![Shatrughan Sinha: ದೇಶದೆಲ್ಲೆಡೆ ಮಾಂಸಾಹಾರ ನಿಷೇಧವಾಗಲಿ ; ವಿವಾದಾತ್ಮಕ ಹೇಳಿಕೆ ನೀಡಿದ ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ Shatrughan Sinha: ದೇಶದೆಲ್ಲೆಡೆ ಮಾಂಸಾಹಾರ ನಿಷೇಧವಾಗಲಿ ; ವಿವಾದಾತ್ಮಕ ಹೇಳಿಕೆ ನೀಡಿದ ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ](https://karnataka.thefederal.com/h-upload/2025/02/05/510644-shatrughan-sinha.webp)
Shatrughan Sinha: ದೇಶದೆಲ್ಲೆಡೆ ಮಾಂಸಾಹಾರ ನಿಷೇಧವಾಗಲಿ ; ವಿವಾದಾತ್ಮಕ ಹೇಳಿಕೆ ನೀಡಿದ ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ
Shatrughan Sinha: ಬಹುತೇಕ ರಾಜ್ಯಗಳಲ್ಲಿ ಬೀಫ್ (ದನದ ಮಾಂಸ) ನಿಷೇಧಿಸಲಾಗಿದೆ. ನನ್ನ ಅಭಿಪ್ರಾಯದಲ್ಲಿ, ಕೇವಲ ಬೀಫ್ ಮಾತ್ರವಲ್ಲ, ಎಲ್ಲ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸಿನ್ಹಾ ಹೇಳಿದ್ದಾರೆ.
ನಟ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಶತ್ರುಘ್ನ ಸಿನ್ಹಾ ಅವರು ಉತ್ತರಾಖಂಡದಲ್ಲಿ ಜಾರಿಗೆ ತಂದಿರುವ ಏಕರೂಪ ನಾಗರಿಕ ಸಂಹಿತೆ (Uniform Civil Code - UCC) ಅನ್ನು ಪ್ರಶಂಸಿಸಿದ್ದಾರೆ. ಇದೇ ವೇಳೆ ಮಾಂಸಾಹಾರ ನಿಷೇಧ ಸೂಕ್ತ ನಿರ್ಧಾರ ಎಂದು ಹೇಳಿದ್ದಾರೆ. ಅದನ್ನು ತಾವು ಬೆಂಬಲಿಸುತ್ತಿದ್ದರೂ ದೇಶದ ಕೆಲವು ಭಾಗಗಳಲ್ಲಿ ಜಾರಿಗೆ ತರುವುದು ಕಷ್ಟವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಂಸಾಹಾರ ಕುರಿತು ಅವರು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಬಹುತೇಕ ರಾಜ್ಯಗಳಲ್ಲಿ ಬೀಫ್ (ದನದ ಮಾಂಸ) ನಿಷೇಧಿಸಲಾಗಿದೆ. ನನ್ನ ಅಭಿಪ್ರಾಯದಲ್ಲಿ, ಕೇವಲ ಬೀಫ್ ಮಾತ್ರವಲ್ಲ, ಎಲ್ಲ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಆದರೆ, ಈ ನಿಷೇಧವು ಎಲ್ಲ ಕಡೆ ಸಮಾನವಾಗಿ ಜಾರಿಗೆ ಬರಲಿಲ್ಲ. ಈಶಾನ್ಯ ಭಾರತದಲ್ಲಿ ಬೀಫ್ ತಿನ್ನುವುದು ಕಾನೂನುಬದ್ಧವಾಗಿದ್ದರೂ ಉತ್ತರ ಭಾರತದಲ್ಲಿ ಇದು ಅಂಗೀಕಾರಾರ್ಹವಲ್ಲ. ಈಶಾನ್ಯ ಭಾರತದಲ್ಲಿ ತಿನ್ನುವುದಾದರೆ ರುಚಿ, ಆದರೆ ಉತ್ತರ ಭಾರತದಲ್ಲಿ ತಿನ್ನುವುದಾದರೆ ಗಂಭೀರ ಸಮಸ್ಯೆ ಎಂದು ಅವರು ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಮಾಂಸಾಹಾರವ ನಿಷೇಧವನ್ನು ಎಲ್ಲೆಡೆ ಜಾರಿಗೊಳಿಸಬೇಕು. ಕೇವಲ ಕೆಲವು ಭಾಗಗಳಲ್ಲಿ ಮಾತ್ರವಲ್ಲ ಎಂದು ಅವರು ಒತ್ತಿಹೇಳಿದರು.
ಉತ್ತರಾಖಂಡಕ್ಕೆ ಮೆಚ್ಚುಗೆ
ಶತ್ರುಘ್ನ ಸಿನ್ಹಾ ಅವರು ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದಿರುವುದನ್ನು ಹೊಗಳಿದ್ದರೂ ಇದರಲ್ಲಿ ಕೆಲವು ತೊಡಕುಗಳಿದ್ದು, ಯಥಾವತ್ತಾಗಿ ಜಾರಿಗೆ ತರಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ನಾಗರಿಕ ಸಂಹಿತೆ ತಯಾರಿಸುವ ಮೊದಲು ಎಲ್ಲ ಪಕ್ಷಗಳ ಸಭೆ ಆಯೋಜಿಸಬೇಕು. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಬೇಕು. ಇದನ್ನು ಚುನಾವಣಾ ಅಥವಾ ಮತಬ್ಯಾಂಕ್ ತಂತ್ರವಾಗಿ ಪರಿಗಣಿಸದೆ, ಸೂಕ್ಷ್ಮವಾಗಿ ನಿರ್ವಹಿಸಬೇಕು," ಎಂದು ಸಿನ್ಹಾ ಒತ್ತಿಹೇಳಿದರು.
ಉತ್ತರಾಖಂಡ ಮೊದಲ ರಾಜ್ಯ
ಜನವರಿ 27 ರಂದು, ಭಾರತದ ಸ್ವಾತಂತ್ರ್ಯಾನಂತರ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ಮೊದಲ ರಾಜ್ಯವಾಗಿ ಉತ್ತರಾಖಂಡ ಖ್ಯಾತಿ ಗಳಿಸಿದರು. ಈ ನಾಗರಿಕ ಸಂಹಿತೆಯು ಎಲ್ಲಾ ವಿವಾಹಗಳು ಹಾಗೂ ಲಿವ್-ಇನ್ ಸಂಬಂಧಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಇದರ ಪ್ರಮುಖ ಕಾನೂನುಗಳು, ಪುರುಷ ಮತ್ತು ಮಹಿಳೆಯರಿಗೂ ಸಮಾನ ಆಸ್ತಿ ಹಕ್ಕು, ಸಮಾನ ವಿಚ್ಛೇದನ ಹಕ್ಕು ಮತ್ತು ಲಿವ್-ಇನ್ ಸಂಬಂಧಗಳಿಂದ ಜನಿಸಿದ ಮಕ್ಕಳಿಗೆ ಕಾನೂನುಬದ್ಧ ಮಾನ್ಯತೆ ನೀಡುತ್ತದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ವಿವಾಹ, ವಿಚ್ಛೇದನ, ಮತ್ತು ಆಸ್ತಿ ಹಕ್ಕು ನೋಂದಣಿಯನ್ನು ಸುಗಮಗೊಳಿಸಲು ಒಂದು ಆನ್‌ಲೈನ್ ಪೋರ್ಟಲ್ ಆರಂಭಿಸಿದೆ.