ನೇಪಾಳಿ ಯುವಕರಲ್ಲಿ ಹೋರಾಟದ ಕಿಚ್ಚು ಹಚ್ಚಿದ ಯುವಕ: ಯಾರೀ  ಸುಡಾನ್ ಗುರುಂಗ್?
x

ನೇಪಾಳಿ ಯುವಕರಲ್ಲಿ ಹೋರಾಟದ ಕಿಚ್ಚು ಹಚ್ಚಿದ ಯುವಕ: ಯಾರೀ ಸುಡಾನ್ ಗುರುಂಗ್?

ಸಾಮಾಜಿಕ ಮಾಧ್ಯಮದ ಮೇಲೆ ನಿಷೇಧ ಹೇರಿದ ಏಕಾಏಕಿ ನಿರ್ಧಾರದಿಂದ ಯುವಜನತೆ ಸಾಗರೋಪಾದಿಯಲ್ಲಿ ಬೀದಿಗಳಿದು ಠಳಾಯಿಸಿದರು. ಇಡೀ ನೇಪಾಳವನ್ನೇ ಅಲುಗಾಡಿಸಿದ ಝೆನ್-ಝೆಡ್ ಯುವಪಡೆಯ ಹಿಂದಿನ ರೂವಾರಿಯಾದರೂ ಯಾರು?


Click the Play button to hear this message in audio format

ಅಕ್ಷರಶಃ ಅಶಾಂತಿಯ ಗೂಡಾಗಿರುವ ನೇಪಾಳ ತತ್ತರಿಸಿಹೋಗಿದೆ. ಇತ್ತೀಚಿನ ದಶಕಗಳಲ್ಲೇ ಇಂತಹುದೊಂದು ಅರಾಜಕತೆಯನ್ನು ರಾಷ್ಟ್ರ ಕಂಡಿದಿಲ್ಲ. ಇದು ನಿಜಕ್ಕೂ ಭೀಭತ್ಸ. ಹಿಂಸಾತ್ಮಕ ಪ್ರತಿಭಟನೆ ಹಬ್ಬಿದ ತೀಕ್ಷ್ಣತೆಗೆ ಬೆಚ್ಚಿದ ಕೆ.ಪಿ. ಶರ್ಮಾ ಓಲಿ ಅವರು ಪ್ರಧಾನಿ ತಕ್ಷಣ ರಾಜೀನಾಮೆ ನೀಡಿದ್ದು ಮಾತ್ರವಲ್ಲದೆ ಪಲಾಯನಹೂಡಬೇಕಾಯಿತು. ಯುವಕರ ಆಕ್ರೋಶ ಮುಗಿಲು ಮುಟ್ಟಲು ಕಾರಣವಾಗಿದ್ದು 26 ಸಾಮಾಜಿಕ ಮಾಧ್ಯಮಗಳನ್ನು ಏಕಾಏಕಿ ನಿಷೇಧಿಸುವ ಸರ್ಕಾರದ ನಿರ್ಧಾರ.

ಇದರ ಪರಿಣಾಮ ಏನಾಯಿತು ಎಂಬುದು ಈಗ ಇತಿಹಾಸ. ಕಠ್ಮಂಡು ಮತ್ತು ಇತರ ನಗರದ ಬೀದಿಗಳು ಯುದ್ಧಭೂಮಿಗಳಾಗಿ ಮಾರ್ಪಟ್ಟವು. ಜನ ಅಧಿಕಾರಿಗಳನ್ನು, ಮಂತ್ರಿಗಳನ್ನು ಅಟ್ಟಾಡಿಸಿದರು.

ಈ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿ ನಿಂತವರು ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರು. ಇದು ಹೊತ್ತಿಸಿದ ಕಿಡಿ ಕೆಲವೇ ಗಂಟೆಗಳಲ್ಲಿ ಕಾಡ್ಗಿಚ್ಚಾಯಿತು, ಮಾರಣಾಂತಿಕವಾಯಿತು. ಈ ಹಿಂಸಾಚಾರದಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಜಧಾನಿಯಲ್ಲಿ ಪ್ರತಿಭಟನೆ, ದೊಂಬಿ-ದಳ್ಳುರಿಯ ಹೊಗೆ ದಟ್ಟವಾಗಿ ಆವರಿಸಿದ್ದರಿಂದ ಕಠ್ಮಂಡುವಿನ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶೀಯ ವಿಮಾನಗಳ ಹಾರಾಟಕ್ಕೆ 24 ಗಂಟೆಗಳ ಕಾಲ ನಿರ್ಬಂಧ ವಿಧಿಸಲಾಯಿತು.

ಬೀದಿಗಿಳಿದ ಯುವ ಪಡೆ

ಸೆಪ್ಟೆಂಬರ್ 4ರಂದು ಸರ್ಕಾರವು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್, ಯೂಟ್ಯೂಬ್ ಮತ್ತು ಎಕ್ಸ್ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಲು ನಿರ್ಧರಿಸಿದಾಗ ಪ್ರತಿಭಟನೆ ಈ ಮಟ್ಟಿಗೆ ತಾರಕಕ್ಕೇರುತ್ತದೆ ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಇದು ಜಾಲತಾಣಗಳ ಮೇಲಲ್ಲ, ಅಸಲಿಗೆ ನಮ್ಮ ಮೇಲೇ ಹೇರಿದ ನಿಷೇಧ ಎಂದು ಭಾವಿಸಿದ ನೇಪಾಳಿ ಯುವಕರು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಬೀದಿಗಿಳಿದರು..

ಪ್ರತಿಭಟನಾಕಾರರು ವಿಪಿಎನ್ ತಾಂತ್ರಿಕತೆಯ ಸಹಾಯ ಬಳಸಿಕೊಂಡು ನಿರ್ಬಂಧಗಳನ್ನು ಬಹುಬೇಗ ಬೈಪಾಸ್ ಮಾಡಿದರು, ಇದರಿಂದ ನಿಷೇಧವೇ ಪ್ರತಿರೋಧಕ್ಕೆ ಇಂಧನವಾಯಿತು. ಶಾಂತಿಯುತ ಮೆರವಣಿಗೆಗಳಾಗಿ ಆರಂಭವಾದ ಪ್ರತಿಭಟನೆಗಳು ಹಿಂಸಾತ್ಮಕ ಘರ್ಷಣೆಗಳಾಗಿ ಉಲ್ಬಣಗೊಳ್ಳಲು ಬಹಳ ಕಾಲ ಬೇಕಾಗಲಿಲ್ಲ. ಈ ಆಕ್ರೋಶ ನೇಪಾಳದ ಸಂಸತ್ ಭವನದ ಮೇಲೆ ತಿರುಗಿತು. ಬೆಂಕಿ ಹಚ್ಚಿದರು, ಕಲ್ಲು ತೂರಾಟ ನಡೆಸಿದರು. ಪೀಠೋಪಕರಣಗಳನ್ನು ಎಳೆದು ತಂದು ಬೆಂಕಿ ಹಂಚಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಜಲಫಿರಂಗಿ, ಅಶ್ರುವಾಯು ಸಿಡಿಸಿದರು. ಕೊನೆಗೆ ಗೋಲೀಬಾರ್ ನಡೆಸಿದರು.

ಆಂದೋಲನದ ಹಿಂದಿನ ಗಟ್ಟಿ ಧ್ವನಿ

ಈ ಇಷ್ಟೂ ಯುವ ಆಂದೋಲನದ ಕೇಂದ್ರಬಿಂದು 36 ವರ್ಷದ ಸುಡಾನ್ ಗುರುಂಗ್, ಇವರು ಯುವಕರೇ ತುಂಬಿರುವ ‘ಹಮಿ ನೇಪಾಳ' ಸಂಘಟನೆಯನ್ನು ಹುಟ್ಟುಹಾಕಿದವರು. ಅದರ ಅಧ್ಯಕ್ಷರು. ಹಿಂದೆ ಈ ಸಂಘಟನೆಯ ಕಾರ್ಯಕ್ರಮ ವ್ಯವಸ್ಥಾಪಕರಾಗಿದ್ದ ಗುರುಂಗ್ ಅವರ ಬದುಕು ತಿರುವುದು ಪಡೆದಿದ್ದು 2015ರ ಭೂಕಂಪದ ನಂತರ. ಆ ದುರಂತದಲ್ಲಿ ಅವರು ತಮ್ಮ ಮಗುವನ್ನು ಕಳೆದುಕೊಂಡಿದ್ದರು. ನಂತರ ಪಕ್ಷ ರಾಜಕಾರಣ ತೊರೆದು ಅವರು 'ಹಮಿ ನೇಪಾಳ'ವನ್ನು ಸ್ಥಾಪಿಸಿದರು. ಇದು 2020ರಲ್ಲಿ ಒಂದು ಎನ್ಜಿಒ (NGO) ಆಗಿ ಮಾರ್ಪಟ್ಟಿತು.

ಅಲ್ಲಿಂದ ಮುಂದೆ ಸುಡಾನ್ ಅವರು ನೇಪಾಳದ ಯುವ ಪೀಳಿಗೆಯ ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದರು. ಭ್ರಷ್ಟಾಚಾರ, ಅಸಮಾನತೆ ಮತ್ತು "ನೆಪೋ ಕಿಡ್ಸ್" ಸಂಸ್ಕೃತಿ-ಅಂದರೆ ರಾಜಕೀಯ ಗಣ್ಯರ ಮಕ್ಕಳು ಪಡೆಯುವ ವಿಶೇಷ ಸವಲತ್ತುಗಳು-ಇವುಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಸಂಘಟಿಸಿದರು. ಸಾಮಾಜಿಕ ಮಾಧ್ಯಮ ನಿಷೇಧದ ನಂತರ ಪ್ರತಿಭಟನೆಗೆ ನೀಡಿದ ಅವರ ಕರೆ ವೈರಲ್ ಆಯಿತು. ಸಾವಿರಾರು ಜನ ಏಕಾಏಕಿ ಬೀದಿಗಿಳಿಯುವಂತೆ ಮಾಡಿತು.

"ನಮ್ಮ ಸ್ವಾತಂತ್ರ್ಯವನ್ನೇ ಕಸಿದುಕೊಂಡರೆ ಯುವಕರು ಸುಮ್ಮನಿರುವುದಿಲ್ಲ. ಇದು ನಮ್ಮ ಭವಿಷ್ಯಕ್ಕಾಗಿ ನಡೆಸುತ್ತಿರುವ ಹೋರಾಟ," ಎಂದು ಗುರುಂಗ್ ತಮ್ಮ ಭಾಷಣಗಳಲ್ಲಿ ಒಂದರಲ್ಲಿ ಘೋಷಿಸಿದರು. ಅದು ದೇಶದಾದ್ಯಂತ ವೈರಲ್ ಆಯಿತು.

ಕಾಡ್ಗಿಚ್ಚಿನಂತೆ ಹಬ್ಬಿದ ಕಿಡಿ

ಪ್ರತಿಭಟನೆಗಳು ಕಠ್ಮಂಡುವಿನಿಂದ ಪೋಖರಾ, ಬುತ್ವಾಲ್, ಭರತ್ಪುರ ಮತ್ತು ಇಟಾಹರಿಗೆ ವ್ಯಾಪಿಸುತ್ತಿದ್ದಂತೆ, ಅದರಿಂದಾದ ರಾಜಕೀಯ ಪರಿಣಾಮ ಎಷ್ಟು ತೀವ್ರತರದ್ದು ಎಂಬುದು ತಕ್ಷಣವೇ ಗೋಚರಿಸಿತು. ಮೊದಲು ನೇಪಾಳದ ಗೃಹ ಸಚಿವರು ರಾಜೀನಾಮೆ ನೀಡಿದರು, ಅವರನ್ನು ಅನುಸರಿಸಿ ಕೃಷಿ ಮತ್ತು ಆರೋಗ್ಯ ಸಚಿವರು ಕೂಡ ಪದತ್ಯಾಗ ಮಾಡಿದರು. ಸರ್ಕಾರ ತರಾತುರಿಯಲ್ಲಿ ಸಾಮಾಜಿಕ ಮಾಧ್ಯಮ ನಿಷೇಧ ಹಿಂಪಡೆಯಿತು. ಆಗ ಕಾಲ ಮಿಂಚಿಹೋಗಿತ್ತು. ಪ್ರತಿಭಟನಾಕಾರರು ಪ್ರಧಾನಿ ಓಲಿ ಅವರ ರಾಜೀನಾಮೆಗೆ ಒತ್ತಾಯಿಸುವುದನ್ನು ನಿಲ್ಲಿಸಲಿಲ್ಲ.

ಓಲಿ ಇನ್ನೇನು ದೇಶ ತೊರೆಯಲು ಸಿದ್ಧತೆ ನಡೆಸಿದ್ದಾರೆ ಎಂಬ ವರದಿಗಳ ನಡುವೆಯೇ ಅವರು ಅಧಿಕಾರ ತ್ಯಜಿಸಿದರು. ಸೇನಾ ಹೆಲಿಕಾಪ್ಟರ್ಗಳು ಸಚಿವರನ್ನು ರಾಜಧಾನಿಯಿಂದ ಸ್ಥಳಾಂತರಿಸಿದವು, ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮ ಕೈಗೊಂಡ ಕಾರಣ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಯಿತು.

ಹೊಸ ಅಧ್ಯಾಯ ಬರೆದ ಝೆನ್-ಝೆಡ್ ಯುವಸೇನೆ

ಸಾಮಾಜಿಕ ಮಾಧ್ಯಮದ ಮೂಲಕ ಹೊತ್ತಿಕೊಂಡ ಒಂದು ಚಿಕ್ಕ ಪ್ರತಿಭಟನೆಯ ಕಿಡಿ ನೇಪಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಬರೆಯಿತು. ಒಮ್ಮೆ ಈವೆಂಟ್ ಮ್ಯಾನೇಜರ್ ಆಗಿದ್ದ ಸುಡಾನ್ ಗುರುಂಗ್, ನೇಪಾಳದ 'Gen Z' ಯುವಕರ ದಂಗೆಯ ಕೆಚ್ಚೆದೆಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಇದು ಕೇವಲ ಒಬ್ಬ ಪ್ರಧಾನಿಯನ್ನು ಪದಚ್ಯುತಗೊಳಿಸಿದ್ದು ಮಾತ್ರವಲ್ಲದೆ, ಇಡೀ ದೇಶವನ್ನು ಒಂದು ಮಹತ್ವದ ತಿರುವಿನಲ್ಲಿ ತಂದು ನಿಲ್ಲಿಸಿದೆ.

ನೇಪಾಳದ ರಾಜಕೀಯ ಭವಿಷ್ಯ ಏನು ಎಂಬುದು ಇನ್ನೂ ಅನಿಶ್ಚಿತ. ಆದರೆ ಈ ಒಂದು ಸಂಗತಿಯಂತೂ ಸ್ಪಷ್ಟವಾಗಿದೆ: ಅದರ ಯುವ ಪೀಳಿಗೆಗೆ ತಮ್ಮದೇ ಆದ ದನಿ ಸಿಕ್ಕಿದೆ, ಮತ್ತು ಇನ್ನು ಮುಂದೆ ಆ ದನಿಯನ್ನು ಅಷ್ಟು ಸುಲಭಕ್ಕೆ ನಿರ್ಲಕ್ಷಿಸಲು ಸಾಧ್ಯವಾಗದು ಎಂಬುದು ಮಾತ್ರ ನೂರಕ್ಕೆ ನೂರು ಸತ್ಯ.

Read More
Next Story