ಚುನಾವಣಾ ಬಾಂಡ್ ರದ್ದು | ಬಾಂಡ್ ಎಂದರೆ ಏನು? ಅದರ ಫಲಾನುಭವಿಗಳು ಯಾರು? ಕೋರ್ಟ್ ಆದೇಶ ಏನು?
x

ಚುನಾವಣಾ ಬಾಂಡ್ ರದ್ದು | ಬಾಂಡ್ ಎಂದರೆ ಏನು? ಅದರ ಫಲಾನುಭವಿಗಳು ಯಾರು? ಕೋರ್ಟ್ ಆದೇಶ ಏನು?


ಪ್ರತಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರಿಂದ ಭಾರತೀಯ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ತೀರ್ಪು ಎಂದು ಬಣ್ಣಿಸಲಾಗುತ್ತಿರುವ ಮಹತ್ವದ ತೀರ್ಪಿನಲ್ಲಿ, ಸುಪ್ರೀಂಕೋರ್ಟ್ ಗುರುವಾರ (ಫೆ.15) ಅನಾಮಧೇಯ ಮೂಲಗಳಿಂದ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸುವ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದೆ.

ಗಮನಿಸಬೇಕಾದ ಸಂಗತಿಯೆಂದರೆ, ಚುನಾವಣಾ ಬಾಂಡ್ ಯೋಜನೆಯ ಪ್ರಾರಂಭದಿಂದಲೂ ಈ ನಿಧಿಯ ಸಿಂಹಪಾಲು ಆಡಳಿತರೂಢ ಬಿಜೆಪಿಯ ಬೊಕ್ಕಸದ ಪಾಲಾಗಿದೆ.

ಜನವರಿ 2, 2018 ರಂದು ಸರ್ಕಾರದಿಂದ ಅಧಿಸೂಚನೆಗೊಂಡ ಈ ಯೋಜನೆಯು ಮೊದಲಿನಿಂದಲೂ ವಿವಾದದ ವಿಷಯವಾಗಿತ್ತು. ಇದು ಜಾರಿಯಾದ ಬೆನ್ನಲ್ಲೇ ಅದನ್ನು ಪ್ರಶ್ನಿಸಿ ಸಿಪಿಎಂ, ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನ್ಯಾಯಾಲಯದ ಮೆಟ್ಟಿಲೇರಿದ್ದರು.

ಹಾಗಾದರೆ, ಚುನಾವಣಾ ಬಾಂಡ್ಗಳು ಏನು? ಮತ್ತು ಅನೇಕ ಅರ್ಜಿದಾರರು ನ್ಯಾಯಾಲಯದಲ್ಲಿ ಅದನ್ನು ಏಕೆ ಪ್ರಶ್ನಿಸಿದರು? ಚುನಾವಣಾ ಬಾಂಡ್ಗಳಿಂದ ಯಾವ ಪಕ್ಷ ಹೆಚ್ಚು ಲಾಭ ಪಡೆದಿವೆ? ಸುಪ್ರೀಂ ಕೋರ್ಟ್ ಏನು ಹೇಳಿದೆ ಮತ್ತು ಚುನಾವಣಾ ಬಾಂಡ್ ಯೋಜನೆಯ ಮೂಲಕ ಪಕ್ಷಗಳು ಸಂಗ್ರಹಿಸಿದ ಹಣ ಈಗ ಏನಾಗುತ್ತದೆ? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ..

ಚುನಾವಣಾ ಬಾಂಡ್ ಎಂದರೆ ಏನು?

ಚುನಾವಣಾ ಬಾಂಡ್ (EB) ಎನ್ನುವುದು ಬೇರರ್ ಬಾಂಡ್ ಸಾಧನವಾಗಿದ್ದು, ಅದರ ಮೂಲಕ ಕಂಪನಿಗಳು ಮತ್ತು ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ಹಣವನ್ನು ದಾನ ಮಾಡಬಹುದು. ಇದು ಪ್ರಾಮಿಸರಿ ನೋಟ್ನಂತಿದ್ದು, ಬೇಡಿಕೆಯ ಮೇರೆಗೆ ಬೇರರ್ಗೆ ಪಾವತಿಸಬೇಕಾದ ಹಣ.

ಭಾರತದಲ್ಲಿ, ಚುನಾವಣಾ ಬಾಂಡ್ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಮಾತ್ರ ರೂ.1,000, ರೂ. 10,000, ರೂ. 1,00,000, ರೂ 10,00,000 ರೂ 1,00,00,000 ಮೌಲ್ಯಗಳಲ್ಲಿ ಮಾರಾಟ ಮಾಡಲಾಗುತ್ತದೆ. ಯಾವುದೇ ವ್ಯಕ್ತಿ, ಗುಂಪು ಅಥವಾ ಕಾರ್ಪೊರೇಟ್ ಸಂಸ್ಥೆ ಇವುಗಳನ್ನು ಖರೀದಿಸಬಹುದು ಮತ್ತು ತಮ್ಮ ಆಯ್ಕೆಯ ರಾಜಕೀಯ ಪಕ್ಷಕ್ಕೆ ದೇಣಿಗೆಯಾಗಿ ನೀಡಬಹುದು. ಪಕ್ಷಗಳು 15 ದಿನಗಳ ನಂತರ ಬಡ್ಡಿರಹಿತವಾಗಿ ಇವುಗಳನ್ನು ನಗದೀಕರಿಸಬಹುದು. ಆದರೆ ಅಧಿಕೃತ ಬ್ಯಾಂಕ್ನ ಖಾತೆಯ ಮೂಲಕ ಮಾತ್ರ ಹಾಗೆ ಮಾಡಲು ಸಾಧ್ಯ.

ರಾಜಕೀಯ ಪಕ್ಷಗಳು, ಕಾನೂನಿನ ಪ್ರಕಾರ, 20,000 ರೂ.ಗಿಂತ ಹೆಚ್ಚಿನ ನಗದು ದೇಣಿಗೆ ಪಡೆದರೆ, ದೇಣಿಗೆ ನೀಡಿದವರ ಗುರುತನ್ನು ಬಹಿರಂಗಪಡಿಸಬೇಕು ಎಂಬ ನಿಯಮವಿದೆ. ಆದರೆ, ಆ ನಿಯಮ ಎಷ್ಟೇ ದೊಡ್ಡ ಮೊತ್ತದ ದೇಣಿಗೆ ಪಡೆದರೂ ಚುನಾವಣಾ ಬಾಂಡ್ಗಳಿಗೆ ಅನ್ವಯಿಸುವುದಿಲ್ಲ.

ಚುನಾವನಾ ಬಾಂಡ್ ಯಾಕೆ ವಿವಾದಕ್ಕೀಡಾಯಿತು?

ಈ ಯೋಜನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಅರ್ಜಿದಾರರು ಅದರ ಗೌಪ್ಯತೆಯ ಷರತ್ತು ನಾಗರಿಕರ ಮಾಹಿತಿಯ ಹಕ್ಕಿನ ವಿರುದ್ಧ ಇದೆ. ರಾಜಕೀಯ ಪಕ್ಷಗಳ ದೇಣಿಗೆಯ ಮೂಲ ತಿಳಿಯುವ ಮತದಾರರ ಹಕ್ಕಿನ ವಿರುದ್ಧ ಈ ಚುನಾವಣಾ ಬಾಂಡ್ ಯೋಜನೆ ಇದೆ ಎಂದು ವಾದಿಸಿದರು. ಅಲ್ಲದೆ, ಶೆಲ್ ಕಂಪನಿಗಳು ಹಣ ವರ್ಗಾವಣೆಗಾಗಿ ಇವುಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2017ರಲ್ಲಿ ಕೇಂದ್ರಕ್ಕೆ ಎಚ್ಚರಿಕೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಚುನಾವಣಾ ಬಾಂಡ್ಗಳು ಆರಂಭದಿಂದಲೂ ವಿವಾದದ ಕೇಂದ್ರವಾಗಿದ್ದವು.

ಚುನಾವಣಾ ಬಾಂಡ್ ಮೂಲಕ ಪಕ್ಷಗಳು ಸಂಗ್ರಹಿಸಿದ ಮೊತ್ತವೆಷ್ಟು?

ಎಡಿಆರ್ ವರದಿಯ ಪ್ರಕಾರ, ಚುನಾವಣಾ ಬಾಂಡ್ ಗಳು ಜಾರಿಗೆ ಬಂದ ಬಳಿಕ ಅವು ರಾಜಕೀಯ ದೇಣಿಗೆಯ ಆದ್ಯತೆಯ ಮಾರ್ಗವಾಗಿ ಮಾರ್ಪಟ್ಟಿವೆ. ಭಾರತೀಯ ರಾಜಕೀಯ ವ್ಯವಸ್ಥೆಗೆ ಹರಿದುಬರುವ ದೇಣಿಗೆಯಲ್ಲಿ ಶೇ. 56 ರಷ್ಟು ಹಣವು ಈ ಬಾಂಡುಗಳ ಮೂಲಕವೇ ಬಂದಿದೆ.

ಎಡಿಆರ್ ಅಧ್ಯಯನ ಮಾಡಿದ ಅವಧಿಯು 2016-17 ಮತ್ತು 2021-22ರ ಹಣಕಾಸು ವರ್ಷದಲ್ಲಿ 31 ರಾಜಕೀಯ ಪಕ್ಷಗಳು ಪಡೆದ ಒಟ್ಟು ದೇಣಿಗೆ 16,437.635 ಕೋಟಿ ರೂ. 2018 ರಲ್ಲಿ ಚುನಾವಣಾ ಬಾಂಡ್ ಪರಿಚಯಿಸಿದ ನಂತರ, ಈವರೆಗೆ ಅವುಗಳ ಮೂಲಕ ನೀಡಿದ ದೇಣಿಗೆಗಳಲ್ಲಿ 743% ರಷ್ಟು ಏರಿಕೆಯಾಗಿದೆ. ಸಂಗ್ರಹಿಸಿದ ಒಟ್ಟು ಮೊತ್ತ 9188.35991 ಕೋಟಿ ರೂ.

ಬಿಜೆಪಿ 5,271.9751 ಕೋಟಿ (ಅದರ ಒಟ್ಟು ದೇಣಿಗೆಯಲ್ಲಿ 52%) ಸಂಗ್ರಹಿಸಿದರೆ, ಇತರ ರಾಷ್ಟ್ರೀಯ ಪಕ್ಷಗಳು ಒಟ್ಟಾಗಿ ಕೇವಲ 1783.9331 ಕೋಟಿ ರೂ. ಪಡೆದಿವೆ. ಹಾಗೇ 952.2955 ಕೋಟಿ (ಅದರ ಒಟ್ಟು ದೇಣಿಗೆಯಲ್ಲಿ 61.54%) ನೊಂದಿಗೆ ಕಾಂಗ್ರೆಸ್ ನಂತರದ ಸ್ಥಾನದಲ್ಲಿದೆ. ಟಿಎಂಸಿ ರೂ. 767.8876 ಕೋಟಿ (93.27%), ಬಿಜೆಡಿ ರೂ. 622 ಕೋಟಿ (89.81%), ಡಿಎಂಕೆ ರೂ. 431.50 ಕೋಟಿ (90.703%), ಬಿಆರ್ಎಸ್ ರೂ. 383.6529 ಕೋಟಿ (80.45%), ಮತ್ತು ವೈಎಸ್ಆರ್ಸಿಪಿ ರೂ. 330.44 ಕೋಟಿ (72.43 ಕೋಟಿ) %) ಪಡೆದಿವೆ.

2022-23ರಲ್ಲಿ, ಬಿಜೆಪಿಯು ಚುನಾವಣಾ ಬಾಂಡ್ಗಳ ಮೂಲಕ ಸುಮಾರು 1,300 ಕೋಟಿ ರೂ.ಗಳನ್ನು ಪಡೆದುಕೊಂಡಿದೆ, ಅದೇ ಅವಧಿಯಲ್ಲಿ ಕಾಂಗ್ರೆಸ್ ಪಡೆದಿದ್ದಕ್ಕಿಂತ ಏಳು ಪಟ್ಟು ಹೆಚ್ಚು ಬಿಜೆಪಿಯ ಪಾಲಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಬಿಜೆಪಿಯ ವಾರ್ಷಿಕ ಲೆಕ್ಕಪರಿಶೋಧನೆಯ ವರದಿಯ ಪ್ರಕಾರ, ಅದರ ದೇಣಿಗೆಯಲ್ಲಿ 61% ಚುನಾವಣಾ ಬಾಂಡ್ಗಳ ಮೂಲಕವೇ ಬಂದಿವೆ.

ಚುನಾವಣಾ ಬಾಂಡ್ ಗಳ ಮೂಲಕ ಕಾಂಗ್ರೆಸ್ನ ಗಳಿಕೆಯು 2021-22ರ ರೂ. 236 ಕೋಟಿಯಿಂದ 2022-23ರಲ್ಲಿ ರೂ.171 ಕೋಟಿಗೆ ಇಳಿದಿದೆ.

ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ನಿಷೇಧಿಸಿದ್ದು ಯಾಕೆ?

ಸುಪ್ರೀಂ ಕೋರ್ಟ್ ಗುರುವಾರ (ಫೆ.15) ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಕರೆದಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಮೇಲೆ ಎರಡು ಪ್ರತ್ಯೇಕ ಮತ್ತು ಸರ್ವಾನುಮತದ ತೀರ್ಪುಗಳನ್ನು ನೀಡಿದೆ.

ಚುನಾವಣಾ ಬಾಂಡ್ ವಿಷಯದಲ್ಲಿ ಸರ್ವೋಚ್ಛ ನ್ಯಾಯಾಲಯ ಹೇಳಿದ್ದು ಇದು:

• ಇಂತಹ ಅನಾಮಧೇಯ ದೇಣಿಗೆಗಳು ಸಂವಿಧಾನದ ಖಾತರಿಪಡಿಸಿರುವ ಮಾಹಿತಿ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತವೆ.

• ಖಾಸಗಿತನದ ಮೂಲಭೂತ ಹಕ್ಕು ಜನರ ರಾಜಕೀಯ ಗೌಪ್ಯತೆ ಮತ್ತು ರಾಜಕೀಯ ನಿಲುವಿನ ಹಕ್ಕನ್ನೂ ಒಳಗೊಂಡಿದೆ.

• ಜನಪ್ರತಿನಿಧಿ ಕಾಯ್ದೆ ಮತ್ತು ಆದಾಯ ತೆರಿಗೆ ಕಾನೂನುಗಳು ಸೇರಿದಂತೆ ವಿವಿಧ ಕಾಯ್ದೆಗಳಿಗೆ ಮಾಡಲಾಗಿರುವ ತಿದ್ದುಪಡಿಗಳು ಸಂವಿಧಾನಬಾಹಿರ.

ಇಬಿಗಳನ್ನು ʼಹಣ ಲೇವಾದೇವಿʼಗೆ ಚುನಾವಣಾ ಬಾಂಡ್ ದುರುಪಯೋಗಪಡಿಸಿಕೊಳ್ಳಬಹುದು" ಎಂದು ಸುಪ್ರೀಂ ಕೋರ್ಟ್ ನವೆಂಬರ್ನಲ್ಲಿ, ಹೇಳಿತ್ತು.

ಬಾಂಡ್ ಮೂಲಕ ಸಂಗ್ರಹಿಸಿದ ಹಣ ಏನಾಗುತ್ತದೆ?

ಸುಪ್ರೀಂ ಕೋರ್ಟ್ ಎಸ್ಬಿಐಗೆ ನೀಡಿದ ಸೂಚನೆ:

• ಚುನಾವಣಾ ಬಾಂಡ್ ನೀಡುವುದನ್ನು ಕೂಡಲೇ ನಿಲ್ಲಿಸಿ.

• ಏಪ್ರಿಲ್ 12, 2019 ರಿಂದ (ಅದು ಮಧ್ಯಂತರ ಆದೇಶವನ್ನು ಜಾರಿಗೊಳಿಸಿದಾಗ) ಇಲ್ಲಿಯವರೆಗೆ ಚುನಾವಣಾ ಬಾಂಡ್ ಖರೀದಿದಾರರ ಹೆಸರನ್ನು ಚುನಾವಣಾ ಆಯೋಗಕ್ಕೆ ಬಹಿರಂಗಪಡಿಸಿ.

• ಪ್ರತಿ ಬಾಂಡ್ ಖರೀದಿಯ ದಿನಾಂಕವನ್ನು ಬಹಿರಂಗಪಡಿಸಿ

• ಖರೀದಿಸಿದ ಬಾಂಡ್ ಮುಖಬೆಲೆಯನ್ನು ಬಹಿರಂಗಪಡಿಸಿ

• ಏಪ್ರಿಲ್ 12, 2019 ರಿಂದ ಇಲ್ಲಿಯವರೆಗೆ ಇಬಿಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಬಹಿರಂಗಪಡಿಸಿ

• ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಬಾಂಡ್ ವಿವರಗಳನ್ನು ಬಹಿರಂಗಪಡಿಸಿ

ಬಾಂಡ್ ಮೂಲಕ ರಾಜಕೀಯ ಪಕ್ಷಗಳು ಸಂಗ್ರಹಿಸಿದ ಹಣವು ಏನಾಗುತ್ತದೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.

Read More
Next Story