ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯಕ್ಕಾಗಿ ಇಂಡಿಯ ಒಕ್ಕೂಟ ಬೆಂಬಲಿಸಿ: ಸ್ಟಾಲಿನ್
ಧರ್ಮಪುರಿ (ತಮಿಳುನಾಡು), ಮಾ.30- ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ನೆಲೆಸಬೇಕಾದರೆ, ಇಂಡಿಯ ಒಕ್ಕೂಟಕ್ಕೆ ಮತ ನೀಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ ನೀಡಿದ್ದಾರೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದ ಸ್ಟಾಲಿನ್, ʻಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ಹಣವಿಲ್ಲ ಎಂಬ ಅವರ ಹೇಳಿಕೆ ನಿಜವಾಗಿದ್ದರೆ, ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಪಡೆದ ಹಣ ಏನಾಯಿತುʼ ಎಂದು ಪ್ರಶ್ನಿಸಿದರು. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಿರ್ಮಲಾ ಸೀತಾರಾಮನ್ ಅವರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿ ಸಲು ʻಬೇಕಿರುವಷ್ಟು ಹಣʼ ತಮ್ಮ ಬಳಿ ಇಲ್ಲ ಎಂದು ಹೇಳಿದ್ದರು.
ʻನೀವು ಚುನಾವಣೆಗೆ ಸ್ಪರ್ಧಿಸಬೇಕೆಂದರೆ, ಜನರನ್ನು ಭೇಟಿಯಾಗಬೇಕು ಮತ್ತು ಜನರ ಕಲ್ಯಾಣಕ್ಕಾಗಿ ಶ್ರಮಿಸಬೇಕು; ಜನ ನಿಮಗೆ ಮತ ಹಾಕುವುದಿಲ್ಲ ಎಂದು ನಿಮಗೆ ತಿಳಿದಿರುವುದರಿಂದ, ಸ್ಪರ್ಧಿಸದಿರಲು ನಿರ್ಧರಿಸಿದ್ದೀರಿʼ ಎಂದು ಹೇಳಿದರು.
ಡಿಎಂಕೆಯ ಧರ್ಮಪುರಿ ಅಭ್ಯರ್ಥಿ ಎ. ಮಣಿ ಮತ್ತು ಕೃಷ್ಣಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಿನಾಥ್ ಪರ ಪ್ರಚಾರ ನಡೆಸಿದ ಸ್ಟಾಲಿನ್, ʻದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಜನರು ಇಂಡಿಯ ಒಕ್ಕೂಟಕ್ಕೆ ಮತ ನೀಡಬೇಕುʼ ಎಂದು ಹೇಳಿದರು. ʻಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಜನರನ್ನು ಒಡೆಯಲು ಬಿಜೆಪಿ ಬಯಸುತ್ತಿದೆ. ಮುಂಬರುವ ಚುನಾವಣೆ ದೇಶದ ಇತಿಹಾಸದಲ್ಲಿ ಪ್ರಮುಖವಾದದ್ದು. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಮನೆಗೆ ಕಳುಹಿಸುವ ಸಮಯ ಬಂದಿದೆʼ ಎಂದು ಸಾರ್ವಜನಿಕರ ಕರತಾಡನದ ನಡುವೆ ಹೇಳಿದರು.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ನಾಯಕ ಎಸ್. ರಾಮದಾಸ್ ಅವರನ್ನು ಗುರಿಯಾಗಿಸಿ ಕೊಂಡು, ʻಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಕೇಸರಿ ಪಕ್ಷವನ್ನು ಸೇರುವ ನಿರ್ಧಾರದ ಹಿಂದಿನ ರಹಸ್ಯವೇನು? ಬಿಜೆಪಿ ಈ ಹಿಂದೆ ಪಿಎಂಕೆಯ ನೀತಿಗಳನ್ನು ಅನುಮೋದಿಸಿಲ್ಲ.ಹೀಗಿದ್ದರೂ, ಅವರು (ಎಸ್.ರಾಮದಾಸ್) ಬಿಜೆಪಿ ಜೊತೆ ಸೇರಲು ಕಾರಣವೇನು?ʼ ಎಂದು ಅವರು ಕೇಳಿದರು.
ಜಾತಿ ಆಧಾರಿತ ಜನಗಣತಿಯನ್ನು ಬೆಂಬಲಿಸಿದ ಸ್ಟಾಲಿನ್, ʻದೇಶಾದ್ಯಂತ ಜಾತಿ ಆಧಾರಿತ ಜನಗಣತಿ ನಡೆಸುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇದೆ. ರಾಜ್ಯ ಸರ್ಕಾರ ಜಾತಿ ಆಧಾರಿತ ಸಮೀಕ್ಷೆಯನ್ನು ನಡೆಸಲು ಸಾಧ್ಯವಿದೆಯೇ ಹೊರತು ಜನಗಣತಿಯನ್ನಲ್ಲ,ʼ ಎಂದು ವಿವರಿಸಿದರು. ʻ12 ವರ್ಷ ಗುಜರಾತ್ ಮುಖ್ಯಮಂತ್ರಿ ಯಾಗಿದ್ದ ಪ್ರಧಾನಿ, ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಡುಗೆ ಅನಿಲ ಮತ್ತು ಇಂಧನ ಬೆಲೆ ಕಡಿಮೆ ಮಾಡಿದ್ದಾರೆʼ ಎಂದು ಹೇಳಿದರು.
ಡಿಎಂಕೆ ನೇತೃತ್ವದ ಸರ್ಕಾರ ಜನರ ಕಲ್ಯಾಣಕ್ಕಾಗಿ ಪ್ರಾರಂಭಿಸಿದ ಯೋಜನೆಗಳನ್ನು ವಿವರಿಸಿದರು.