ಕಚ್ಚತೀವು ವಿಚಾರದಲ್ಲಿ ಇಂದಿರಾಗಾಂಧಿ ಸರ್ಕಾರದ ನಿಲುವು  ಏಕೆ  ಸರಿಯಾಗಿತ್ತು?
x

ಕಚ್ಚತೀವು ವಿಚಾರದಲ್ಲಿ ಇಂದಿರಾಗಾಂಧಿ ಸರ್ಕಾರದ ನಿಲುವು ಏಕೆ ಸರಿಯಾಗಿತ್ತು?

1974-76ರಲ್ಲಿ ಕಾಂಗ್ರೆಸ್ ಸರ್ಕಾರವು ಶ್ರೀಲಂಕಾಕ್ಕೆ ಕಚ್ಚತೀವು ಮೇಲಿನ ಹಕ್ಕನ್ನು ದಾನದ ರೀತಿ ಬಿಟ್ಟುಕೊಟ್ಟಿತು ಎನ್ನುವುದು ತಪ್ಪು ನಿರೂಪಣೆಯಾಗಲಿದೆ.


ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರದ ವೇಳೆ ಕಚ್ಚತೀವು ದ್ವೀಪ ಕುರಿತು ಹೇಳಿದ ಬಳಿಕ, ರಾಜಕೀಯ ಪಕ್ಷಗಳಿಂದ ಹಿಡಿದು ಪತ್ರಕರ್ತರು, ಮತದಾರರು ಮತ್ತು ವಿದೇಶಾಂಗ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲರೂ ಹೆಚ್ಚಿನ ಮಾಹಿತಿಗಾಗಿ ಪರದಾಡಿದರು.ರಾತ್ರೋರಾತ್ರಿ ಕಚ್ಚತೀವು ಎಲ್ಲರ ಮನಸ್ಸಿನಲ್ಲಿ,ಮಾತುಗಳಲ್ಲಿ ಸುಳಿದಾಡತೊಡಗಿತು.

ಪ್ರಧಾನಿಯಿಂದ ಸೆಲ್ಫ್ ಗೋಲ್: ಕಚ್ಚತೀವು ನಿಸ್ಸಂದೇಹವಾಗಿ ತಮಿಳುನಾಡಿನಲ್ಲಿ ಸೂಕ್ಷ್ಮ ವಿಷಯ; ಮೋದಿ ಅವರು ಕೊನೆಗೂ ಕಾಂಗ್ರೆಸ್ ಪಕ್ಷ ಮತ್ತು ಆಡಳಿತಾರೂಢ ಡಿಎಂಕೆಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದರೇ? ಅಥವಾ, ಇದು ಕೂಡ ಒಂದು ಬೇಕಾಬಿಟ್ಟಿ ಹೇಳಿಕೆಯೇ? ಎರಡೂ ಅಲ್ಲ. ಆದರೆ, ಬಿಜೆಪಿಯ ಚಿಂತಕರ ಚಾವಡಿ ಏನಾಗುತ್ತದೆ ಎಂದುಕೊಂಡಿರಲಿಲ್ಲವೋ ಅದು ಆಯಿತು; ಪ್ರಧಾನಿ ಪ್ರಾಯಶಃ ಸೆಲ್ಫ್ ಗೋಲ್ ಹೊಡೆದರು.

ಕಚ್ಚತೀವು ಬಗ್ಗೆ ಲಭ್ಯವಿರುವ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದರೆ, ಆಗಿನ ಇಂದಿರಾಗಾಂಧಿಯವರು ತೆಗೆದುಕೊಂಡ ನಿರ್ಧಾರವು ಬಹುತೇಕ ದೇಶದ ಪರವಾಗಿ ಇದ್ದಿತ್ತು ಎನ್ನಬಹುದು. ʻಬಹುತೇಕʼ ಏಕೆಂದರೆ, ಹೆಚ್ಚಿನ ನಿರ್ಧಾರಗಳಲ್ಲಿ ನಿಶ್ಚಿತವಾಗಿ ಎನ್ನುವುದು ಇರುವುದಿಲ್ಲ. ಅದನ್ನು ನಾವು ನಂತರ ನೋಡೋಣ.

ಕೊಲಂಬೊಗೆ ಬಿಟ್ಟುಕೊಟ್ಟೆವೇ?: ಭಾರತ 1974 ರಲ್ಲಿ ಶ್ರೀಲಂಕಾಕ್ಕೆ ಕಚ್ಚತೀವು ದ್ವೀಪವನ್ನು ಬಿಟ್ಟುಕೊಟ್ಟಿತು ಎಂಬ ಅನಿಸಿಕೆ ಜನರಲ್ಲಿದೆ. ವಾಸ್ತವವೆಂದರೆ, ಬಿಟ್ಟುಕೊಡಲು ಈ ದ್ವೀಪ ಭಾರತದ್ದಾಗಿರಲಿಲ್ಲ.ಪಾಕ್‌ ಕೊಲ್ಲಿಯಲ್ಲಿ ಭಾರತ ಮತ್ತು ಲಂಕಾ ನಡುವೆ ಇರುವ ಪುಟ್ಟ ದ್ವೀಪ ಕಚ್ಚತೀವು, ಐತಿಹಾಸಿಕವಾಗಿ ವಿವಾದಿತ ಪ್ರದೇಶವಾಗಿತ್ತು. ಮತ್ತು, ಈ ವಿವಾದವು 1920 ರ ದಶಕದಲ್ಲಿ ಎರಡೂ ರಾಷ್ಟ್ರಗಳನ್ನು ಬ್ರಿಟಿಷರು ಆಳುತ್ತಿದ್ದಾಗಿನಿಂದಲೂ ಇತ್ತು. ಈ ವಿವಾದವನ್ನು ಪರಿಹರಿಸಲು ಸಾಧ್ಯವಾಗದೆ ಇದ್ದುದರಿಂದ, ವಸಾಹತುಶಾಹಿ ಆಡಳಿತದಲ್ಲಿದ್ದ ಎರಡೂ ರಾಷ್ಟ್ರಗಳ ಮೀನುಗಾರರಿಗೆ ದ್ವೀಪದ ಸುತ್ತಲೂ ಮೀನುಗಾರಿಕೆಗೆ ಅವಕಾಶ ನೀಡಲಾಯಿತು. ಎರಡೂ ದೇಶಗಳು ಬ್ರಿಟಿಷ್ ವಸಾಹತುಗಳಾಗಿದ್ದರಿಂದ, ವಿವಾದ ಬಗೆಹರಿಸುವುದು ಮುಖ್ಯವೆಂದು ತೋರಲಿಲ್ಲ. ದ್ವೀಪದಲ್ಲಿ ಸಂತ ಅಂತೋಣಿ ಅವರ ರೋಮನ್ ಕ್ರಿಶ್ಚಿಯನ್ನರ ಚರ್ಚ್‌ ಹೊರತು ಬೇರೇನೂ ಇರಲಿಲ್ಲ.

ಸ್ವಾತಂತ್ರ್ಯದ ನಂತರ (ಭಾರತ 1947 ರಲ್ಲಿಮತ್ತು ಶ್ರೀಲಂಕಾ, ಹಿಂದಿನ ಸಿಲೋನ್ , 1948 ರಲ್ಲಿ ಸ್ವಾತಂತ್ರ್ಯ ಗಳಿಸಿದವು ) ವಿವಾದ ಮರುಕಳಿಸಿತು. ತೀವ್ರ ಮಾತುಕತೆಗಳ ನಂತರ 1974 ರಲ್ಲಿ ಎರಡು ದೇಶಗಳ ನಡುವೆ ಅಂತಾರಾಷ್ಟ್ರೀಯ ಜಲ ಗಡಿಯನ್ನು ಎಳೆಯಲಾಯಿತು. ಪಾಕ್‌ ಜಲಸಂಧಿಯಲ್ಲಿ ನೆಲೆಗೊಂಡಿರುವ ಕಚ್ಚತೀವು ಸುತ್ತಮುತ್ತ ದೇಶದ ಮೀನುಗಾರರಿಗೆ ಮೀನು ಹಿಡಿಯಲು ಅನುಮತಿ ನೀಡಲಾಗುವುದು ಎಂಬ ತಿಳಿವಳಿಕೆಯಿಂದ, ದ್ವೀಪದ ಮೇಲಿನ ತನ್ನ ಹಕ್ಕನ್ನು ಭಾರತ ಕೈಬಿಟ್ಟಿತು. ಮಾತುಕತೆಗಳು ಮುಂದುವರಿದವು. ಎರಡು ವರ್ಷಗಳ ನಂತರ, 1976 ರಲ್ಲಿ ಎರಡು ರಾಷ್ಟ್ರಗಳ ವಿಶೇಷ ಆರ್ಥಿಕ ವಲಯವನ್ನು ರಚಿಸಲಾಯಿತು. ಆನಂತರ ಭಾರತೀಯ ಮೀನುಗಾರರಿಗೆ ಕಚ್ಚತೀವು ದ್ವೀಪದ ಸುತ್ತಲಿನ ಆರ್ಥಿಕ ವಲಯಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಯಿತು. ಏಕೆಂದರೆ, ಅದು ಶ್ರೀಲಂಕಾಕ್ಕೆ ಸೇರಿತ್ತು. ಆದರೆ, ಭಾರತ ಸರ್ಕಾರವು ಕೇಪ್‌ ಕೊಮಾರಿ‌ನ್‌(ಈಗ ಕನ್ಯಾಕುಮಾರಿ ಎಂದು ಕರೆಯುತ್ತಾರೆ)ಗೆ ಹತ್ತಿರವಿರುವ ಮನ್ನಾರ್ ಕೊಲ್ಲಿಯಲ್ಲಿರುವ ವಾಜ್‌ ಬ್ಯಾಂಕ್‌ಗಾಗಿ ಚೌಕಾಶಿ ಮಾಡಿತು ಎನ್ನುವುದು ಬಹಳ ಕಡಿಮೆ ಜನರಿಗೆ ತಿಳಿದಿರುವ ಸತ್ಯ.

ವಾಜ್‌ ಬ್ಯಾಂಕ್: ಇತ್ತೀಚಿನ ವರದಿಗಳಲ್ಲಿ ಉಲ್ಲೇಖಗೊಂಡಿರುವ ʻವಾಜ್‌ ಬ್ಯಾಂಕ್ʼ ಎಂಬ ಪದ ಅನೇಕರನ್ನು ಅಚ್ಚರಿಗೊಳಿಸಿದೆ. ʻದಿ ಫೆಡರಲ್‌ʼನ ಇತ್ತೀಚಿನ ವಿಡಿಯೋ ಸಂದರ್ಶನದಲ್ಲಿ ಶ್ರೀಲಂಕಾದ ಮಾಜಿ ಕಾನ್ಸಲ್ ಜನರಲ್ ಎ.ನಟರಾಜನ್ ಅವರು ʻಈ ಬ್ಯಾಂಕ್‌ ಹೆಸರನ್ನು ಈಗಷ್ಟೇ ಕೇಳಿದೆʼ ಎಂದು ದಿಗ್ಭ್ರ ಮೆಗೊಂಡಂತೆ ಹೇಳಿದರು. ʻವಾಜ್‌ ಬ್ಯಾಂಕ್ʼ ಕುರಿತ ವರದಿಗಳು ಅದೊಂದು ಸ್ಥಳದ ಹೆಸರು ಎಂಬಂತೆ ಬಿಂಬಿಸುತ್ತಿವೆ. ಆದರೆ, 'ವಾಜ್‌ ಬ್ಯಾಂಕ್' ಎಂಬುದು ಒಂದು ಸಮುದ್ರ ಪರಿಸರ ವ್ಯವಸ್ಥೆ; ಅಂದರೆ, ಒಂದು ನಿರ್ದಿಷ್ಟ ಜೈವಿಕ ವೈವಿಧ್ಯ ಮತ್ತು ಗುಣಲಕ್ಷಣಗಳನ್ನು ಹೊಂದಿರುವ ಪ್ರದೇಶ. ಕನ್ಯಾಕುಮಾರಿಗೆ ಹತ್ತಿರವಿರುವ ವಾಜ್‌ ಬ್ಯಾಂಕ್‌ ಸೇರಿದಂತೆ, ಜಗತ್ತಿನಲ್ಲಿ ಕನಿಷ್ಠ 20 'ವಾಜ್‌ ಬ್ಯಾಂಕ್‌ಗಳು' ಇವೆ.

1974-76 ರಲ್ಲಿ ಭಾರತ ಸರ್ಕಾರವು ಶ್ರೀಲಂಕಾದೊಡನೆ ಮಾತುಕತೆ ನಡೆಸಿತು ಮತ್ತು 'ವಾಜ್‌ ಬ್ಯಾಂಕ್' ನ್ನು ತನ್ನ ವಿಶೇಷ ಆರ್ಥಿಕ ವಲಯಕ್ಕೆ ಸೇರಿಸುವಲ್ಲಿ ಯಶಸ್ವಿಯಾಯಿತು. ಕಚ್ಚತೀವು ತಮ್ಮದೆಂದು ಶ್ರೀಲಂಕನ್ನರು ಸಂತೋಷಪಟ್ಟರು ಮತ್ತು ಭಾರತ ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

'ವಾಜ್‌ ಬ್ಯಾಂಕ್' ಅತ್ಯಂತ ಸಮೃದ್ಧ ಜೈವಿಕ ವೈವಿಧ್ಯವನ್ನು ಮತ್ತು ಮತ್ಸ್ಯ ಸಂಪನ್ಮೂಲವನ್ನು ಹೊಂದಿದೆ ಎಂದು ವರದಿಗಳು ಸೂಚಿಸುತ್ತವೆ. ಅದಕ್ಕಿಂತ ಮುಖ್ಯವಾಗಿ, ಆಗ ಹೆಚ್ಚಿನವರಿಗೆ ಗೊತ್ತಿಲ್ಲದ ಅಂಶವೆಂದರೆ, ವಾಜ್‌ ಬ್ಯಾಂಕ್‌ ಅಡಿಯಲ್ಲಿ ಗಣನೀಯ ಪ್ರಮಾಣದ ತೈಲವಿದೆ ಎಂಬ ಮಾಹಿತಿ ಭಾರತ ಸರ್ಕಾರಕ್ಕೆ ಇದ್ದಿತ್ತು ಎಂಬುದು. ತೈಲದ ಲಭ್ಯತೆಯು ಮಾತುಕತೆಯನ್ನು ಸಂಕೀರ್ಣಗೊಳಿಸುತ್ತದೆ ಎಂದು ಇಂದಿರಾ ಗಾಂಧಿ ಸರ್ಕಾರ, ತ್ವರಿತವಾಗಿ ಮುನ್ನಡೆಯಿತು. ಇದರಿಂದ ಕಾಂಗ್ರೆಸ್‌ ಸರ್ಕಾರ ತನ್ನ ಗುರಿಯನ್ನು ಸಾಧಿಸಿತು.


ತೈಲ ಸಂಪನ್ಮೂಲ: ಕಳೆದ 50 ವರ್ಷಗಳಿಂದ ಕನ್ಯಾಕುಮಾರಿ ಪ್ರದೇಶದಲ್ಲಿರುವ ಭಾರತೀಯ ಮೀನುಗಾರರು, ಈ ಪ್ರದೇಶದಲ್ಲಿ ಅಪಾರ ಪ್ರಮಾಣದ ಮೀನುಗಳನ್ನು ಹಿಡಿದು, ಸೇವಿಸಿದ್ದಾರೆ. ಕೆಲವು ತಿಂಗಳ ಹಿಂದೆ, ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮತ್ತು ಸ್ವಾಭಾವಿಕ ಅನಿಲ ಮಂತ್ರಾಲಯವು ಈ ಪ್ರದೇಶದಲ್ಲಿ ತೈಲದ ಅನ್ವೇಷಣೆ ಮತ್ತು ಅಭಿವೃದ್ಧಿಪಡಿಸಲು ಬಿಡ್‌ಗಳನ್ನು ಆಹ್ವಾನಿಸಿತು. ಒಂದು ವೇಳೆ ಈ ಪ್ರದೇಶದಲ್ಲಿ ಭಾರತ ತೈಲವನ್ನು ಪತ್ತೆಹಚ್ಚಿದರೆ, ಅದು ಈ ಪ್ರದೇಶವನ್ನು ಮೂಲಭೂತವಾಗಿ ಬದಲಿಸುತ್ತದೆ ಮತ್ತು ಕೆಲವರ ವಾದದ ಪ್ರಕಾರ, ಇದರಿಂದ ದೇಶಕ್ಕೆ ಲಾಭವಾಗುತ್ತದೆ. ತೈಲ ಅನ್ವೇಷಣೆ ಚಟುವಟಿಕೆಗಳು ಮೀನುಗಾರರನ್ನು ಕೆರಳಿಸಿದವು. ಕನ್ಯಾಕುಮಾರಿ ಪ್ರದೇಶದಲ್ಲಿ ತೈಲ ಕೊರೆಯುವಿಕೆಯಿಂದ ಜೀವವೈವಿಧ್ಯಕ್ಕೆ ಹಾನಿಯಾಗುತ್ತದೆ ಮತ್ತು ತಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದರು. ಇದೊಂದು ಬಗೆಹರಿಸಬೇಕಾದ ಸಮಸ್ಯೆಯಾಗಿದೆ.

ಮೀನುಗಾರರ ಬಂಧನ: ಕಚ್ಚತೀವುಗೆ ಸಂಬಂಧಿಸಿದಂತೆ, ದಾರಿ ತಪ್ಪಿ ಶ್ರೀಲಂಕಾದ ಗಡಿಯನ್ನು ಪ್ರವೇಶಿಸುವ ತಮಿಳುನಾಡು ಮೀನುಗಾರರು ಆಗಾಗ ಬಂಧನಕ್ಕೊಳಗಾಗುತ್ತಾರೆ ಮತ್ತು ಕೆಲವರು ಶ್ರೀಲಂಕಾದ ಭದ್ರತಾ ಪಡೆಗಳಿಂದ ಕೊಲ್ಲಲ್ಪಡುವುದೂ ಇದೆ. ಆದರೆ, ಹೆಚ್ಚಿನವರನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ, ಇದು ಸಮಸ್ಯಾತ್ಮಕ ವಿಷಯ. ಕಚ್ಚತೀವು ವಿವಾದವನ್ನು ಮುಂದುವರಿಸುವುದರಿಂದ ಎರಡೂ ದೇಶಗಳಿಗೆ ಪ್ರಯೋಜನ ಆಗುತ್ತಿರಲಿಲ್ಲ. ಭಾರತ ಮತ್ತು ಶ್ರೀಲಂಕಾ ಪರಸ್ಪರ ಸೌಹಾರ್ದ ಸಂಬಂಧ ಹೊಂದಿವೆ. ಇವುಗಳ ನಡುವಿನ ಅಪಶ್ರುತಿಯಿಂದ ಈ ಪ್ರದೇಶಕ್ಕೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದ್ದ ಚೀನಾಕ್ಕೆ ಅನುಕೂಲಕರವಾಗಲಿದೆ.

ಇಂದಿರಾ ಗಾಂಧಿ ಅವರಿಗೆ ಅಪಕೀರ್ತಿ: ಕಚ್ಚತೀವು ಒಪ್ಪಂದದಿಂದ ಸಮಸ್ಯೆಗೆ ಸಿಲುಕಿರುವ ಭಾರತೀಯ ಮೀನುಗಾರರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಕುರಿತು ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳು ಆಗಿವೆ. ಈ ಹಿಂದೆ ತಮಿಳುನಾಡನ್ನು ಆಳಿದ ಸರ್ಕಾರಗಳು ಒಪ್ಪಂದವನ್ನು ರದ್ದುಗೊಳಿಸಲು ಪ್ರಯತ್ನಿಸಿದವು: ಜಯಲಲಿತಾ ಅವರು ಈ ಸಂಬಂಧ ನ್ಯಾಯಾಲಯಕ್ಕೂ ಹೋದರು. ಆದರೆ, ಒಪ್ಪಂದಕ್ಕೆ ಎರಡು ಸಾರ್ವಭೌಮ ಸರ್ಕಾರಗಳು ಸಹಿ ಹಾಕಿದ್ದರಿಂದ ಮತ್ತು ಕಚ್ಚತೀವು ಭಾರತಕ್ಕೆ ಮಾತ್ರ ಸೇರಿದ್ದಲ್ಲವಾದ್ದ ರಿಂದ, ಎಲ್ಲ ಪ್ರಾಯೋಗಿಕ ಉದ್ದೇಶಗಳಿಂದಾಗಿ ಇದು ನ್ಯಾಯಾಂಗದ ಪರಿಶೀಲನೆಗೆ ಸೂಕ್ತವಾದ ಪ್ರಕರಣವಲ್ಲ.1974-76ರಲ್ಲಿ ಕಾಂಗ್ರೆಸ್ ಸರ್ಕಾರವು ಶ್ರೀಲಂಕಾಕ್ಕೆ ಕಚ್ಚತೀವು ಮೇಲಿನ ಹಕ್ಕನ್ನು ದಾನದಂತೆ ಬಿಟ್ಟುಕೊಟ್ಟಿತು ಎಂದು ದೂರುವುದು ಇಂದಿರಾ ಗಾಂಧಿ ಅವರಿಗೆ ಶ್ರೇಯವನ್ನು ನಿರಾಕರಿಸುವ ತಪ್ಪು ನಿರೂಪಣೆ ಆಗಲಿದೆ. ಅವರು ದೇಶದ ಸುರಕ್ಷತೆಗೆ ಬೇರೆ ಯಾರೂ ನೀಡದಷ್ಟು ಕೊಡುಗೆ ನೀಡಿದ್ದಾರೆ.

ಬಾಂಗ್ಲಾದೇಶ, ಸಿಕ್ಕಿಂ ಉದಾಹರಣೆ: ಎರಡು ಉದಾಹರಣೆ ನೀಡುವುದಾದರೆ, ಪೂರ್ವ ಪಾಕಿಸ್ತಾನದಲ್ಲಿನ ಅಂತರ್ಯುದ್ಧವನ್ನು ಬಳಸಿಕೊಂಡ ಇಂದಿರಾ ಗಾಂಧಿ, ಪ್ರತಿಸ್ಪರ್ಧಿಯನ್ನು ಹಣಿಯಲು ದೇಶವನ್ನು ಎರಡಾಗಿ ವಿಭಜಿಸಿದರು. ಹೊಸ ರಾಷ್ಟ್ರ ಬಾಂಗ್ಲಾದೇಶವನ್ನು ರಚಿಸಲು ಸಹಾಯ ಮಾಡುವ ಮೂಲಕ ದೇಶದ ಅಸ್ತಿತ್ವಕ್ಕೆ ಇದ್ದ ಬೆದರಿಕೆಯನ್ನು ತಟಸ್ಥಗೊಳಿಸಿದರು. ಆನಂತರ, 1975 ರಲ್ಲಿ ಇಂದಿರಾ ಗಾಂಧಿ ಸರ್ಕಾರವು ಶಾಂತಿಯುತ, ಆದರೆ ವಿವಾದಾಸ್ಪದವಾದ ಜನಾಭಿಪ್ರಾಯ ಸಂಗ್ರಹದ ಮೂಲಕ ಸ್ವತಂತ್ರ ರಾಜಪ್ರಭುತ್ವದ ಆಡಳಿತವಿದ್ದ ಸಿಕ್ಕಿಂ ಅನ್ನು ಭಾರತಕ್ಕೆ ಸೇರಿಸಿಕೊಂಡಿತು. ಸಿಕ್ಕಿಂ ಅನ್ನು ಭಾರತ ಸೇರ್ಪಡೆಗೊಳಿಸಿಕೊಳ್ಳದೆ ಇದ್ದಿದ್ದರೆ, ಇಂದಿನ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಚೀನಾ ತನ್ನ ಶಕ್ತಿಯನ್ನು ಬಳಸಿಕೊಂಡು ನೆಲೆಯನ್ನು ರೂಪಿಸಲು ಪ್ರಯತ್ನಿಸುತ್ತಿತ್ತು.ಇದು ಭಾರಿ ಭದ್ರತಾ ಸಮಸ್ಯೆ ಆಗುತ್ತಿತ್ತು.

ಭಾರತಕ್ಕೆ ತಲೆನೋವು- ಚೀನಾ ಅಂಶ: 'ವಾಜ್‌ ಬ್ಯಾಂಕ್' ವಿಷಯದಲ್ಲೂ ಇದೇ ಆಗಿದೆ. ಭಾರತ ವಾಜ್‌ ಬ್ಯಾಂಕನ್ನು 1976 ರಲ್ಲಿ ತನ್ನ ವಿಶೇಷ ಆರ್ಥಿಕ ವಲಯಕ್ಕೆ ಸೇರಿಸಿಕೊಳ್ಳದೆ ಇದ್ದಲ್ಲಿ, ಶ್ರೀಲಂಕಾದೊಂದಿಗಿನ ತನ್ನ ಸಂಬಂಧವನ್ನು ಬಳಸಿಕೊಂಡು ಚೀನಾ ತೈಲ ಕೊರೆಯು ವಿಕೆಯನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿತ್ತು. ವಾಸ್ತವವೆಂದರೆ, 2022 ರಲ್ಲಿ ಚೀನಾದ ಕಂಪನಿಯೊಂದು ಪಾಕ್ ಜಲಸಂಧಿಯ ಮೂರು ದ್ವೀಪಗಳಲ್ಲಿ.ಗಾಳಿ ಫಾರ್ಮ್‌ಗಳನ್ನು ಸ್ಥಾಪಿಸಲು ಮುಂದಾಗಿತ್ತು. ತನ್ನ ಆರ್ಥಿಕ ವಲಯದ ಹತ್ತಿರ ಬಂದಿದ್ದರಿಂದ, ಭಾರತ ಆಕ್ಷೇಪ ವ್ಯಕ್ತ ಪಡಿಸಿತು. ಆನಂತರ ಶ್ರೀಲಂಕಾ, ಚೀನಾದ ಕಂಪನಿಗೆ ವಾಪಸಾಗಲು ಹೇಳಿತು ಮತ್ತು ಗುತ್ತಿಗೆಯನ್ನು ಭಾರತೀಯ ಕಂಪನಿಗೆ ನೀಡಿತು.

ಭಾರತ, ಶ್ರೀಲಂಕಾದೊಡನೆ ಒಪ್ಪಂದಕ್ಕೆ ಸಹಿ ಹಾಕಿದ ಐದು ದಶಕಗಳ ನಂತರ, ಒಪ್ಪಂದದಲ್ಲಿ ದೋಷಗಳನ್ನು ಕಂಡುಹಿಡಿಯುವುದು ಕಳಪೆ ಸಂಶೋಧನೆ ಮತ್ತು ತಿಳಿವಳಿಕೆಯ ಸಂಕೇತ. ಜೊತೆಗೆ, ಮತದಾರರನ್ನು ಓಲೈಸಬೇಕೆಂಬ ಏಕೈಕ ಉದ್ದೇಶದಿಂದ ಸಮಸ್ಯೆಯನ್ನು ತಪ್ಪಾಗಿ ಬಿಂಬಿಸಿ, ಕಾಂಗ್ರೆಸ್ ಸರ್ಕಾರ ಉತ್ತಮ ಉದ್ದೇಶದಿಂದ ಮಾಡಿಕೊಂಡ ಒಪ್ಪಂದವನ್ನು ದೂಷಿಸುವುದು ಸಮರ್ಪಕವೆನ್ನಿಸುವುದಿಲ್ಲ.

Read More
Next Story