ಬಿಹಾರದಲ್ಲಿ ರಸ್ತೆ ಬದಿ ಪತ್ತೆಯಾದ ವಿವಿಪ್ಯಾಟ್ ಚೀಟಿಗಳ ರಾಶಿ
x

ಬಿಹಾರದಲ್ಲಿ ರಸ್ತೆ ಬದಿ ಪತ್ತೆಯಾದ ವಿವಿಪ್ಯಾಟ್ ಚೀಟಿಗಳ ರಾಶಿ

ಬಿಹಾರದಲ್ಲಿ ಇತ್ತೀಚೆಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಐತಿಹಾಸಿಕ ಮತದಾನ ದಾಖಲಾಗಿದ್ದು, ಸಮಸ್ತಿಪುರ ಜಿಲ್ಲೆಯಲ್ಲಿ ಶೇ. 71.74 ರಷ್ಟು ಮತದಾನವಾಗಿತ್ತು.


ಬಿಹಾರ ವಿಧಾನಸಭಾ ಚುನಾವಣೆಯ ಮತದಾನದ ಕಾವಿನ ನಡುವೆಯೇ, ಸಮಸ್ತಿಪುರ ಜಿಲ್ಲೆಯ ರಸ್ತೆ ಬದಿಯಲ್ಲಿ ನೂರಾರು ವಿವಿಪ್ಯಾಟ್ ಚೀಟಿಗಳು ಪತ್ತೆಯಾಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ತಕ್ಷಣ ಕ್ರಮ ಕೈಗೊಂಡಿದ್ದು, ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಸಹಾಯಕ ಚುನಾವಣಾ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿದೆ.


ಸಮಸ್ತಿಪುರ ಜಿಲ್ಲೆಯ ಸರಾಯ್‌ರಂಜನ್ ವಿಧಾನಸಭಾ ಕ್ಷೇತ್ರದ ಕಾಲೇಜೊಂದರ ಬಳಿ ರಸ್ತೆ ಬದಿಯಲ್ಲಿ ಈ ವಿವಿಪ್ಯಾಟ್ ಚೀಟಿಗಳು ರಾಶಿ ಬಿದ್ದಿರುವುದು ಕಂಡುಬಂದಿದೆ. ಸ್ಥಳೀಯರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ನಂತರ, ಈ ವಿಷಯವು ಚುನಾವಣಾ ಆಯೋಗದ ಗಮನಕ್ಕೆ ಬಂದಿದೆ. ಈ ವಿಡಿಯೋದಲ್ಲಿ, ಆರ್‌ಜೆಡಿ ಪಕ್ಷದ ಚಿಹ್ನೆ (ಲಾಂದ್ರ) ಇರುವ ಚೀಟಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡುಬಂದಿದ್ದು, ಇದು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ

ಚುನಾವಣಾ ಆಯೋಗದ ಸ್ಪಷ್ಟನೆ

ಈ ಘಟನೆಯು ಮತದಾನ ಪ್ರಕ್ರಿಯೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯು ಕೂಡಲೇ ಸ್ಪಷ್ಟನೆ ನೀಡಿದೆ. "ರಸ್ತೆ ಬದಿಯಲ್ಲಿ ಪತ್ತೆಯಾಗಿರುವುದು ಅಣಕು ಮತದಾನದ (Mock Poll) ವಿವಿಪ್ಯಾಟ್ ಸ್ಲಿಪ್‌ಗಳು. ಇವುಗಳನ್ನು ಮತದಾನ ಆರಂಭಕ್ಕೂ ಮುನ್ನ, ಯಂತ್ರಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಬಳಸಲಾಗಿತ್ತು," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಈ ಘಟನೆಯಿಂದ ಮತದಾನ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಯಾವುದೇ ರೀತಿಯ ಧಕ್ಕೆಯುಂಟಾಗಿಲ್ಲ. ಈ ಬಗ್ಗೆ, ಕ್ಷೇತ್ರದಲ್ಲಿ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳಿಗೂ ಜಿಲ್ಲಾಧಿಕಾರಿಗಳ ಮೂಲಕ ಮಾಹಿತಿ ನೀಡಲಾಗಿದೆ," ಎಂದು ಆಯೋಗ ತಿಳಿಸಿದೆ.

ಅಧಿಕಾರಿಯ ಮೇಲೆ ಕ್ರಮ

ಅಣಕು ಮತದಾನದ ನಂತರ ಈ ಚೀಟಿಗಳನ್ನು ನಿಯಮಾನುಸಾರ ನಾಶಪಡಿಸದೆ, ಬೇಜವಾಬ್ದಾರಿತನದಿಂದ ರಸ್ತೆ ಬದಿ ಎಸೆದಿರುವುದು ಗಂಭೀರವಾದ ಕರ್ತವ್ಯ ಲೋಪವೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಸಹಾಯಕ ಚುನಾವಣಾ ಅಧಿಕಾರಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬಿಹಾರದಲ್ಲಿ ಇತ್ತೀಚೆಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಐತಿಹಾಸಿಕ ಮತದಾನ ದಾಖಲಾಗಿದ್ದು, ಸಮಸ್ತಿಪುರ ಜಿಲ್ಲೆಯಲ್ಲಿ ಶೇ. 71.74 ರಷ್ಟು ಮತದಾನವಾಗಿತ್ತು. ಇಂತಹ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು, ಚುನಾವಣಾ ಪ್ರಕ್ರಿಯೆಯ ಬಗ್ಗೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸಲು ಕಾರಣವಾಗಿದೆ.

Read More
Next Story