
ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸಿಪಿಆರ್: ಮೋದಿ ಮೇಲಿನ ಅಚಲ ನಿಷ್ಠೆಗೆ ಸಂದ ಫಲ
ಆದರೆ ಅದಷ್ಟೇ ಆಯ್ಕೆಯ ಮಾನದಂಡವೇ? ಉಳಿದ ಅಂಶಗಳಾದರೂ ಏನು? ರಾಧಾಕೃಷ್ಣನ್ ಅವರ ನಿಕಟವರ್ತಿಗಳ ಪ್ರಕಾರ ಅವರು ನರೇಂದ್ರ ಮೋದಿ ಅವರ ಬಗ್ಗೆ ಹೊಂದಿದ್ದ ಅಚಲ ವಿಶ್ವಾಸ ಮತ್ತು ನಿಷ್ಠೆ.
ಸಿ.ಪಿ. ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಅನೇಕ ಸಂದೇಶಗಳನ್ನು ರವಾನಿಸುವ ಮಾಡುತ್ತಿದೆ. ಇದರ ಹಿಂದಿನ ಉದ್ದೇಶ ರಾಜಕೀಯವೂ ಹೌದು ಮತ್ತು ಮತದಾರರ ದೃಷ್ಟಿಯಿಂದಲೂ ಹೌದು.
ರಾಧಾಕೃಷ್ಣನ್ ಅವರು ಆಯ್ಕೆಯಾದರೆ (ಅದು ಬಹುತೇಕ ಖಚಿತ) ಈ ಹುದ್ದೆಗೇರಲಿರುವ ಹಿಂದುಳಿದ ಸಮುದಾಯದ ಮೊದಲ ತಮಿಳಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ತಮಿಳು ನಾಡಿನ ಇಬ್ಬರು ಹಿರಿಯರೆಂದರೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಆರ್.ವೆಂಕಟರಾಮನ್. ಆ ಬಳಿಕ ಇಬ್ಬರೂ ಭಾರತದ ರಾಷ್ಟ್ರಪತಿ ಕೂಡ ಆಗಿದ್ದರು. ಅವರಿಬ್ಬರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದರು.
ರಾಧಾಕೃಷ್ಣನ್ ಅವರು ಪಶ್ಚಿಮ ತಮಿಳು ನಾಡಿನ ಪ್ರಭಾವಿ ‘ಕೊಂಗು ವಲಯ’ಕ್ಕೆ ಸೇರಿದವರಾಗಿದ್ದಾರೆ. ಈ ರಾಜ್ಯದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಸಾಧಿಸಲು ಬಹಳ ಕಾಲದಿಂದ ಪ್ರಯತ್ನ ನಡೆಸುತ್ತಲೇ ಇರುವುದು ಗಮನಾರ್ಹ.
ಆದರೆ, ಯಾಕೆ ರಾಧಾಕೃಷ್ಣನ್ ಅವರನ್ನೇ ಬಿಜೆಪಿ ಆಯ್ಕೆ ಮಾಡಿದೆ?
ಸಭ್ಯ, ಸಾಮಾನ್ಯ ರಾಜಕಾರಣಿ
ಮೂಲತಃ ಆರ್.ಎಸ್.ಎಸ್. ಮತ್ತು ಜನ ಸಂಘದಿಂದ ಬಂದ ರಾಧಾಕೃಷ್ಣನ್ ಅವರು ರಾಜಕಾರಣಿಯಾಗಿ ಅಷ್ಟೇನು ಗಮನಾರ್ಹ ಸಾಧನೆ ಮಾಡಿದವರಲ್ಲ. ಕೇಸರಿ ಪಕ್ಷ (ಆಗ ಜನಸಂಘ) 1970ರ ದಶಕದಲ್ಲಿ ಜನತಾ ಪಕ್ಷದ ಗುಂಪನ್ನು ಸೇರಿಕೊಂಡಿದ್ದಾಗ ಅವರು ರಾಜ್ಯ ರಾಜಕೀಯದಲ್ಲಿ ಒಂದಷ್ಟು ಸುದ್ದಿ ಮಾಡಿದ್ದರು.
ಆದರೆ, ಅವರು ಯಾವತ್ತೂ ಸಭ್ಯ, ಸಜ್ಜನ, ಮಿತಭಾಷಿ ಮತ್ತು ಯಾವುದೇ ದೊಡ್ಡ ವಿವಾದಗಳಿಗೆ ಸಿಲುಕಿದವರಲ್ಲ. ಅವರು ಆಡಳಿತಾರೂಢ ಡಿಎಂಕೆ ಸೇರಿದಂತೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಯಕರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಂಡು ಬಂದಿದ್ದಾರೆ ಎಂಬುದು ತಮಿಳುನಾಡು ರಾಜಕೀಯದಲ್ಲಿ ಎಲ್ಲರಿಗೂ ತಿಳಿದಿರುವ ಸಂಗತಿ. ಅವರು ಆಕ್ರಮಣಕಾರಿ ಸಮುದಾಯದ ನಾಯಕರೂ ಅಲ್ಲ.
ಅವರು ತಮ್ಮ ರಾಜಕೀಯ ಜೀವನದ ಉತ್ತುಂಗ ತಲುಪಿದ್ದು 1990ರ ದಶಕದ ಉತ್ತರಾರ್ಧದಲ್ಲಿ. ಅಂದರೆ 1998 ಮತ್ತು 1999ರಲ್ಲಿ ಅವರು ಸತತವಾಗಿ ಕೊಯಮತ್ತೂರು ಸಂಸದೀಯ ಕ್ಷೇತ್ರದಲ್ಲಿ ವಿಜಯ ಸಾಧಿಸಿದರು. ಈ ಎರಡೂ ವಿಜಯ ಪ್ರಾಪ್ತಿಯಾಗಿದ್ದು ಜೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಜೊತೆಗಿನ ಮೈತ್ರಿಯ ಫಲವಾಗಿ.
ಕೊಯಮತ್ತೂರು ಗಲಭೆಯ ಸವಾರಿ
1998ರ ಚುನಾವಣೆಗಳು ನಡೆದಿದ್ದು “ಕೊಯಮತ್ತೂರು ಬಾಂಬ್ ಸ್ಫೋಟ”ದ ನಂತರ. ಆ ಘಟನೆಯಲ್ಲಿ 58 ಜನ ಸತ್ತು 200 ಮಂದಿ ಗಾಯಗೊಂಡಿದ್ದರು. ಕೇವಲ 12 ಕಿ.ಮೀ. ವ್ಯಾಪ್ತಿಯ ಹನ್ನೊಂದು ಸ್ಥಳಗಳಲ್ಲಿ 12 ಸ್ಫೋಟಗಳು ಸಂಭವಿಸಿದ್ದವು. 1997ರಲ್ಲಿ ನಗರದಲ್ಲಿ ಸಂಭವಿಸಿದ ಕೋಮುಗಲಭೆಯಲ್ಲಿ 18 ಮುಸ್ಲಿಮರ ಹತ್ಯೆಗೆ ಪ್ರತಿಕಾರವಾಗಿ ಇಸ್ಲಾಮ್ ಮೂಲಭೂತವಾದಿಗಳು ಈ ಕೃತ್ಯ ಎಸಗಿದ್ದರು ಎಂದು ಹೇಳಲಾಗಿತ್ತು. ಈ ಗಲಭೆಯಲ್ಲಿ ಇಬ್ಬರು ಹಿಂದೂಗಳೂ ಸಾವನ್ನಪ್ಪಿದ್ದರು.
ಮೂಲಭೂತವಾದಿ ಹಿಂದೂಗಳು ಮತ್ತು ಮುಸ್ಲಿಮರನ್ನು ಪ್ರತಿನಿಧಿಸುವ ಹಿಂದೂ ಮುನ್ನಣಿ ಮತ್ತು ಅಲ್-ಉಮ್ಮಾ ಸಂಘಟನೆಗಳು ಜನರ ಭಯವನ್ನೇ ಅಸ್ತ್ರವಾಗಿ ಬಳಸಿಕೊಂಡು ದ್ವೇಷ ಮತ್ತು ಹಿಂಸೆಯನ್ನು ಹರಡಿದವು. ಕೋಮು ಉದ್ವಿಗ್ನ ಸ್ಥಿತಿ ಹೆಚ್ಚಾದ ಪರಿಣಾಮವಾಗಿ ಮೊದಲ ಬಾರಿಗೆ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹಾಗೆ ಆಯ್ಕೆಯಾದವರಲ್ಲಿ ರಾಧಾಕೃಷ್ಣನ್ ಕೂಡ ಒಬ್ಬರು.
ಈ ಗೆಲುವಿನ ಉತ್ಸಾಹದಲ್ಲಿದ್ದ ರಾಧಾಕೃಷ್ಣನ್ ಅವರು 2003ರಲ್ಲಿ ಬಿಜೆಪಿಯ ತಮಿಳುನಾಡು ಮುಖ್ಯಸ್ಥರಾದರು ಮತ್ತು 2006ರ ವರೆಗೆ ಆ ಹುದ್ದೆಯಲ್ಲಿದ್ದರು. 2004ರಲ್ಲಿ ಜಯಲಲಿತಾ ಅವರ ಅಣ್ಣಾಡಿಎಂಕೆ ಜೊತೆ ಮತ್ತೊಮ್ಮೆ ಮೈತ್ರಿ ಕುದುರಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಿತ್ತು. ಆದರೆ ಅದು ಹಿಂದಿನ ಫಲಿತಾಂಶವನ್ನು ಪಡೆಯುವಲ್ಲಿ ವಿಫಲವಾಯಿತು.
2004, 2014 ಮತ್ತು 2019ರ ಸಂಸದೀಯ ಚುನಾವಣೆಗಳಲ್ಲಿ ರಾಧಾಕೃಷ್ಣನ್ ಸ್ಪರ್ಧಿಸಿದ್ದರೂ ಗೆಲುವಿನ ದಡ ಸೇರಲಿಲ್ಲ. ಅಂತಿಮವಾಗಿ ಅವರನ್ನು 2023ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ಮತ್ತು ಒಂದು ವರ್ಷದ ನಂತರ ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. ಅವರು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಮತ್ತು ತೆಲಂಗಾಣದ ಹೆಚ್ಚುವರಿ ರಾಜ್ಯಪಾಲರಾಗಿ ತಮ್ಮ ಜವಾಬ್ದಾರಿಯನ್ನು ಸಂಕ್ಷಿಪ್ತವಾಗಿ ನಿರ್ವಹಿಸಿದ್ದರು.
ರಾಜಕೀಯ ಲೆಕ್ಕಾಚಾರವೇನು?
ಹಾಗಾಗಿ ಮೊನ್ನೆ ಮೊನ್ನೆಯವರೆಗೆ, ಅಂದರೆ ಭಾನುವಾರ ಅವರನ್ನು ಉಪ ರಾಷ್ಟ್ರಪತಿ ಹುದ್ದೆಯ ಅಚ್ಚರಿಯ ಅಭ್ಯರ್ಥಿಯಾಗಿ ನೇಮಕ ಮಾಡುವ ವರೆಗೂ ರಾಧಾಕೃಷ್ಣನ್ ಅವರ ರಾಜಕೀಯ ಜೀವನ ಹೆಚ್ಚು-ಕಡಿಮೆ ಮುಗಿದ ಅಧ್ಯಾಯವಾಗಿತ್ತು.
ಹಾಗಾದರೆ ಅವರನ್ನು ಆಯ್ಕೆಮಾಡಲು ರಾಜಕೀಯ ಲೆಕ್ಕಾಚಾರವಾದರೂ ಏನು?
ಹೇಳಿಕೊಳ್ಳಲು ಗಮನಾರ್ಹ ಸಾಧನೆಗಳನ್ನೇನೂ ಮಾಡದೇ ಹೋದರೂ ರಾಜಕೀಯದಲ್ಲಿ ನಿರಂತರ ಮೇಲೇರುತ್ತ ಸಾಗಿದ ರಾಧಾಕೃಷ್ಣನ್ ಅವರ ಆಯ್ಕೆ ‘ಸರಿಯಾದ ಕಾಲದಲ್ಲಿ ಸರಿಯಾದ ವ್ಯಕ್ತಿ’ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಾರೆ.
ಅಷ್ಟಕ್ಕೂ ಅವರು ಆರ್‌ಎಸ್‌ಎಸ್‌ನ ಆಯ್ಕೆಯೇ? ಅದೂ ಅಲ್ಲ. ತಮಿಳು ನಾಡು ರಾಜಕೀಯದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ವ್ಯಕ್ತಿಯೂ ಅಲ್ಲ. ಸಂಸದರಾಗಿ ಅವರ ಕಾರ್ಯಕ್ಷಮತೆಯೂ ಸಾಧಾರಣ. ಹಾಗಂತ ರಾಜ್ಯಸಭೆಯ ಕಲಾಪಗಳನ್ನು ಸುಗಮವಾಗಿ ನಡೆಸಲು ಬೇಕಾದ ಹಿಂದಿ ಭಾಷೆಯಲ್ಲಿ ಅವರಿಗೆ ಪ್ರಾವೀಣ್ಯತೆಯೂ ಇಲ್ಲ.
ಒಬ್ಬ ಅಜಾತಶತ್ರು ಬೇಕಿತ್ತು
ಹಾಗಿದ್ದೂ ಅವರ ಆಯ್ಕೆ ಹೇಗಾಯಿತು? ದಿವಂಗತ ಸತ್ಯಪಾಲ್ ಮಲಿಕ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ಮತ್ತು ಜಗದೀಪ್ ಧನಕರ್ ಅವರನ್ನು ಉಪರಾಷ್ಟ್ರಪತಿಯಾಗಿ ನೇಮಿಸಿದ್ದ ವಿವಾದಾತ್ಮಕ ನಿರ್ಧಾರಗಳಿಂದ ಬಿಜೆಪಿಗೆ ಉಂಟಾದ ಹಾನಿ ಅಂತಿಂಥಹುದಲ್ಲ. ಧನಕರ್ ಅವರ ರಾಜೀನಾಮೆಯಿಂದ ಎಚ್ಚೆತ್ತುಕೊಂಡ ಬಿಜೆಪಿ ಈಗ ಹೆಚ್ಚು ಜಾಗರೂಕವಾಗಿದೆ ಮತ್ತು ಅದಕ್ಕಾಗಿಯೇ ಶತ್ರುಗಳೇ ಇಲ್ಲದ ವ್ಯಕ್ತಿಯನ್ನು ಪ್ರಮುಖ ಹುದ್ದೆಯಲ್ಲಿ ಕುಳ್ಳಿರಿಸುವ ಪ್ರಯತ್ನ ಮಾಡುತ್ತಿದೆ.
ಆದರೆ ಅದಷ್ಟೇ ಆಯ್ಕೆಯ ಮಾನದಂಡವೇ? ಉಳಿದ ಅಂಶಗಳಾದರೂ ಏನು? ರಾಧಾಕೃಷ್ಣನ್ ಅವರ ನಿಕಟವರ್ತಿಗಳ ಪ್ರಕಾರ ಅವರು ನರೇಂದ್ರ ಮೋದಿ ಅವರ ಬಗ್ಗೆ ಹೊಂದಿದ್ದ ಅಚಲ ವಿಶ್ವಾಸ ಮತ್ತು ನಿಷ್ಠೆ.
ಈ ಹಿನ್ನೆಲೆಯಲ್ಲಿ ಒಬ್ಬರು ಆರ್‌ಎಸ್‌ಎಸ್ ನಾಯಕರು 2002ರ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಆಗ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ಮೋದಿ, ತಮ್ಮ ರಾಜ್ಯದಲ್ಲಿ ನಡೆದ ಗಲಭೆಗಳ ನಿರ್ವಹಣೆಯ ವಿಷಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಗಲಭೆಗಳ ನಂತರ ಅಹಮದಾಬಾದ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವಾಜಪೇಯಿ ಅವರು ಮೋದಿ ಕಡೆಗೆ ತಿರುಗಿ, "ರಾಜಧರ್ಮ"ವನ್ನು ಪಾಲಿಸುವಂತೆ ನೆನಪಿಸಿದ್ದರು.
ವಾಜಪೇಯಿ ಅವರ ಬಲಗೈ ಬಂಟರಂತೆ ಇದ್ದ ಎಲ್.ಕೆ ಅಡ್ವಾಣಿ ಅವರು ಕೂಡ ಮೋದಿ ಅವರ ಬಗ್ಗೆ ಸಂಪೂರ್ಣ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಈ ವಿವಾದದ ಸಹವಾಸವೇ ಬೇಡ ಎಂದು ಭಾವಿಸಿದ್ದ ರಾಜ್ಯದ ಬಿಜೆಪಿ ನಾಯಕರು ಮೋದಿ ಅವರೊಂದಿಗೆ ಅಂತರ ಕಾಯ್ದುಕೊಂಡಿದ್ದರು.
ಆದರೆ, ರಾಧಾಕೃಷ್ಣನ್ ಅವರು ಇದಕ್ಕೆ ವಿರುದ್ಧವಾಗಿದ್ದರು. ಸಂಸದರಾಗಿ ಅವರು ಮೋದಿಯವರನ್ನು ತಮ್ಮ ಕ್ಷೇತ್ರಕ್ಕೆ ಆಹ್ವಾನಿಸಿ, ಕೊಮತ್ತೂರಿನಲ್ಲಿ ವಿಒಸಿ ಪಾರ್ಕ್ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟರು ಮತ್ತು ಅವರಿಗೆ ಪುರ ಸನ್ಮಾನವನ್ನೂ ಮಾಡಿದರು. ಬಿಜೆಪಿಯ ಭಾಗವಾಗಿರುವ ಒಬ್ಬ ಆರ್ಎಸ್ಎಸ್ ಕಾರ್ಯಕರ್ತನ ಪ್ರಕಾರ, ರಾಧಾಕೃಷ್ಣನ್ ಅವರು ಅಂದು ಮೋದಿ ಮೇಲೆ ತೋರಿದ ದಯಾಪರ ನಿಲುವು ಎಂದಿಗೂ ಮರೆಯುವಂತಿಲ್ಲ.
ನೇರಾನೇರ ವ್ಯಕ್ತಿತ್ವ
ರಾಧಾಕೃಷ್ಣನ್ ಅವರನ್ನು ಬಿಜೆಪಿ ಹೈಕಮಾಂಡ್ ಗೌರವಿಸುವುದಕ್ಕೆ ಮತ್ತೊಂದು ಬಹುಮುಖ್ಯ ಕಾರಣ ಅವರ ನೇರ-ನಿಷ್ಠುರ ಮಾತುಗಾರಿಕೆ. 2024ರ ಸಂಸದೀಯ ಚುನಾವಣೆಗೂ ಮೊದಲು, ಅಂದಿನ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷದ ಭವಿಷ್ಯದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದಾಗ, ಅವರು ಅದ್ಭುತ ಚಿತ್ರಣವನ್ನು ನೀಡಿ, ಬಿಜೆಪಿ ಸುಮಾರು 10 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದರು. ಆದರೆ, ಸಿ.ಪಿ. (ರಾಧಾಕೃಷ್ಣನ್ ಅವರನ್ನು ಸಾಮಾನ್ಯವಾಗಿ ಈ ಹೆಸರಿನಿಂದ ಕರೆಯಲಾಗುತ್ತದೆ) ಸ್ಪಷ್ಟವಾಗಿ ಅದು ಶೂನ್ಯ ಸಂಪಾದನೆ ಮಾಡುತ್ತದೆ ಎಂದು ಹೇಳಿದ್ದರು.
ಫಲಿತಾಂಶ ಬಂದಾಗ, ಅವರ ಭವಿಷ್ಯವಾಣಿ ನಿಜವಾಗಿತ್ತು. ಜಯಾ ಆಡಳಿತದ ಅವಧಿಯಲ್ಲಿ ಅಣ್ಣಾಡಿಎಂಕೆ ಸೇರಲು ನಿರಾಕರಿಸಿದಾಗ ಪಕ್ಷದ ಮೇಲಿನ ಅವರ ನಿಷ್ಠೆಯೂ ಪರೀಕ್ಷೆಗೆ ಒಳಗಾಯಿತು. ಜಯಾ ಅವರು ವೈಯಕ್ತಿಕವಾಗಿ ಆಸಕ್ತಿ ವಹಿಸಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದರು, ಆದರೆ ಅವರು ಒಲ್ಲೆ ಎಂದುಬಿಟ್ಟರು. ಅದು ಬಿಜೆಪಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿದ್ದ ಕಾಲ ಎಂಬುದು ಗಮನಾರ್ಹ.
ಬದಲಾದೀತೇ ಬಿಜೆಪಿಯ ಪರಿಸ್ಥಿತಿ?
ಆದಾಗ್ಯೂ, ಮುಂಬರುವ 2026ರ ತಮಿಳುನಾಡು ವಿಧಾನಸಭೆ ಚುನಾವಣೆಗಳಲ್ಲಿ ಸಿಪಿ ಅವರು ಬಿಜೆಪಿಯ ಪರವಾಗಿ ಪರಿಸ್ಥಿತಿಯನ್ನು ಬದಲಾಯಿಸಬಹುದೇ ಎಂಬುದು ಈಗಿರುವ ದೊಡ್ಡ ಪ್ರಶ್ನೆಯಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಇದು ಅಸಂಭವ. ಯಾಕೆಂದರೆ, ಅವರು ಪ್ರತಿನಿಧಿಸುತ್ತಿರುವ ‘ಕೊಂಗು ವೆಳ್ಳಾಲರ್’ ಸಮುದಾಯದ ಬೆಂಬಲ ಈಗಾಗಲೇ ಬಿಜೆಪಿಯ ಪರವಾಗಿ ಕ್ರೋಢೀಕೃತವಾಗಿದೆ. ಅಣ್ಣಾಮಲೈ, ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಮತ್ತು ಬಿಜೆಪಿ ಮರುಮೈತ್ರಿ ಮಾಡಿಕೊಂಡಿರುವ ಅಣ್ಣಾಡಿಎಂಕೆಯ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಕೂಡ ಇದೇ ಸಮುದಾಯಕ್ಕೆ ಸೇರಿದವರು.
ಆದರೆ, ಸಿಪಿ ಅವರ ನಾಮನಿರ್ದೇಶನವು ತಮಿಳರ ಭಾವನೆಗಳನ್ನು ಕೆರಳಿಸಬಹುದೇ? ವಿರೋಧ ಪಕ್ಷಗಳು ಅವರ ಅಭ್ಯರ್ಥಿತನವನ್ನು ಬೆಂಬಲಿಸುವಂತೆ ಮಾಡಬಹುದೇ? ಬಿಜೆಪಿ ರಾಜ್ಯ ನಾಯಕರು ಈಗಾಗಲೇ “ಮಣ್ಣಿನ ಮಗ”ನಿಗೆ ಬೆಂಬಲ ಕೋರಲು ಮುಂದಾಗಿದ್ದಾರೆ. ಆದರೆ ಇದು ಕೈಗೂಡುವ ಸಾಧ್ಯತೆ ಕಡಿಮೆ, ಯಾಕೆಂದರೆ ಇಂಡಿಯಾ ಒಕ್ಕೂಟವು ಕಣಕ್ಕಿಳಿಯಲು ನಿರ್ಧರಿಸಿದ್ದಾಗಿದೆ.
ಡಿಎಂಕೆ ಮತ್ತು ಕಾಂಗ್ರೆಸ್ ನಾಯಕರು ಈಗಾಗಲೇ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ, “ಆರ್‌ಎಸ್‌ಎಸ್‌ನ ವ್ಯಕ್ತಿ” ಯನ್ನು ಯಾವ ಕಾರಣಕ್ಕೂ ಬೆಂಬಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಎನ್‌ಡಿಎಗೆ ಅಗತ್ಯ ಶಕ್ತಿ ಇರುವುದರಿಂದ, ಸಿಪಿ ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಖಚಿತ.
ಈಗಿರುವ ಪ್ರಶ್ನೆ ಏನೆಂದರೆ, ಅವರ ಗೆಲುವಿನ ಅಂತರ ಎಷ್ಟು ಮತ್ತು ಅದಕ್ಕಿಂತ ಮುಖ್ಯವಾಗಿ ಅವರು ಭಾರತದ ರಾಷ್ಟ್ರಪತಿಯಾಗಿ ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಲು ಸಾಧ್ಯವೇ ಎಂಬುದು.
67ನೇ ವಯಸ್ಸಿನಲ್ಲಿ, ವಯಸ್ಸು ಅವರ ಪರವಾಗಿದೆ.