Vijayawada - Bengaluru closer, Vande Bharat train to start soon
x

ವಂದೇ ಭಾರತ್‌ ರೈಲು.

ಬೆಂಗಳೂರು–ಕೊಚ್ಚಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್; ವೇಳಾಪಟ್ಟಿ ಬಿಡುಗಡೆ; ಇದೇ ತಿಂಗಳಲ್ಲಿ ರೈಲು ಸಂಚಾರ ಆರಂಭ

ವಂದೇ ಭಾರತ್ ರೈಲು ಕೃಷ್ಣರಾಜಪುರಂ( ಕೆ.ಆರ್.ಪುರಂ), ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು, ಪಾಲಕ್ಕಾಡ್ ಹಾಗೂ ತ್ರಿಶೂರ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.


ಕರ್ನಾಟಕ ಮತ್ತು ಕೇರಳ ನಡುವಿನ ರೈಲು ಸಂಪರ್ಕ ಬಲಪಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಸಚಿವಾಲಯ ಘೋಷಿಸಿರುವ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಇದೇ ತಿಂಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಇದರಿಂದ ಬೆಂಗಳೂರು ಮತ್ತು ಕೊಚ್ಚಿ ನಡುವಿನ ಪ್ರಯಾಣ ಸಮಯ ಗಣನೀಯವಾಗಿ ತಗ್ಗಲಿದೆ.

ಕೇಂದ್ರ ರೈಲ್ವೆ ಸಚಿವಾಲಯವು ವಂದೇ ಭಾರತ್ ರೈಲು ಸಂಚಾರದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ರೈಲು ಸಂಖ್ಯೆ 26651 (ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್) ಪ್ರತಿದಿನ

ಬೆಳಿಗ್ಗೆ 5.10ಕ್ಕೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಟು ಮಧ್ಯಾಹ್ನ 1.50ಕ್ಕೆ ಎರ್ನಾಕುಲಂ ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ 26652 ಎರ್ನಾಕುಲಂನಿಂದ ಮಧ್ಯಾಹ್ನ 2.20ಕ್ಕೆ ಹೊರಟು ರಾತ್ರಿ 11.00ಕ್ಕೆ ಬೆಂಗಳೂರಿಗೆ ತಲುಪಲಿದೆ.

ಈ ಮಧ್ಯೆ, ವಂದೇ ಭಾರತ್ ರೈಲು ಕೃಷ್ಣರಾಜಪುರಂ( ಕೆ.ಆರ್.ಪುರಂ), ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು, ಪಾಲಕ್ಕಾಡ್ ಹಾಗೂ ತ್ರಿಶೂರ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ವಂದೇ ಭಾರತ್ ರೈಲಿನ ವೇಗ ಮತ್ತು ಸೌಲಭ್ಯ

ಹೊಸ ವಂದೇ ಭಾರತ್ ರೈಲು 8 ಗಂಟೆ 40 ನಿಮಿಷಗಳಲ್ಲಿ ಬೆಂಗಳೂರಿನಿಂದ ಕೊಚ್ಚಿಗೆ ತಲುಪಲಿದೆ. ಪ್ರಸ್ತುತ, ಸಂಚರಿಸುತ್ತಿರುವ ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತ 2 ಗಂಟೆ 30 ನಿಮಿಷ ಮುಂಚಿತವಾಗಿ ನಿಗದಿತ ಗುರಿ‌ ಮುಟ್ಟಲಿದೆ. ವಂದೇ ಭಾರತ್ ರೈಲಿನಲ್ಲಿ ವೈ ಫೈ ಹಾಗೂ ಇನ್‌ಫೋಟೇನ್‌ಮೆಂಟ್ ಸ್ಕ್ರೀನ್‌ಗಳು, ಎಸಿಎಲ್ ಸೀಟಿಂಗ್ ವ್ಯವಸ್ಥೆ, ಬಯೋ ಟಾಯ್ಲೆಟ್‌ಗಳು, ಚಾರ್ಜಿಂಗ್ ಪೋರ್ಟ್‌ಗಳು ಹಾಗೂ ಆಧುನಿಕ ಪ್ಯಾನ್ಟ್ರಿ ಸೇವೆ ಇರಲಿದೆ.

ನವೆಂಬರ್ ತಿಂಗಳ ಮಧ್ಯಭಾಗದಲ್ಲಿ ರೈಲು ಸೇವೆ ಪ್ರಾರಂಭವಾಗಲಿದರ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸೇವೆ ಆರಂಭಕ್ಕೂ ಮೊದಲು ಪರೀಕ್ಷಾರ್ಥ ಪ್ರಯೋಗ ಸಂಚಾರ ನಡೆಯಲಿದೆ. ದಕ್ಷಿಣ ಹಾಗೂ ನೈರುತ್ಯ ರೈಲ್ವೆ ವಲಯಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವಾಲಯದಿಂದ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಅನುಕೂಲ

ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲಯಾಳಿ ಸಮುದಾಯದವರಿಗೆ ಬೆಂಗಳೂರು-ಎರ್ನಾಕುಲಂ ನಡುವೆ ವಂದೇ ಭಾರತ್ ರೈಲು ಸಂಚಾರ ಹೆಚ್ಚು ಅನುಕೂಲ ಕಲ್ಪಿಸಲಿದೆ.

ಈ ಹೊಸ ರೈಲು ಪ್ರಾರಂಭದ ಸುದ್ದಿ ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ. ವಾರಾಂತ್ಯ ಪ್ರಯಾಣಿಕರು ಹಾಗೂ ಪ್ರವಾಸಿಗರು ತ್ವರಿತವಾಗಿ ಕೇರಳ ಮತ್ತು ಕರ್ನಾಟಕಕ್ಕೆ ಪ್ರಯಾಣಿಸಬಹುದಾಗಿದೆ.

ಮುಂದಿನ ಯೋಜನೆ ಏನು?

ಭಾರತೀಯ ರೈಲ್ವೆ ಮುಂದಿನ ಹಂತದಲ್ಲಿ ಮಂಗಳೂರು, ಮೈಸೂರು, ಕೊಯಮತ್ತೂರು ಮಾರ್ಗಗಳಿಗೂ ವಂದೇ ಭಾರತ್ ಸೇವೆ ವಿಸ್ತರಿಸುವ ಪ್ರಸ್ತಾವನೆ ಪರಿಶೀಲಿಸುತ್ತಿದೆ.

ಈಗಾಗಲೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಬೆಂಗಳೂರು ಹಾಗೂ ಚೆನ್ನೈ ನಡುವೆ ಕಾರ್ಯ ನಿರ್ವಹಿಸುತ್ತಿದೆ.

Read More
Next Story