
ಹಿರಿಯ ನಟಿ ಕಮಲಶ್ರೀ
'ಗಟ್ಟಿಮೇಳ' ಖ್ಯಾತಿಯ ಹಿರಿಯ ನಟಿ ಕಮಲಶ್ರೀ ನಿಧನ
ಕಮಲಶ್ರೀ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಇಂದು (ಅಕ್ಟೋಬರ್ 1) ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
'ಗಟ್ಟಿಮೇಳ' ಧಾರಾವಾಹಿಯಲ್ಲಿ ವೇದಾಂತ್ ಅಜ್ಜಿ ಪಾತ್ರದ ಮೂಲಕ ಮನೆಮಾತಾಗಿದ್ದ ಹಿರಿಯ ನಟಿ ಕಮಲಶ್ರೀ (76) ಅವರು ನಿಧನ ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 30ರಂದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಇಂದು (ಅಕ್ಟೋಬರ್ 1) ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
'ಗಟ್ಟಿಮೇಳ' ಧಾರಾವಾಹಿಯ ಪಾತ್ರದಿಂದ ಅಪಾರ ಜನಪ್ರಿಯತೆ ಗಳಿಸಿದ್ದ ಕಮಲಶ್ರೀ ಅವರು 'ಕಾವೇರಿ ಕನ್ನಡ ಮೀಡಿಯಂ', 'ಪತ್ತೆದಾರಿ ಪ್ರತಿಭಾ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ಡಾ. ರಾಜ್‌ಕುಮಾರ್ ಅವರ ಬ್ಯಾನರ್‌ನಲ್ಲೂ ಕೆಲಸ ಮಾಡಿದ್ದ ಅವರು, ಹಲವಾರು ಸಿನಿಮಾಗಳು ಮತ್ತು ನಾಟಕಗಳಲ್ಲೂ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದರು.
ಒಂಟಿ ಜೀವನ ನಡೆಸುತ್ತಿದ್ದರು
ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದ ಅವರ ಬದುಕಿನ ಕೊನೆಯ ದಿನಗಳು ಅತ್ಯಂತ ನೋವಿನಿಂದ ಕೂಡಿದ್ದವು. ಪತಿ, ಮಕ್ಕಳಾರೂ ಇಲ್ಲದೆ ಒಂಟಿ ಜೀವನ ನಡೆಸುತ್ತಿದ್ದ ಅವರು, 70ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಅನಾರೋಗ್ಯದಿಂದಾಗಿ ದುಡಿಯಲು ಸಾಧ್ಯವಾಗದೆ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದರು.
ಕೆಲವು ತಿಂಗಳ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಮಲಶ್ರೀ ತಮ್ಮ ನೋವನ್ನು ಹಂಚಿಕೊಂಡಿದ್ದರು. "ವಯಸ್ಸಾದ ಕಾರಣ ಸರ್ಜರಿ ಮಾಡಲು ಸಾಧ್ಯವಿಲ್ಲ, ಕಿಮೋಥೆರಪಿಯನ್ನೂ ತಡೆದುಕೊಳ್ಳುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ದುಬಾರಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ, ಇದರಿಂದ ಶೇ. 60ರಷ್ಟು ಸುಧಾರಣೆ ಕಂಡಿದೆ. 'ಗಟ್ಟಿಮೇಳ' ತಂಡದವರು, ಗಿರಿಜಾ ಲೋಕೇಶ್, ಉಮಾಶ್ರೀ ಅವರಂತಹ ಕಲಾವಿದರು ನನಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಬೇರೆಯವರಿಗೆ ಕಷ್ಟ ಕೊಡಲು ಇಷ್ಟವಿಲ್ಲ, ಆದರೆ ಒಳ್ಳೆಯ ಅವಕಾಶಗಳು ಸಿಗುವ ಹೊತ್ತಲ್ಲೇ ದೇವರು ಕಷ್ಟ ಕೊಡುತ್ತಾನೆ," ಎಂದು ಭಾವುಕರಾಗಿ ನುಡಿದಿದ್ದರು. ಅವರ ನಿಧನಕ್ಕೆ ಕಿರುತೆರೆ ಲೋಕ ಕಂಬನಿ ಮಿಡಿದಿದೆ