Wayanad Landslide | ಕಲ್ಲು ಗಣಿಗಾರಿಕೆ, ಮಾನವ ಹಸ್ತಕ್ಷೇಪ ಮುಖ್ಯ ಕಾರಣ: ಮಾಧವ ಗಾಡ್ಗೀಳ್
ಕೇರಳದ ದುರಂತಕ್ಕೆ ಕಲ್ಲುಗಣಿಗಾರಿಕೆ, ಮತ್ತು ರಸ್ತೆಗಳು, ರೈಲುಮಾರ್ಗಗಳು ಮತ್ತು ಅಜಾಗರೂಕ ವಸತಿ ಯೋಜನೆಯಂತಹ ದೀರ್ಘಾವಧಿಯ ಮಾನವ ಹಸ್ತಕ್ಷೇಪ ಕಾರಣ ಎಂದು ಪರಿಸರ ತಜ್ಞ ಡಾ ಮಾಧವ ಗಾಡ್ಗೀಳ್ ಅಭಿಪ್ರಾಯಪಟ್ಟಿದ್ದಾರೆ
ವಯನಾಡು ಭೂಕುಸಿತಕ್ಕೆ ತಕ್ಷಣದ ಕಾರಣ ಭಾರೀ ಮಳೆ ಆಗಿರಬಹುದು; ಆದರೆ ʻಪ್ರಾಥಮಿಕʼ ಕಾರಣಗಳಲ್ಲಿ ಕಲ್ಲುಗಣಿಗಾರಿಕೆಯಂಥ ದೀರ್ಘಾವಧಿಯ ಮಾನವ ಹಸ್ತಕ್ಷೇಪ ಸೇರಿದೆ. ಅಂತಹ ಚಟುವಟಿಕೆಗಳ ದತ್ತಾಂಶವನ್ನು ಮರೆಮಾಚಲಾಗಿದೆ ಎಂದು ಪರಿಸರಶಾಸ್ತ್ರಜ್ಞ ಡಾ. ಮಾಧವ ಗಾಡ್ಗೀಳ್ ಅವರು ಹೇಳಿದ್ದಾರೆ.
ಗಾಡ್ಗೀಳ್ ಅವರು 2010 ರಲ್ಲೇ ಪಶ್ಚಿಮ ಘಟ್ಟಗಳಲ್ಲಿ ವಿನಾಶಕಾರಿ ನೈಸರ್ಗಿಕ ವಿಕೋಪಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಕೇರಳ, ತಮಿಳುನಾ ಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಅಪ್ರಾಯೋಗಿಕ ಮತ್ತು ಅತಿ ಪರಿಸರಸ್ನೇಹಿ ಎಂದು ತಳ್ಳಿಹಾಕಿದ್ದ ಈ ವರದಿಯಲ್ಲಿ ವಯನಾಡ್ ಪರಿಸರ ನಾಶದಲ್ಲಿ ಕಲ್ಲು ಕ್ವಾರಿಗಳ ಪಾತ್ರವನ್ನು ಎತ್ತಿ ತೋರಿಸಿದ್ದರು. ಇದೀಗ Rediff.com ಗೆ ನೀಡಿದ ಸಂದರ್ಶನದಲ್ಲಿ ವಯನಾಡ್ ದುರಂತದ ಕುರಿತು ಅವರು ಅತಿಯಾದ ಮಾನವ ಹಸ್ತಕ್ಷೇಪವೇ ಎಲ್ಲದಕ್ಕೂ ಮೂಲ ಕಾರಣ ಎಂದಿದ್ದಾರೆ.
ಕ್ವಾರಿಯಿಂದ ಕಲ್ಲಿನ ರಚನೆಗೆ ತೊಂದರೆ
ಭೂಕುಸಿತ ಪೀಡಿತ ಪ್ರದೇಶಕ್ಕೆ ಸಮೀಪವಿರುವ ಕಲ್ಲಿನ ಕ್ವಾರಿಗಳಲ್ಲಿ ಸ್ಫೋಟದಿಂದ ಹೊಮ್ಮಿದ ಆಘಾತದ ಅಲೆಗಳಿಂದ ಪ್ರದೇಶದ ಕಲ್ಲಿನ ರಚನೆಗೆ ತೊಂದರೆ ಆಗಿದೆ. ಇದರಿಂದ ಬಂಡೆಗಳ ರಚನೆ ದುರ್ಬಲವಾಗುತ್ತದೆ. ಸ್ಪೋಟ ಪ್ರಕ್ರಿಯೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಇದದಿಂದಾಗಿ ಕಳೆದ ಒಂದು ದಶಕದಿಂದ ಭೂಕುಸಿತದಂಥ ಅವಘಡಗಳು ಸಂಭವಿಸುತ್ತಿವೆ ಎಂದು ವಿವರಿಸಿದರು.
ʻಈ ಪ್ರದೇಶದಲ್ಲಿನ ಕ್ವಾರಿಗಳ ನಿಜವಾದ ಸಂಖ್ಯೆಯನ್ನು ಸರ್ಕಾರ ಮುಚ್ಚಿಟ್ಟಿದೆ. ಕೂಟ್ಟಿಕಲ್ ಗ್ರಾಮದಲ್ಲಿ ಕೇವಲ ಮೂರು ಕಲ್ಲು ಕ್ವಾರಿಗಳಿವೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಗೂಗಲ್ ನಕ್ಷೆ ಪ್ರಕಾರ ಈ ಪ್ರದೇಶದಲ್ಲಿ 10 ಪಟ್ಟು ಹೆಚ್ಚು ಅಂದರೆ, 30 ಕ್ವಾರಿಗಳು ಇವೆ. ಭಾರಿ ಮಳೆ ಸಂಭವಿಸಬಹುದಾದ ದುರಂತವನ್ನು ಪ್ರಚೋದಿಸುತ್ತದೆʼ.
ಪಶ್ಚಿಮಘಟ್ಟಗಳು ನಾಶವಾಗಿದ್ದು ಹೇಗೆ?
1600ರಲ್ಲಿ ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತಗಳು ಇರಲಿಲ್ಲ ಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಮಹಾರಾಷ್ಟ್ರದ ಘಟ್ಟಗಳಲ್ಲಿ ಭೂಕುಸಿತದ ಆವರ್ತನವು 100 ಪಟ್ಟು ಹೆಚ್ಚಾಗಿದೆ ಎಂದು ಪುಣೆ ಮೂಲದ ಭೂವಿಜ್ಞಾನಿಯ ಸಂಶೋಧನೆ ಹೇಳುತ್ತದೆ. ರಸ್ತೆಗಳು, ರೈಲುಮಾರ್ಗಗಳು ಮತ್ತು ಜನವಸತಿಗಳ ಅಜಾಗರೂಕ ನಿರ್ಮಾಣ ಇದಕ್ಕೆ ಕಾರಣ ಎಂದು ಗಾಡ್ಗೀಳ್ ಹೇಳುತ್ತಾರೆ.
ಪಶ್ಚಿಮ ಘಟ್ಟಗಳಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಬಗ್ಗೆ ಮಾತನಾಡಿ, ʻಅವುಗಳನ್ನು ಬಡವರಿಗೆ ನಿರ್ಮಿಸಲಾಗುತ್ತಿಲ್ಲ.ಬದಲಾಗಿ, ಅವು ಶ್ರೀಮಂತರ ಎರಡನೇ ಮತ್ತು ಮೂರನೇ ಮನೆಗಳಾಗಿವೆ. ವಿದರ್ಭದ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಒಂದು ಹಳ್ಳಿ ಪಕ್ಕದಲ್ಲಿರುವ ಪ್ರಮುಖ ಗುಡ್ಡ ವನ್ನು ಕತ್ತರಿಸುತ್ತದೆ. ಇದರಿಂದಾಗಿ, ಹಳ್ಳಗಳು ಮತ್ತು ಕೊಳಗಳು ಒಣಗಿವೆ. ನೀರಾವರಿಗೆ ಮಾತ್ರ ತೊಂದರೆಯಾಗಿಲ್ಲ; ಕತ್ತೆಕಿರುಬಗಳು ಈಗ ಕುಡಿಯುವ ನೀರು ಅರಸಿಕೊಂಡು, ಹಳ್ಳಿಗಳಿಗೆ ನುಗ್ಗಿ ಮಕ್ಕಳ ಮೇಲೆ ದಾಳಿ ಮಾಡುತ್ತಿವೆʼ.
ಡಾ ಮಾಧವ ಗಾಡ್ಗೀಳ್ ವರದಿ
2010 ರಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ರಚಿಸಿದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ (ಡಬ್ಲ್ಯುಜಿಇಇಪಿ)ಯ ನೇತೃತ್ವ ವಹಿಸಿದ್ದ ಗಾಡ್ಗೀಳ್, ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆ ಕಾರ್ಯತಂತ್ರವೊಂದನ್ನು ರೂಪಿಸಿದ್ದರು. ಅವರ ಶಿಫಾರಸುಗಳು ಘಟ್ಟ ಪ್ರದೇಶದ ರಾಜ್ಯಗಳಿಗೆ ಅರಗಿಸಿಕೊಳ್ಳಲು ಆಗಲಿಲ್ಲ.
ಇದರಲ್ಲಿ ಕೇರಳದ ಹಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‌ಎ) ಎಂದು ವರ್ಗೀಕರಿಸಬೇಕೆಂಬ ಶಿಫಾರಸು ಕೂಡ ಒಂದು. ವಾಸ್ತವವಾಗಿ, ಗಾಡ್ಗೀಳ್ ವರದಿಯು ಇಡೀ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ)ಎಂದು ಘೋಷಿಸಬೇಕೆಂದು ಶಿಫಾರಸು ಮಾಡಿತ್ತು. ರಾಜ್ಯಗಳು ಇದು ಅತಿರೇಕ ಎಂದು ಹೇಳಿದವು. 2012 ರ ಕಸ್ತೂರಿರಂಗನ್ ಸಮಿತಿಯು ಶೇ.37ರಷ್ಟು ಪ್ರದೇಶವನ್ನು ಇಎಸ್‌ಎ ಎಂದು ಘೋಷಿಸಲು ಶಿಫಾರಸು ಮಾಡಿತು.
ಕಿವಿಗೆ ಬೀಳದ ಎಚ್ಚರಿಕೆ
ಕೇರಳದ 2018 ರ ವಿನಾಶಕಾರಿ ಪ್ರವಾಹದ ನಂತರ ಗಾಡ್ಗೀಳ್ ಅವರು ʻಭವಿಷ್ಯದಲ್ಲಿ ಕೇರಳದಲ್ಲಿ ಇನ್ನಷ್ಟು ನೈಸರ್ಗಿ ಕ ವಿಕೋಪʼಗಳಗೆ ತುತ್ತಾಗಲಿದೆ ಎಂದು ಮತ್ತೊಮ್ಮೆ ಎಚ್ಚರಿಸಿದರು. ಇದು ಕಿವುಡ ಕಿವಿಗೆ ಕೇಳಲಿಲ್ಲ. ʻರಾಷ್ಟ್ರ ವೈಯಕ್ತಿಕ ಹಿತಾಸಕ್ತಿಯಿರುವ ಜನರಿಂದ ಆಳಲ್ಪಡುತ್ತಿದೆ. ಅವರು ಜನಸಾಮಾನ್ಯರ ಜೀವನೋಪಾಯ ಮತ್ತು ಜೀವನದ ಬಗ್ಗೆ ಕನಿಷ್ಠ ಕಾಳಜಿ ಹೊಂದಿಲ್ಲʼ.
ಮಾಲಿನ್ಯದಿಂದಾಗಿ ಮೀನುಗಾರಿಕೆಯಿಂದ ವಂಚಿತರಾದವರನ್ನು ಅವರು ಉಲ್ಲೇಖಿಸಿದ್ದಾರೆ. ಆದರೆ, ಯಾವುದೇ ಮಾಲಿನ್ಯವಿಲ್ಲ ಎಂದು ಇಲಾಖೆ ಸುಳ್ಳು ಹೇಳುತ್ತದೆ. ಜನ ಪ್ರತಿಭಟನೆ ನಡೆಸಿದರೆ, ಸರ್ಕಾರ ಅವರ ಮೇಲೆ ಪೊಲೀಸರನ್ನು ಬಿಡುತ್ತದೆ ಎಂದು ಗಮನ ಸೆಳೆದರು.
ವರದಿ ರಾಜಕೀಯವಾಗಿ ತಪ್ಪು
ಅವರ ವರದಿಯ ನಿರ್ಲಕ್ಷ್ಯದಿಂದ ಕೇರಳ ಬಹಳಷ್ಟು ಕಳೆದುಕೊಂಡಿದೆ. ʻಸೂಕ್ಷ್ಮ ಪರಿಶೀಲನೆ ಮತ್ತು ಎಚ್ಚರಿಕೆಯಿಂದ ವರದಿ ಬರೆಯಲಾಗಿದೆ. ವರದಿ ಪ್ರಾಯೋಗಿಕವಾಗಿ ಮಾನ್ಯ. ಆದರೆ, ರಾಜಕೀಯವಾಗಿ ಸರಿಯಾಗಿಲ್ಲದೆ ಇರಬಹುದು,ʼ ಎಂದು ಹೇಳಿದರು.
ಕಸ್ತೂರಿರಂಗನ್ ಅವರು ʻಸ್ಥಳೀಯ ಸಮುದಾಯಗಳ ಮೇಲೆ ನೇರ ಪರಿಣಾಮ ಬೀರುವ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿಅವರಿಗೆ ಯಾವುದೇ ಪಾತ್ರವಿಲ್ಲʼ ಎಂದು ಪರೋಕ್ಷವಾಗಿ ಸೂಚಿಸಿದ್ದರು ಎಂದು ಗಾಡ್ಗೀಳ್ ಹೇಳಿದರು. ಕಲ್ಲಿನ ಗಣಿಯಿಂದ ಭೂಕುಸಿತ ಉಂಟಾಗಿ ಸ್ಥಳೀಯರು ಮೃತಪಟ್ಟರೆ, ಜನರಿಗೆ ಅದರ ವಿರುದ್ಧ ಪ್ರತಿಭಟಿಸುವ ಹಕ್ಕು ಇಲ್ಲ,ʼ ಎಂದು ಗಾಡ್ಗೀಳ್ ವಿವರಿಸಿದರು.
ʻತಮ್ಮ ವರದಿಯನ್ನು ಸ್ವೀಕರಿಸುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಅದು ʻಏನು ನಡೆಯುತ್ತಿದೆʼ ಎಂಬುದನ್ನು ಎತ್ತಿ ತೋರಿಸಿದೆ ಮತ್ತು ಅದನ್ನು ದೇಶದ ಜನರ ಗಮನಕ್ಕೆ ತಂದಿದೆ ಎಂದು ತೃಪ್ತಿಯಾಗಿದೆ,ʼ ಎಂದು ಹೇಳಿದರು.
ಪರಿಸ್ಥಿತಿಯನ್ನು ಬದಲಿಸಬಹುದೇ?
ಮುಂದೇನು? ಪರಿಸ್ಥಿತಿಯನ್ನು ಬದಲಿಸುವುದು ಹೇಗೆ? ಕಾನೂನುರಹಿತ ಸಮಾಜದಿಂದ ಕಾನೂನು ಪಾಲಿಸುವ ದೇಶ ಆಗುವುದು ಮೊದಲ ಹೆಜ್ಜೆ. ಪಶ್ಚಿಮ ಘಟ್ಟದಲ್ಲಿ ಕಲ್ಲು ಕ್ವಾರಿಗಳು ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸ ಬೇಕು. ಗಣಿಗಾರಿಕೆ ಮಾಡಿದರೂ ಪರಿಸರಕ್ಕೆ ಹಾನಿಯಾಗದಂತೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಕರಾವಳಿ ಪ್ರದೇಶದ ಜಲಮೂಲಗಳನ್ನು ಕಲುಷಿತಗೊಳಿಸಿ, ಮತ್ಸ್ಯೋದ್ಯಮ ಮತ್ತು ಮೀನುಗಾರರ ಜೀವನೋಪಾಯ ಸಾಧ್ಯವಿಲ್ಲ ಎನ್ನುತ್ತಾರೆ ಗಾಡ್ಗೀಳ್.