ದಕ್ಷಿಣ ಭಾರತದಲ್ಲಿ ಧಾರ್ಮಿಕ ಧ್ರುವೀಕರಣದ ಪ್ರಯತ್ನ ಏಕೆ ಕೆಲಸ ಮಾಡಲಿಲ್ಲ?
x
ತಮಿಳುನಾಡಿನಲ್ಲಿ ನಡೆದ ವಿವಾಹವು ಕ್ರಿಶ್ಚಿಯನ್ ಮತ್ತು ಹಿಂದೂ ವಿಧಿಗಳು ಹಾಗೂ ಆಚರಣೆಗಳ ಮಿಶ್ರಣವಾಗಿತ್ತು

ದಕ್ಷಿಣ ಭಾರತದಲ್ಲಿ ಧಾರ್ಮಿಕ ಧ್ರುವೀಕರಣದ ಪ್ರಯತ್ನ ಏಕೆ ಕೆಲಸ ಮಾಡಲಿಲ್ಲ?

ದಕ್ಷಿಣದ ಅನೇಕ ಭಾಗಗಳಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಶತಮಾನಗಳಿಂದ ಒಟ್ಟಿಗೆ ಬದುಕುತ್ತಿದ್ದಾರೆ. ಒಬ್ಬರು ಇನ್ನೊಬ್ಬರ ಆಚರಣೆಗಳನ್ನು ಹಂಚಿಕೊಂಡಿರುವುದಲ್ಲದೆ, ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಪರಸ್ಪರ ಅಳವಡಿಸಿಕೊಂಡಿದ್ದಾರೆ.


ಚೆನ್ನೈನಲ್ಲಿನ ಸಹೋದ್ಯೋಗಿಯೊಬ್ಬರು ಕಳೆದ ವಾರ ನನ್ನನ್ನು ಅವರ ಮದುವೆಗೆ ಆಹ್ವಾನಿಸಿದರು. ಎರಡು ಪುಟಗಳ ಮದುವೆಯ ಕರೆಯೋಲೆ ಸರಳ ಮತ್ತು ಮಾಹಿತಿಯುಕ್ತವಾಗಿತ್ತು. ಮುಖ್ಯ ಸಮಾರಂಭ ಭಾನುವಾರ ಚರ್ಚ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ತಾನು ರೋಮನ್ ಕ್ಯಾಥೋಲಿಕ್ ಎಂದು ಮದುಮಗ ನನಗೆ ಹೇಳಿದರು. ಮತ್ತು, ನನ್ನ ಪ್ರಶ್ನೆಗೆ ಉತ್ತರವಾಗಿ, ಅವರ ಕುಟುಂಬ ಹೇಗೆ ಮದುವೆಯ ವಿಧಿಗಳು ಮತ್ತು ಆಚರಣೆಗಳನ್ನು ಯೋಜಿಸಿದೆ ಎಂದು ವಿವರಿಸಿದರು.

ಆಚರಣೆಗಳ ಮಿಶ್ರಣ:

ಅವರು ನೀಡಿದ ವಿವರಣೆಯಿಂದ ಹಿಂದೂ ವಿವಾಹ ಪದ್ಧತಿಗಳು ಮತ್ತು ಅವರ ಕುಟುಂಬ ಅನುಸರಿಸುತ್ತಿರುವ ಸಂಪ್ರದಾಯಗಳ ನಡುವೆ ಸಾಮ್ಯತೆಗಳಿವೆ ಎನ್ನುವುದು ಸ್ಪಷ್ಟವಾಯಿತು.

ಉದಾಹರಣೆಗೆ, ಮದುಮಗ ಇದು ʻಮನೆಯವರು ನೋಡಿ ಮಾಡುತ್ತಿರುವ ಮದುವೆʼ ಎಂದು ಹೇಳಿದರು ಮತ್ತು ಹುಡುಗ ಹಾಗೂ ಹುಡುಗಿಯ ಜಾತಕವನ್ನು ಜ್ಯೋತಿಷಿ ಹೋಲಿಸಿ ನೋಡಿ ಹೊಂದಾಣಿಕೆ ಆಗುತ್ತದೆ ಎಂದು ಹೇಳಿದ್ದರು. ಜಾತಕದಲ್ಲಿ ರಾಶಿ (ರಾಶಿಚಕ್ರ ಚಿಹ್ನೆ) ಮತ್ತು ನಕ್ಷತ್ರ (ಜನ್ಮ ನಕ್ಷತ್ರ) ಇರುತ್ತದೆ. ನಾನು ಹಿಂದೂವಾದರೂ ನನ್ನ ಮತ್ತು ಅವರ ಇಬ್ಬರ ರಾಶಿಯೂ ಒಂದೇ ಆಗಿತ್ತು.

ನನ್ನ ಕುತೂಹಲ ಇನ್ನಷ್ಟು ಕೆರಳಿತು. ನನಗೆ ಅರ್ಥವಾಗಲೆಂದು, ಅವರು ಮದುವೆಯ ಸಂಪ್ರದಾಯಗಳನ್ನು ವಿವರಿಸಿದರು. ಮದುಮಗ ವಧುವಿನ ಕುತ್ತಿಗೆಗೆ ಮಂಗಳಸೂತ್ರ ಕಟ್ಟುವುದು, ಹಣೆಗೆ ಸಿಂಧೂರ ಲೇಪಿಸುವುದು, ನೆರೆದ ಕುಟುಂಬದವರು ಮತ್ತು ಸ್ನೇಹಿತರು ದಂಪತಿ ಮೇಲೆ ಹೂವು ಮತ್ತು ಅಕ್ಷತೆ (ಅರಿಶಿನ ಮಿಶ್ರಗೊಳಿಸಿದ ಅಕ್ಕಿ) ಯನ್ನು ಹಾಕುವ ಮೂಲಕ ಹಾರೈಸುವುದನ್ನು ವಿವರಿಸಿದರು.

ಸಹೋದ್ಯೋಗಿ ಆನಂತರ ಕ್ರಿಶ್ಚಿಯನ್ ವಿವಾಹದ ರೀತಿಯನ್ನು ಕೂಡ ವಿವರಿಸಿದರು.

ಒಳಗೊಳ್ಳುವಿಕೆಯ ಆಚರಣೆ:

ಆ ಮದುವೆಯು ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯ ಹಾಗೂ ಆಚರಣೆಗಳ ಮಿಶ್ರಣವಾಗಿತ್ತು. ಅವರು ಮಾತ್ರವಲ್ಲದೆ, ತಮಿಳುನಾಡು ಮತ್ತು ನೆರೆಯ ಪ್ರದೇಶಗಳಲ್ಲಿನ ಅನೇಕ ಕ್ರಿಶ್ಚಿಯನ್ನರು ತಮ್ಮ ವಿವಾಹಗಳಲ್ಲಿ ಹಿಂದೂ ಧರ್ಮದಿಂದ ಎರವಲು ಪಡೆದ ಆಚರಣೆಗಳನ್ನು ಅಳವಡಿಸಿಕೊಂಡಿದ್ದಾರೆ.

ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಮುಸ್ಲಿಂ ಮಹಿಳೆಯರು ಮಂಗಳಸೂತ್ರ ಧರಿಸುವುದು ವಿಶೇಷವೇನಲ್ಲ. ಆದರೆ, ಧರ್ಮಶಾಸ್ತ್ರದಲ್ಲಿನ ವ್ಯತ್ಯಾಸಗಳಿಂದಾಗಿ ಇಂಥ ಅಳವಡಿಸಿಕೊಳ್ಳುವಿಕೆಯಲ್ಲಿ ಏಕರೂಪತೆ ಇಲ್ಲ.

ದಕ್ಷಿಣದ ಅನೇಕ ಭಾಗಗಳಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಶತಮಾನಗಳಿಂದ ಒಟ್ಟಿಗೆ ಬದುಕುತ್ತಿದ್ದಾರೆ. ಒಬ್ಬರು ಇನ್ನೊಬ್ಬರ ಆಚರಣೆಗಳನ್ನು ಹಂಚಿಕೊಂಡಿರುವುದಲ್ಲದೆ, ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಪರಸ್ಪರ ಅಳವಡಿಸಿಕೊಂಡಿದ್ದಾರೆ.

ಉದಾಹರಣೆಗೆ, ಹಿಂದೂ ಪುರುಷರು ಮತ್ತು ಮಹಿಳೆಯರು ಚರ್ಚ್ ಮೂಲಕ ಹಾದುಹೋಗುವಾಗ, ಶಿಲುಬೆಯ ಗುರುತು ಮಾಡಿಕೊಳ್ಳುವುದು ವಿಶೇಷವೇನಲ್ಲ. ಅಂತರ್-ಧರ್ಮೀಯ ಸಂಪ್ರದಾಯಗಳು ಮತ್ತು ವಿವಾಹಗಳು ಈ ಪ್ರದೇಶದಲ್ಲಿ ಸಾಮಾನ್ಯ. ವಾಸ್ತವವೆಂದರೆ, ಒಳ್ಳೆಯ ಸಂಪ್ರ ದಾಯಗಳ ಜೊತೆಗೆ, ವರದಕ್ಷಿಣೆಯಂತಹ ಕೆಲವು ಕೆಡುಕುಗಳು ಕೂಡ ಸೇರಿಕೊಂಡಿವೆ. ಆದರೆ, ಅದು ಬೇರೆಯದೇ ಕಥೆ.

ಸೌಹಾರ್ದದ ಈ ಸಂಕ್ಷಿಪ್ತ ಕಥನವು ಒಂದು ದಶಕಕ್ಕೂ ಹೆಚ್ಚುಕಾಲ ತೀವ್ರವಾದ ರಾಜಕೀಕರಣದಿಂದ ಉಂಟಾದ ಧ್ರುವೀಕೃತ ಸಾಮಾಜಿಕ ಪರಿಸರದ ಹೊರತಾಗಿಯೂ, ಸಾಮರಸ್ಯದ ಸಾಂಸ್ಕೃತಿಕ ಆಚರಣೆಗಳು ಅಸ್ತಿತ್ವದಲ್ಲಿವೆ ಎಂಬ ನಂಬಿಕೆಯನ್ನು ಬಲಪಡಿಸುತ್ತದೆ. ಹೆಚ್ಚಿನ ಸಮುದಾಯಗಳು ಧರ್ಮದ ಹೆಸರಿನಲ್ಲಿ ಧೃವೀಕರಣದಂಥ ವಿಷಯುಕ್ತ ಸಂದೇಶಗಳನ್ನು ನಿರ್ಲಕ್ಷಿಸಿವೆ ಮತ್ತು ತಮ್ಮ ಲಕ್ಷ್ಯ ವನ್ನು ಉದ್ಯೋಗ ಹಾಗೂ ಬೆಲೆಯೇರಿಕೆಯಂಥ ತಮ್ಮ ಅಸ್ತಿತ್ವದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿವೆ.

ಒಡಕು ಉಂಟು ಮಾಡುವ ಭಾಷಣ:

ರಾಷ್ಟ್ರೀಯ ಚುನಾವಣೆಯ ಪ್ರಚಾರವು ಅಹಿತಕರ ಮತ್ತು ಒಡಕು ಉಂಟುಮಾಡುತ್ತಿರುವ ಸಮಯ ದಲ್ಲಿ ಈ ವಿಷಯವನ್ನು ಚರ್ಚಿಸುವುದು ಮುಖ್ಯವಾಗಲಿದೆ. ದ್ವೇಷ, ಬುಲ್ಡೋಜರ್‌ಗಳು, ಕಬರಸ್ತಾನ, ಕ್ರೋನಿಯಿಸಂ, ದಾಳಿಗಳು, ಬಂಧನ ಗಳು ಮತ್ತು ಸೆರೆಮನೆ... ಇತ್ಯಾದಿ 2024ರ ಚುನಾವಣೆಯ ರಾಜಕೀಯ ಬಳಕೆಯ ಪದಗುಚ್ಛಗಳಾಗಿವೆ. ಜನಕಲ್ಯಾಣ ಕಾರ್ಯಕ್ರಮಗಳು, ಮೀಸಲು, ಸಾಮಾಜಿಕ ಸಮತೆ, ಭ್ರಷ್ಟಾಚಾರ, ಉದ್ಯೋಗಗಳು, ಅಸಮಾನತೆಗಳು ಮತ್ತು ಬೆಲೆ ಏರಿಕೆ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ, ಅವು ಒಡಕು ಉಂಟುಮಾಡುವ ವಿಷಯಗಳ ಸುನಾಮಿಯಲ್ಲಿ ಮುಳುಗಿ ಹೋಗಿವೆ.

ಏಳು ಹಂತದ ಸುದೀರ್ಘ, ಪ್ರಯಾಸಕರ ಚುನಾವಣೆಯ ಮೊದಲ ಐದು ಹಂತಗಳು ಬಹುತೇಕ ಈ ಸಮಸ್ಯೆಗಳೊಂದಿಗೆ ಅನುರಣಿಸಿವೆ. ಉಳಿದ ಎರಡು ಹಂತಗಳಲ್ಲಿ ವಾಗಾಡಂಬರ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ. ಆದರೆ, ಸಂತಸದ ಅಂಶವೆಂದರೆ, ಧ್ರುವೀಕರಣದ ತೀವ್ರತೆಯು ರಾಜ್ಯದಿಂದ ರಾಜ್ಯಕ್ಕೆ ಬದಲಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ಧಾರ್ಮಿಕ ಧ್ರುವೀಕರಣವು ಹೆಚ್ಚು ಪರಿಣಾಮ ಬೀರಿಲ್ಲ ಮತ್ತು 2024 ಇದಕ್ಕೆ ಹೊರತಾಗಿಲ್ಲ.

ಕೇರಳದ ಕಥೆ:

ಕೇರಳದಲ್ಲಿ ಎಡ ರಂಗ ಮತ್ತು ಯುಡಿಎಫ್‌ ಮುಖಾಮುಖಿಯಾಗಿದ್ದು, ಬಿಜೆಪಿ ಮೂರನೇ ಶಕ್ತಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ರಾಜ್ಯದಲ್ಲಿ ರಾಜಕೀಯವನ್ನು ಧ್ರುವೀಕರಿಸುವ ಬಲಪಂಥೀಯ ಗುಂಪುಗಳ ಪ್ರಯತ್ನಗಳು ಹೆಚ್ಚು ಯಶಸ್ವಿಯಾಗಿಲ್ಲ. ಕಳೆದ ವಾರ, ಮಲಯಾಳಂ ಸೂಪರ್‌ಸ್ಟಾರ್ ಮಮ್ಮೂಟಿ ಅವರನ್ನು ಎರಡು ವರ್ಷಗಳ ಹಿಂದಿನ ಅವರ ಚಲನಚಿತ್ರ(ಪುಳು)ದ ಪಾತ್ರಕ್ಕಾಗಿ ನಿರ್ದಯವಾಗಿ ಟ್ರೋಲ್ ಮಾಡಲಾಯಿತು. ʻಪುಳುʼ ಸಿನಿಮಾದಲ್ಲಿ ಅವರು ಖಳ ನಾಯಕನಾಗಿ ಧರ್ಮಾಂಧ ಹಿಂದೂ ಮೇಲ್ಜಾತಿಯ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರವನ್ನುಸೂಕ್ಷ್ಮವಾಗಿ ನಿರ್ವಹಿಸಿದ್ದಾರೆ. ಅವರು ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಟ್ರೋಲ್‌ಗಳು ಮತ್ತು ಸೈಬರ್ ಸೇನೆ ಅವರ ಮೇಲೆ ದಾಳಿ ನಡೆಸಿತು.

ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ಎಲ್ಲರನ್ನೂ ಒಳಗೊಳ್ಳುವ ರಾಜಕೀಯವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಮನಗಂಡಿವೆ. ಬಲಪಂಥೀಯರು ಕೂಡ ಆಡಳಿತ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳ ಮೇಲೆ ದಾಳಿ ಮಾಡುವಾಗ, ಧಾರ್ಮಿಕ ವಿಷಯಗಳಿಂದ ದೂರವಿದ್ದರು. ಬದಲಿಗೆ, ಪಕ್ಷಗಳು ಮುಖ್ಯವಾಗಿ ಬಿಜೆಪಿ, ಭ್ರಷ್ಟಾಚಾರ, ವಂಶಾಡಳಿತ ಮತ್ತು ಆರ್ಥಿಕತೆಯ ನಿರ್ವಹಣೆಯಲ್ಲಿ ಲೋಪ ಮತ್ತಿತರ ವಿಷಯ ಗಳನ್ನು ಕೇಂದ್ರೀಕರಿಸಿದವು. ಸ್ಥಳೀಯ ಐಕಾನ್‌ಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಯಿತು ಮತ್ತು ಸ್ಥಳೀಯ ಆಚರಣೆಗಳು ಹಾಗೂ ಸಂಪ್ರದಾಯಗಳನ್ನು ಒಳಗೊಳ್ಳಲಾಯಿತು.

ತೆಲುಗು ರಾಜ್ಯಗಳಿಗೆ 2 ಕಾರ್ಯತಂತ್ರ:

ನೆರೆಯ ಆಂಧ್ರಪ್ರದೇಶದಲ್ಲಿ ಗಣನೀಯ ಪ್ರಮಾಣದ ಅಲ್ಪಸಂಖ್ಯಾತರು ಇರುವುದರಿಂದ, ಎಲ್ಲ ಪಕ್ಷಗಳು ಕೋಮುವಾದದ ಚರ್ಚೆಯನ್ನು ದೂರವಿಟ್ಟಿವೆ. ಚುನಾವಣೆಗಳಲ್ಲಿ ಭಾರೀ ಕಸರತ್ತು ನಡೆಸುತ್ತಿರುವ ತೆಲುಗು ದೇಶಂ ಮತ್ತು ವೈಎಸ್‌ಆರ್‌ಸಿಪಿ (ರಾಜ್ಯದಲ್ಲಿ ಏಕಕಾಲದಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ) ಪ್ರಜ್ಞಾಪೂರ್ವಕವಾಗಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಬೆಂಬಲಿಸಿವೆ.

ಟಿಡಿಪಿಯ ಮಿತ್ರ ಪಕ್ಷವಾದ ಬಿಜೆಪಿಯು ಕೆಲವು ರೀತಿಯಲ್ಲಿ ವೈಎಸ್‌ಆರ್‌ಸಿಪಿಗೆ ನಿಕಟವಾಗಿದ್ದು (ಸಂಸತ್ತಿನಲ್ಲಿ ಅದು ಬಿಜೆಪಿಯನ್ನು ಹೊರಗಿನಿಂದ ಬೆಂಬಲಿಸಿತ್ತು), ಈ ವಿಷಯದ ಬಗ್ಗೆ ಮೌನವಹಿಸಿತು. ತೆಲಂಗಾಣದಲ್ಲಿ ಮುಸ್ಲಿಂ ಮೀಸಲು ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶದಲ್ಲಿ ಅದರ ಬಗ್ಗೆ ಮಾತನಾಡಲಿಲ್ಲ.

ಆದರೆ, ತೆಲಂಗಾಣದಲ್ಲಿ ಎಐಎಂಐಎಂ ಉಪಸ್ಥಿತಿಯಿಂದ ವಿಷಯ ಗಂಭೀರವಾಯಿತು. ಬಿಆರ್‌ಎಸ್‌ ಪಕ್ಷದ ಕುಸಿತದಿಂದ ಸಿಕ್ಕ ಅವಕಾಶ ವನ್ನು ಬಳಸಿಕೊಳ್ಳಲು ಮುಂದಾದ ಬಿಜೆಪಿ, ತೀವ್ರ ಪ್ರಚಾರ ನಡೆಸಿತು. ಹೈದರಾಬಾದ್‌ನಲ್ಲಿ ಪಕ್ಷದ ಅಭ್ಯರ್ಥಿ ಮಾಧವಿ ಲತಾ ಅವರು ಎಐಎಂಐಎಂನ ಅಸಾದುದ್ದೀನ್ ಓವೈಸಿಯನ್ನು ಎದುರಿಸಿದರು; ಸಮುದಾಯಗಳನ್ನು ವಿಭಾಗಿಸುವ ಭಾಷಣಕ್ಕೆ ಒತ್ತು ನೀಡಿದರು. ಆದರೆ, ಇದು ಹೈದರಾಬಾದ್‌ನ ಹೊರಗೆ ದೊಡ್ಡ ರೀತಿಯಲ್ಲಿ ಅನುರಣಿಸುವ ಸಾಧ್ಯತೆಯಿಲ್ಲ. ಕೇವಲ 'ಮೋದಿ ಮ್ಯಾಜಿಕ್' ಮೇಲೆ ಭರವಸೆ ಇಟ್ಟುಕೊಂಡಿರುವ ಬಿಜೆಪಿ, ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಆಶಾವಾದವನ್ನು ಇರಿಸಿ ಕೊಂಡಿದೆ.

ಬ್ರ್ಯಾಂಡ್ ಮೋದಿ ಮೇಲೆ ಆಧರಿತ:

ಬಿಜೆಪಿ ನೆರೆಯ ರಾಜ್ಯ ಕರ್ನಾಟಕದಲ್ಲೂ ಮೋದಿ ಅವರನ್ನೇ ನೆಚ್ಚಿಕೊಂಡಿದೆ. ಕೆಲವು ವಿಶ್ಲೇಷಕರ ಪ್ರಕಾರ, ಮೋದಿ ಅವರು ಚುನಾವಣೆಯನ್ನು ಅಧ್ಯಕ್ಷೀಯ ಸ್ಪರ್ಧೆಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ; ವಿರೋಧ ಪಕ್ಷಗಳು ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೆ ಇರುವುದರಿಂದ, ಬಿಜೆಪಿಗೆ ಅವಕಾಶಗಳು ಹೆಚ್ಚಿವೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನಂತರ ಬಿಜೆಪಿ ಮತ್ತೆ ಒಗ್ಗಟ್ಟಾಗಲು ಸಾಧ್ಯವಾಗದ ಕಾರಣ ಮೋದಿಯವರ ಮೇಲೆ ಅತಿಯಾದ ಅವಲಂಬನೆ ಇದೆ. ಕರ್ನಾಟಕದಲ್ಲಿ ಪಕ್ಷ ಎರಡು ಭಾಗವಾಗಿದೆ. ಪ್ರಜ್ವಲ್ ರೇವಣ್ಣ ಪ್ರಕರಣವು ಬಿಜೆಪಿ- ಜೆಡಿಎಸ್ ಮೈತ್ರಿಯ ಹೊಳಪನ್ನು ಕುಂದಿಸಿದೆ.

ರಾಜ್ಯದಲ್ಲಿ ಬಿಜೆಪಿ ಆಡಳಿತ ಇದ್ದಾಗ ಹಿಜಾಬ್, ಹಲಾಲ್ ಮತ್ತು ಅಲ್ಪಸಂಖ್ಯಾತರ ಓಲೈಕೆ ವಿವಾದಗಳು ತಲೆ ಎತ್ತಿದ್ದವು. ಆದರೆ, ಆನಂತರ ಸದ್ದು ಕಡಿಮೆಯಾಯಿತು. ಈಗ ರಾಜಕೀಯವು ಲಿಂಗಾಯತರು (ಪ್ರಬಲ ಸಮುದಾಯ) ಮತ್ತು ಜಾತಿ ಮೀಸಲು ಒಳಗೊಂಡ ಹೆಚ್ಚು ಸಾಂಪ್ರದಾಯಿಕ ರೀತಿಗೆ ಮರಳಿದೆ. ಒಬಿಸಿಗಳ ಮೀಸಲು ಕೋಟಾದಲ್ಲಿ ಮುಸ್ಲಿಮರಿಗೆ ಉಪ ಕೋಟಾ ಮತ್ತು ಅದಕ್ಕೆ ಬಿಜೆಪಿಯ ವಿರೋಧ ಚುನಾವಣೆ ಪ್ರಚಾರದಲ್ಲಿ ಕಾಣಿಸಿಕೊಂಡಿದೆ.

ಒಟ್ಟಾರೆಯಾಗಿ, ಉತ್ತರದಲ್ಲಿ ಕಂಡುಬರುವ ಧ್ರುವೀಕರಣದ ಪ್ರಯತ್ನಗಳನ್ನು ದಕ್ಷಿಣವು ಕಾಣಿಸಲಿಲ್ಲ. ಇದಕ್ಕೆ ಕಾರಣ ಸರಳ - ರಾಜಕೀಯ ಪಕ್ಷಗಳು ನೆಲದ ಮೇಲೆ ಅನುರಣಿಸದ ಸಮಸ್ಯೆಗಳನ್ನು ಎತ್ತುವ ಸಾಧ್ಯತೆಯಿರುವುದಿಲ್ಲ.

Read More
Next Story