ಕೇಂದ್ರದ ʻಭಾರತ್ ರೈಸ್ ಯೋಜನೆʼಗೆ ಕೇರಳದಲ್ಲಿ ವಿರೋಧ
ತಮ್ಮ ಪ್ರದೇಶಕ್ಕೆ ಅಕ್ಕಿ ಚೀಲಗಳೊಂದಿಗೆ ಆಗಮಿಸಿದ ಪಿಕಪ್ ವ್ಯಾನ್ ಕಂಡು ತ್ರಿಶೂರಿನ ಚುವನ್ನಮಣ್ಣು ಪ್ರದೇಶದ ನಿವಾಸಿಗಳು ಆಶ್ಚರ್ಯಚಕಿತರಾದರು. ಅಧಿಕಾರಿಗಳು ಪ್ರತಿ ಕಿಲೋಗ್ರಾಂ ಅಕ್ಕಿಯನ್ನು 29 ರೂ. .ನಂತೆ ಮಾರಾಟ ಮಾಡಲು ಪ್ರಾರಂಭಿಸಿದರು. ಸ್ಥಳೀಯ ಬಿಜೆಪಿ ಕಾರ್ಯಕರ್ತರು ʻಭಾರತ್ ರೈಸ್ʼ ಯೋಜನೆಯನ್ನು ವಿವರಿಸಿದರು. ಅವರ ಪ್ರಕಾರ, ನಿವಾಸಿಗಳು ಸಬ್ಸಿಡಿ ದರದಲ್ಲಿ ಅಕ್ಕಿ ಪಡೆಯಬಹುದು. ಆದರೆ, ಇಲ್ಲಿ ಅಕ್ಕಿಯನ್ನು ರಾಜ್ಯ ಸರ್ಕಾರದ ಪಿಡಿಎಸ್ ವ್ಯವಸ್ಥೆಗೆ ಬದಲು ನೇರವಾಗಿ ಮಾರಾಟ ಮಾಡಲಾಗುತ್ತಿತ್ತು.
ತ್ರಿಶೂರ್ ಮೇಲೆ ಬಿಜೆಪಿ ಕಣ್ಣು:ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವು ಕೇರಳ ರಾಜ್ಯ ಅಕ್ಕಿ, ಗೋಧಿ ಮತ್ತು ತೈಲ ಗಿರಣಿಗಳ ಸಂಘದ ನೆರವಿನಿಂದ ಕಳೆದ ವಾರ ತ್ರಿಶೂರ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಅಕ್ಕಿ ಮಾರಾಟ ಮಾಡಿದೆ. ತ್ರಿಶೂರ್ ಲೋಕಸಭಾ ಚುನಾವಣೆಗೆ ನಟ-ರಾಜಕಾರಣಿ ಸುರೇಶ್ ಗೋಪಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸುವ ನಿರೀಕ್ಷೆಯಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಕಿ ದರದಲ್ಲಿ ಶೇ.15ರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಪರಿಹಾರ ನೀಡಲು ಕೇಂದ್ರ ಈ ಯೋಜನೆಯನ್ನು ಆರಂಭಿಸಿದೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು 5 ಮತ್ತು 10 ಕೆಜಿ ಪ್ಯಾಕೇಜ್‌ಗಳಲ್ಲಿ ಸಬ್ಸಿಡಿ ಅಕ್ಕಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಘೋಷಿಸಿದ್ದರು.
ʻಸರ್ಕಾರ ಯಾವುದೇ ಇರಲಿ. ಇಂಥ ಕಾರ್ಯಕ್ರಮ ಸ್ವಾಗತಾರ್ಹʼ ಎಂದು ತ್ರಿಶೂರ್‌ನಲ್ಲಿ ಅಕ್ಕಿ ಖರೀದಿಸಿದ ಜಾನಕಿ(67) ಹೇಳಿದರು.ʻಪಡಿತರ ಅಂಗಡಿ, ನ್ಯಾಯಬೆಲೆ ಅಂಗಡಿಗಳ ಅಕ್ಕಿಯಿಂದಷ್ಟೇ ಬದುಕಲು ಸಾಧ್ಯ ವಿಲ್ಲʼ ಎಂದು ಅವರು ಹೇಳಿದರು.ʻಈ ಕಾರ್ಯಕ್ರಮದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ.ಜಂಕ್ಷನ್‌ನಲ್ಲಿದ್ದಾಗ ವಾಹನವೊಂದು ಬಂದು ಕೆಲವರಿಗೆ ಅಕ್ಕಿ,ಉದ್ದಿನಬೇಳೆ ಪ್ಯಾಕೆಟ್ ಕೊಟ್ಟಿದೆ,ʼ ಎಂದರು ಸಿ.ಎಂ. ಥಾಮಸ್ ಹೇಳಿದರು.
ಚುನಾವಣೆ ಸ್ಟಂಟ್, ಫೆಡರಲ್ ತತ್ವಗಳ ಉಲ್ಲಂಘನೆ: ಕೇರಳ
ಕೇರಳದ ನಾಗರಿಕ ಸರಬರಾಜು ಕಾರ್ಯದರ್ಶಿ ಜಿ.ಆರ್. ಅನಿಲ್, ಸಬ್ಸಿಡಿ ಅಕ್ಕಿ ಮಾರಾಟವು ರಾಜ್ಯ ಮತ್ತು ಫೆಡರಲ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಟೀಕಿಸಿದರು. ಬಿಜೆಪಿಯೇತರ ಸರ್ಕಾರ ಇರುವಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿ ಇಂಥ ಪ್ರಯತ್ನ ನಡೆಸುತ್ತಿದೆ. ʻ29 ರೂ.ಗೆ ಅಕ್ಕಿಯನ್ನು ಭಾರತ್ ರೈಸ್ ಎಂದು ಮಾರಲಾಗುತ್ತಿದೆ. ಕೇರಳ ನಾಗರಿಕ ಪೂರೈಕೆ ನಿಗಮದ ಮಳಿಗೆಗಳ ಮೂಲಕ ಅಂಥದ್ದೇ ಅಕ್ಕಿಯನ್ನು ಕೆಜಿಗೆ 25 ರೂ.ನಂತೆ ಮಾರಾಟ ಮಾಡಲಾಗುತ್ತದೆ. ಎಪಿಎಲ್ ನೀಲಿ ಕಾರ್ಡ್ ದಾರರಿಗೆ ಕೆಜಿಗೆ 4 ರೂ.ನಂತೆ ಮತ್ತು ಬಿಳಿ ಕಾರ್ಡ್‌ದಾರರಿಗೆ 10.90 ರೂ.ಗೆ ಮಾರಾಟ ಮಾಡಲಾಗುತ್ತದೆ, ʼಎಂದು ಅವರು ಹೇಳಿದರು.
ಪಿಡಿಎಸ್ ಮೂಲಕ ಪಡಿತರ ವಿತರಿಸುವುದನ್ನು ಖಚಿತಪಡಿಸುವ ಆಹಾರ ಭದ್ರತಾ ಕಾಯ್ದೆಯನ್ನು ರಾಜ್ಯ ಸರ್ಕಾರ ಉಲ್ಲಂಘಿಸಿದೆ ಎಂಬ ಆರೋಪವಿದೆ. ʻಭಾರತ್ ರೈಸ್ ಕೇರಳದಲ್ಲಿ ಅಸ್ತಿತ್ವದಲ್ಲಿರುವ ಸದೃಢ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ವಿರುದ್ಧವಾಗಿದೆ. ಶೇ. 57 ರಷ್ಟು ಜನಸಂಖ್ಯೆಯನ್ನು ಪಿಡಿಎಸ್ ಪಟ್ಟಿಯಿಂದ ತೆಗೆದುಹಾಕುವಂತೆ ಕೇಂದ್ರ ರಾಜ್ಯದ ಮೇಲೆ ಒತ್ತಡ ಹೇರುತ್ತಿದೆʼ ಎಂದು ಅವರು ದೂರಿದರು.
ಪಿಡಿಎಸ್ ಅಕ್ಕಿ ವಿರುದ್ಧ ಭಾರತ್ ರೈಸ್: ʻಇದು ನಿಸ್ಸಂದೇಹವಾಗಿ ರಾಜಕೀಯ ಸ್ಟಂಟ್. ಸುರೇಶ್ ಗೋಪಿ ಅವರಿಗೆ ಮತ ಗಿಟ್ಟಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿ ದ್ದಾರೆʼ ಎಂದು ತ್ರಿಶೂರಿನ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸದಸ್ಯ ಕೆ.ಟಿ. ಬಾಬು ಹೇಳಿದರು. ʻ2018 ಮತ್ತು 2019ರ ಭೀಕರ ಪ್ರವಾಹದ ಸಂದರ್ಭದಲ್ಲಿ ಎಫ್‌ಸಿಐ ನೀಡಿದ್ದ ಅಕ್ಕಿಯನ್ನು ವಿತರಿಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರವನ್ನು ಒತ್ತಾಯಿಸಿತ್ತು. ಈಗ ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ಚುನಾವಣೆ ಪ್ರಚಾರದ ಭಾಗವಾಗಿ ಇದನ್ನು ಮಾಡುತ್ತಿದ್ದಾರೆ. ಕೇರಳದ 14 ಸಾವಿರಕ್ಕೂ ಹೆಚ್ಚು ಪಡಿತರ ಅಂಗಡಿಗಳಿಗೆ ಅಕ್ಕಿ ನೀಡಬೇಕೆಂಬ ಮನವಿಯನ್ನು ತಿರಸ್ಕರಿಸಿರುವ ಕೇಂದ್ರ ಇದೀಗ ಸಬ್ಸಿಡಿ ಅಕ್ಕಿಯನ್ನು ಬೀದಿಯಲ್ಲಿ ಮಾರುತ್ತಿರುವುದು ವಿರೋಧಾಭಾಸʼ ಎಂದು ಅವರು ಹೇಳಿದರು.
ರಾಜಕೀಯ ವಿಶ್ಲೇಷಕ ಇ.ಎಂ.ಗೋಪಕುಮಾರ್ ಮಾತನಾಡಿ,ʻಕೇರಳದಲ್ಲಿ ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್)ಯಡಿ 14,000 ಕ್ಕೂ ಹೆಚ್ಚು ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಈ ಪಿಡಿಎಸ್ ಮಳಿಗೆಗಳಿಗೆ ಅಕ್ಕಿ ಪೂರೈಕೆ ಕೊರತೆಯಿದೆ. ಪಿಡಿಎಸ್ ಮಳಿಗೆ ಬದಲಿಗೆ ಆರ್‌ಎಸ್‌ಎಸ್-ಬಿಜೆಪಿ ಸಂಘಟನೆಗಳ ಮೂಲಕ ಅಕ್ಕಿ ವಿತರಿಸುವ ಕೇಂದ್ರ ಸರ್ಕಾರದ ನಿರ್ಧಾರ ಒಕ್ಕೂಟ ತತ್ವಗಳನ್ನು ಉಲ್ಲಂಘಿಸುತ್ತದೆ. ಇದು ಸಂಪೂರ್ಣ ಅಸಾಂವಿಧಾನಿಕ,ʼ ಎಂದು ಹೇಳಿದರು.
ಯೋಜನೆ ಚುನಾವಣೆ ಆಧಾರಿತವಲ್ಲ: ಬಿಜೆಪಿಯ ನಾಯಕರು ಉಪಕ್ರಮವನ್ನು ಬೆಂಬಲಿಸಿದ್ದು, ಕೇಂದ್ರ ಸರ್ಕಾರವು ಜನರ ಸೇವೆಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ. ಕಾರ್ಯಕ್ರಮವನ್ನು ಸರ್ಕಾರಿ ಏಜೆನ್ಸಿಗಳು, ವಿಶೇಷವಾಗಿ, ಕೇರಳ ಮೂಲದ ಎನ್ ಸಿಸಿಎಫ್(ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್) ಜಾರಿಗೊಳಿಸುತ್ತಿದೆ ಎಂದು ದೃಢಪಡಿಸಿದರು.
ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೂ ತ್ರಿಶೂರ್ ಜಿಲ್ಲೆಯಲ್ಲಿ ಅಕ್ಕಿ ವಿತರಣೆಗೂ ಯಾವುದೇ ಸಂಬಂಧವಿಲ್ಲ ಎಂದು ತ್ರಿಶೂರ್ ಜಿಲ್ಲಾ ವಿಭಾಗದ ಮುಖಂಡ ಕೆ.ಆರ್. ಹರಿ, ಫೆಡರಲ್ ಗೆ ತಿಳಿಸಿದರು. ʻಎನ್‌ಸಿಸಿಎಫ್ ಅಧಿಕಾರಿಗಳೊಟ್ಟಿಗೆ ಕೈಜೋಡಿಸಿದ್ದೇವೆ. ಅಕ್ಕಿ ವಿತರಣೆಗೂ ಚುನಾವಣೆಗೂ ಸಂಬಂಧವಿಲ್ಲ. ಸಾರ್ವಜನಿಕರು ಸರ್ಕಾರದ ಯೋಜನೆಯಿಂದ ಪ್ರಯೋಜನ ಪಡೆಯಬಹುದು ಅಥವಾ ಪಡೆಯದೆ ಇರಬಹು ದು,ʼಎಂದು ಹರಿ ಹೇಳಿದರು.
ಎನ್‌ಎಫ್‌ಸಿಎಫ್ ಅಕ್ಕಿ ಮತ್ತು ಉದ್ದಿನ ಬೇಳೆ ಪ್ಯಾಕೆಟ್‌ಗಳನ್ನು ವಿತರಿಸಲು ರಾಜ್ಯಾದ್ಯಂತ 200 ಔಟ್‌ಲೆಟ್‌ಗಳನ್ನು ಸ್ಥಾಪಿಸಲಿದೆ.
ʻಯೋಜನೆ ಸಮರ್ಪಕವಾಗಿಲ್ಲ. ಫಲಾನುಭವಿಗಳು ಕಿಕ್ಕಿರಿದು ಸಮಸ್ಯೆ ಸೃಷ್ಟಿಯಾಗಲಿದೆ. ಬಿಜೆಪಿ ಕಾರ್ಯಕರ್ತರು ಫಲಾನುಭವಿಗಳನ್ನು ನಿರ್ಧರಿಸುವುದರಿಂದ ಅವ್ಯವಸ್ಥೆಗೆ ಕಾರಣವಾಗಬಹುದು.ಅಗತ್ಯ ವಸ್ತುಗಳ ಕೊರತೆ ಎದುರಿಸುತ್ತಿರುವ ರಾಜ್ಯ ನಾಗರಿಕ ಸರಬರಾಜು ನಿಗಮಕ್ಕೆ ನೆರವಾಗುವ ಬದಲು ಕೇಂದ್ರ ಸರ್ಕಾರ ನೇರ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲʼ ಎಂದು ಎಲ್‌ಡಿಎಫ್ ನಾಯಕರು ವಾದಿಸುತ್ತಾರೆ.