Wayanad Lanslides| ಚೂರಲ್ಮಲಾ ಸೇತುವೆ ನಿರ್ಮಾಣ: ಮಹಿಳಾ ಸೇನಾಧಿಕಾರಿಗೆ ಶ್ಲಾಘನೆ
ಭೂಕುಸಿತದಿಂದ ಸಂಕಷ್ಟಕ್ಕೀಡಾದ ವಯನಾಡಿಗೆ ರಕ್ಷಣಾ ಕಾರ್ಯಾಚರಣೆಗೆಂದು ಬೆಂಗಳೂರಿನಿಂದ ಆಗಮಿಸಿದ ಮದ್ರಾಸ್ ಸ್ಯಾಪರ್ಸ್( ಎಂಇಜಿ) ನ 70 ಸದಸ್ಯರ ತಂಡದಲ್ಲಿ ಮೇಜರ್ ಸೀತಾ ಅಶೋಕ್ ಶೆಲ್ಕೆ ಇದ್ದಾರೆ.
ಕೇರಳದ ವಿಪತ್ತು ಪೀಡಿತ ವಯನಾಡ್ ಜಿಲ್ಲೆಯಲ್ಲಿ ಪ್ರಮುಖ ಸಂಪರ್ಕ ಸೇತುವೆಯನ್ನು ನಿರ್ಮಿಸಲು ಸಹಾಯ ಮಾಡಿದ ಭಾರತೀಯ ಸೇನೆಯ ಮಹಿಳಾ ಅಧಿಕಾರಿಯೊಬ್ಬರು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದ್ದಾರೆ. ಆದರೆ, ಸ್ಥಳೀಯರು ಮತ್ತು ರಾಜ್ಯ ಅಧಿಕಾರಿಗಳಿಗೆ ಕೂಡ ಶ್ಲಾಘನೆಗೆ ಪಾತ್ರರು ಎಂದು ಅವರು ಹೇಳಿದ್ದಾರೆ.
ಭೂಕುಸಿತದಿಂದ ಧ್ವಂಸಗೊಂಡ ಚೂರಲ್ಮಲಾ ಗ್ರಾಮದ 190 ಅಡಿ ಉದ್ದದ ಹೊಸ ಬೈಲಿ ಸೇತುವೆ ಮೇಲೆ ಮೇಜರ್ ಸೀತಾ ಅಶೋಕ್ ಶೆಲ್ಕೆ ನಿಂತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಅಹಮದ್‌ನಗರದ ನಿವಾಸಿಯಾದ ಅವರು, ಇರುವಳಿಂಜಿ ನದಿಗೆ ಸೇತುವೆಯನ್ನು ನಿರ್ಮಿಸಿದ ಸೇನಾ ಘಟಕದ ಏಕೈಕ ಮಹಿಳಾ ಅಧಿಕಾರಿ ಆಗಿದ್ದಾರೆ.
ಮದ್ರಾಸ್ ಸ್ಯಾಪರ್ಸ್ ಘಟಕ: ಸಾಮಾಜಿಕ ಮಾಧ್ಯಮವು ಮೇಜರ್ ಶೆಲ್ಕೆ, ಸೇನೆಯ ಶೌರ್ಯ ಮತ್ತು ಸಮರ್ಪಣೆ ಮನೋಭಾವವನ್ನು ಕೊಂಡಾಡಿದೆ. ಬೆಂಗಳೂರಿನಿಂದ ಕೇರಳಕ್ಕೆ ಧಾವಿಸಿದ ಮದ್ರಾಸ್ ಸ್ಯಾಪರ್ಸ್(ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್, ಎಂಇಜಿ) ನ 70 ಸದಸ್ಯರ ತಂಡದಲ್ಲಿ ಮೇಜರ್ ಶೆಲ್ಕೆ ಇದ್ದಾರೆ.
ಸೇತುವೆ ನಿರ್ಮಾಣ, ನೆಲಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವಿಕೆ ಮೂಲಕ ಸೇನೆಯ ಮಾರ್ಗವನ್ನು ತೆರವುಗೊಳಿಸುವ ಕಾರ್ಯವನ್ನು ಘಟಕ ಮಾಡುತ್ತದೆ. ನೈಸರ್ಗಿಕ ವಿಕೋಪಗಳ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತದೆ.
ವಯನಾಡಿನಲ್ಲಿ ಕಠಿಣ ಕೆಲಸ: ಎಂಇಜಿ ವೇಗವಾಗಿ ಹರಿಯುತ್ತಿದ್ದ ನದಿಯಲ್ಲಿದ್ದ ಟನ್‌ಗಟ್ಟಲೆ ಶಿಲಾರಾಶಿಯನ್ನು ಮತ್ತು ಬೇರುಸಹಿತ ಬಿದ್ದಿದ್ದ ಮರಗಳನ್ನು ತೆಗೆದುಹಾಕಿ, ಕೇವಲ 31 ಗಂಟೆಗಳಲ್ಲಿ ಸೇತುವೆ ನಿರ್ಮಾಣವನ್ನು ಪೂರ್ಣಗೊಳಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ನಿರಂತರ ಮಳೆ ಹಾಗೂ ಕಡಿಮೆ ಸ್ಥಳಾವಕಾಶವಿದ್ದ ಕಾರಣ, ಚೂರಲ್ಮಲಾ ಮತ್ತು ಮುಂಡಕ್ಕೈಗೆ ಸಂಪರ್ಕ ಕಲ್ಪಿಸುವ ಸೇತುವೆ ಯನ್ನು ನಿರ್ಮಿಸುವುದು ಸವಾಲಾಗಿ ಪರಿಣಮಿಸಿತ್ತು.
ಸೇತುವೆ ನಿರ್ಮಾಣದ ಶ್ರೇಯಸ್ಸು ಸೇನೆಗೆ ಮಾತ್ರ ಸೀಮಿತವಾಗಬಾರದು ಎಂದು ಮೇಜರ್ ಶೆಲ್ಕೆ ಹೇಳುತ್ತಾರೆ.
ಎಲ್ಲರಿಗೂ ಧನ್ಯವಾದ: ʻಸ್ಥಳೀಯ ಅಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ವಿವಿಧ ಸ್ಥಳಗಳಿಂದ ಬಂದು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಬೇಕು. ಸ್ಥಳೀಯರು, ಗ್ರಾಮಸ್ಥರು ಮತ್ತು ರಾಜ್ಯದ ಅಧಿಕಾರಿಗಳಿಗೆ ವಿಶೇಷ ಧನ್ಯವಾದ,ʼ ಎಂದು ಅವರು ತಿಳಿಸಿದರು.
ಮೇಜರ್ ಶೆಲ್ಕೆ ಮತ್ತು ಅವರ ಸಹೋದ್ಯೋಗಿಗಳು ವಿಪತ್ತು ಪೀಡಿತ ಪ್ರದೇಶಗಳಲ್ಲಿ ಕೆಲವೊಮ್ಮೆ ಊಟ ಮತ್ತು ನಿದ್ರೆಯನ್ನೂ ಮಾಡದೆ, ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮತ್ತು ಅವರ ತಂಡ ಅನೇಕ ಜನರ ಜೀವವನ್ನು ಉಳಿಸಿದೆ ಮತ್ತು ಮೃತರ ಶವವನ್ನು ಪತ್ತೆ ಮಾಡಲು ನೆರವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಲೆಫ್ಟಿನೆಂಟ್ ಕರ್ನಲ್ ಜೆ.ಎಸ್. ಸೋಧಿ (ನಿವೃತ್ತ), ʻಎಂಇಜಿ ನಿರ್ಮಿಸಿದ ಸೇತುವೆ 24 ಟನ್ ಹೊರುವ ಸಾಮರ್ಥ್ಯವನ್ನು ಹೊಂದಿದೆ,ʼ ಎಂದು ಎಕ್ಸ್‌ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.