ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ, ಡೌನ್‌ಲೋಡ್ ಅಪರಾಧ: ಸುಪ್ರೀಂಕೋರ್ಟ್
ಮಕ್ಕಳ ಅಶ್ಲೀಲ ಚಿತ್ರಗಳ ಡೌನ್‌ಲೋಡ್, ವೀಕ್ಷಣೆ ಅಪರಾಧವಲ್ಲ ಎಂಬ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಕೇಂದ್ರ ಸರ್ಕಾರವು ಪೋಕ್ಸೊ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವುದನ್ನು ಪರಿಗಣಿಸಬಹುದು ಎಂದು ಹೇಳಿದೆ.
ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಮತ್ತು ಡೌನ್‌ಲೋಡ್ ಮಾಡುವುದು ಪೋಕ್ಸೊ ಹಾಗೂ ಐಟಿ ಕಾನೂನಿನ ಪ್ರಕಾರ ಅಪರಾಧ ಎಂದು ಸುಪ್ರೀಂ ಕೋರ್ಟ್ ಸೋಮವಾರ (ಸೆ.23) ಹೇಳಿದೆ.
ಮಕ್ಕಳ ಅಶ್ಲೀಲ ಚಿತ್ರಗಳ ಡೌನ್‌ಲೋಡ್ ಮಾಡುವಿಕೆ ಮತ್ತು ವೀಕ್ಷಣೆ ಅಪರಾಧವಲ್ಲ ಎಂಬ ಮದ್ರಾಸ್ ಹೈಕೋರ್ಟ್ ಆದೇಶವನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ಅದರ ಕಾನೂನು ಪರಿಣಾಮಗಳ ಕುರಿತು ನ್ಯಾಯಾಲಯ ಮಾರ್ಗಸೂಚಿಗಳನ್ನು ರೂಪಿಸಿದೆ.
ಮದ್ರಾಸ್ ಹೈಕೋರ್ಟಿನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮು.ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ ಈ ತೀರ್ಪು ನೀಡಿದೆ.
ತನ್ನ ಮೊಬೈಲ್ ಫೋನ್‌ನಲ್ಲಿ ಮಕ್ಕಳಿರುವ ಅಶ್ಲೀಲ ವಿಷಯವನ್ನು ಡೌನ್‌ಲೋಡ್ ಮಾಡಿದ ಆರೋಪದ ಮೇಲೆ 28 ವರ್ಷದ ವ್ಯಕ್ತಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಹೈಕೋರ್ಟ್ ಜನವರಿ 11 ರಂದು ರದ್ದುಗೊಳಿಸಿತ್ತು.
ʻಇತ್ತೀಚೆಗೆ ಮಕ್ಕಳು ಅಶ್ಲೀಲ ಚಿತ್ರಗಳನ್ನು ನೋಡುವ ಗಂಭೀರ ಸಮಸ್ಯೆಯಿಂದ ತೊಳಲುತ್ತಿದ್ದಾರೆ. ಅವರನ್ನು ಶಿಕ್ಷಿಸುವ ಬದಲು ಸಮಾಜ ಅವರಿಗೆ ಶಿಕ್ಷಣ ನೀಡುವ ಪ್ರಬುದ್ಧತೆ ಬೆಳೆಸಬೇಕು,ʼ ಎಂದು ಹೈಕೋರ್ಟ್ ಹೇಳಿತ್ತು.
ಫರೀದಾಬಾದ್ ಮೂಲದ ಎನ್‌ಜಿಒ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲಯನ್ಸ್ ಮತ್ತು ನವದೆಹಲಿ ಮೂಲದ ಬಚ್‌ಪನ್ ಬಚಾವೋ ಆಂದೋಲನ ಪರ ವಕೀಲ ಎಚ್.ಎಸ್. ಫೂಲ್ಕಾ ಅವರ ʻಹೈಕೋರ್ಟ್ ತೀರ್ಪು ಕಾನೂನಿಗೆ ವಿರುದ್ಧವಾಗಿದೆʼ ಎಂದ ಸಲ್ಲಿಕೆಯನ್ನು ಸುಪ್ರೀಂ ಕೋರ್ಟ್ ಮನ್ನಿಸಿತು.
ಹಲವು ಸಲಹೆ ನೀಡಿದ ಸುಪ್ರೀಂ: ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಮತ್ತು ಡೌನ್‌ಲೋಡ್ ಮಾಡುವಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಮದ್ರಾಸ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದೆ. ಇದರ ವಿರುದ್ಧ ಹೋರಾಡಲು ಕೆಲವು ಸಲಹೆಗಳನ್ನು ನೀಡಿದೆ; ಮು.ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರ ಪೀಠವು ಪೋಕ್ಸೊ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವುದನ್ನು ಕೇಂದ್ರ ಪರಿಗಣಿಸಬಹುದು ಎಂದು ಹೇಳಿದೆ.
ಚೈಲ್ಡ್ ಪೋರ್ನೋಗ್ರಫಿ ಪದ ಬದಲಾವಣೆ: ʼಮಕ್ಕಳ ಅಶ್ಲೀಲ ಚಿತ್ರʼ ಎಂಬ ಪದವನ್ನು ʻಮಕ್ಕಳ ಲೈಂಗಿಕ ಶೋಷಣೆ ಮತ್ತು ದುರುಪಯೋಗ ವಸ್ತು(ಸಿಎಸ್‌ಇಎಎಂ)ʼ ಎಂಬುದರಿಂದ ಬದಲಿಸಲು ಪೋಸ್ಕೋ ಕಾಯಿದೆಗೆ ತಿದ್ದುಪಡಿ ತರುವುದನ್ನು ಸಂಸತ್ತು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದೆ. ಅದು ಅಂತಹ ಅಪರಾಧಗಳ ವಾಸ್ತವತೆಯನ್ನು ಹೆಚ್ಚು ನಿಖರವಾಗಿ ಪ್ರತಿಬಿಂಬಿಸುತ್ತದೆ.
ʻಯಾವುದೇ ನ್ಯಾಯಾಂಗ ಆದೇಶ ಅಥವಾ ತೀರ್ಪಿನಲ್ಲಿ 'ಮಕ್ಕಳ ಅಶ್ಲೀಲತೆ' ಎಂಬ ಪದ ಬಳಸಬಾರದು; ಬದಲಾಗಿ 'ಮಕ್ಕಳ ಲೈಂಗಿಕ ಶೋಷಣೆ ಮತ್ತು ದುರುಪಯೋಗ ವಸ್ತು' (ಸಿಎಸ್‌ಇಎಎಂ) ಪದ ಬಳಸಬೇಕು ಎಂದು ನ್ಯಾಯಾಲಯಗಳ ಗಮನಕ್ಕೆ ತರುತ್ತೇವೆ,ʼ ಎಂದು ಪೀಠ ಹೇಳಿದೆ.
ಲೈಂಗಿಕ ಶಿಕ್ಷಣ ಕಾರ್ಯಕ್ರಮ: ಮಕ್ಕಳಿಗೆ ಸಮಗ್ರ ಲೈಂಗಿಕ ಶಿಕ್ಷಣ ಕಾರ್ಯಕ್ರಮ ಅನುಷ್ಠಾನಗೊಳಿಸುವುದರಿಂದ ಸಂಭವನೀಯ ಅಪರಾಧಿಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಪೀಠವು ತನ್ನ 200 ಪುಟಗಳ ತೀರ್ಪಿನಲ್ಲಿ ಹೇಳಿದೆ.
ʻಈ ಲೈಂಗಿಕ ಶಿಕ್ಷಣ ಕಾರ್ಯಕ್ರಮಗಳು ಸಾಮಾನ್ಯ ತಪ್ಪುಗ್ರಹಿಕೆಗಳನ್ನು ಪರಿಹರಿಸಬೇಕು; ಯುವಜನರಿಗೆ ಸಮ್ಮತಿ ಮತ್ತು ಶೋಷಣೆಯ ಪರಿಣಾಮ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡಬೇಕು,ʼ ಎಂದು ಹೇಳಿದೆ.
ಶಾಲೆಗಳ ಪಾತ್ರ: ಆರೋಗ್ಯಕರ ಸಂಬಂಧ, ಸಮ್ಮತಿ ಮತ್ತು ಸೂಕ್ತ ನಡವಳಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮತ್ತು ಸಮಸ್ಯಾತ್ಮಕ ಲೈಂಗಿಕ ನಡವಳಿಕೆ (ಪಿಎಸ್‌ಬಿ)ಗಳನ್ನು ತಡೆಯಲು ನೆರವಾಗುವ ಶಾಲಾಧಾರಿತ ಕಾರ್ಯಕ್ರಮಗಳು ಆರಂಭದಲ್ಲೇ ಗುರುತಿಸುವಿಕೆ, ಮಧ್ಯಸ್ಥಿಕೆ ಮತ್ತು ಅನುಷ್ಠಾನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ನ್ಯಾಯಾಲಯ ಸೂಚಿಸಿದೆ.
ತಜ್ಞರ ಸಮಿತಿ: ʻಮಕ್ಕಳ ರಕ್ಷಣೆ, ಶಿಕ್ಷಣ ಮತ್ತು ಲೈಂಗಿಕ ಯೋಗಕ್ಷೇಮಕ್ಕೆ ದೃಢ ಮತ್ತು ಉತ್ತಮ ತಿಳಿವಳಿಕೆಯುಳ್ಳ ವಿಧಾನವನ್ನು ಖಾತ್ರಿ ಪಡಿಸಿಕೊಳ್ಳಲು, ಮೇಲಿನ ಸಲಹೆಗಳಿಗೆ ಅರ್ಥಪೂರ್ಣ ಪರಿಣಾಮ ನೀಡಲು ಮತ್ತು ಅಗತ್ಯ ವಿಧಾನಗಳನ್ನು ರೂಪಿಸಲು, ಆರೋಗ್ಯ ಮತ್ತು ಲೈಂಗಿಕ ಶಿಕ್ಷಣಕ್ಕೆ ಸಮಗ್ರ ಕಾರ್ಯಕ್ರಮ ಅಥವಾ ಕಾರ್ಯವಿಧಾನವನ್ನು ರೂಪಿಸಲು ಮತ್ತು ಮಕ್ಕಳಲ್ಲಿ ಪೋಸ್ಕೋ ಕುರಿತು ಜಾಗೃತಿ ಮೂಡಿಸಲು ಪರಿಣತ ಸಮಿತಿಯನ್ನು ರಚಿಸಬಹುದುʼ ಎಂದು ಹೇಳಿದೆ.
ಅಗತ್ಯ ಚಿಕಿತ್ಸೆ: ಸಂತ್ರಸ್ತರಿಗೆ ಬೆಂಬಲ ಸೇವೆಗಳು ಮತ್ತು ಅಪರಾಧಿಗಳಿಗೆ ಪುನರ್ವಸತಿ ಕಾರ್ಯಕ್ರಮ ಒದಗಿಸುವುದು ಅತ್ಯಗತ್ಯ. ಈ ಸೇವೆಗಳು ಮಾನಸಿಕ ಸಮಾಲೋಚನೆ, ಚಿಕಿತ್ಸಕ ಮಧ್ಯಸ್ಥಿಕೆಗಳು ಮತ್ತು ಮೂಲ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುವ ಶೈಕ್ಷಣಿಕ ಬೆಂಬಲವನ್ನು ಒಳಗೊಂಡಿರಬೇಕು ಎಂದು ಹೇಳಿದೆ.
ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಅಥವಾ ವಿತರಣೆಯಲ್ಲಿ ತೊಡಗಿರುವವರಿಗೆ ಸಂಜ್ಞಾನಾತ್ಮಕ ವರ್ತನಾ ಚಿಕಿತ್ಸೆ (ಸಿಬಿಟಿ, ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ) ಪರಿಣಾಮಕಾರಿ. ಚಿಕಿತ್ಸೆ ಕ್ರಮಗಳು ಸಹಾನುಭೂತಿ ಮೂಡಿಸುವಿಕೆ, ಬಲಿಪಶುಗಳ ಮೇಲಿನ ಪರಿಣಾಮ ಅರ್ಥಮಾಡಿಕೊಳ್ಳುವಿಕೆ ಮತ್ತು ಚಿಂತನಾ ಮಾದರಿಗಳನ್ನು ಬದಲಿಸುವುದರ ಮೇಲೆ ಕೇಂದ್ರೀಕರಿಸಬೇಕು,ʼ ಎಂದು ಹೇಳಿದೆ.
ಸಾರ್ವಜನಿಕ ಅಭಿಯಾನ: ಸಾರ್ವಜನಿಕ ಅಭಿಯಾನಗಳ ಮೂಲಕ ಮಕ್ಕಳ ಲೈಂಗಿಕ ಶೋಷಣೆ ಮತ್ತು ಅದರ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರಿಂದ, ಅದರ ಹರಡುವಿಕೆ ಕಡಿಮೆ ಆಗಲಿದೆ. ಈ ಅಭಿಯಾನಗಳು ಸಮುದಾಯದಲ್ಲಿ ಜಾಗೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರಬೇಕು ಎಂದು ಪೀಠ ಸಲಹೆ ನೀಡಿದೆ.
ಲೈಂಗಿಕ ನಡವಳಿಕೆಗಳ ಗುರುತಿಸುವಿಕೆ: ಅಪಾಯದಲ್ಲಿರುವವರನ್ನು ಮೊದಲೇ ಗುರುತಿಸುವುದು ಮತ್ತು ಸಮಸ್ಯಾತ್ಮಕ ಲೈಂಗಿಕ ನಡವಳಿಕೆ(ಪಿಎಸ್‌ಬಿ) ಹೊಂದಿರುವವರಿಗೆ ಸಲಹೆ-ಥೆರಪಿ ಹಲವು ಹಂತಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ಶಿಕ್ಷಣತಜ್ಞರು, ಆರೋಗ್ಯ ಸೇವೆ ಪೂರೈಕೆ ದಾರರು, ಕಾನೂನು ಜಾರಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತಿತರ ಮಧ್ಯಸ್ಥಗಾರರ ಸಂಘಟಿತ ಪ್ರಯತ್ನ ಅಗತ್ಯವಿದೆ. ಪಿಎಸ್‌ಬಿ ಚಿಹ್ನೆಗಳನ್ನು ಗುರುತಿಸಲು ಶಿಕ್ಷಣತಜ್ಞರು, ಆರೋಗ್ಯ ವೃತ್ತಿಪರರು ಮತ್ತು ಕಾನೂನು ಜಾರಿ ಅಧಿಕಾರಿಗಳಿಗೆ ತರಬೇತಿ ನೀಡಬೇಕು.ಇಂಥ ತರಬೇತಿ ವೃತ್ತಿಪರರಿಗೆ ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸಲು ಮತ್ತು ಪ್ರತಿಕ್ರಿಯಿಸಲು ಸಹಾಯ ಮಾಡುತ್ತವೆ ಎಂದು ಪೀಠ ಹೇಳಿದೆ.
ಕಾನೂನು, ನ್ಯಾಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರಧಾನ ಕಾರ್ಯದರ್ಶಿಗಳಿಗೆ ತೀರ್ಪಿನ ಪ್ರತಿಯನ್ನು ಕಳುಹಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.