ದ್ರಾವಿಡ್ ಉತ್ತರಾಧಿಕಾರಿ: ಪಾಂಟಿಂಗ್, ಫ್ಲೆಮಿಂಗ್ ಮೇಲೆ ಬಿಸಿಸಿಐ ಕಣ್ಣು
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಅವರು ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ, ಅವರು ಕಣಕ್ಕೆ ಇಳಿಯುವ ಸಾಧ್ಯತೆಯಿಲ್ಲ.
ಟೀಂ ಇಂಡಿಯದ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಜೂನ್‌ನಲ್ಲಿ 2024 ರ ಟಿ 20 ವಿಶ್ವಕಪ್‌ನೊಂದಿಗೆ ಕೊನೆಗೊಳ್ಳಲಿದೆ. ಬಿಸಿಸಿಐ, ಸ್ಟೀಫನ್ ಫ್ಲೆಮಿಂಗ್ ಮತ್ತು ರಿಕಿ ಪಾಂಟಿಂಗ್ ಅವರನ್ನು ಅನೌಪಚಾರಿಕವಾಗಿ ಸಂಪರ್ಕಿಸಿದೆ ಎಂಬ ವದಂತಿಯಿದೆ.
ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಯ್ಕೆಗೆ ಬಿಸಿಸಿಐ ಜಾಹೀರಾತು ನೀಡಿತ್ತು. ಅದರ ಪ್ರಕಾರ, ಜುಲೈ1 ರೊಳಗೆ ಹೊಸ ತರಬೇತುದಾರ ಕರ್ತವ್ಯಕ್ಕೆ ಹಾಜರಾಗಬೇಕಿದೆ. ಆತ 2027ರ ಅಂತ್ಯದವರೆಗೆ ಉಸ್ತುವಾರಿ ವಹಿಸಿಕೊಳ್ಳುತ್ತಾನೆ. ಈ ಅವಧಿಯಲ್ಲಿ 2025ರ ಚಾಂಪಿಯನ್ಸ್ ಟ್ರೋಫಿ ಮತ್ತು 2027 ಒಡಿಐ ವಿಶ್ವಕಪ್‌ನಂತಹ ಮಹತ್ವದ ಸವಾಲುಗಳು ಇವೆ. ವರದಿಗಳ ಪ್ರಕಾರ, ಭಾರತೀಯ ಕ್ರಿಕೆಟ್ ತಂಡ ವಿದೇಶಿ ಕೋಚ್ ನ್ನು ಆಯ್ಕೆ ಮಾಡಿಕೊಳ್ಳಬಹುದು.
ದ್ರಾವಿಡ್ ನಂತರ ಮುಖ್ಯ ತರಬೇತುದಾರರಾಗಿ ನ್ಯೂಜಿಲೆಂಡ್ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಮತ್ತು ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಬಿಸಿಸಿಐ ಪರಿಗಣಿಸಲಿದೆ ಎಂಬ ವದಂತಿ ಹರಡಿದೆ.
ವಿದೇಶಿ ಕೋಚ್?: ಫ್ಲೆಮಿಂಗ್ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ತಂಡ ಐದು ಐಪಿಎಲ್ ಪ್ರಶಸ್ತಿ ಗೆದ್ದಿದೆ. ಫ್ಲೆಮಿಂಗ್ ಅವರ ನಿರ್ವಹಣೆ ಕೌಶಲ ಮತ್ತು ಅನುಭವದ ಹಿನ್ನೆಲೆಯಯಲ್ಲಿ ಬಿಸಿಸಿಐ ಅವರನ್ನು ʻಸೂಕ್ತ ಅಭ್ಯರ್ಥಿʼ ಎಂದು ಪರಿಗಣಿಸುತ್ತದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೆ, ಸಿಎಸ್‌ಕೆ ಈ ವದಂತಿಗಳನ್ನು ನಿರಾಕರಿಸಿದೆ ಮತ್ತು ಸಿಇಒ ಕಾಸಿ ವಿಶ್ವನಾಥನ್ ಅವರು ʻಫ್ಲೆಮಿಂಗ್ ಮತ್ತು ಫ್ರಾಂಚೈಸಿ ನಡುವೆ ಯಾವುದೇ ರೀತಿಯ ಸಂವಹನ ನಡೆದಿಲ್ಲʼ ಎಂದು ಹೇಳಿದ್ದಾರೆ.
ʻನಾನು ಇಂಥ ಸುದ್ದಿಯನ್ನು ಕೇಳಿಲ್ಲ. ಸ್ಟೀಫನ್ ಫ್ಲೆಮಿಂಗ್ ಈ ಬಗ್ಗೆ ಸಿಎಸ್‌ಕೆಗೆ ಜೊತೆ ಮಾತಾಡಿಲ್ಲʼ ಎಂದು ಸಿಎಸ್‌ಕೆ ಸಿಇಒ ತಿಳಿಸಿದ್ದಾರೆ.
ರೆವ್ ಸ್ಪೋರ್ಟ್ ವರದಿ ಪ್ರಕಾರ, ಬಿಸಿಸಿಐ ಆಹ್ವಾನಕ್ಕೆ ಇಬ್ಬರೂ ನೀರಸ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರೂ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿದ್ದರೂ, ತರಬೇತಿಗೆ ಪೂರ್ಣ ಸಮಯ ನೀಡಬೇಕಿರುವುದು ಸಮ್ಮತಿಸಲು ತಡೆಯಾಗಿದೆ ಎಂದು ವರದಿ ಹೇಳಿದೆ.
ಜಾನ್ ರೈಟ್ ಮತ್ತು ಗ್ಯಾರಿ ಕರ್ಸ್ಟನ್ ಅವರಂತಹ ವಿದೇಶಿ ತರಬೇತುದಾರರೊಂದಿಗೆ ಟೀಮ್ ಇಂಡಿಯಾದ ಅನುಭವ ಉತ್ತಮವಾಗಿತ್ತು. ಅವರು ತಂಡವನ್ನು ಟೆಸ್ಟ್ ಪಂದ್ಯ ಮತ್ತು ವಿಶ್ವಕಪ್ ವಿಜಯಕ್ಕೆ ಮುನ್ನಡೆಸಿದರು. ಆದರೆ, ಡಂಕನ್ ಫ್ಲೆಚರ್ ಅವರು ಅಪೇಕ್ಷಿಸಿದ ಫಲಿತಾಂಶ ನೀಡಲಿಲ್ಲ.
ಲಕ್ಷ್ಮಣ್ ಅಸಂಭವ: ಸ್ಪೋರ್ಟ್‌ಸ್ಟಾರ್ ವರದಿ ಪ್ರಕಾರ, ರಾಹುಲ್ ದ್ರಾ ವೈಯಕ್ತಿಕ ಕಾರಣಗಳಿಗಾಗಿ ಮತ್ತೊಂದು ವಿಸ್ತರಣೆ ಬೇಡ ಎಂದು ಮಂಡಳಿಗೆ ಮೊದಲೇ ತಿಳಿಸಿದ್ದರು. ಕೆಲವು ಹಿರಿಯರು ಟೆಸ್ಟ್ ತಂಡದಲ್ಲಿ ಮುಂದುವರಿಯಲು ವಿನಂತಿಸಿದ್ದರು. ಆದರೆ, ಅವರು ನಿರಾಕರಿಸಿದರು ಎಂದು ವರದಿ ಹೇಳಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಅವರು ಈ ಹುದ್ದೆಗೆ ಆಸಕ್ತರಾಗಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ, ಅವರು ಕೂಡ ಕಣಕ್ಕೆ ಇಳಿಯುವ ಸಾಧ್ಯತೆಯಿಲ್ಲ ಎಂದು ವರದಿ ಹೇಳಿದೆ.
ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಅವರ ಜೋಡಿಯು ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ನಲ್ಲಿ ಐತಿಹಾಸಿಕ ವಿಜಯ ಗಳಿಸಿದೆ. ಆದರೆ, ಐಸಿಸಿ ಟ್ರೋಫಿಯಲ್ಲಿ ವಿಫಲರಾದರು. ಅದೇ ರೀತಿ, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೋಡಿ ಶ್ಲಾಘನೀಯ ಸಾಧನೆ ಮಾಡಿದೆ. ಇವರು ಕೂಡ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.
ವಿದೇಶಿ ಕೋಚ್ ದ್ರಾವಿಡ್ ಅವರ ಉತ್ತರಾಧಿಕಾರಿ ಆಗುತ್ತಾರೆಯೇ ಎಂದು ಕಾಯ್ದುನೋಡಬೇಕಿದೆ.