಯವು ನಿಗದಿತ ಮೊತ್ತದ ಮಿತಿಯಲ್ಲಿದೆ.

2023-24 ರ ಹಣಕಾಸು ವರ್ಷದಲ್ಲಿ ಅವರ ಬ್ಯಾಂಕ್, ಅವಧಿ ಠೇವಣಿಗಳ ಮೇಲಿನ ಬಡ್ಡಿ ಪಾವತಿಯಿಂದ ಆದಾಯ ತೆರಿಗೆಯನ್ನು ಕಡಿತ ಗೊಳಿಸಿದೆ. ಕಡಿತಗೊಂಡ ತೆರಿಗೆ ಮೊತ್ತ(ಟಿಡಿಎಸ್)ವನ್ನು ವಾಪಸ್‌ ಪಡೆಯಲು ಅವರು ಐಟಿ ರಿಟರ್ನ್ಸ್‌(ಐಟಿಆರ್) ಸಲ್ಲಿಸಬೇಕಿದೆ. ಅವರ ಪ್ರಶ್ನೆಯೇನೆಂದರೆ, ಈ ವರ್ಷ ಐಟಿ ರಿಟರ್ನ್ (ಐಟಿಆರ್) ಸಲ್ಲಿಸಿದರೆ, ಮುಂದಿನ ವರ್ಷವೂ ಸಲ್ಲಿಸಬೇಕೇ?

ಇಂಥ ಸಂಶಯ ಇರುವವರು ಅನೇಕರಿದ್ದಾರೆ; ಐಟಿ ರಿಟರ್ನ್ಸ್ ಯಾವಾಗ ಸಲ್ಲಿಸಬೇಕು? ಯಾವಾಗ ಅದು ಐಚ್ಛಿಕ ಎನ್ನುವುದು ಗೊತ್ತಿರುವು ದಿಲ್ಲ. ರಿಟರ್ನ್ಸ್ ದಾಖಲಿಸುವುದರಿಂದ ಆಗುವ ಅನುಕೂಲಗಳು ಇಲ್ಲವೇ ಕಡ್ಡಾಯವಾಗಿರುವಾಗ ಐಟಿ ರಿಟರ್ನ್ಸ್ ಸಲ್ಲಿಸದೆ ಇರುವುದರಿಂದ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ಇರುವುದಿಲ್ಲ.

ಐಟಿ ರಿಟರ್ನ್ಸ್ ಸಲ್ಲಿಕೆ ಕಡ್ಡಾಯವೇ?: ನಿಮ್ಮ ಆದಾಯ ವಿನಾಯಿತಿ ಮಿತಿಗಿಂತ ಹೆಚ್ಚಿದ್ದರೆ, ಐಟಿ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯ ಎಂದು ಕಾನೂನು ಹೇಳುತ್ತದೆ. ಆದ್ದರಿಂದ, ನಿಮಗೆ ಅನ್ವಯವಾಗುವ ವಿನಾಯಿತಿ ಮಿತಿಯನ್ನು ತಿಳಿದುಕೊಳ್ಳುವುದು ಮುಖ್ಯ.

* 59 ವರ್ಷದವರೆಗಿನ ವ್ಯಕ್ತಿಗಳಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ. ಇದನ್ನು ಮೀರಿದ ಆದಾಯವಿದ್ದರೆ, ಅವರು ಐಟಿ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ.

* ಹಿರಿಯ ನಾಗರಿಕರು (60-79 ವರ್ಷ ವಯ‌ಸ್ಸು)- ಮಿತಿ 3 ಲಕ್ಷ ರೂ.

* ಅತಿ ಹಿರಿಯ ನಾಗರಿಕರು (80 ವರ್ಷ ಮತ್ತು ಮೇಲ್ಪಟ್ಟವರು)- ಮಿತಿ 5 ಲಕ್ಷ ರೂ.

ವಿನಾಯಿತಿ ಒಟ್ಟು ಆದಾಯಕ್ಕೆ ಅನ್ವಯಿಸುತ್ತದೆ: ಸೆಕ್ಷನ್ 80ಸಿ ಯಿಂದ 80ಯು ಮತ್ತು ಸೆಕ್ಷನ್ 10 ರಲ್ಲಿ ಇತರ ವಿನಾಯಿತಿಗಳಡಿ ಅನು ಮತಿಸಲಾದ ಕಡಿತಗಳನ್ನು ಕಳೆದು, ಒಟ್ಟು ಆದಾಯವನ್ನು ಲೆಕ್ಕಹಾಕಬೇಕು. ಆದ್ದರಿಂದ, ವಿನಾಯಿತಿ ಮಿತಿಗೆ ಒಟ್ಟು ಆದಾಯ ಮುಖ್ಯವೇ ಹೊರತು ನಿವ್ವಳ ಆದಾಯವಲ್ಲ.

ಉದಾಹರಣೆಗೆ, ಒಂದು ವೇಳೆ ನೀವು 60-79 ವಯಸ್ಸಿನವರಾಗಿದ್ದು, ಒಟ್ಟು ಆದಾಯ 3.5 ಲಕ್ಷ ರೂ. ಎಂದುಕೊಳ್ಳಿ. ಅನುಮತಿಸಿದ ಕಡಿತಗಳ ನಂತರ, ತೆರಿಗೆ ಆದಾಯ 3 ಲಕ್ಷ ರೂ.ಗಿಂತ ಕಡಿಮೆ ಇರಬಹುದು. ಆದರೂ, ನೀವು ರಿಟರ್ನ್ಸ್ ಫೈಲ್ ಮಾಡಬೇಕಾದ್ದು ಕಡ್ಡಾಯ.

ಮರುಪಾವತಿ ಪಡೆಯಲು ಅಗತ್ಯ: ನಿಮ್ಮ ಆದಾಯವು ಮಿತಿಗಿಂತ ಕೆಳಗಿದ್ದರೂ, ಬ್ಯಾಂಕ್‌ಗಳು ಅಥವಾ ನೀವು ಕೆಲಸ ಮಾಡುವ ಕಂಪನಿ ವೇತನದಲ್ಲಿ ತೆರಿಗೆ ಕಡಿತಗೊಳಿಸಬಹುದು. ಅಂತಹ ಸಂದರ್ಭಗಳಲ್ಲಿ ಐಟಿ ರಿಟರ್ನ್ಸ್ ಸಲ್ಲಿಸಿದರೆ ಮಾತ್ರ ಕಡಿತಗೊಳಿಸಿದ ಮೊತ್ತವನ್ನು ವಾಪ‌ಸ್‌ ಪಡೆಯಬಹುದು.

ಅನಿವಾಸಿ ಭಾರತೀಯರು: ಭಾರತದ ಹೊರಗೆ ವಾಸಿಸುವ, ಆದರೆ, ದೇಶದಲ್ಲಿ ಆಸ್ತಿ ಅಥವಾ ಉದ್ಯಮ/ವ್ಯವಹಾರ ಹೊಂದಿರುವವರು ಭಾರತದಲ್ಲಿ ಐಟಿಆರ್ ಸಲ್ಲಿಸಬೇಕು. ಒಂದೇ ಹಣಕಾಸು ವರ್ಷದಲ್ಲಿ 2.5 ಲಕ್ಷ ರೂ.ಗಿಂತ ಹೆಚ್ಚು ಗಳಿಸುವ ಅನಿವಾಸಿ ಭಾರತೀಯರು (ಎನ್‌ ಆರ್‌ಐ) ಭಾರತದಲ್ಲಿ ಐಟಿಆರ್‌ ಸಲ್ಲಿಸಬೇಕು.

(ಐಟಿ ಕಾಯಿದೆಯ ಸೆಕ್ಷನ್ 139(1) ಅಡಿಯಲ್ಲಿ ವಿವರಿಸಲಾದ ಇನ್ನೂ ಹಲವು ಸಂದರ್ಭಗಳಿವೆ. ಅವು ಹೆಚ್ಚಿನ ಜನರಿಗೆ ಅನ್ವಯಿಸುವುದಿಲ್ಲ)

ಐಟಿಆರ್ ಸಲ್ಲಿಕೆಯ ಪ್ರಯೋಜನ: ಬ್ಯಾಂಕ್‌ ಮತ್ತಿತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವಾಗ ನಿಮ್ಮಆದಾಯದ ನೈಜತೆ ಯನ್ನು ತೋರಿಸಲು ಐಟಿ ರಿಟರ್ನ್ಸ್‌ ಉಪಯುಕ್ತವಾಗಲಿವೆ. ಇದರಿಂದ ಸಾಲ ಸುಲಭವಾಗಿ ಸಿಗಲಿದೆ. ವಿದೇಶದಲ್ಲಿ ಉದ್ಯೋಗಕ್ಕೆ ವೀಸಾ ಪಡೆಯಲು ಉಪಯುಕ್ತ.

ತೆರಿಗೆ ರೂಪದಲ್ಲಿ ಕಡಿತಗೊಂಡ ಮೊತ್ತದ ಮರುಪಾವತಿಗೆ ಅನುವು ಮಾಡಿಕೊಡುವುದರ ಜೊತೆಗೆ, ಷೇರು ಹೂಡಿಕೆಗಳಂತಹ ಕೆಲವು ವಹಿವಾಟುಗಳಲ್ಲಿನ ನಷ್ಟವನ್ನು ಮುಂದೆ ಸಾಗಿಸಲು ಉಪಯುಕ್ತವಾಗಲಿದೆ. ಮುಂದಿನ ಎಂಟು ವರ್ಷಗಳಲ್ಲಿ ಈ ಮೊತ್ತವನ್ನು ಸ್ವಾಧೀನ ಪಡಿಸಿಕೊಳ್ಳಬಹುದು.

ಐಟಿಆರ್ ಸಲ್ಲಿಕೆಗೆ ತಿಳಿದುಕೊಳ್ಳಬೇಕಾದ ಅಂಶಗಳು: ವಿವಿಧ ಐಟಿಆರ್‌ ನಮೂನೆಗಳಿವೆ; ಅವುಗಳೆಂದರೆ ಐಟಿಆರ್‌ 1 ರಿಂದ ಐಟಿಆರ್‌ 4. ಸಂಬಂಧಿಸಿದ ಫಾರ್ಮ್‌ ನ್ನೇ ಬಳಸಬೇಕು. ರಿಟರ್ನ್ ಸಲ್ಲಿಕೆಗೆ ಮುನ್ನ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು: ಅವೆಂದರೆ, ಫಾರ್ಮ್ 16 ಮತ್ತು 16A ನಂತಹ ಟಿಡಿಎಸ್‌ ಪ್ರಮಾಣಪತ್ರಗಳು, ಬಡ್ಡಿ ಪಾವತಿಸಿದ ಪ್ರಮಾಣಪತ್ರಗಳು, ಫಾರ್ಮ್ 26 ಎಎಸ್ (ವಿವಿಧ ಆದಾಯದ ಮೂಲಗಳಿಂದ ಟಿಡಿಎಸ್‌ ಅಥವಾ ಟಿಸಿಎಸ್‌ ಅನ್ವಯ ಕಡಿತಗೊಳಿಸಿದ ಮೊತ್ತದ ವಿವರ ಒದಗಿಸುವ ಹೇಳಿಕೆ), ಬಂಡವಾಳ ಆದಾಯದ ಹೇಳಿಕೆಗಳು, ವಿದೇಶಿ ಆಸ್ತಿಗಳ ವಿವರ, ಆಧಾರ್ ಮತ್ತು ಪ್ಯಾನ್ ವಿವರ, ಬ್ಯಾಂಕ್ ಖಾತೆ ವಿವರ.

ಐಟಿಆರ್‌ ವಿಳಂಬ ಸಲ್ಲಿಕೆಗೆ ದಂಡ: ನಿಗದಿತ ದಿನಾಂಕದೊಳಗೆ ಐಟಿ ರಿಟರ್ನ್ಸ್ ಸಲ್ಲಿಸಲು ವಿಫಲವಾದರೆ, ದಂಡ ವಿಧಿಸಲಾಗುತ್ತದೆ. ದಂಡ ಹೊರತುಪಡಿಸಿ, ನಿರಂತರವಾಗಿ ಗಡುವು ತಪ್ಪಿಸಿಕೊಂಡರೆ ಐಟಿ ಇಲಾಖೆ ಕಾನೂನು ಕ್ರಮ ತೆಗೆದುಕೊಳ್ಳಬಹುದು.

ಐಟಿಆರ್ ರೂಪಗಳು: ಐಟಿಆರ್-1 (ಸಹಜ್): ವ್ಯಕ್ತಿಗಳಿಗೆ ಅನ್ವಯಿಸುತ್ತದೆ-‌ ಈ ನಮೂನೆಯು ಕೆಳಗಿನ ಯಾವುದೇ ಮೂಲಗಳಿಂದ 50 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ವ್ಯಕ್ತಿಗೆ ಅನ್ವಯಿಸುತ್ತದೆ: ಸಂಬಳ/ಪಿಂಚಣಿ, ಮನೆ, ಇತರ ಆದಾಯ ಮೂಲಗಳು (ಬಡ್ಡಿ, ಕುಟುಂಬ ಪಿಂಚಣಿ, ಲಾಭಾಂಶ ಇತ್ಯಾದಿ), 5,000 ರೂ.ವರೆಗೆ ಕೃಷಿ ಆದಾಯ.

ಐಟಿಆರ್-2: ವ್ಯಕ್ತಿಗಳು ಮತ್ತು ಅವಿಭಜಿತ ಹಿಂದು ಕುಟುಂಬಗಳಿಗೆ ಅನ್ವಯಿಸುತ್ತದೆ- ʻವ್ಯವಹಾರ ಅಥವಾ ವೃತ್ತಿಯ ಲಾಭಗಳುʼ ಶೀರ್ಷಿಕೆಯಡಿ ಆದಾಯ ಹೊಂದಿಲ್ಲದವರು ಮತ್ತು ಐಟಿಆರ್-1 ಅನ್ನು ಸಲ್ಲಿಸಲು ಅರ್ಹರಲ್ಲದವರು‌.

ಐಟಿಆರ್- 3: ವ್ಯಕ್ತಿಗಳು ಮತ್ತು ಅವಿಭಜಿತ ಹಿಂದು ಕುಟುಂಬಗಳಿಗೆ ಅನ್ವಯಿಸುತ್ತದೆ- ʻವ್ಯವಹಾರ ಅಥವಾ ವೃತ್ತಿಯ ಲಾಭಗಳುʼ ಅಡಿಯಲ್ಲಿ ಆದಾಯ ಹೊಂದಿರುವವರು ಮತ್ತು ಐಟಿಆರ್-1‌, ಐಟಿಆರ್-2 ಅಥವಾ ಐಟಿಆರ್-4 ಅನ್ನು ಸಲ್ಲಿಸಲು ಅರ್ಹರಲ್ಲದವರು‌.

ಐಟಿಆರ್ 4 (ಸುಗಮ್): ವ್ಯಕ್ತಿಗಳು, ಅವಿಭಜಿತ ಹಿಂದು ಕುಟುಂಬಗಳು ಮತ್ತು ಸಂಸ್ಥೆಗಳಿಗೆ ಅನ್ವಯಿಸುತ್ತದೆ (‌ಎಲ್‌ಎಲ್‌ಪಿ ಹೊರತುಪಡಿಸಿ). ವ್ಯಕ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬಕ್ಕೆ ಅನ್ವಯಿಸುತ್ತದೆ. ವ್ಯಕ್ತಿ ಅಥವಾ ಸಂಸ್ಥೆ (ಎಲ್‌ಎಲ್‌ಪಿ ಹೊರತುಪಡಿಸಿ), ವ್ಯಾಪಾರ ಅಥವಾ ವೃತ್ತಿಯಿಂದ 50 ಲಕ್ಷ ರೂ.ವರೆಗಿನ ಒಟ್ಟು ಆದಾಯ ಹೊಂದಿರುವ ಹೊಂದಿರುವವರು. ಆದಾಯ ಮೂಲಗಳೆಂದರೆ, ಸಂಬಳ / ಪಿಂಚಣಿ, ಮನೆ , ಇತರ ಮೂಲಗಳು (ಬಡ್ಡಿ, ಕುಟುಂಬ ಪಿಂಚಣಿ, ಲಾಭಾಂಶ ಇತ್ಯಾದಿ), 5,000 ರೂ.ವರೆಗೆ ಕೃಷಿ ಆದಾಯ.

Next Story