ಪಶ್ಚಿಮ ಬಂಗಾಳ: ನೀಟ್‌ ರದ್ದು ನಿರ್ಣಯ ಅಂಗೀಕಾರ
x

ಪಶ್ಚಿಮ ಬಂಗಾಳ: ನೀಟ್‌ ರದ್ದು ನಿರ್ಣಯ ಅಂಗೀಕಾರ

ನೀಟ್ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ತರಲು ಕರ್ನಾಟಕ ಸಂಪುಟ ಸಭೆ ಒಪ್ಪಿಗೆ ನೀಡಿದ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.


ಪಶ್ಚಿಮ ಬಂಗಾಳ ವಿಧಾನಸಭೆ ನೀಟ್‌ ಪರೀಕ್ಷೆಯನ್ನು ರದ್ದುಗೊಳಿಸಲು ಮತ್ತು ವೈದ್ಯಕೀಯ ಆಕಾಂಕ್ಷಿಗಳಿಗೆ ಹೊಸ ಪ್ರವೇಶ ಪರೀಕ್ಷೆಯನ್ನು ತರಲು ನಿರ್ಣಯವನ್ನು ಅಂಗೀಕರಿಸಿದೆ.

ನೀಟ್ ವಿರುದ್ಧ ನಿರ್ಣಯ ಮಂಡಿಸಲು ಕರ್ನಾಟಕ ಸಚಿವ ಸಂಪು ಒಪ್ಪಿಗೆ ನೀಡಿದ ಕೆಲವೇ ದಿನಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಪಶ್ಚಿಮ ಬಂಗಾಳ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಸೋವಂದೇಬ್ ಚಟ್ಟೋಪಾಧ್ಯಾಯ ಅವರು ಮಂಗಳವಾರ (ಜುಲೈ 23) ಮಂಡಿಸಿದ ನಿರ್ಣಯದಲ್ಲಿ ʻವೈದ್ಯಕೀಯ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಉಚಿತ ಮತ್ತು ನ್ಯಾಯಯುತ ಪ್ರವೇಶ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗುತ್ತಿಲ್ಲʼ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ಖಂಡಿಸಿದೆ. ರಾಜ್ಯದಲ್ಲಿ ಜಂಟಿ ಪ್ರವೇಶ ಪರೀಕ್ಷೆಗಳನ್ನು ಪುನರಾರಂಭಿಸುವಂತೆ ಪಶ್ಚಿಮ ಬಂಗಾಳ ಸರ್ಕಾರವನ್ನು ಅದು ಒತ್ತಾಯಿಸಿತು.

24 ಲಕ್ಷ ಮಕ್ಕಳ ಭವಿಷ್ಯ ಹಾಳು: ನಿರ್ಣಯದ ಪರ ಮಾತನಾಡಿದ ರಾಜ್ಯ ಶಿಕ್ಷಣ ಸಚಿವರಾದ ಬ್ರತ್ಯಾ ಬಸು, ‘30-40 ಲಕ್ಷ ರೂ.ಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ದೇಶದ 24 ಲಕ್ಷ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಈ ಪರೀಕ್ಷೆ ಕೈಬಿಡಬೇಕು. ಇದನ್ನು ನಾವು ಪಾರದರ್ಶಕವಾಗಿ ನಡೆಸಬಹುದು. ನೀಟ್ ಫಲಿತಾಂಶಗಳನ್ನು ಲೋಕಸಭೆ ಚುನಾವಣೆ ಫಲಿತಾಂಶಗಳು ಪ್ರಕಟವಾದ ಜೂನ್ 4 ಕ್ಕೆ ಮರುನಿಗದಿಪಡಿಸಲಾಗಿತು. ಇದು ಏನನ್ನೋ ಮುಚ್ಚಿಡಲು ನಡೆಸಿದ ಪ್ರಯತ್ನ ಎಂದು ನಾನು ನಂಬುತ್ತೇನೆ. ನೀಟ್ ಹಗರಣವು ಮಂಜುಗಡ್ಡೆಯ ತುದಿ,ʼ ಎಂದು ಹೇಳಿದರು.

ʻನೀಟ್‌ ಹಗರಣದಲ್ಲಿ ಎರಡು ಹಂತಗಳಿವೆ. ಮೊದಲನೆಯದು ಕೃಪಾಂಕ, ಮತ್ತೊಂದು ಅಂಕ ನೀಡಿಕೆಯಲ್ಲಿ ವಂಚನೆ. ನೀಟ್‌ ಪರೀಕ್ಷೆಯಲ್ಲಿ ಈ ವರ್ಷ 67 ಮಂದಿ 720 ಅಂಕ ಗಳಿಸಿ, ಮೊದಲ ಪಡೆದಿದ್ದರು. ಆದರೆ, ಕಳೆದ ವರ್ಷ ಆ ಸಂಖ್ಯೆ ಕೇವಲ ಎರಡರಿಂದ ಮೂರು. ಯಾರಿಗೆ ಎಷ್ಟು ಕೃಪಾಂಕ ನೀಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ,ʼ ಎಂದು ಹೇಳಿದರು.

ಕರ್ನಾಟಕ ವಿಧಾನಸಭೆಯಲ್ಲೂ ಇದೇ ನಿರ್ಣಯ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟ ಸೋಮವಾರ (ಜುಲೈ 22) ನೀಟ್‌ ವಿರುದ್ಧ ನಿರ್ಣಯ ಅಂಗೀಕರಿಸಲು ಅನುಮೋದನೆ ನೀಡಿದೆ. ಸದ್ಯ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ಮಂಡಿಸುವ ಸಾಧ್ಯತೆ ಇದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ನೀಟ್ ರದ್ದುಪಡಿಸಬೇಕು ಮತ್ತು ರಾಜ್ಯಗಳು ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬೇಕೆಂದು ಕೇಂದ್ರವನ್ನು ಒತ್ತಾಯಿಸಿದ್ದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೂನ್ 24 ರಂದು ಪತ್ರ ಬರೆದು, ನೀಟ್ ರದ್ದುಗೊಳಿಸಲು ಮತ್ತು ರಾಜ್ಯ ಸರ್ಕಾರಗಳು ಪರೀಕ್ಷೆ ನಡೆಸುವ ಹಿಂದಿನ ವ್ಯವಸ್ಥೆಯನ್ನು ಮರುಸ್ಥಾಪಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಇದರಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತದೆ ಮತ್ತು ವ್ಯವಸ್ಥೆ ಬಗ್ಗೆ ಆಕಾಂಕ್ಷಿಗಳಲ್ಲಿ ವಿಶ್ವಾಸ ಮೂಡುತ್ತದೆ ಎಂದು ಹೇಳಿದ್ದರು.

ಬಿಸಿ ಚರ್ಚೆ: ರಾಜ್ಯದಲ್ಲಿ ಮಹಿಳೆಯರ ಮೇಲಿನ ಹಲ್ಲೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿ ಶಾಸಕರ ನಡುವೆ ಬಿಸಿ ಚರ್ಚೆ ನಡೆಯಿತು. ಸ್ಪೀಕರ್ ಬಿಮನ್ ಬಂಡೋಪಾಧ್ಯಾಯ ಅವರು ಪ್ರಸ್ತಾವನೆಯನ್ನು ಓದಲು ಅನುಮತಿ ನೀಡಿದರು. ಆದರೆ, ಚರ್ಚೆಗೆ ಅವಕಾಶ ನೀಡಲಿಲ್ಲ. ಬಳಿಕ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ, ವಿಧಾನಸಭೆಯ ಹೊರಗೆ ಧರಣಿ ನಡೆಸಿದರು.

Read More
Next Story