Actor Vijay: ವಿಜಯ್ ಪಕ್ಷದ ವಾರ್ಷಿಕೋತ್ಸವಕ್ಕೆ ಪ್ರಶಾಂತ್ ಕಿಶೋರ್ ಸಾಥ್​, 2026ರ ಚುನಾವಣಾ ಸಮರಕ್ಕೆ ವೇದಿಕೆ ಸಿದ್ಧ
x

Actor Vijay: ವಿಜಯ್ ಪಕ್ಷದ ವಾರ್ಷಿಕೋತ್ಸವಕ್ಕೆ ಪ್ರಶಾಂತ್ ಕಿಶೋರ್ ಸಾಥ್​, 2026ರ ಚುನಾವಣಾ ಸಮರಕ್ಕೆ ವೇದಿಕೆ ಸಿದ್ಧ

Actor Vijay ಟಿವಿಕೆಯ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಟ-ರಾಜಕಾರಣಿ ವಿಜಯ್ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಮತ್ತು ಕೇಂದ್ರದಲ್ಲಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.


ನಟ- ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ತಮ್ಮ ಪಕ್ಷದ ಮೊದಲ ವಾರ್ಷಿಕೋತ್ಸವವನ್ನು ಮಹಾಬಲಿಪುರಂನಲ್ಲಿ ಬೃಹತ್​ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ. ಈ ಮೂಲಕ ಅವರು ತಮಿಳುನಾಡಿನ 2026 ರ ಚುನಾವಣೆಗೆ ವೇದಿಕೆ ಸಿದ್ಧಗೊಳಿಸುತ್ತಿರುವ ಸಂದೇಶವನ್ನು ಆಡಳಿತ ಪಕ್ಷಕ್ಕೆ ರವಾನಿಸಿದ್ದಾರೆ. ಆದರೆ, ಈ ಕಾರ್ಯಕ್ರಮದಲ್ಲಿ ಗಮನ ಸೆಳೆದಿರುವುದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಉಪಸ್ಥಿತಿ. ಅವರು ವಿಜಯ್​ ಜತೆ ವೇದಿಕೆಯನ್ನು ಹಂಚಿಕೊಂಡರಲ್ಲದೆ, ಟಿವಿಕೆಯ ಚುನಾವಣಾ ರಣತಂತ್ರಕ್ಕೆ ಕೈಜೋಡಿಸುವ ಮುನ್ಸೂಚನೆ ಕೊಟ್ಟರು.

ಟಿವಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಾಂತ್ ಕಿಶೋರ್ ಉಪಸ್ಥಿತಿಯು ಪಕ್ಷದ ಚುನಾವಣಾ ಕಾರ್ಯತಂತ್ರದ ಚರ್ಚೆಗೆ ಇನ್ನಷ್ಟು ಇಂಬು ನೀಡಿದೆ. ಭಾರತದಾದ್ಯಂತ ಹಲವಾರು ಪಕ್ಷಗಳ ಗೆಲುವಿನ ಅಭಿಯಾನಗಳನ್ನು ರೂಪಿಸಿರುವ ಕಿಶೋರ್, ಟಿವಿಕೆಗೂ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ತಮಿಳುನಾಡಿನ ಹೊಸ ಪಕ್ಷವು, ರಚನಾತ್ಮಕ, ಡೇಟಾ-ಚಾಲಿತ ಪ್ರಚಾರಕ್ಕೆ ಚಾಲನೆ ಕೊಟ್ಟಿರುವುದು ಸ್ಪಷ್ಟವಾಗಿದೆ.

ಕೇಂದ್ರದಲ್ಲಿ ಬಿಜೆಪಿ ಮತ್ತು ತಮಿಳುನಾಡಿನಲ್ಲಿ ಡಿಎಂಕೆಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ #GetOutModi ಮತ್ತು #GetOutStalin ಅಭಿಯಾನಕ್ಕೆ ವಿಜಯ್ ಇದೇ ವೇಳೆ ಸಹಿ ಹಾಕಿದರು. ಎರಡೂ ಸರ್ಕಾರಗಳು ಜನರ ಹಿತಾಸಕ್ತಿಗಳನ್ನು ನಿರ್ಲಕ್ಷಿವೆ ಎಂದು ವಿಜಯ್ ಕಿಡಿ ಕಾರಿದರು.

ವಿಜಯ್ ಅವರ ರಾಜಕೀಯ ಪ್ರವೇಶ, ತಮಿಳು ಚಿತ್ರರಂಗದ ದಂತಕಥೆಗಳಾದ ಎಂಜಿ ರಾಮಚಂದ್ರನ್ (ಎಂಜಿಆರ್) ಮತ್ತು ಜೆ ಜಯಲಲಿತಾ ಅವರ ರಾಜಕೀಯ ಯಶಸ್ಸಿಗಳಿಗೆ ಹೋಲಿಕೆಗಳನ್ನು ಹೊಂದಿದೆ. ಆದಾಗ್ಯೂ ರಾಜ್ಯದ ರಾಜಕೀಯ ಇತಿಹಾಸ ಮತ್ತೊಂದು ಕತೆಯನ್ನೂ ಹೇಳುತ್ತದೆ. ಶಿವಾಜಿ ಗಣೇಶನ್, ವಿಜಯಕಾಂತ್ ಮತ್ತು ಕಮಲ್ ಹಾಸನ್ ತಮ್ಮ ಸ್ಟಾರ್ ಗಿರಿಯನ್ನು ರಾಜಕೀಯ ಯಶಸ್ಸಾಗಿ ಪರಿವರ್ತಿಸಲು ವಿಫಲಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಎಐಡಿಎಂಕೆ ಜತೆ ಮೈತ್ರಿ

ತಮಿಳುನಾಡು ಆಡಳಿತ ಪಕ್ಷವಾದ ಡಿಎಂಕೆಯ ಆಡಳಿತ ಶಕ್ತಿ , ಕಾನೂನು ಮತ್ತು ಸುವ್ಯವಸ್ಥೆ ಮತ್ತು ವಂಶಪಾರಂಪರ್ಯ ರಾಜಕೀಯದ ಬಗ್ಗೆ ವಿಜಯ್ ಕಟು ಪದಗಳ ಟೀಕೆಗಳನ್ನು ಮುಂದುವರಿಸಿದ್ದಾರೆ. ಜತೆಗೆ ಬಿಜೆಪಿಯ "ಒಂದು ರಾಷ್ಟ್ರ, ಒಂದು ಚುನಾವಣೆ" ಪ್ರಸ್ತಾಪದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದ್ದಾರೆ. ಆದರೆ, ಎಐಎಡಿಎಂಕೆ ಬಗ್ಗೆ ಮೌನ ವಹಿಸಿದ್ದು, ಸಂಭಾವ್ಯ ಮೈತ್ರಿಯ ಯೋಜನೆ ಎನ್ನಲಾಗಿದೆ.

ಟಿವಿಕೆ ಇನ್ನೂ ಯಾವುದೇ ಪ್ರಮುಖ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲವಾದರೂ, ವಿಜಯ್- ಎಐಎಡಿಎಂಕೆ ಮೈತ್ರಿ ಮಾಡಿಕೊಂಡರೆ ಆಡಳಿತ ಪಕ್ಷಕ್ಕೆ ಗಂಭೀರ ಸವಾಲು ಎದುರಾಗಲಿದೆ. ಜಯಲಲಿತಾ ಅವರ ನಿಧನದ ನಂತರ ಒಳಜಗಳ ಮತ್ತು ನಾಯಕತ್ವದ ವಿವಾದಗಳಿಂದ ದುರ್ಬಲಗೊಂಡಿರುವ ಎಐಎಡಿಎಂಕೆ, ಚುನಾವಣೆಗೆ ಮುಂಚಿತವಾಗಿ ಬಲಗೊಳ್ಳಲು ನೋಡುತ್ತಿದೆ. ಅದಕ್ಕೆ ವಿಜಯ್​ ನೆರವು ನೀಡುವರೇ ಎಂಬುದೇ ಸದ್ಯದ ರಾಜಕೀಯ ಕುತೂಹಲ.

Read More
Next Story