
'ವೋಟ್ ಚೋರ್, ಗದ್ದಿ ಚೋಡ್': ದೆಹಲಿಯಲ್ಲಿ ಕಾಂಗ್ರೆಸ್ ರಣಕಹಳೆ; 'ಆಳಂದ ಅಕ್ರಮ'ವೇ ಅಸ್ತ್ರ
ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಬರೋಬ್ಬರಿ 6,000 ಮತಗಳ ಕಳ್ಳತನ ಪ್ರಕರಣವನ್ನು ಕಾಂಗ್ರೆಸ್ ಮುನ್ನೆಲೆಗೆ ತಂದಿದೆ.
ಚುನಾವಣಾ ಅಕ್ರಮಗಳು ಮತ್ತು ಮತದಾರರ ಪಟ್ಟಿ ತಿರುಚುವಿಕೆ ಆರೋಪದಡಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಭಾನುವಾರ (ಡಿ.14) ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.
'ವೋಟ್ ಚೋರ್, ಗದ್ದಿ ಚೋಡ್' (ಮತ ಕಳ್ಳರೇ, ಅಧಿಕಾರ ಬಿಡಿ) ಎಂಬ ಘೋಷವಾಕ್ಯದಡಿ ನಡೆಯುತ್ತಿರುವ ಈ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ನೇತೃತ್ವ ವಹಿಸಿದ್ದು, ಕರ್ನಾಟಕದಿಂದಲೂ ಸಾವಿರಾರು ನಾಯಕರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.
ಈ ಪ್ರತಿಭಟನೆಗೆ ಪ್ರಮುಖ ಕಾರಣವಾಗಿರುವುದು ದೇಶಾದ್ಯಂತ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್‌ನ ಗಂಭೀರ ಆರೋಪ. ಇದಕ್ಕೆ ಸಾಕ್ಷಿ ಎಂಬಂತೆ, ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಬರೋಬ್ಬರಿ 6,000 ಮತಗಳ ಕಳ್ಳತನ ಪ್ರಕರಣವನ್ನು ಕಾಂಗ್ರೆಸ್ ಮುನ್ನೆಲೆಗೆ ತಂದಿದೆ.
ಕರ್ನಾಟಕದಿಂದ ದೆಹಲಿಗೆ ಹರಿದುಬಂದ ಜನಸಾಗರ
ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದ ಕಾಂಗ್ರೆಸ್ ಶಾಸಕರು, ಎಂಎಲ್‌ಸಿಗಳು ಮತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಈ ರ‍್ಯಾಲಿಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿಳಿದಿದ್ದಾರೆ. ವಿಮಾನ ಮತ್ತು ರೈಲುಗಳ ಮೂಲಕ ಆಗಮಿಸಿರುವ ಇವರು, ರಾಮಲೀಲಾ ಮೈದಾನದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. "ಇದು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟ. ಆಳಂದದಲ್ಲಿ ನಡೆದಿರುವುದು ಕೇವಲ ಒಂದು ಉದಾಹರಣೆ ಅಷ್ಟೇ, ಇಡೀ ದೇಶದಲ್ಲಿ ಇಂತಹ ವ್ಯವಸ್ಥಿತ ಸಂಚು ನಡೆದಿದೆ," ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಳಂದ ಪ್ರಕರಣ: ಬಿಜೆಪಿಗೆ ಉರುಳಾದ 20,000 ಪುಟಗಳ ಚಾರ್ಜ್‌ಶೀಟ್!
ದೆಹಲಿ ರ‍್ಯಾಲಿಗೆ ಕೇವಲ ಎರಡು ದಿನಗಳ ಮುಂಚಿತವಾಗಿ, ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿನ ಮತ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (SIT) ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿ (Chargesheet) ಕಾಂಗ್ರೆಸ್ ಪಾಲಿಗೇ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ಈ ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಮತ್ತು ಅವರ ಮಗ ಹರ್ಷಾನಂದ ಗುತ್ತೇದಾರ್ ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಪ್ರಕರಣದ ವಿವರಗಳೇನು?
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ, ಆಳಂದ ಕ್ಷೇತ್ರದಲ್ಲಿ ತಮ್ಮ ವಿರೋಧಿಗಳ ಮತಗಳನ್ನು ಪಟ್ಟಿಯಿಂದ ತೆಗೆದುಹಾಕಲು ವ್ಯವಸ್ಥಿತ ಸಂಚು ನಡೆದಿತ್ತು ಎಂದು ಎಸ್‌ಐಟಿ ತನಿಖೆಯಲ್ಲಿ ದೃಢಪಟ್ಟಿದೆ. 6,000 ಮತಗಳಿಗೆ ಕತ್ತರಿ: ಸುಮಾರು 6,000 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು 'ಫಾರಂ-7' ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ತನಿಖೆಯ ವೇಳೆ ಪರಿಶೀಲಿಸಿದ 6,018 ಅರ್ಜಿಗಳಲ್ಲಿ ಕೇವಲ 24 ಮಾತ್ರ ನೈಜವಾಗಿದ್ದು, ಉಳಿದ 5,994 ಅರ್ಜಿಗಳು ನಕಲಿ ಎಂದು ತಿಳಿದುಬಂದಿದೆ.
ಟೆಕ್ನಾಲಜಿ ದುರ್ಬಳಕೆ: ಕಲಬುರಗಿಯಲ್ಲಿ ಕಾಲ್ ಸೆಂಟರ್ ಮಾದರಿಯ ಸಂಸ್ಥೆಯೊಂದನ್ನು ಬಳಸಿಕೊಂಡು, ನಕಲಿ ಲಾಗಿನ್ ಐಡಿಗಳ ಮೂಲಕ ಈ ಕೃತ್ಯ ಎಸಗಲಾಗಿದೆ. ಮತದಾರರಿಗೆ ತಿಳಿಯದಂತೆಯೇ ಅವರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲು ಅರ್ಜಿ ಹಾಕಲಾಗಿತ್ತು.
ಬೃಹತ್ ಚಾರ್ಜ್‌ಶೀಟ್: ಈ ಪ್ರಕರಣದ ಗಂಭೀರತೆಯನ್ನು ತೋರಿಸುವಂತೆ, ಎಸ್‌ಐಟಿ ಬರೋಬ್ಬರಿ 20,000ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಇದರಲ್ಲಿ ಐಪಿ ಅಡ್ರೆಸ್‌ಗಳ ಮಾಹಿತಿ, ನಕಲಿ ದಾಖಲೆಗಳ ವಿವರಗಳನ್ನು ಎಲೆಕ್ಷನ್ ಕಮಿಷನ್ ದತ್ತಾಂಶದೊಂದಿಗೆ ತಾಳೆ ಮಾಡಿ ಸಾಕ್ಷ್ಯ ಒದಗಿಸಲಾಗಿದೆ.
ಆಳಂದದಲ್ಲಿ ನಡೆದ ಈ "ಮತ ಕಳ್ಳತನ" ಪ್ರಕರಣವನ್ನೇ ಉದಾಹರಣೆಯಾಗಿಟ್ಟುಕೊಂಡು, ರಾಹುಲ್ ಗಾಂಧಿ ಮತ್ತು ಖರ್ಗೆ ಅವರು ರಾಮಲೀಲಾ ಮೈದಾನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. "ಕರ್ನಾಟಕದಲ್ಲಿ ಸಿಕ್ಕಿಬಿದ್ದಿರುವ ಸಾಕ್ಷ್ಯಗಳು, ನಮ್ಮ ಆರೋಪಗಳು ಸತ್ಯ ಎಂಬುದನ್ನು ಸಾಬೀತುಪಡಿಸಿವೆ," ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸುತ್ತಿದ್ದಾರೆ.
Live Updates
- 14 Dec 2025 4:08 PM IST
ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
'ವೋಟ್ ಚೋರ್, ಗಡ್ಡಿ ಛೋಡ್' ಅಭಿಯಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಕುಶಲತೆಯಿಂದ ನಿರ್ವಹಿಸಿ, ಬಿಜೆಪಿ ಗೆಲುವಿಗೆ ನೆರವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಎಕ್ಸಿಟ್ ಪೋಲ್‌ಗಳು ವಿರೋಧ ಪಕ್ಷಗಳ ಗೆಲುವು ಸಾಧಿಸುವ ಕುರಿತು ನೀಡಿದ ಮುನ್ಸೂಚನೆಗಳ ಬಳಿಕ ಪಾರದರ್ಶಕ ಇವಿಎಂ ಮತ್ತು ಸಂರಕ್ಷಿತ ಸಿಸಿಟಿವಿ ದೃಶ್ಯಾವಳಿಗಳಂತಹ ಸುಧಾರಣೆಗೆ ಒತ್ತಾಯಿಸಿ 5.5 ಕೋಟಿ ಸಹಿ ಸಂಗ್ರಹಿಸಲಾಗಿದೆ. ಚುನಾವಣಾ ಆಯೋಗವು ತಮ್ಮ ಆರೋಪಗಳನ್ನು ಆಧಾರರಹಿತ ಎಂದು ತಿರಸ್ಕರಿಸುತ್ತಿದೆ. ಆದರೆ, ತಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ಆಗುತ್ತಿಲ್ಲ ಎಂದು ದೂರಿದರು.


