
ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ನಾಮಪತ್ರ ಸಲ್ಲಿಸಿದರು.
ಉಪರಾಷ್ಟ್ರಪತಿ ಚುನಾವಣೆ | ನಾಮಪತ್ರ ಸಲ್ಲಿಸಿದ ಎನ್‌ಡಿಎ ಅಭ್ಯರ್ಥಿ; ಪ್ರಧಾನಿ ಮೋದಿ ಹಾಜರು
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದ್ದರು.
ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮಹಾರಾಷ್ಟ್ರ ರಾಜ್ಯಪಾಲರಾಗಿರುವ ಸಿ.ಪಿ. ರಾಧಾಕೃಷ್ಣನ್ ಅವರು ಬುಧವಾರ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವಾರು ಹಿರಿಯ ಎನ್‌ಡಿಎ ನಾಯಕರು ಉಪಸ್ಥಿತರಿದ್ದರು.
ಉಪರಾಷ್ಟ್ರಪತಿ ಚುನಾವಣೆ ಸೆ. 9ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಆಗಸ್ಟ್ 21 ಕೊನೆಯ ದಿನಾಂಕವಾಗಿದೆ.
ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದೆ.
ಇದಕ್ಕೂ ಮುನ್ನ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ ನಂತರ ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದ್ದರು.
ಸಾಂವಿಧಾನಿಕ ಅನುಭವ
ಸಿಪಿ ರಾಧಾಕೃಷ್ಣನ್ ಅವರು ದಶಕಗಳ ಸಾಂವಿಧಾನಿಕ ಮತ್ತು ರಾಜಕೀಯ ಅನುಭವ ಹೊಂದಿದ್ದಾರೆ. ಜುಲೈ 2024 ರಿಂದ ಮಹಾರಾಷ್ಟ್ರ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಆಡಳಿತಾತ್ಮಕ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಜಾರ್ಖಂಡ್ ಮತ್ತು ತೆಲಂಗಾಣದಲ್ಲೂ ಈ ಹಿಂದೆ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.
1998 ಮತ್ತು 1999ರಲ್ಲಿ ಕೋಯಮತ್ತೂರು ಬಿಜೆಪಿ ಸಂಸದರಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು. ಚುನಾವಣಾ ರಾಜಕೀಯದ ಹೊರತಾಗಿ, ಅವರು ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸೈದ್ಧಾಂತಿಕ ತಳಹದಿ ಹೊಂದಿದ್ದರು
ತಿರುಪ್ಪೂರು ರಾಧಾಕೃಷ್ಣನ್ ಅವರು 1957 ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಅವರ ಸಾರ್ವಜನಿಕ ಸೇವೆ ಆರ್‌ಎಸ್‌ಎಸ್ ಸ್ವಯಂಸೇವಕ ಮತ್ತು ಭಾರತೀಯ ಜನಸಂಘದ ಸಕ್ರಿಯ ಸದಸ್ಯರಾಗಿ ಪ್ರಾರಂಭವಾಯಿತು. ಅವರ ವೃತ್ತಿಜೀವನವು ಸಂಘ ಪರಿವಾರದ ಪರಿಸರ ವ್ಯವಸ್ಥೆಯಲ್ಲಿ ಕ್ರಮೇಣವಾಗಿ ವಿಕಸನಗೊಂಡಿತು, ತಳಮಟ್ಟದ ಕ್ರಿಯಾಶೀಲತೆಯಿಂದ ಸಾಂವಿಧಾನಿಕ ಸ್ಥಾನಗಳಿಗೆ ಏರಿತು.