Demand for Ladakh Autonomy | ವಾಂಗ್ಚುಕ್ ನಿರಶನ ಅಂತ್ಯ: ಸರ್ಕಾರಕ್ಕೆ ಮನವಿ ಸಲ್ಲಿಕೆ
ಲಡಾಖ್ ಗುಂಪು ಸರ್ಕಾರಕ್ಕೆ ಜ್ಞಾಪಕಪತ್ರವನ್ನು ಸಲ್ಲಿಸಿದೆ. ಶೀಘ್ರದಲ್ಲೇ ಉನ್ನತ ನಾಯಕತ್ವ ಭೇಟಿ ಮಾಡುವ ಭರವಸೆ ನೀಡಲಾಗಿದೆ. ಮಾತುಕತೆಗಾಗಿ ವಾಂಗ್ಚುಕ್ ಅವರು ದೆಹಲಿಯಲ್ಲಿ ಕೆಲವು ದಿನ ಉಳಿಯಲಿದ್ದಾರೆ.
ಲಡಾಖ್ ಸ್ವಾಯತ್ತತೆಗಾಗಿ ಹೋರಾಡುತ್ತಿರುವ ಮ್ಯಾಗ್ಸೆಸ್ಸೆ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಮತ್ತು ಅವರ ತಂಡದ ಸದಸ್ಯರು ಉಪವಾಸವನ್ನು ಕೊನೆಗೊಳಿಸಿದ್ದಾರೆ. ಆ ನಂತರ ರಾಜ್‌ಘಾಟ್‌ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
ಅವರ ಪಾದಯಾತ್ರೆ ಅಕ್ಟೋಬರ್ 2 ರಂದು ರಾಜ್‌ಘಾಟ್‌ನಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ, ದೆಹಲಿ ಗಡಿಯಲ್ಲಿ ಅವರನ್ನು ಬಂಧಿಸಲಾಯಿತು. ತಂಡ ತನ್ನ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಶೀಘ್ರದಲ್ಲೇ ಸಭೆಯ ಭರವಸೆ ನೀಡಲಾಗಿದೆ ಎಂದು ವಾಂಗ್ಚುಕ್ ಹೇಳಿದರು.
ʻ6ನೇ ಪರಿಚ್ಛೇದದಡಿ ಲಡಾಖ್ ನ್ನು ರಕ್ಷಿಸಲು ಸರ್ಕಾರಕ್ಕೆ ಜ್ಞಾಪಕಪತ್ರ ನೀಡಿದ್ದೇವೆ. ಇದರಿಂದ ಅದರ ಪರಿಸರವನ್ನು ಸಂರಕ್ಷಿಸಬಹುದು, ಸ್ಥಳೀಯರಿಗೆ ಆಡಳಿತ ಮತ್ತು ಸಂಪನ್ಮೂಲಗಳನ್ನು ನಿರ್ವಹಿಸುವ ಹಕ್ಕು ಸಿಗಲಿದೆ,ʼ ಎಂದು ವಾಂಗ್ಚುಕ್ ಪತ್ರಕರ್ತರಿಗೆ ತಿಳಿಸಿದರು.
ದೆಹಲಿಯಲ್ಲಿ ಉಳಿಯಬಹುದು
ವಾಂಗ್ಚುಕ್ ಸೇರಿದಂತೆ ಎಲ್ಲ ಪಾದಯಾತ್ರಿಗಳನ್ನು ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ರಾಜಧಾನಿ ಯ ಕೇಂದ್ರ ಭಾಗಗಳಲ್ಲಿ ಸೆಕ್ಷನ್ 163 ವಿಧಿಸಿರುವುದರಿಂದ, ಜಾಥಾ ನಡೆಸುವುದಿಲ್ಲ ಎಂಬ ಭರವಸೆ ನೀಡಿದ ನಂತರ ಬಿಡುಗಡೆಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಸರ್ಕಾರದೊಂದಿಗೆ ಸಭೆ ನಡೆಸಲು ವಾಂಗ್‌ಚುಕ್ ಇನ್ನೂ ಕೆಲವು ದಿನಗಳ ಕಾಲ ದೆಹಲಿಯಲ್ಲಿ ಉಳಿಯಬಹುದು ಎಂದು ಪೊಲೀಸರು ಹೇಳಿದ್ದಾರೆ.
ʻಹಿಮಾಲಯದಲ್ಲಿ ಸ್ಥಳೀಯರನ್ನು ಸಬಲೀಕರಣಗೊಳಿಸಿದರೆ, ಅದನ್ನು ಉತ್ತಮವಾಗಿ ಸಂರಕ್ಷಿಸಬಹುದು. ನಾವು ಲಡಾಖಿಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಬೇಡಿಕೆ ಇಟ್ಟಿದ್ದೇವೆ. ಆರನೇ ಪರಿಚ್ಛೇದ ಅದರ ಒಂದು ಭಾಗ. ಮುಂದಿನ ದಿನಗಳಲ್ಲಿ ನಾವು ಪ್ರಧಾನಿ, ರಾಷ್ಟ್ರಪತಿ ಅಥವಾ ಗೃಹ ಸಚಿವರನ್ನು ಭೇಟಿ ಮಾಡುತ್ತೇವೆ. ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್‌ನ ಪ್ರತಿನಿಧಿಗಳೊಂದಿಗೆ 15 ದಿನಗಳಲ್ಲಿ ಮಾತುಕತೆ ಪುನರಾರಂಭವಾಗಲಿದೆ ಎಂಬ ಭರವಸೆ ನೀಡಲಾಗಿದೆ,ʼ ಎಂದು ವಾಂಗ್ಚುಕ್ ಹೇಳಿದರು.