ನಿಮ್ಮನ್ನು ಕಿತ್ತು ಹಾಕುತ್ತೇವೆ: ಉತ್ತರಾಖಂಡ್ ಪರವಾನಗಿ ಪ್ರಾಧಿಕಾರಕ್ಕೆ ಸುಪ್ರೀಂ ತರಾಟೆ
x

ನಿಮ್ಮನ್ನು ಕಿತ್ತು ಹಾಕುತ್ತೇವೆ: ಉತ್ತರಾಖಂಡ್ ಪರವಾನಗಿ ಪ್ರಾಧಿಕಾರಕ್ಕೆ ಸುಪ್ರೀಂ ತರಾಟೆ


ಏಪ್ರಿಲ್‌ 10- ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಪ್ರಕಟಿಸಿದ ʻದಾರಿತಪ್ಪಿಸುವ ಜಾಹೀರಾತುಗಳʼ ಕುರಿತು ಯಾವುದೇ ಕ್ರಮ ಕೈಗೊಳ್ಳಲು ವಿಫಲವಾಗಿರುವ ಮತ್ತು ʻಗಾಢ ನಿದ್ರೆʼ ಯಲ್ಲಿರುವ ಉತ್ತರಾಖಂಡ್ ಪರವಾನಗಿ ಪ್ರಾಧಿಕಾರದ ಮೇಲೆ ಸುಪ್ರೀಂ ಕೋರ್ಟ್, ತೀವ್ರವಾಗಿ ಖಂಡಿಸಿದೆ.

ಪತಂಜಲಿಯೊಂದಿಗೆ ರಾಜ್ಯ ಪ್ರಾಧಿಕಾರ ʻಒಪ್ಪಂದ ಮಾಡಿಕೊಂಡಿದೆʼ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಎ. ಅಮಾನುಲ್ಲಾ ಅವರ ಪೀಠ ಆರೋಪಿಸಿದೆ. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಕಟು ಭಾಷೆಯಲ್ಲಿ ತರಾಟೆಗೆ ತೆಗೆದುಕೊಂಡಿದೆ.

ಲಘುವಾಗಿ ಪರಿಗಣಿಸುವುದಿಲ್ಲ: ಎಸ್‌ಸಿ ʻನಾವು (ಪ್ರಕರಣವನ್ನು) ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನಾವು ನಿಮ್ಮನ್ನು ಕಿತ್ತು ಹಾಕುತ್ತೇವೆ. ಅಧಿಕಾರಿಗಳು ʻಕಡತಗಳನ್ನು ತಳ್ಳುತ್ತಿದ್ದಾರೆ. 2021 ರಲ್ಲಿ ಸಚಿವಾಲಯ ತಪ್ಪುದಾರಿಗೆಳೆಯುವ ಜಾಹೀರಾತಿನ ವಿರುದ್ಧ ಉತ್ತರಾಖಂಡ್ ಪರವಾನಗಿ ಪ್ರಾಧಿಕಾರಕ್ಕೆ ಪತ್ರ ಬರೆದಿದೆ. ಆದರೆ, ಪ್ರಾಧಿಕಾರ ಕಂಪನಿಯನ್ನು ಎಚ್ಚರಿಸಿ ಬಿಟ್ಟುಬಿಟ್ಟಿತು. 1954 ರ ಕಾಯಿದೆಯಡಿ ಎಚ್ಚರಿಕೆಗೆ ಅವಕಾಶವಿಲ್ಲʼ ಎಂದು ಪೀಠ ಹೇಳಿತು.

ಅಧಿಕಾರಿ ಅಮಾನತು: ʻಇದು ಆರು ಬಾರಿ ನಡೆದಿದೆ. ಪರವಾನಗಿ ಇನ್ಸ್‌ಪೆಕ್ಟರ್ ಮೌನವಾಗಿದ್ದರು. ಅಧಿಕಾರಿಯಿಂದ ಯಾವುದೇ ವರದಿ ಇಲ್ಲ. ಆನಂತರ ನೇಮಕಗೊಂಡ ವ್ಯಕ್ತಿ ಅದೇ ರೀತಿ ವರ್ತಿಸಿದರು. ಆ ಮೂವರು ಅಧಿಕಾರಿಗಳನ್ನು ಇದೀಗ ಅಮಾನತುಗೊಳಿಸಬೇಕು,ʼ ಎಂದು ಹೇಳಿದೆ. ರಾಜ್ಯದ ಆಹಾರ ಮತ್ತು ಔಷಧ ಆಡಳಿತದ ಜಂಟಿ ನಿರ್ದೇಶಕ ಡಾ.ಮಿಥಿಲೇಶ್ ಕುಮಾರ್ ಅವರು ʻದಯವಿಟ್ಟು ನನ್ನನ್ನು ಬಿಟ್ಟುಬಿಡಿ...ʼ ಎಂದು ಬೇಡಿಕೊಂಡರು. ತಾವು ಜೂನ್ 2023 ರಲ್ಲಿ ಸೇವೆಗೆ ಸೇರಿದೆ ಎಂಬ ಅವರ ಸಮಜಾಯಿಷಿಯನ್ನು ನ್ಯಾಯಾಲಯ ಪರಿಗಣಿಸಲಿಲ್ಲ.

ನ್ಯಾ.ಕೊಹ್ಲಿ, ʻನಾವೇಕೆ ಕ್ಷಮೆ ನೀಡಬೇಕು? ಇದನ್ನು ಮಾಡಲು ನಿಮಗೆ ಹೇಗೆ ಧೈರ್ಯ ಬಂತು? ನೀವು ಏನು ಕ್ರಮ ಕೈಗೊಂಡಿದ್ದೀರಿ? ನೀವು ಕ್ಷಮೆ ಕೇಳುತ್ತೀರಿ. ಆದರೆ, ಈ ಔಷಧಿಗಳನ್ನು ಸೇವಿಸಿದ ಅಮಾಯಕರ ಬಗ್ಗೆ ಏನು?ʼ ಎಂದು ಪ್ರಶ್ನಿಸಿದರು.

ಪತಂಜಲಿಯೊಂದಿಗೆ ಕೈಜೋಡಿಸಲಾಗಿದೆ: ʻಸುಪ್ರೀಂ ಕೋರ್ಟ್ ಅನ್ನು ಲೇವಡಿ ಮಾಡಲಾಗುತ್ತಿದೆ. ಅಂಚೆ ಕಚೇರಿಯಂತೆ ವರ್ತಿಸುತ್ತಿದ್ದೀರಿ. ನೀವು ಕಾನೂನು ಸಲಹೆಯನ್ನು ತೆಗೆದುಕೊಂಡಿದ್ದೀರಾ? ನಿಮಗೆ ನಾಚಿಕೆಯಾಗಬೇಕುʼ ಎಂದು ರಾಜ್ಯ ವಕೀಲರಿಗೆ ಪ್ರಶ್ನಿಸಿದೆ.

ಕ್ರಮ ತೆಗೆದುಕೊಳ್ಳುವುದಾಗಿ ಉತ್ತರಾಖಂಡ್ ವಕೀಲರು ಹೇಳಿದ ನಂತರ, ನ್ಯಾ.ಕೊಹ್ಲಿ, ʻನೀವು ಅಂತಿಮವಾಗಿ ಎಚ್ಚೆತ್ತುಕೊಂಡಿದ್ದೀರಿ ಮತ್ತು ಕಾನೂನು ಅಸ್ತಿತ್ವದಲ್ಲಿದೆ ಎಂದು ಅರಿತುಕೊಂಡಿದ್ದೀರಿʼ ಎಂದು ಟೀಕಿಸಿದರು.

ಆರೋಗ್ಯ ಸಚಿವಾಲಯ ನೋಟಿಸ್ ಕಳುಹಿಸಿದಾಗ, ನೀವು ಏಕೆ ಕಾನೂನು ಸಲಹೆ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದ ನ್ಯಾಯಾಲಯ, ಡಾ.ಕುಮಾರ್ ಅವರ ಕಡೆಗೆ ತಿರುಗಿತು. ʻನೀವು ಕಾನೂನನ್ನು ಓದಿದ್ದೀರಾ? ಎಚ್ಚರಿಕೆ ಸಾಕು ಎಂದು ನೀವು ಭಾವಿಸುತ್ತೀರಾ? ಕಾನೂನು ನಿಬಂಧನೆಗಳೇನು? ನೀವು ಯಾವ ಪ್ರಕರಣ ದಾಖಲಿಸಿದ್ದೀರಿ? ಯಾವ ಕ್ರಮ ತೆಗೆದುಕೊಂಡಿದ್ದೀರಿ?ʼ ಎಂದು ಪ್ರಶ್ನಿಸಿದರು.

ಆಯುಷ್ ಸಚಿವಾಲಯ: ʻಆಘಾತಕಾರಿʼ ಜಾಹೀರಾತುಗಳ ನಂತರ ಕಂಪನಿಯ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ ಎಂದು ತಿಳಿಸಬೇಕೆಂದು ಕೇಂದ್ರದ ಆಯುಷ್ ಸಚಿವಾಲಯವನ್ನು ಪ್ರಶ್ನಿಸಿದರು. 2018 ರಿಂದ ಅಧಿಕಾರಿಗಳು ಈ ಜಾಹೀರಾತುಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಉತ್ತರ ಸಲ್ಲಿಸಬೇಕು ಎಂದು ಹೇಳಿದ ಸುಪ್ರೀಂ ಕೋರ್ಟ್ , ಏಪ್ರಿಲ್ 16 ರಂದು ರಾಮ್‌ದೇವ್ ಮತ್ತು ಬಾಲಕೃಷ್ಣ ಅವರ ಕುರಿತು ಆದೇಶ ನೀಡುವುದಾಗಿ ಹೇಳಿತು.

Read More
Next Story