ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪೂರ್ವಾಪರ
x
ಸಿಎಎ ಡಿಸೆಂಬರ್ 2019- ಮಾರ್ಚ್ 2020 ರ ಅವಧಿಯಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಹುಟ್ಟುಹಾಕಿತು; ಕನಿಷ್ಠ 60 ಜನರು ಪ್ರಾಣ ಕಳೆದುಕೊಂಡರು.

ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪೂರ್ವಾಪರ


ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆಗಳಿಲ್ಲದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲು ದಾರಿ ಮಾಡಿಕೊಡುವ ಪೌರತ್ವ (ತಿದ್ದುಪಡಿ) ಕಾಯಿದೆ 2019 ರ ನಿಯಮಗಳ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಮಾರ್ಚ್‌ 11 ರಂದು ಹೊರಡಿಸಿದೆ. ಲೋಕಸಭೆ ಚುನಾವಣೆಗೆ ಮುನ್ನ ಬಂದಿರುವ ಈ ನಿರ್ಧಾರವು ಆಡಳಿತಾರೂಢ ಬಿಜೆಪಿ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸುತ್ತದೆ. ವ್ಯಾಪಕ ಪ್ರತಿಭಟನೆ ಸೇರಿದಂತೆ ಹಲವು ಕಾರಣಗಳಿಂದಾಗಿ, ಸರ್ಕಾರ ಈ ಕಾನೂನಿನ ಅನುಷ್ಠಾನವನ್ನು ಮುಂದೂಡಿತ್ತು.

ಸಿಎಎ ಎಂದರೇನು?: 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಸಿಎಎಯನ್ನು ರೂಪಿಸಲಾಯಿತು. ಹೊಸ ಶಾಸನವು ಡಿಸೆಂಬರ್ 31, 2014 ರೊಳಗೆ ದೇಶವನ್ನು ಪ್ರವೇಶಿಸಿದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ನರೇಂದ್ರ ಮೋದಿ ಅವರ ಸರ್ಕಾರ ಪೌರತ್ವ (ತಿದ್ದುಪಡಿ) 2016 ಮಸೂದೆಯನ್ನು ಲೋಕಸಭೆಯಲ್ಲಿ ಜುಲೈ 19, 2016 ರಂದು ಪರಿಚಯಿಸಿತು. ಆನಂತರ ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಪರಾಮರ್ಶನಕ್ಕೆ ಕಳಿಸಲಾಯಿತು, ಸಮಿತಿ ಜನವರಿ 7, 2019 ರಂದು ತನ್ನ ವರದಿ ಸಲ್ಲಿಸಿತು. 2019 ರ ಜನವರಿ 8 ರಂದು ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು. ಆದರೆ, ಕೆಲವು ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆಗಳಿಂದ ರಾಜ್ಯಸಭೆ ಮಸೂದೆಯನ್ನು ಅಂಗೀಕರಿಸಲಿಲ್ಲ. ಕೆಳಮನೆ ವಿಸರ್ಜನೆಯಿಂದ ಕಾನೂನು ರದ್ದಾಯಿತು.

ಪುನಹ ಪರಿಚಯಿಸಿದ್ದು ಯಾವಾಗ?: 2019 ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಮರಳಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ಪುನಃ ಪರಿಚಯಿಸಿದರು. ಮಸೂದೆ ಡಿಸೆಂಬರ್ 10, 2019 ರಂದು ಲೋಕಸಭೆಯಲ್ಲಿ ಮತ್ತು ಒಂದು ದಿನದ ನಂತರ ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಆನಂತರ ಕಾನೂನಿಗೆ ರಾಷ್ಟ್ರಪತಿಯವರ ಸಮ್ಮತಿ ಸಿಕ್ಕಿತು. ಆದರೆ, ಸರ್ಕಾರ ಕಾನೂನಿನ ನಿಯಮಗಳನ್ನು ತಿಳಿಸದ ಕಾರಣ ಜಾರಿಗೆ ಬರ ಲಿಲ್ಲ.

ಸಿಎಎಗೆ ಏಕೆ ವಿರೋಧ?: ಸಿಎಎ ಇತರ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಾದ ರೋಹಿಂಗ್ಯಾ ಮುಸ್ಲಿಮರು, ಶ್ರೀಲಂಕಾದ ತಮಿಳರು, ಉಯಿಘರ್ ಮುಸ್ಲಿಮರು ಮತ್ತು ಇತರ ನೆರೆಯ ದೇಶಗಳ ಅಹ್ಮದೀಯರನ್ನು ಪರಿಗಣಿಸುವುದಿಲ್ಲ. ಇದು ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತದೆ ಎಂಬ ಅಭಿಪ್ರಾಯವಿದೆ.

ಕಾಯಿದೆ ವಿರೋಧಿಸಿ, ಡಿಸೆಂಬರ್ 2019 ಮತ್ತು ಮಾರ್ಚ್ 2020 ರ ನಡುವೆ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಗೊಂಡಿತು; ಕನಿಷ್ಠ 60 ಜನ ಪ್ರಾಣ ಕಳೆದು ಕೊಂಡರು. ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು. ಅಲ್ಲಿರುವ ಬುಡಕಟ್ಟು ಜನರಲ್ಲಿ ವಿದೇಶಿಯರ ಒಳಹರಿವಿನ ಬಗ್ಗೆ ಆತಂಕವಿದೆ. ಕಾನೂನು ಜನಸಂಖ್ಯಾ ಅಸಮತೋಲನವನ್ನು ಉಂಟುಮಾಡುತ್ತದೆ ಎನ್ನುವುದು ಅಲ್ಲಿನವರ ಅನಿಸಿಕೆ.

ಶಾಸನ 1985ರ ಅಸ್ಸಾಂ ಒಪ್ಪಂದವನ್ನು ಉಲ್ಲಂಘಿಸುತ್ತದೆ ಎಂದು ಸ್ಥಳೀಯರು ವಾದಿಸುತ್ತಾರೆ. ಅಸ್ಸಾಂ ಒಪ್ಪಂದವು ಧರ್ಮಾತೀತವಾಗಿ ಮಾರ್ಚ್ 24, 1971ರ ನಂತರ ರಾಜ್ಯಕ್ಕೆ ಪ್ರವೇಶಿಸಿದ ವಿದೇಶಿಯರನ್ನು ಗಡಿಪಾರು ಮಾಡುವುದನ್ನು ಕಡ್ಡಾಯಗೊಳಿಸುತ್ತದೆ.

ಅನುಷ್ಠಾನ ವಿಳಂಬಗೊಂಡಿದ್ದು ಏಕೆ?;

ಕಾಯಿದೆ ಇದು ಅಂಗೀಕಾರಗೊಂಡು ಐದು ವರ್ಷ ಕಳೆದಿದ್ದರೂ, ಈಶಾನ್ಯದಲ್ಲಿ ವ್ಯಾಪಕ ಪ್ರತಿಭಟನೆಯಿಂದಾಗಿ ಜಾರಿಗೆ ತರಲು ಕೇಂದ್ರ ಕ್ರಮ ತೆಗೆದುಕೊಂಡಿಲ್ಲ. ವಿಳಂಬಕ್ಕೆ ಮೂರು ಕಾರಣಗಳಿವೆ- ಪಕ್ಷದ ಅಸ್ಸಾಂ ಘಟಕದಿಂದ ಪ್ರಬಲ ಆಕ್ಷೇಪ, ಬಂಗಾಳದಲ್ಲಿ ಚುನಾವಣೆಯಲ್ಲಿ ಸಂಭವನೀಯ ಹಿನ್ನಡೆಯ ಆತಂಕ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಕಾನೂನು ಬಗ್ಗೆ ಬಾಂಗ್ಲಾ ದೇಶಿಯರ ಅನಾದರ. ಸ್ವದೇಶಿಯರಲ್ಲದವರನ್ನು ಈವರೆಗೆ ವಿದೇಶಿಯರ ಕಾಯಿದೆ 1946 ಮತ್ತು ಪಾಸ್ಪೋರ್ಟ್ ಕಾಯಿದೆ 1967 ಅಡಿಯಲ್ಲಿ ನಿರ್ವಹಿಸಲಾಗುತ್ತಿತ್ತು.

ನಿರಾಶ್ರಿತರ ಬಗ್ಗೆ ದೇಶದ ನಿಲುವೇನು?:

1951 ರ ವಿಶ್ವ ಸಂಸ್ಥೆಯ ನಿರಾಶ್ರಿತರ ಸಮಾವೇಶ ಅಥವಾ ಅದರ 1967ರ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ. ಆದ್ದರಿಂದ, ದೇಶವು ನಿರಾಶ್ರಿತರಿಗೆ ನೆರಳು ನಿರಾಕರಿಸಬಹುದು. ಇದು ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ರೂಢಿಯಾಗಿದ್ದು,ಒಪ್ಪಂದಕ್ಕೆ ಸಹಿ ಹಾಕದವರೂ ಪಾಲಿಸುತ್ತಾರೆ. ಆದರೆ, ನಿರಾಶ್ರಿತರಿಗೆಂದೇ ದೇಶದಲ್ಲಿ ಕಾನೂನು ಇಲ್ಲ.

ದೇಶ ನಿರಾಶ್ರಿತರನ್ನು ಸ್ವೀಕರಿಸಿದೆಯೇ?:

ಭಾರತ 1947 (ದೇಶ ವಿಭಜನೆ ಸಮಯದಲ್ಲಿ), 1959 (ಟಿಬೆಟ್‌ನಿಂದ ಬೌದ್ಧರು) ಮತ್ತು 1971 (ಇಂಡೋ-ಪಾಕ್ ಯುದ್ಧ) ರಲ್ಲಿ ನೆರೆಯ ದೇಶಗಳಿಂದ ನಿರಾಶ್ರಿತರನ್ನು ಸ್ವೀಕರಿಸಿದೆ. ಚೀನಾ 1959 ರಲ್ಲಿ ಟಿಬೆಟ್ ಮೇಲ ಆಕ್ರಮಣ ಮಾಡಿದಾಗ ಅಧ್ಯಾತ್ಮಿಕ ನಾಯಕ ದಲೈ ಲಾಮಾ ಮತ್ತು ಇತರ ಟಿಬೆಟಿಯನ್ ನಿರಾಶ್ರಿತರಿಗೆ ಆಶ್ರಯ ನೀಡಿತ್ತು.

ಕಾನೂನಿನ ಅಗತ್ಯವಿಲ್ಲದೆ, ಸಮಸ್ಯೆಯನ್ನು ನಿಭಾಯಿಸಲು ಸರ್ಕಾರ ತಾತ್ಕಾಲಿಕ ಪರಿಹಾರಗಳನ್ನು ಬಳಸಿತು. ಸಿಎಎ ನಿರಾಶ್ರಿತರ ಸಮಸ್ಯೆಯನ್ನು ಕಾನೂನುಬದ್ಧವಾಗಿ ಪರಿಹರಿಸುವ ಪ್ರಯತ್ನವೆನ್ನಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕವಾಗಿ ಕಿರುಕುಳಕ್ಕೊಳಗಾದ ಹಿಂದೂ, ಕ್ರಿಶ್ಚಿಯನ್, ಪಾರ್ಸಿ, ಜೈನ್, ಸಿಖ್ ಮತ್ತು ಬೌದ್ಧ ಅಲ್ಪಸಂಖ್ಯಾತರಿಗೆ ಸಿಎಎ ಪೌರತ್ವವನ್ನು ನೀಡುತ್ತದೆ.

Read More
Next Story