ಮಹಾರಾಷ್ಟ್ರದಲ್ಲಿ ಚುನಾವಣೆಗೆ ವಿಳಂಬವೇಕೆ?
x

ಮಹಾರಾಷ್ಟ್ರದಲ್ಲಿ ಚುನಾವಣೆಗೆ ವಿಳಂಬವೇಕೆ?

ಮಹಾಯುತಿ ಒಕ್ಕೂಟವು ಲೋಕಸಭೆ ಚುನಾವಣೆಯಲ್ಲಿ ಸೋಲಿನ ನಂತರ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಜನಕಲ್ಯಾಣ ಯೋಜನೆಗಳನ್ನು ನೆಚ್ಚಿಕೊಂಡಿದೆ. ರಾಜ್ಯದಲ್ಲಿ ನವೆಂಬರ್ 5 ಮತ್ತು 15 ರ ನಡುವೆ ಚುನಾವಣೆ ನಡೆಯಬಹುದು ಎಂಬ ವದಂತಿ ಹರಡಿದೆ.


ಭಾರತೀಯ ಚುನಾವಣೆ ಆಯೋಗ ಜಮ್ಮು-ಕಾಶ್ಮೀರ ಮತ್ತು ಹರಿಯಾಣಕ್ಕೆ ಚುನಾವಣೆ ವೇಳಾಪಟ್ಟಿಯನ್ನು ಶುಕ್ರವಾರ (ಆಗಸ್ಟ್ 16) ಪ್ರಕಟಿಸಿದೆ. ಆದರೆ, ನವೆಂಬರ್ 26 ಕ್ಕೆ ಅವಧಿ ಮುಗಿಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕುರಿತು ಉಸಿರೆತ್ತಿಲ್ಲ.

ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿಧಾನಸಭೆಗಳ ಅವಧಿ ಕ್ರಮವಾಗಿ ನವೆಂಬರ್ 3 ಮತ್ತು 26 ರಂದು ಕೊನೆಗೊಳ್ಳುತ್ತದೆ. 2019 ರಲ್ಲಿ ನಡೆದಂತೆ ಎರಡೂ ರಾಜ್ಯಗಳು ಏಕಕಾಲದಲ್ಲಿ ಚುನಾವಣೆಗೆ ಹೋಗುತ್ತವೆ ಎಂದು ನಂಬಲಾಗಿದೆ.

ಸಿಇಸಿ ಸಮರ್ಥನೆ: ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ಭದ್ರತಾ ಪಡೆಗಳ ನಿಯೋಜನೆಯಿಂದ, ಲಭ್ಯತೆಯ ಕಾರಣದಿಂದ ಮಹಾರಾಷ್ಟ್ರದ ಚುನಾವಣೆಯನ್ನು ಘೋಷಿಸಿಲ್ಲ ಎಂದು ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ʻಜಮ್ಮು-ಕಾಶ್ಮೀರ ಚುನಾವಣೆಯನ್ನು ಸೆಪ್ಟೆಂಬರ್ 30 ರೊಳಗೆ ಮುಗಿಸಬೇಕೆಂಬ ಸುಪ್ರೀಂ ಕೋರ್ಟ್‌ನ ಗಡುವಿನಿಂದಾಗಿ ಆಯೋಗವು ಮೊದಲು ಅಲ್ಲಿ ಚುನಾವಣೆ ನಡೆಸುತ್ತದೆ. ಅಲ್ಲಿ ಚುನಾವಣೆ ಮತ್ತು ಅಮರನಾಥ ಯಾತ್ರೆಗೆ ಭಾರಿ ಪಡೆಗಳ ನಿಯೋಜನೆ ಅಗತ್ಯವಿದೆ,ʼ ಎಂದು ಸಿಇಸಿ ಹೇಳಿದೆ. ಈ ವರ್ಷಾಂತ್ಯ ಜಾರ್ಖಂಡ್ ಜೊತೆಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಸುಳಿವು ನೀಡಿದೆ. ಮಹಾರಾಷ್ಟ್ರದಲ್ಲಿ ಚುನಾವಣೆ ನವೆಂಬರ್ 5 ಮತ್ತು 15 ರ ನಡುವೆ ನಡೆಯಬಹುದು ಎಂಬ ವದಂತಿ ಹರಡಿದೆ.

ಎಂವಿಎ ವಿ/ಎನ್‌ ಮಹಾಯುತಿ: ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡಿರುವ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ)ಯನ್ನು ಎದುರಿಸಬೇಕಿದೆ.

ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ವಿಭಜನೆಗೊಂಡಿದ್ದು, ರಾಜ್ಯದ ರಾಜಕೀಯ ತೀವ್ರವಾಗಿ ಬದಲಾಗಿದೆ. ಎರಡೂ ಮೈತ್ರಿ ಕೂಟಗಳು ಸೀಟು ಹಂಚಿಕೆ, ಮುಖ್ಯಮಂತ್ರಿ ಅಭ್ಯರ್ಥಿಗೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿವೆ.

ವಿಳಂಬಕ್ಕೆ ಕಾರಣ: ರಾಜ್ಯದ ರಾಜಕೀಯ ಪರಿಸ್ಥಿತಿ ಮತ್ತು ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ನಡೆಗಳು ಚುನಾವಣೆ ವಿಳಂಬಕ್ಕೆ ಒಂದು ಕಾರಣ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಹಾಯುತಿ ಮೈತ್ರಿಕೂಟವು ಲೋಕಸಭೆ ಚುನಾವಣೆಯಲ್ಲಿ ಭಾರಿ ಹೊಡೆತ ಅನುಭವಿಸಿದ್ದು, 48 ರಲ್ಲಿ 17 ಸ್ಥಾನ ಮಾತ್ರ ಪಡೆದುಕೊಂಡಿತು. ಮತ್ತೊಂದೆಡೆ, ಎಂವಿಎ 30 ಸ್ಥಾನ ಗೆದ್ದುಕೊಂಡಿತು; ಆದರೆ ಸಾಂ ಗ್ಲಿ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಬಂಡಾಯ ಸ್ವತಂತ್ರ ಅಭ್ಯರ್ಥಿ ವಿಶಾಲ್ ಪಾಟೀಲ್ ಅವರಿಗೆ ಹೋಯಿತು. ನಂತರ ಅವರು ಕಾಂಗ್ರೆಸ್ಸಿಗೆ ಬೆಂಬಲ ನೀಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 288 ರಲ್ಲಿ 105 ಸ್ಥಾನ ಗೆದ್ದಿರುವ ಬಿಜೆಪಿ, ತನ್ನ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗುತ್ತ ದೆ. ಮರಾಠ ಮೀಸಲು ಸಂಬಂಧ ಮರಾಠರು ಮತ್ತು ಒಬಿಸಿ ಸಮುದಾಯಗಳ ನಡುವಿನ ಉದ್ವಿಗ್ನತೆ ಆಡಳಿತ ಮೈತ್ರಿಕೂಟಕ್ಕೆ ಮತ್ತೊಂದು ಸವಾಲಾಗಿದೆ. ಈಗ ಚುನಾವಣೆ ನಡೆದರೆ, ಮಹಾಯುತಿ ನೇತೃತ್ವದ ಸರ್ಕಾರಕ್ಕೆ ಮತ್ತಷ್ಟು ಹಾನಿಯಾಗಲಿದೆ. ಇದರಿಂದ ಅವರು ಚುನಾವಣೆ ಘೋಷಿಸಲು ಸಮಯ ಕಾಯುತ್ತಿದ್ದಾರೆ.

ಮಹಾಯುತಿಯಲ್ಲಿ ತೊಂದರೆ: ಅಸೆಂಬ್ಲಿ ಸ್ಥಾನಗಳಲ್ಲಿ ಹೆಚ್ಚು ಪಾಲು ಬಯಸುತ್ತಿರುವ ಮೈತ್ರಿ ಪಾಲುದಾರರಿಂದ ಬಿಜೆಪಿ ಈಗಾಗಲೇ ತೊಂದರೆ ಎದುರಿಸುತ್ತಿದೆ.

288 ಸ್ಥಾನಗಳಲ್ಲಿ 150 ಸ್ಥಾನಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ 126 ಸ್ಥಾನಗಳ ಬೇಡಿಕೆ ಇರಿಸಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, 80 ರಿಂದ 90 ಸ್ಥಾನ ಕೇಳಿದ್ದರು. 2019 ರ ವಿಧಾನಸಭೆ ಚುನಾವಣೆಯಲ್ಲಿ ಅವಿಭಜಿತ ಎನ್‌ಸಿಪಿ ಗೆಲುವು ಸಾಧಿಸಿದ್ದ 54 ಸ್ಥಾನ ಬೇಕೆಂದು ಪಕ್ಷ ಒತ್ತಾಯಿಸಿದೆ. ಇದಲ್ಲದೆ, ಪಶ್ಚಿಮ ಮಹಾರಾಷ್ಟ್ರ, ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರ (ಖಾಂಡೇಶ್)ದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸುವ ಗುರಿ ಹೊಂದಿದ್ದಾರೆ. ಜೊತೆಗೆ, ಮುಂಬೈನಿಂದ 4-5 ವಿಧಾನಸಭೆ ಸ್ಥಾನಗಳ ಮೇಲೆ ಅವರ ದೃಷ್ಟಿ ಇದೆ. ಈ ಸ್ಥಾನಗಳಲ್ಲಿ ಅಲ್ಪಸಂಖ್ಯಾತರು ಪ್ರಾಬಲ್ಯ ಹೊಂದಿದ್ದಾರೆ.

ಮತದಾರರ ಓಲೈಕೆ: ಮಹಾಯುತಿ ಸರ್ಕಾರಕ್ಕೆ ಹೊಸ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಹೆಚ್ಚು ಸಮಯ ನೀಡಲು ಚುನಾವಣೆ ವಿಳಂಬವಾಗುತ್ತಿದೆ ಎಂಬ ಮಾತು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ.

ಮಾಝಿ ಲಡ್ಕಿ ಬಹನ್ ಯೋಜನೆ, ಮಾಝಾ ಲಡ್ಕಾ ದಾದಾ ಯೋಜನೆ ಮತ್ತು ಇತರ ಯೋಜನೆಗಳ ಮೂಲಕ ಚುನಾವಣೆಗೆ ಮುನ್ನ ಜನರಿಗೆ ವಿತ್ತೀಯ ಪ್ರಯೋಜನ ವಿಸ್ತರಿಸಲು ಸರ್ಕಾರ ಸಿದ್ಧವಾಗಿದೆ. ರಕ್ಷಾ ಬಂಧನದ ಸಂದರ್ಭ(ಆಗಸ್ಟ್ 17) ಮಾಝಿ ಲಡ್ಕಿ ಬಹನ್ ಯೋಜನೆಯ ಮೊದಲ ಕಂತನ್ನು ವಿತರಿಸಲು ಸಜ್ಜಾಗಿದೆ. ಅದೇ ರೀತಿ, ಇನ್ನೊಂದು ಕಂತು ದೀಪಾವಳಿ ಹಬ್ಬದ ಸಮಯದಲ್ಲಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ದೀಪಾವಳಿ ವೇಳೆ ಅರ್ಹ ಪಡಿತರ ಚೀಟಿದಾರರಿಗೆ ಸಕ್ಕರೆ, ಬೇಳೆಕಾಳು ಮತ್ತು ಅಡುಗೆ ಎಣ್ಣೆ ನೀಡುವ ʻಆನಂದಚಿ ಶಿಧಾʼ ಉಪಕ್ರಮದಿಂದ ಜನರ ಮನ ಸೆಳೆಯುವ ಯತ್ನ ನಡೆಯಲಿದೆ.

ಲಡ್ಕಿ ಬಹನ್ ಯೋಜನೆ: ಸಂಸದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಪರಿಚಯಿಸಿದ 'ಲಾಡ್ಲಿ ಬೆಹನಾ ಯೋಜನೆ' ಯನ್ನು ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಅಜಿತ್ ಪವಾರ್ ಅವರು ಮಂಡಿಸಿದ ಪೂರಕ ಬಜೆಟ್‌ನಲ್ಲಿ ಸೇರಿಸಲಾಗಿದೆ. ಈ ಯೋಜನೆಯು ನೆರವಾಗಬಹುದು ಎಂಬ ನಿರೀಕ್ಷಿಸಲಾಗಿದೆ.

ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗುರುವಾರ (ಆಗಸ್ಟ್ 15) ರಾಜ್ಯದ ಒಂದು ಕೋಟಿಗೂ ಹೆಚ್ಚು ಅರ್ಹ ಮಹಿಳೆಯರಿಗೆ 'ಮುಖ್ಯಮಂತ್ರಿ ಲಡ್ಕಿ ಬಹಿನ್' ಯೋಜನೆಯಡಿ ಮಾಸಿಕ 1,500 ರೂ.ನೀಡಲಾಗುವುದು ಎಂದು ಘೋಷಿಸಿದರು. ರಕ್ಷಾ ಬಂಧನಕ್ಕೆ ಮೊದಲು ಪ್ರಾರಂಭವಾಗಲಿದೆ. 21- 65 ವರ್ಷ ವಯಸ್ಸಿನ ಹಿಂದುಳಿದ (ವಾರ್ಷಿಕ ಕುಟುಂಬದ ಆದಾಯ 2.5 ಲಕ್ಷ ರೂ.) ಮಹಿಳೆಯರಿಗೆ ನೆರವು ನೀಡುತ್ತದೆ. ಯೋಜನೆಗೆ ವಾರ್ಷಿಕ 46,000 ಕೋಟಿ ರೂ. ವೆಚ್ಚವಾಗಲಿದೆ.

Read More
Next Story