
ಇಂದು ವಿಜಯ್ ದಿವಸ್; ಪಾಕ್ ವಿರುದ್ಧ ಭಾರತ ಐತಿಹಾಸಿಕ ಗೆಲುವು ಸಾಧಿಸಿದ ದಿನ
ಭಾರತೀಯ ಸೇನೆ ಇದೇ ದಿನದಂದು 1971ರಲ್ಲಿ ಇದೇ ದಿನ ಪಾಕ್ ಸೇನೆಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ಬಾಂಗ್ಲಾ ವಿಮೋಚನೆಗೆ ಸಹಾಯ ಮಾಡಿತ್ತು.
ಇಂದು ಇಡೀ ದೇಶವೇ ವಿಜಯ್ ದಿವಸ್ ಆಚರಿಸುತ್ತಿದೆ. ಭಾರತೀಯ ಸೇನೆ ಇದೇ ದಿನದಂದು 1971ರಲ್ಲಿ ಇದೇ ದಿನ ಪಾಕ್ ಸೇನೆಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ಬಾಂಗ್ಲಾ ವಿಮೋಚನೆಗೆ ಸಹಾಯ ಮಾಡಿತ್ತು. ಭಾರತೀಯ ಸೇನೆಯ ಪರಾಕ್ರಮದ ಮುಂದೆ ಪಾಕಿಸ್ತಾನಿ ಸೇನೆಯು ಶರಣಾಯಿತು. ಪರಿಣಾಮವಾಗಿ ಬಾಂಗ್ಲಾದೇಶ ಸ್ವಾತಂತ್ರ್ಯವನ್ನು ಪಡೆಯಿತು.
ಬರೋಬ್ಬರಿ 13ದಿನಗಳ ಯುದ್ಧ
1971ರ ಭಾರತ ಮತ್ತು ಪಾಕಿಸ್ತಾನ ಯುದ್ಧವು ಬರೋಬ್ಬರಿ 13 ದಿನಗಳ ಕಾಲ ನಡೆಯಿತು. ಇಂದು, ಈ ಐತಿಹಾಸಿಕ ವಿಜಯದ ಭಾರತೀಯ ಸೇನೆಯ ವೀರ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಇಡೀ ರಾಷ್ಟ್ರವು ಸ್ಮರಿಸುತ್ತದೆ. ಈ ದಿನದಂದು, 1971 ರ ಇಂಡೋ-ಪಾಕ್ ಯುದ್ಧದಲ್ಲಿ ಭಾಗವಹಿಸಿದ ಎಲ್ಲಾ ಮಾಜಿ ಸೈನಿಕರನ್ನು ಹಾಗೂ ಹುತಾತ್ಮ ಸೈನಿಕರ ಪತ್ನಿಯರು ಮತ್ತು ಕುಟುಂಬಗಳನ್ನು ಗೌರವಿಸಲು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮಾಜಿ ಸೈನಿಕರನ್ನು ಅವರ ಅತ್ಯುತ್ತಮ ಕೆಲಸ, ಧೈರ್ಯ ಮತ್ತು ತ್ಯಾಗಕ್ಕಾಗಿ ಗೌರವಿಸಲಾಗುತ್ತದೆ. ಯುವಜನರು ಸಶಸ್ತ್ರ ಪಡೆಗಳಿಗೆ ಸೇರಲು ಮತ್ತು ದೇಶವನ್ನು ರಕ್ಷಿಸಲು ಪ್ರೇರೇಪಿಸಲು ವಿವಿಧ ಸ್ಥಳಗಳಲ್ಲಿ ದೇಶಭಕ್ತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಯುದ್ಧಕ್ಕೆ ಕಾರಣವೇನು?
1971ರ ಯುದ್ಧ ಪೂರ್ವ ಪಾಕಿಸ್ತಾನದ ಬಂಗಾಳಿ ಭಾಷಿಕ ಬಹುಸಂಖ್ಯಾತರ ಮೇಲೆ ಪಾಕಿಸ್ತಾನ ಸೇನೆಯ ದುರ್ನಡತೆಯ ಕಾರಣದಿಂದ ಉಂಟಾಗಿತ್ತು. 1970ರಲ್ಲಿ ನಡೆದ ಪಾಕಿಸ್ತಾನದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನ ಮೂಲದ, ಶೇಖ್ ಮುಜಿಬುರ್ ರೆಹಮಾನ್ ನೇತೃತ್ವದ ಆವಾಮಿ ಲೀಗ್ ಜಯಶಾಲಿಯಾಗಿತ್ತು. ಆದರೆ ಪಾಕಿಸ್ತಾನಿ ಸೇನೆ ಬಲಪ್ರಯೋಗ ನಡೆಸಿ, ಆವಾಮಿ ಲೀಗ್ ಅಧಿಕಾರಕ್ಕೆ ಬರದಂತೆ ಮಾಡಲು ಪ್ರಯತ್ನಿಸಿತು. ಈ ದಾಳಿಗಳ ಪರಿಣಾಮವಾಗಿ ಅಸಂಖ್ಯಾತ ಬಾಂಗ್ಲಾದೇಶೀಯರು ಗಡಿ ದಾಟಿ ಭಾರತಕ್ಕೆ ಪಲಾಯನ ಮಾಡತೊಡಗಿದರು. ಇದು ಭಾರತ ಮಧ್ಯ ಪ್ರವೇಶಿಸುವುದು ಅನಿವಾರ್ಯವಾಗುವಂತೆ ಮಾಡಿತು.
ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನ ಎಂಬುದಿತ್ತು. ಬಂಗಾಳದ ಹೆಚ್ಚಿನ ಭಾಗವನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಪೂರ್ವ ಪಾಕಿಸ್ತಾನವು ಜನಸಂಖ್ಯೆಯ 56 ಪ್ರತಿಶತದಷ್ಟು ಜನರಿಗೆ ನೆಲೆಯಾಗಿತ್ತು ಮತ್ತು ಅವರ ಭಾಷೆ ಬಂಗಾಳಿಯಾಗಿತ್ತು. ಏತನ್ಮಧ್ಯೆ, ಪಶ್ಚಿಮ ಪಾಕಿಸ್ತಾನದಲ್ಲಿ ಪಂಜಾಬಿ, ಸಿಂಧಿ, ಬಲೂಚಿ ಮತ್ತು ಪಾಷ್ಟೋ ಮುಂತಾದ ಭಾಷೆಗಳನ್ನು ಮಾತನಾಡಲಾಗುತ್ತಿತ್ತು.
ಭಾರತ-ಪಾಕ್ ಯುದ್ಧದ ಸಮಯದಲ್ಲಿ ಜನರಲ್ ಸ್ಯಾಮ್ ಮಾಣೆಕ್ ಶಾ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದರು. ಈ ಯುದ್ಧದಲ್ಲಿ ಸುಮಾರು 3,900 ಭಾರತೀಯ ಸೈನಿಕರು ಹುತಾತ್ಮರಾದರು ಮತ್ತು 9,851 ಜನರು ಗಾಯಗೊಂಡರು. 1971ರ ಯುದ್ಧ ಕೇವಲ ಬಾಂಗ್ಲಾದೇಶದ ಉದಯಕ್ಕೆ ಮಾತ್ರ ಕಾರಣವಾಗಿದ್ದಲ್ಲ. ಅದರೊಡನೆ ಪಾಕಿಸ್ತಾನಕ್ಕೆ ಸಹಿಸಲಾರದ ಹೊಡೆತವನ್ನೂ ನೀಡಿತ್ತು. ಪಾಕಿಸ್ತಾನಿ ಸೇನೆಯ ಮಹಾ ದಂಡನಾಯಕ ಅಬ್ದುಲ್ಲಾ ಖಾನ್ ನಿಯಾಜಿ಼ ಭಾರತೀಯ ಸೇನೆ ಹಾಗೂ ಬಾಂಗ್ಲಾದೇಶದ ಮುಕ್ತಿ ಬಾಹಿನಿಯ ಬಳಿ ಶರಣಾಗತಿಗೆ ಸಹಿ ಹಾಕಿದ್ದು ಏಷ್ಯಾ ಉಪಖಂಡದಲ್ಲಿ ಭಾರತದ ನಾಯಕತ್ವಕ್ಕೆ ಭದ್ರ ಬುನಾದಿ ಹಾಕಿತ್ತು.
93,000 ಪಾಕಿಸ್ತಾನಿ ಸೈನಿಕರ ಶರಣಾಗತಿ
ಮೇಜರ್ ಜನರಲ್ ನಿಯಾಜಿ಼ ತನ್ನ 93,000 ಸೈನಿಕರ ಪಡೆಯೊಂದಿಗೆ ಭಾರತೀಯ ಸೇನಾ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಮುಂದೆ ಶರಣಾದರು. ಆಗ ಜಗಜಿತ್ ಸಿಂಗ್ ಅವರು ಭಾರತೀಯ ಸೇನೆಯ ಪೂರ್ವ ಕಮಾಂಡಿನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿದ್ದರು. ಪಾಕಿಸ್ತಾನದ ಶರಣಾಗತಿ ಎರಡನೇ ಮಹಾಯುದ್ಧದ ಬಳಿಕದ ಅತಿದೊಡ್ಡ ಸಂಖ್ಯೆಯ ಸೇನಾ ಶರಣಾಗತಿ ಎನಿಸಿಕೊಂಡಿತು.
ದೆಹಲಿಯಲ್ಲಿ ಕಾರ್ಯಕ್ರಮ
ನಿನ್ನೆ ಭಾರತೀಯ ಸೇನೆಯು ನವದೆಹಲಿಯ ಸೇನಾ ಭವನದಲ್ಲಿ ವಿಜಯ್ ದಿವಸ್-ಅಟ್-ಹೋಮ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳು ಮತ್ತು ವಿಶೇಷ ಸಾಮರ್ಥ್ಯಗಳನ್ನು ಪ್ರದರ್ಶಿಸಿತು. ಇನ್ನು ಇಂದು ಕೂಡ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಮತ್ತು ಸೇನೆ ಹಮ್ಮಿಕೊಂಡಿದೆ.

