ಸಿಎಎ ಅಡಿಯಲ್ಲಿ ಪೌರತ್ವಕ್ಕಾಗಿ ಮುಸ್ಲಿಮರು ಏಕೆ ಅರ್ಜಿ ಸಲ್ಲಿಸಬಾರದು? ಅಮಿತ್‌ ಶಾ ಉತ್ತರ
x
ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಸಿಎಎ ಅಡಿಯಲ್ಲಿ ಪೌರತ್ವಕ್ಕಾಗಿ ಮುಸ್ಲಿಮರು ಏಕೆ ಅರ್ಜಿ ಸಲ್ಲಿಸಬಾರದು? ಅಮಿತ್‌ ಶಾ ಉತ್ತರ

ಮುಸ್ಲಿಂ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡುವುದು ಅರ್ಥಪೂರ್ಣವಾಗಿದೆ ಎಂದು ಅಮಿತ್‌ ಶಾ ಹೇಳಿದರು.


Click the Play button to hear this message in audio format

ಗೃಹ ಸಚಿವ ಅಮಿತ್ ಶಾ ಗುರುವಾರ (ಮಾರ್ಚ್ 14) ಸುದ್ದಿ ಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ ಸಿಎಎ ಕಾನೂನಿನಡಿಯಲ್ಲಿ ಮುಸ್ಲಿಮರಿಗೆ ಏಕೆ ಅವಕಾಶ ಕೊಟ್ಟಿಲ್ಲ ಎಂಬುವುದಕ್ಕೆ ಕಾರಣವನ್ನು ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಮುಸ್ಲಿಮರಿಗೆ ಅವಕಾಶ ಕಲ್ಪಿಸಲು ಹುಟ್ಟಿದ ರಾಷ್ಟ್ರಗಳಾಗಿವೆ. ಅಫ್ಘಾನಿಸ್ತಾನವು ಅಪಾರ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಆದ್ದರಿಂದ ಈ ಮುಸ್ಲಿಂ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡುವುದು ಅರ್ಥಪೂರ್ಣವಾಗಿದೆ ಎಂದು ಅಮಿತ್‌ ಶಾ ಹೇಳಿದರು.

ಅಖಂಡ ಭಾರತ

ಮುಸ್ಲಿಂ ಜನಸಂಖ್ಯೆಯಿಂದಾಗಿ ಅದು (ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ) ಇಂದು ಭಾರತದ ಭಾಗವಾಗಿಲ್ಲ. ಅದನ್ನು ಅವರಿಗೆ ನೀಡಲಾಗಿದೆ. ಅಖಂಡ ಭಾರತದ ಭಾಗವಾಗಿರುವ ಮತ್ತು ಧಾರ್ಮಿಕ ಕಿರುಕುಳ ಅನುಭವಿಸಿದವರಿಗೆ ಆಶ್ರಯ ನೀಡುವುದು ನಮ್ಮ ನೈತಿಕ ಮತ್ತು ಸಾಂವಿಧಾನಿಕ ಜವಾಬ್ದಾರಿ ಎಂದು ನಾನು ನಂಬುತ್ತೇನೆ ಎಂದು ಅವರು ಉತ್ತರಿಸಿದರು.

ʼಅಖಂಡ ಭಾರತʼ ಆಧುನಿಕ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಟಿಬೆಟ್, ಮ್ಯಾನ್ಮಾರ್, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಅನ್ನು ವ್ಯಾಪಿಸಿರುವ ಏಕೀಕೃತ ಭಾರತವನ್ನು ಸೂಚಿಸುತ್ತದೆ. ಡಿಸೆಂಬರ್ 31, 2014 ರ ಮೊದಲು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಪಲಾಯನ ಮಾಡಿದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡುವುದಾಗಿ CAA ಭರವಸೆ ನೀಡುತ್ತದೆ.

ಕಿರುಕುಳಕ್ಕೊಳಗಾದವರು ಎಲ್ಲಿಗೆ ಹೋದರು?

ಅಮಿತ್‌ ಶಾ ಕೆಲವು ಅಂಕಿಅಂಶಗಳನ್ನು ಒದಗಿಸುತ್ತಾ, ವಿಭಜನೆಯ ಸಮಯದಲ್ಲಿ ಪಾಕಿಸ್ತಾನದ ಜನಸಂಖ್ಯೆಯ ಶೇಕಡಾ 23 ರಷ್ಟು ಹಿಂದೂಗಳಾಗಿದ್ದರು, ಅದು ಈಗ ಶೇಕಡಾ 3.7 ಕ್ಕೆ ಇಳಿದಿದೆ ಎಂದು ಹೇಳಿದರು. ಅವರು ಎಲ್ಲಿ ಹೋದರು? ಅಷ್ಟು ಜನ ಇಲ್ಲಿಗೆ ಬಂದಿಲ್ಲ. ಬಲವಂತದ ಮತಾಂತರಗಳಿದ್ದವು. ಅವರನ್ನು ಅವಮಾನಿಸಲಾಯಿತು, ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳಲಾಯಿತು. ಅವರು ಎಲ್ಲಿಗೆ ಹೋಗುತ್ತಾರೆ? ನಮ್ಮ ಸಂಸತ್ತು ಮತ್ತು ರಾಜಕೀಯ ಪಕ್ಷಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಲ್ಲವೇ ಎಂದು ಹೇಳಿದರು.

ಅದೇ ರೀತಿ ಬಾಂಗ್ಲಾದೇಶದಲ್ಲಿ, 1951 ರಲ್ಲಿ ಹಿಂದೂಗಳು ಜನಸಂಖ್ಯೆಯ ಶೇಕಡಾ 22 ರಷ್ಟಿದ್ದರು. 2011 ರಲ್ಲಿ, ಈ ಸಂಖ್ಯೆಯು ಶೇಕಡಾ 10 ಕ್ಕೆ ಇಳಿದಿದೆ. ಅವರು ಎಲ್ಲಿ ಹೋದರು? 1992ರಲ್ಲಿ ಅಫ್ಘಾನಿಸ್ತಾನದಲ್ಲಿ ಸುಮಾರು 2 ಲಕ್ಷ ಸಿಖ್ ಮತ್ತು ಹಿಂದೂಗಳಿದ್ದರು. ಈಗ 500 ಮಂದಿ ಉಳಿದಿದ್ದಾರೆ. ಅವರ (ಧಾರ್ಮಿಕ) ನಂಬಿಕೆಗಳ ಪ್ರಕಾರ ಬದುಕುವ ಹಕ್ಕಿಲ್ಲವೇ? ಭಾರತ ಒಂದಾಗಿದ್ದಾಗ ಅವರು ನಮ್ಮವರಾಗಿದ್ದರು. ಅವರು ನಮ್ಮ ಸಹೋದರ ಸಹೋದರಿಯರು ಮತ್ತು ತಾಯಂದಿರು ಎಂದು ಅವರು ಹೇಳಿದರು.

ಮುಸ್ಲಿಮರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು

ಆದರೆ ಕಿರುಕುಳಕ್ಕೊಳಗಾದ ಮುಸ್ಲಿಂ ಸಮುದಾಯಗಳಾದ ಶಿಯಾ, ಬಲೂಚ್ ಮತ್ತು ಅಹ್ಮದೀಯರ ಬಗ್ಗೆ ಏನು? ಜಾಗತಿಕವಾಗಿ ಅವರನ್ನು ಮುಸ್ಲಿಂ ಬ್ಲಾಕ್ ಎಂದು ಪರಿಗಣಿಸಲಾಗುತ್ತದೆ. ಆದರೆ ಮುಸ್ಲಿಮರು ಸಹ ಭಾರತದಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಂವಿಧಾನದಲ್ಲಿ ಅದಕ್ಕೂ ಅವಕಾಶವಿದೆ. ರಾಷ್ಟ್ರೀಯ ಭದ್ರತೆ ಮತ್ತು ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಶಾ ಹೇಳಿದರು.

Read More
Next Story