ಮಹಾರಾಷ್ಟ್ರ ಕಾಂಗ್ರೆಸ್ ತೊರೆದ ಸಂಜಯ್ ನಿರುಪಮ್ ಯಾರು?
ಹಿರಿಯ ನಾಯಕ ಸಂಜಯ್ ನಿರುಪಮ್ ಅವರನ್ನು ಮಹಾರಾಷ್ಟ್ರ ಕಾಂಗ್ರೆಸ್ ʻಅಶಿಸ್ತು ಮತ್ತು ಪಕ್ಷ ವಿರೋಧಿ ಚಟುವಟಿಕೆʼಗಳಿ ಗಾಗಿ ಬುಧವಾರ (ಏಪ್ರಿಲ್ 3) ಉಚ್ಛಾಟನೆ ಮಾಡಿದೆ.
ಸೀಟು ಹಂಚಿಕೆ ಮಾತುಕತೆ ಕುರಿತು ಮಹಾ ವಿಕಾಸ್ ಅಘಾಡಿ (ಎಂವಿಎ) ಮಿತ್ರ ಪಕ್ಷವಾದ ಶಿವಸೇನೆ (ಯುಬಿಟಿ) ವಿರುದ್ಧ ಟೀಕೆ ಮಾಡಿ ದ್ದರು. 2019 ರ ಚುನಾವಣೆಯಲ್ಲಿ ಸೋತ ಮುಂಬೈ ವಾಯವ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ನಿರುಪಮ್, ಒಂದು ವಾರದೊಳಗೆ ನಿರ್ಧಾರ ತೆಗೆದುಕೊಳ್ಳಬೇಕೆಂದು ಪಕ್ಷಕ್ಕೆ ಗಡುವು ನೀಡಿದ್ದರು. ಆದರೆ, ಉದ್ಧವ್ ಠಾಕ್ರೆ ಅವರ ಶಿವಸೇನೆಯು ಆ ಕ್ಷೇತ್ರಕ್ಕೆ ಅಮೋತ್ ಕೀರ್ತಿಕರ್ ಅವರನ್ನು ಘೋಷಿಸಿತು. ಕಳೆದ ಚುನಾವಣೆಯಲ್ಲಿ ಅಮೋಲ್ ಅವರ ತಂದೆ ಗಜಾನನ್ ಕೀರ್ತಿಕರ್ ಅವರು 2.6 ಲಕ್ಷ ಮತಗಳಿಂದ ನಿರುಪಮ್ ಅವರನ್ನು ಸೋಲಿಸಿದ್ದರು.
ನಿರುಪಮ್ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಬಹುದು ಎಂಬ ವದಂತಿ ಹರಿದಾಡುತ್ತಿದೆ. 1990 ರ ದಶಕದಲ್ಲಿ ಬಾಳಾ ಠಾಕ್ರೆ ನೇತೃತ್ವದ ಶಿವಸೇನೆಯೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರಿಂದ, ನಿರುಪಮ್ ಸೇನೆಗೆ ಮರಳಿದರೆ ಅದು ಮನೆಗೆ ಮರಳಿದಂತೆ ಆಗಲಿದೆ.
ಪತ್ರಕರ್ತ-ರಾಜಕಾರಣಿ: 1965ರಲ್ಲಿ ಬಿಹಾರದ ರೋಹ್ತಾಸ್ ನಲ್ಲಿ ಜನಿಸಿದ ನಿರುಪಮ್, 1986 ರಲ್ಲಿ ಪತ್ರಕರ್ತರಾಗಿ ವೃತ್ತಿಜೀವನ ಪ್ರಾರಂಭಿಸಿದರು. 1988 ರಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಗುಂಪಿನ ಪ್ರಕಟಣೆ ಜನಸತ್ತಾ ಸೇರಿದರು. ಚಲನಚಿತ್ರ ಮತ್ತು ನಟ ದೇವ್ ಆನಂದ್ ಅವರ ಅಭಿಮಾನಿಯಾದ ಅವರು ಲೇಖಕ ರಣಬೀರ್ ಪುಷ್ಪ್ ಜೊತೆಗೆ ʻರಿಟರ್ನ್ ಆಫ್ ಜ್ಯುವೆಲ್ ಥೀಫ್ (1996)ʼ ಸಿನೆಮಾಕ್ಕೆ ಕಥೆ ಬರೆದಿದ್ದಾರೆ. ಇದು ಕ್ಲಾಸಿಕ್ ಚಿತ್ರ ʻಜ್ಯುವೆಲ್ ಥೀಫ್ʼ (1967)ನ ವಿಫಲ ಅವತರಣಿಕೆಯಾಗಿದೆ. ಲೋಕಸತ್ತಾದಲ್ಲಿ ಕೆಲಸ ಮಾಡುತ್ತಿರುವಾಗ ಶಿವಸೇನಾ (ಯುಬಿಟಿ) ವಕ್ತಾರ ಮತ್ತು ಪಕ್ಷದ ರಾಜ್ಯಸಭೆ ಸದಸ್ಯ ಸಂಜಯ್ ರಾವುತ್ ಅವರ ಸಂಪರ್ಕಕ್ಕೆ ಬಂದರು. ರಾವತ್ ಸಾಮ್ನಾ (ಶಿವಸೇನೆಯ ಮುಖವಾಣಿ)ಕ್ಕೆ ಬಂದಾಗ, ಹಿಂದಿ ಆವೃತ್ತಿ ದೋಪಹರ್ ಕಾ ಸಾಮ್ನಾವನ್ನು ಮುನ್ನಡೆಸಲು ಬನ್ನಿ ಎಂದು ನಿರುಪಮ್ ಅವರನ್ನು ಆಹ್ವಾನಿಸಿದರು. 1993 ರಲ್ಲಿ ನಿರುಪಮ್ ದೋಪಹರ್ ಕಾ ಸಾಮ್ನಾದ ಕಾರ್ಯ ನಿರ್ವಾಹಕ ಸಂಪಾದಕರಾಗಿ ಸೇರಿಕೊಂಡರು. ಶಿವಸೇನೆ ಅವರನ್ನು 1996 ರಲ್ಲಿ ರಾಜ್ಯಸಭೆಗೆ ಕಳುಹಿಸಿತು. 2005ರಲ್ಲಿ ಕಾಂಗ್ರೆಸ್ ಸೇರಿದ ಅವರನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ(ಎಂಪಿಸಿಸಿ)ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಕುಸಿದ ರಾಜಕೀಯ ಗ್ರಾಫ್: 2009ರಲ್ಲಿ ಉತ್ತರ ಮುಂಬೈ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಹಿರಿಯ ನಾಯಕ ರಾಮ್ ನಾಯಕ್ ಅವರನ್ನು ಸುಮಾರು 6,000 ಮತಗಳ ಅಂತರದಿಂದ ಸೋಲಿಸಿ, ಸಂಸದರಾಗಿ ಆಯ್ಕೆಯಾದರು. ಆದರೆ, 2014ರಲ್ಲಿ ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ 4.46 ಲಕ್ಷ ಮತಗಳಿಂದ ಸೋಲುಂಡರು. 2017 ರ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ರಾಜಕೀಯ ಗ್ರಾಫ್ ಕುಸಿಯಲಾರಂಭಿಸಿತು.
ಮಹಾ ವಿಕಾಸ್ ಅಘಾಡಿ (ಎಂವಿಎ) ರಚಿಸಲು 2020 ರಲ್ಲಿ ಶಿವಸೇನೆಯೊಂದಿಗೆ ಕೈಜೋಡಿಸಿದ ಕಾಂಗ್ರೆಸ್ ಕ್ರಮವನ್ನು ನಿರುಪಮ್ ವಿರೋಧಿಸಿದರು. ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತು ಶಿವಸೇನೆಯ ಬೇಡಿಕೆಗಳಿಗೆ ಕಾಂಗ್ರೆಸ್ ಮಣಿಯಬಾರದು ಎಂದು ವಾದಿಸಿದ್ದರು.