ಸ್ಪೀಕರ್ ಹುದ್ದೆ: ಸಂಭವನೀಯರ ಪೈಕಿ ದಗ್ಗುಬಾಟಿ ಪುರಂದೇಶ್ವರಿ
x

ಸ್ಪೀಕರ್ ಹುದ್ದೆ: ಸಂಭವನೀಯರ ಪೈಕಿ ದಗ್ಗುಬಾಟಿ ಪುರಂದೇಶ್ವರಿ


ಮೋದಿ 3.0 ಸಂಪುಟಕ್ಕೆ ಎಪ್ಪತ್ತೆರಡು ಸಚಿವರು ಸೇರ್ಪಡೆಯಾಗಿದ್ದಾರೆ. ಈಗ, ಎಲ್ಲರ ಕಣ್ಣುಗಳು ಸ್ಪೀಕರ್ ಸ್ಥಾನದ ಮೇಲೆ ಬಿದ್ದಿದ್ದು, ಹಲವು ಹೆಸರುಗಳು ಸುತ್ತು ಹಾಕುತ್ತಿವೆ. ಬಿಜೆಪಿ ಸ್ವಂತ ಬಲವಿಲ್ಲದ ಕಾರಣ, ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾ ದಳ ಯುನೈಟೆಡ್ (ಜೆಡಿಯು) ಅವಲಂಬಿಸಿದೆ.

ಬಿಜೆಪಿ ಬಿಟ್ಟುಕೊಡಲು ಸಿದ್ಧವಿಲ್ಲ: ಬಿಜೆಪಿ ಸ್ಪೀಕರ್‌ ಸ್ಥಾನ ಬಿಟ್ಟುಕೊಡಲು ಸಿದ್ಧವಿಲ್ಲ ಎಂದು ವರದಿಯಾಗಿದೆ. ಸ್ಪೀಕರ್ ಹುದ್ದೆಗೆ ಸಂಭವನೀಯ ಅಭ್ಯರ್ಥಿಯಾಗಿ ಕೇಳಿಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಒಂದು- ಆಂಧ್ರಪ್ರದೇಶದ ಬಿಜೆಪಿ ಮುಖ್ಯಸ್ಥೆ ದಗ್ಗುಬಾಟಿ ಪುರಂದೇಶ್ವರಿ.

ರಾಜಮಂಡ್ರಿಯಿಂದ ಆಯ್ಕೆಯಾಗಿರುವ ಪುರಂದೇಶ್ವರಿ, ಸಂಪುಟವನ್ನು ಸೇರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರನ್ನು ಪರಿಗಣಿ ಸದೆ ಇರುವುದರಿಂದ, ಅವರು ಸ್ಪೀಕರ್‌ ಸ್ಥಾನಕ್ಕೆ ಸ್ಪರ್ಧಿಯಾಗಿರಬಹುದು ಎಂಬ ವದಂತಿಯಿದೆ. ಆಂಧ್ರಪ್ರದೇಶದಲ್ಲಿ ಟಿಡಿಪಿ, ಜನಸೇನೆಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವಲ್ಲಿ ಮೂರು ಬಾರಿ ಸಂಸದೆಯಾಗಿರುವ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದರಿಂದ 2024 ರ ಚುನಾವಣೆಯಲ್ಲಿ ಎನ್‌ಡಿಎಗೆ ಅಪಾರ ಲಾಭವುಂಟಾಯಿತು.

ಯಾಕೆ ಪುರಂದೇಶ್ವರಿ?: ರಾಜ್ಯದ 175 ವಿಧಾನಸಭೆ ಸ್ಥಾನಗಳಲ್ಲಿ ಎನ್‌ಡಿಎ 164 ಸ್ಥಾನ ಗೆದ್ದುಕೊಂಡಿದೆ. ಜೊತೆಗೆ, ಟಿಡಿಪಿ 16, ಬಿಜೆಪಿ 3 ಮತ್ತು ಜನಸೇನೆಯ ಎರಡು ಸೇರಿದಂತೆ 21 ಎಂಪಿ ಸ್ಥಾನ ಗಳಿಸಿದೆ. ಎನ್‌ಡಿಎಯಲ್ಲಿ ಬಿಜೆಪಿ ನಂತರ ಟಿಡಿಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಪುರಂದೇಶ್ವರಿ ಅವರು ಸ್ಪೀಕರ್ ಆಗುವುದರಿಂದ, ಬಿಜೆಪಿಗೆ ಹಲವು ಅನುಕೂಲಗಳಿವೆ. ಇದರಿಂದ ಟಿಡಿಪಿಗೆ ಖುಷಿಯಾಗಲಿದೆ. ಪುರಂದೇಶ್ವರಿ ಅವರು ಟಿಡಿಪಿ ಸಂಸ್ಥಾಪಕ ಎನ್‌.ಟಿ. ರಾಮರಾವ್ ಅವರ ಪುತ್ರಿ ಮತ್ತು ಟಿಡಿಪಿ ಮುಖ್ಯಸ್ಥ- ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸೊಸೆ. ನಾಯ್ಡು ಅವರ ಪತ್ನಿ ಮತ್ತು ಪುರಂದೇಶ್ವರಿ ಸಹೋದರಿಯರು.

ಪುರಂದೇಶ್ವರಿ ಕುರಿತು: ಪುರಂದೇಶ್ವರಿ ಅವರು 2004ರಲ್ಲಿ ಬಾಪಟ್ಲಾ, 2009ರಲ್ಲಿ ವಿಶಾಖಪಟ್ಟಣಂ ಮತ್ತು 2024ರಲ್ಲಿ ರಾಜಮಂಡ್ರಿಯಿಂದ ಆಯ್ಕೆಯಾಗಿದ್ದಾರೆ. ಆಂಧ್ರದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿರುವಾಗ ಅಧಿಕಾರ ವಹಿಸಿಕೊಂಡ ಅವರ ಉಸ್ತುವಾರಿಯಲ್ಲಿ ಪಕ್ಷವು ಸ್ಪರ್ಧಿಸಿದ 10 ರಲ್ಲಿ ಎಂಟು ಶಾಸಕ ಸ್ಥಾನ ಹಾಗೂ ಆರರಲ್ಲಿ ಮೂರು ಎಂಪಿ ಸ್ಥಾನಗಳನ್ನು ಗೆದ್ದಿದೆ.

ಇಲ್ಲಿಯವರೆಗೆ ಆಂಧ್ರದಿಂದ ಸ್ಪೀಕರ್ ಸ್ಥಾನ ಅಲಂಕರಿಸಿರುವ ಏಕೈಕ ವ್ಯಕ್ತಿ- ಅಮಲಾಪುರಂನ ಮಾಜಿ ಸಂಸದ ಗಂಟಿ ಮೋಹನ ಚಂದ್ರ ಬಾಲಯೋಗಿ(ಜಿ.ಎಂ.ಸಿ. ಬಾಲಯೋಗಿ).

ಸ್ಪೀಕರ್ ಆಯ್ಕೆ ಹೇಗೆ?: ಹೊಸ ಲೋಕಸಭೆ ಮೊದಲ ಬಾರಿಗೆ ಸಭೆ ಸೇರುವ ಮುನ್ನವೇ ಸ್ಪೀಕರ್ ಸ್ಥಾನ ತೆರವಾಗುತ್ತದೆ ಎಂದು ಸಂವಿಧಾನ ಹೇಳುತ್ತದೆ. ರಾಷ್ಟ್ರಪತಿ ಹಂಗಾಮಿ ಸ್ಪೀಕರ್ ನೇಮಿಸುತ್ತಾರೆ. ಅವರು ಸಂಸದರಿಗೆ ಪ್ರಮಾಣ ವಚನ ಬೋಧಿಸುತ್ತಾರೆ. ನಂತರ ಸರಳ ಬಹುಮತದಿಂದ ಸ್ಪೀಕರ್ ಆಯ್ಕೆಯಾಗುತ್ತಾರೆ. ಕಳೆದ ಎರಡು ಲೋಕಸಭೆಗಳಲ್ಲಿ ಸುಮಿತ್ರಾ ಮಹಾಜನ್ ಮತ್ತು ಓಂ ಬಿರ್ಲಾ ಸ್ಪೀಕರ್‌ಗಳಾಗಿದ್ದರು.

ಸ್ಪೀಕರ್ ಹುದ್ದೆ ಮೇಲೆ ಕಣ್ಣಿಟ್ಟಿರುವುದೇಕೆ?: ಟಿಡಿಪಿ ಮತ್ತು ಜೆಡಿಯು ತಲಾ ಎರಡು ಸಚಿವ ಸ್ಥಾನ ಪಡೆದುಕೊಂಡಿವೆ. ಹೀಗಿರುವಾಗ, ಸ್ಪೀಕರ್ ಹುದ್ದೆ ಮೇಲೆ ಕಣ್ಣಿಟ್ಟಿರುವುದು ಏಕೆ?

ಪಕ್ಷಾಂತರ ನಿಷೇಧ ಕಾನೂನಿನ ಹಿನ್ನೆಲೆಯಲ್ಲಿ ಸ್ಪೀಕರ್ ಹುದ್ದೆ ಅತ್ಯಂತ ನಿರ್ಣಾಯಕವಾದುದು. ಇತ್ತೀಚೆಗೆ ಆಡಳಿತ ಪಕ್ಷಗಳಲ್ಲಿ ದಂಗೆ ಸಾಮಾನ್ಯವಾಗಿದೆ. ಇದರಿಂದ ದೊಡ್ಡ ಪಕ್ಷಗಳಲ್ಲಿ ಒಡಕುಂಟಾಗಿ, ಸರ್ಕಾರ ಉರುಳುತ್ತದೆ. ಇಂಥ ಸಂದರ್ಭದಲ್ಲಿ ಸ್ವಪಕ್ಷವನ್ನು ತೊರೆದ ಅಥವಾ ಪಕ್ಷದ ವಿಪ್‌ ಗೆ ವಿರುದ್ಧ ಮತ ಚಲಾಯಿಸಿದ ಶಾಸಕರು ಅನರ್ಹರಾಗುತ್ತಾರೆ. ಆದರೆ, ಪಕ್ಷವೊಂದರ 2/3ರಷ್ಟು ಶಾಸಕರು ಮತ್ತೊಂದು ಪಕ್ಷದೊಂದಿಗೆ ʻವಿಲೀನಗೊಂಡರೆʼ, ಸಂವಿಧಾನದ 10 ನೇ ಪರಿಶಿಷ್ಟ ಅವರನ್ನು ಅನರ್ಹತೆಯಿಂದ ರಕ್ಷಿಸುತ್ತದೆ. ಇಂಥ ಸಂದರ್ಭದಲ್ಲಿ,ʼ ಪಕ್ಷಾಂತರದ ಆಧಾರದ ಮೇಲೆ ಸದಸ್ಯರ ಅನರ್ಹತೆಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ಧರಿಸುವಲ್ಲಿ ಸಭಾಪತಿ ಅಥವಾ ಸಭಾಧ್ಯಕ್ಷರಿಗೆ ಸಂಪೂರ್ಣ ಅಧಿಕಾರವಿದೆʼ ಎಂದು ಕಾನೂನು ಹೇಳುತ್ತದೆ. ನಾಯ್ಡು ಮತ್ತು ಕುಮಾರ್ ಇಬ್ಬರೂ ಹಠಾತ್ ದಂಗೆಯನ್ನು ತಡೆಯಲು ಸ್ಪೀಕರ್ ಹುದ್ದೆಯನ್ನು ʻವಿಮೆʼ ಎಂದುಕೊಂಡಿದ್ದಾರೆ.

Read More
Next Story