ಉತ್ತರ ಪ್ರದೇಶ; ಗ್ರಾಮೀಣ ಸಂಕಷ್ಟದ ನಡುವೆಯೂ ಬಿಜೆಪಿಗೆ ಸುಲಭ ಗೆಲುವಿನ ಸಾಧ್ಯತೆ
x
ರೈತರು ತೀವ್ರ ಸಂಕಷ್ಟದಲ್ಲಿದ್ದರೂ, ಆಡಳಿತಾರೂಢ ಬಿಜೆಪಿಗೆ ಹೆಚ್ಚು ಸ್ಥಾನ ದೊರೆಯಲಿದೆ ಎನ್ನಲಾಗಿದೆ. ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ರೈತರು ಜಮೀನಿನಲ್ಲಿ ಕೆಲಸ ಮಾಡುತ್ತಿರುವುದು(ಪ್ರಾತಿನಿಧಿಕ ಚಿತ್ರ)

ಉತ್ತರ ಪ್ರದೇಶ; ಗ್ರಾಮೀಣ ಸಂಕಷ್ಟದ ನಡುವೆಯೂ ಬಿಜೆಪಿಗೆ ಸುಲಭ ಗೆಲುವಿನ ಸಾಧ್ಯತೆ


ಉತ್ತರ ಪ್ರದೇಶದ ಗ್ರಾಮಾಂತರ ಪ್ರದೇಶಗಳು ವಿರೋಧಾಭಾಸಗಳ ಆಗರವಾಗಿವೆ.

ಒಂದೆಡೆ, ದೇಶಾದ್ಯಂತ ಗ್ರಾಮೀಣ ಆದಾಯದಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಆವರ್ತಕ ಕಾರ್ಮಿಕ ಸಮೀಕ್ಷೆಗಳ ಪ್ರಕಾರ, ಪ್ರಧಾನಿ ಮೋದಿಯವರ ಎರಡನೇ ಅವಧಿಯಲ್ಲಿ ಗ್ರಾಮೀಣ ವೇತನ ಆದಾಯ ಶೇ.5ರಷ್ಟು ಕಡಿಮೆಯಾಗಿದೆ. ಇದಕ್ಕಿಂತ ಕೆಟ್ಟ ಸ್ಥಿತಿಯೆಂದರೆ, 2022-23 ರಲ್ಲಿ ಕೃಷಿ ಆದಾಯ ಕೇವಲ ಶೇ.1ರಷ್ಟು ಮತ್ತು ಕೃಷಿಯೇತರ ಗ್ರಾಮೀಣ ಆದಾಯ ಶೇ.1.3 ರಷ್ಟು ಬೆಳೆದಿದೆ. 2002-03 ಮತ್ತು 2012-13 ರ ಅವಧಿಯಲ್ಲಿನ ಶೇ. 2ರ ವಾರ್ಷಿಕ ಆದಾಯ ಬೆಳವಣಿಗೆ ದರದ ಕುಸಿತಕ್ಕಿಂತ ಹೆಚ್ಚು. ಇತ್ತೀಚಿನ ಬಳಕೆ ವೆಚ್ಚ ಸಮೀಕ್ಷೆ ಫಲಿತಾಂಶಗಳಿಂದ ಈ ಪ್ರವೃತ್ತಿ ದೃಢಪಟ್ಟಿದೆ. ಇದು ಗ್ರಾಮೀಣ ಬಳಕೆ, ವಿಶೇಷವಾಗಿ ಕೃಷಿ ಆದಾಯದಲ್ಲಿ ಕುಸಿತವನ್ನು ತೋರಿಸಿದೆ.

ಆದಾಯ, ಬಳಕೆ: 2023 ರಲ್ಲಿ ಗ್ರಾಮೀಣ ಭಾರತದಲ್ಲಿ ವೇಗವಾಗಿ ಖರೀದಿಯಾಗುವ ಗ್ರಾಹಕ ಸರಕು (ಎಫ್‌ಎಂಸಿಜಿ)ಗಳ ಮಾರಾಟದ ಬೆಳವಣಿಗೆ ಎರಡನೇ ತ್ರೈಮಾಸಿಕದಲ್ಲಿ ಶೇ.8.6 ರಿಂದ ಮೂರನೇ ತ್ರೈಮಾಸಿಕದಲ್ಲಿ ಶೇ.6.4 ಕ್ಕೆ ಇಳಿದಿದೆ ಎಂದು ರೇಟಿಂಗ್ ಏಜೆನ್ಸಿ ನೀಲ್ಸನ್ ತೋರಿಸಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ದತ್ತಾಂಶಗಳು ಗ್ರಾಮೀಣ ನಿರುದ್ಯೋಗ 2022ರ ಆರಂಭದಲ್ಲಿ ಶೇ.8 ರಷ್ಟಿತ್ತು ಎಂದು ತೋರಿಸಿದೆ. ಇದು ಗ್ರಾಮೀಣ ಆದಾಯದ ಕುಸಿತಕ್ಕೆ ಕಾರಣವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದೆಲ್ಲವೂ ಗ್ರಾಮೀಣ ಆದಾಯದ ಕುಸಿತ ಮತ್ತು ಗ್ರಾಮೀಣ ಸಂಕಷ್ಟದ ಹೆಚ್ಚಳವನ್ನು ತೋರಿಸುತ್ತವೆ. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ 2016ರಲ್ಲಿ ಮೋದಿ ನೀಡಿದ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಇದನ್ನು ಪರಿಗಣಿಸಬೇಕಾಗುತ್ತದೆ.

ಹಲವು ವಿರೋಧಾಭಾಸಗಳು: ಮತ್ತೊಂದೆಡೆ, ಎಲ್ಲ ಚುನಾವಣಾ ಪೂರ್ವ ಸಮೀಕ್ಷೆಗಳು ಭಾರತೀಯ ಜನತಾ ಪಕ್ಷ(ಬಿಜೆಪಿ) ಉತ್ತರ ಪ್ರದೇಶದಲ್ಲಿ 70 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಹೇಳಿವೆ. ವಿರೋಧಾಭಾಸವೆಂದರೆ, ಕಳೆದ ಮೂರು ವರ್ಷದಲ್ಲಿ ದೇಶದಲ್ಲಿ ಕೃಷಿ ವಾರ್ಷಿಕ ಶೇ.3 ರಷ್ಟು ಬೆಳೆಯುತ್ತಿದೆ. ಆದರೆ, ಕೃಷಿ ಆದಾಯ ಕುಸಿಯುತ್ತಿದೆ. ಜಿಡಿಪಿ (ಒಟ್ಟು ದೇಶಿ ಉತ್ಪನ್ನ) ಹೆಚ್ಚಿನ ಬೆಳವಣಿಗೆ ಹಂತವನ್ನು ಪ್ರವೇಶಿಸುತ್ತಿದೆ ಎಂದು ವರದಿಯಾಗಿದೆ. ಆದರೆ, ಗ್ರಾಮೀಣ ಸಂಕಷ್ಟ ಹೆಚ್ಚುತ್ತಿದೆ.

ಉತ್ತರ ಪ್ರದೇಶದಲ್ಲಿ ಈ ವೈರುಧ್ಯವನ್ನು ವಿವರಿಸುವುದು ಹೇಗೆ? ಗ್ರಾಮೀಣ ಸಂಕಷ್ಟ ಎಷ್ಟು ತೀವ್ರವಾಗಿದೆ? ಅದು ಚುನಾವಣೆಯಲ್ಲಿ ಪ್ರತಿಫಲಿಸುವುದಿಲ್ಲವೇಕೆ? ಇದನ್ನು ಅರ್ಥಮಾಡಿಕೊಳ್ಳಲು ದ ಫೆಡರಲ್ ಉತ್ತರ ಪ್ರದೇಶದ ವಿವಿಧ ಭಾಗಗಳ ಗ್ರಾಮೀಣ ಪ್ರದೇಶಗಳಲ್ಲಿ ಜನರೊಂದಿಗೆ ಮಾತನಾಡಿದೆ. ಉತ್ತರ ಪ್ರದೇಶದ ಗ್ರಾಮಾಂತರದ ವೈರುಧ್ಯಗಳನ್ನು ಈ ಪ್ರತಿಕ್ರಿಯೆಗಳು ಸೆರೆಹಿಡಿಯುತ್ತವೆ.

ರೈತರು, ಕೃಷಿ ಮತ್ತು ಇತರ ಗ್ರಾಮೀಣ ಕಾರ್ಮಿಕರ ಆದಾಯ ಕುಸಿತವು ಗ್ರಾಮೀಣ ಸಂಕಷ್ಟದ ಮುಖ್ಯ ಅಭಿವ್ಯಕ್ತಿಯಾಗಿದೆ. ಆದಾಯ ಎಷ್ಟು ಕುಸಿದಿದೆ ಮತ್ತು ಏಕೆ?

ಬೆಳೆ ನಷ್ಟ: ಮೊಹಮ್ಮದ್ ಸಲೀಂ ಮಿರ್ಜಾಪುರ ಜಿಲ್ಲೆಯ ಕಜೂರಿ ಗ್ರಾಮದಲ್ಲಿ 1 ಎಕರೆ ಜಮೀನು ಹೊಂದಿರುವ ಸಣ್ಣ ರೈತ. ಅವಿಭಕ್ತ ಕುಟುಂಬದ ಸುಮಾರು 6 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಎಡ ಪಕ್ಷದ ಮುಖಂಡ. ಸಾಸಿವೆ ಮತ್ತು ಆಲೂಗಡ್ಡೆ ಬೆಳೆ ಕೊಯ್ಲಿಗೆ ಸಿದ್ಧವಾಗಿ ದ್ದಾಗ ಬಂದ ಅಕಾಲಿಕ ಮಳೆಯಿಂದ ಮಿರ್ಜಾಪುರದ ರೈತರು ಹಾನಿಗೊಳಗಾದರು ಎಂದು ಹೇಳಿದರು. ಸಾಸಿವೆ ರೈತರ ಇಳುವರಿ ಶೇ. 70 ಮತ್ತು ಆಲೂಗಡ್ಡೆ ಮತ್ತು ಗೋಧಿ ರೈತರು ಶೇ.30-35 ರಷ್ಟು ಇಳುವರಿ ನಷ್ಟ ಅನುಭವಿಸಿದರು.

ರೈತ ಸಮುದಾಯದ ಎಲ್ಲಾ ವರ್ಗಗಳು ಶೇ. 30-40 ರಷ್ಟು ಆದಾಯ ನಷ್ಟವನ್ನು ಅನುಭವಿಸಿವೆ. ಸರ್ಕಾರ ಸಾಸಿವೆಯ ಆಮದಿಗೆ ಅನುಮತಿ ನೀಡಿದ್ದರಿಂದ, ಬೆಲೆ ಕುಸಿಯಿತು. ಇದರಿಂದ ಸಾಸಿವೆ ಬೆಳೆಗಾರರು ದುಪ್ಪಟ್ಟು ನಷ್ಟ ಅನುಭವಿಸಿದ್ದಾರೆ.

ಬಾರಾದ ಸೆಹುದಾ ಪಂಚಾಯತಿಯ ಮಾಜಿ ಪ್ರಧಾನ ಮತ್ತು ಸಣ್ಣ ರೈತ ರಜ್ಜನ್ ಕೋಲ್, ಮೋದಿ ಅವರ ಬೆಳೆ ವಿಮೆ ಒಂದು ಹಾಸ್ಯ ಚಟಾ ಕಿ ಎಂದರು. 3,600 ರೂ. ಪ್ರೀಮಿಯಂ ಪಾವತಿಸಿ, 17 ರೂ.ಚೆಕ್ ಬೆಳೆ ನಷ್ಟದ ಪರಿಹಾರ ಪಡೆದ ರೈತನನ್ನು ಉಲ್ಲೇಖಿಸಿದರು. ಈ ಯೋಜನೆಯು ವಿಮಾ ಕಂಪನಿಗಳನ್ನು ಮಾತ್ರ ‌ ಶ್ರೀಮಂತಗೊಳಿಸುತ್ತದೆ ಎಂದು ಅವರು ಭಾವಿಸುತ್ತಾರೆ.

ಏರುತ್ತಿರುವ ಬೆಲೆಗಳು: ಗೋರಖ್‌ಪುರದಿಂದ 70 ಕಿಮೀ ದೂರದಲ್ಲಿರುವ ಕುಶಿನಗರದಲ್ಲಿ 10 ಎಕರೆ ಹೊಂದಿರುವ ಪ್ರಮುಖ ಹಿಂದಿ ಲೇಖಕ ಸುಭಾಷ್ ಕುಶ್ವಾಹ, ರೈತರ ಆದಾಯದ ಕುಸಿತಕ್ಕೆ ಬೆಲೆ ಏರಿಕೆ ಕಾರಣ ಎನ್ನುತ್ತಾರೆ. ʻ2019ರಲ್ಲಿ ಪಂಪ್‌ ಸೆಟ್‌ ಚಾಲನೆಗೆ ಲೀಟರ್ ಡೀಸೆಲ್‌ಗೆ 71 ರೂ. ಪಾವತಿಸುತ್ತಿದ್ದೆವು. ಈಗ 92 ರೂ. ಕೊಡುತ್ತೇವೆ. ಶೇ.30 ರಷ್ಟು ಹೆಚ್ಚಳ. ಪೆಟ್ರೋಲ್ ಗೆ 75 ರೂ.ನಿಂದ 95 ರೂ.ಗೆ ಹೆಚ್ಚಿದೆ. ಯೂರಿಯಾ ಚೀಲಕ್ಕೆ 245 ರೂ. ಡೈಅಮೋನಿಯಂ ಫಾಸ್ಫೇಟ್ ಬೆಲೆ ಕೆಜಿಗೆ 14 ರಿಂದ 28 ರೂ.ಗೆ ದ್ವಿಗುಣಗೊಂಡಿದೆ,ʼ ಎಂದು ಕುಶ್ವಾಹ ಹೇಳಿದರು.

ʻಈ ಅವಧಿಯಲ್ಲಿ, ಭತ್ತದ ಬೀಜದ ಬೆಲೆ ಕೆಜಿಗೆ 48 ರೂ.ನಿಂದ 90 ರೂ.ಗೆ ಹಾಗೂ ಗೋಧಿ ಬೀಜಗಳು ಕೆಜಿಗೆ 25 ರೂ.ನಿಂದ 60 ರೂ.ಗೆ ಏರಿಕೆಯಾಗಿದೆ. ಪೂರ್ವಾಂಚಲದ (ಪೂರ್ವ ಯುಪಿ) ಕೃಷಿ ಕಾರ್ಮಿಕರು 2019 ರಲ್ಲಿ ದಿನಕ್ಕೆ 50-175 ರೂ. ಕೂಲಿ ಪಡೆಯುತ್ತಿದ್ದರು; ಈಗ ಸರಾಸರಿ 200-250 ರೂ. ಪಡೆಯುತ್ತಾರೆ. ಕೌಸಾಂಬಿಯಲ್ಲಿ ಪುರುಷ ಕಾರ್ಮಿಕರಿಗೆ 300 ರೂ. ಮತ್ತು ಮಹಿಳೆಯರಿಗೆ 150 ರೂ. ಕೂಲಿ ಇದೆʼ

ʻಆದರೆ, 2019 ರಲ್ಲಿ ಭತ್ತದ ಎಂಎಸ್‌ಪಿ ಕ್ವಿಂಟಲ್‌ಗೆ 1,800 ರೂ. ಇತ್ತು; ಈಗ 2,200 ರೂ.ಗೆ ಏರಿಕೆಯಾಗಿದೆ ಗೋಧಿ 1,840 ರೂ.ನಿಂದ 2,275 ರೂ.ಗೆ ಏರಿಕೆಯಾಗಿದೆ. ಉತ್ಪಾದನೆ ವೆಚ್ಚವು ಆದಾಯದಲ್ಲಿನ ಹೆಚ್ಚಳವನ್ನು ಮೀರಿಸುತ್ತದೆ. ಇದು ಕೃಷಿ ಸಂಕಷ್ಟದ ಮುಖ್ಯ ಕಾರಣʼ ಎಂದರು.

ಕೃಷಿ ಕಾರ್ಯಸಾಧುವಲ್ಲ: ಫುಲ್ಪುರ ತಾಲೂಕಿನ ಪ್ರಯಾಗ್‌ರಾಜ್‌ನಿಂದ 35 ಕಿಮೀ ದೂರದಲ್ಲಿರುವ ಕುಂಭೌನಾ ಗ್ರಾಮದಲ್ಲಿ 1 ಎಕರೆ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತ ಮನೋಜ್ ದುಬೆ, ಕೃಷಿ ಲಾಭದಾಯಕವಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ, ರೈತರಿಗೆ ಉಚಿತ ಧಾನ್ಯಗಳು ವಿತರಣೆ ಮೂಲಕ ಪರಿಹಾರ ನೀಡಲಾಗುತ್ತದೆ ಎನ್ನುತ್ತಾರೆ. ಆದರೆ, ಕುಶ್ವಾಹ ಕೃಷಿ ಕಾರ್ಯಸಾಧ್ಯವಲ್ಲ ಎಂದು ಹೇಳಲು ಅಂಕಿ ಅಂಶಗಳನ್ನು ನೀಡುತ್ತಾರೆ.

ಭತ್ತದ ಬೆಳೆಗೆ ಎಕರೆಗೆ 18,000 ರೂ. ಖರ್ಚು ಮಾಡಿ, 10,000 ರೂ.ಮತ್ತು ಗೋಧಿಗೆ ಎಕರೆಗೆ 12 ಸಾವಿರ ರೂ. ಖರ್ಚು ಮಾಡಿ, 15 ಸಾವಿರ ರೂ. ಲಾಭ ಗಳಿಸುತ್ತಾರೆ. ವರ್ಷಕ್ಕೆ ಎರಡು ಬೆಳೆ ಎಂದುಕೊಂಡರೆ, ರೈತರು 20,000 ರಿಂದ 30,000 ರೂ. ಲಾಭ ಗಳಿಸುತ್ತಾರೆ. ಆದರೆ, ಕೃಷಿ ಕುಟುಂಬವೊಂದು ಸರಾಸರಿ 75,000 ರೂ. ಸಾಲ ಹೊಂದಿದ್ದು, ಬ್ಯಾಂಕಿಗೆ ವಾರ್ಷಿಕ 3,000 ರೂ. ಅಥವಾ ಖಾಸಗಿ ಲೇವಾದೇವಿದಾರರಿಗೆ 4,500-5,000 ರೂ. ಬಡ್ಡಿ ಪಾವತಿಸುತ್ತಾರೆ. ಇದು ರೈತರ ವ್ಯಾಪಕ ಹತಾಶೆಯ ಮೂಲವಾಗಿದೆʼ ಎಂದು ಕುಶ್ವಾಹ ಹೇಳಿದರು.

ಬಿಜೆಪಿಗೆ ಮತ ಹಾಕುವುದೇಕೆ?: ರೈತರು ಇಷ್ಟೊಂದು ಸಂಕಷ್ಟದಲ್ಲಿದ್ದರೆ, ಅವರು ಆಡಳಿತಾರೂಢ ಬಿಜೆಪಿಗೆ ಏಕೆ ಮತ ಹಾಕುತ್ತಾರೆ? ಪ್ರಯಾಗರಾಜ್ ಗ್ರಾಮಾಂತರ ಜಿಲ್ಲೆಯ ಮೀರ್‌ಪುರ ಬ್ಲಾಕ್‌ನ ಅಂಗೋರಾ ಗ್ರಾಮದ ಸಖಾ, ಗ್ರಾಮದ ಎಲ್ಲ ಕುಟುಂಬಗಳು ತಿಂಗಳಿಗೆ ತಲಾ 5 ಕೆಜಿ ಆಹಾರಧಾನ್ಯ ಉಚಿತವಾಗಿ ಪಡೆಯುತ್ತಾರೆ ಎಂದು ವಿವರಿಸುತ್ತಾರೆ. ಗ್ರಾಮದ ಎಲ್ಲ ಮನೆಗಳಲ್ಲಿ ಉಚಿತ ಶೌಚಾಲಯ ನಿರ್ಮಾಣವಾಗಿದೆ. ಎಲ್ಲ ಮನೆಗಳಿಗೂ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಎಲ್ಲ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ನೀಡಲಾಗುತ್ತಿದೆ ಎಂದರು. ತಮ್ಮ ಗ್ರಾಮದಲ್ಲೂ ಇದೆಲ್ಲ ಇದೆ ಎಂದು ಕುಶ್ವಾಹ ಒಪ್ಪಿಕೊಂಡರು.

ಸುಮಾರು 30 ಲಕ್ಷ ಜನಸಂಖ್ಯೆ ಹೊಂದಿರುವ ಮಿರ್ಜಾಪುರ ಜಿಲ್ಲೆಗೆ 23,000 ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಮಂಜೂರು ಮಾಡಲಾಗಿದೆ ಎಂದು ಸಲೀಂ ಹೇಳಿದರು. ಕುಶಿನಗರ ಜಿಲ್ಲೆಯಲ್ಲಿ 29,581 ಮನೆ ಮಂಜೂರು ಮಾಡಿದ್ದು, ಇವುಗಳಲ್ಲಿ 19,900 ಪೂರ್ಣಗೊಂಡಿವೆ ಮತ್ತು 9,681 ನಿರ್ಮಾಣ ಹಂತದಲ್ಲಿವೆ. 10 ಮಂದಿ ಮನೆ ಪಡೆದರೆ, 40-50 ಜನರು ನೋಂದಣಿ ನಂತರ ಟೋಕನ್‌ ಪಡೆಯುತ್ತಾರೆ. ಭವಿಷ್ಯದಲ್ಲಿ ತಮಗೆ ಮನೆಗಳು ಸಿಗುತ್ತವೆ ಎಂಬ ಭರವಸೆ ಇದೆ.

ಕ್ಷೀಣಿಸುತ್ತಿರುವ ಮೋದಿ ಮ್ಯಾಜಿಕ್: ಇಂತಹ ರಾಜಕೀಯ ಉದ್ದೇಶಿತ ಕಲ್ಯಾಣ ಯೋಜನೆಗಳು ಲಾಭ ನೀಡುತ್ತವೆ ಮತ್ತು ಫಲಾನುಭವಿಗಳು ಬಿಜೆಪಿಗೆ ಮತ ಹಾಕುತ್ತಾರೆ. ಆದರೆ, 2019 ರಂತೆ 'ಮೋದಿ ಮ್ಯಾಜಿಕ್' ಈಗ ತೀವ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದರೆ, ಮೋದಿ ಬಗ್ಗೆ ಕೋಪ ಅಥವಾ ದ್ವೇಷವಿಲ್ಲ ಎಂದು ಕುಶ್ವಾಹ ಸ್ಪಷ್ಟಪಡಿಸಿದ್ದಾರೆ. ನಂಬಲರ್ಹ ಪರ್ಯಾಯ ಇದೆ ಎಂಬುದು ಜನರಿಗೆ ಮನವರಿಕೆಯಾಗಿಲ್ಲ. ಆದರೆ, ಇಲ್ಲೊಂದು ಅಂಶವಿದೆ. ಈ ಕಲ್ಯಾಣ ಕಾರ್ಯಕ್ರಮಗಳಿಂದ ಹಿನ್ನಡೆಯಾಗಬಹುದು. ಪಿಎಂಎವೈ ಭ್ರಷ್ಟಾಚಾರದ ಬಗ್ಗೆ ಸಲೀಮ್ ಬೆಳಕು ಚೆಲ್ಲುತ್ತಾರೆ.

ಅವರ ಪ್ರಕಾರ, ಪ್ರತಿ ಫಲಾನುಭವಿ 2.67 ಲಕ್ಷ ರೂ. ಪಡೆಯಬೇಕು. ಆದರೆ, ಫಲಾನುಭವಿಗೆ ಸಿಗುತ್ತಿರುವುದು 1.8 ಅಥವಾ 1.9 ಲಕ್ಷ ರೂ. ಮಾತ್ರ. 60,000-70,000 ರೂ. ಲಂಚದ ರೂಪದಲ್ಲಿ ಹೋಗುತ್ತದೆ. ಇದನ್ನು ಜಿಲ್ಲೆಯ ಹಲವು ಗ್ರಾಮಾಧಿಕಾರಿಗಳು ಮತ್ತು ಹಿರಿಯರು ಅನುಮೋದಿಸುತ್ತಾರೆ. ಒಂದು ಹೆಕ್ಟೇರ್ ಜಮೀನು ಹೊಂದಿರುವ ಮಾತೃವಾದ ರೈತ ನತ್ತಿಲಾಲ್ ಪಾಠಕ್, ಸಲೀಂ ಅವರ ಅಭಿಪ್ರಾಯವನ್ನು ಅನುಮೋದಿಸಿದರು. 50,000 ರೂ. ಲಂಚ ಪಾವತಿಸುವ ಯಾರಾದರೂ ಫಲಾನುಭವಿಗಳಾಗಬಹುದು. ಹೀಗಾಗಿ, ರೈತರು ಮನೆ ಕಟ್ಟಿಕೊಳ್ಳಲು ಜಮೀನಿನ ಭಾಗವೊಂದನ್ನು ಮಾರಾಟ ಮಾಡುತ್ತಿದ್ದಾರೆ.ʻ ಇಂಥ ಯೋಜನೆಗಳು ಆಡಳಿತ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಭ್ರಷ್ಟರ ಜಾಲವನ್ನು ಹುಟ್ಟುಹಾಕಿವೆ. ಕಾಲಾನಂತರ ಈ ಭ್ರಷ್ಟಾಚಾರ ಸರಪಳಿ ಜನರನ್ನು ರಾಜಕೀಯವಾಗಿ ದೂರವಿಡುತ್ತದೆ. ಆಡಳಿತ ಪಕ್ಷ ಶತ್ರುಗಳನ್ನು ಬೆಳೆಸಿಕೊಳ್ಳುತ್ತಿದೆʼ ಎಂದರು.

ವಿರೋಧ ಪಕ್ಷಗಳಿಗೆ ಲಾಭ ಆಗುತ್ತಿಲ್ಲವೇಕೆ? ಪ್ರತಿಪಕ್ಷಗಳು ಗ್ರಾಮೀಣ ಸಂಕಷ್ಟದ ಲಾಭ ಪಡೆಯಲು ಏಕೆ ಸಾಧ್ಯವಾಗುತ್ತಿಲ್ಲ? ಆರ್‌ಎಸ್‌ಎಸ್‌ ಮಾತ್ರ ತಳಮಟ್ಟದಲ್ಲಿ ಸಂಘಟನೆ ಮಾಡುತ್ತಿದೆಯೇ ಹೊರತು ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷ ಮಾಡುತ್ತಿಲ್ಲ ಎಂದು ಕುಶ್ವಾಹ ಹೇಳುತ್ತಾರೆ. ಎಸ್ಪಿ 17 ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಗೆ ಅಭ್ಯರ್ಥಿಗಳಿಲ್ಲ ಎನ್ನುವುದು ಅವರ ನಿಲುವು. ಅಖಿಲೇಶ್ ಯಾದವ್ ಹೆಚ್ಚು ಸಕ್ರಿಯರಾಗಬೇಕು ಎಂದು ಎಸ್ಪಿ ಕಾರ್ಯಕರ್ತರು ಅಪೇಕ್ಷಿಸುತ್ತಾರೆʼ ಎಂದು ಹೇಳಿದರು.

ಉದ್ಯೋಗ ಬಿಕ್ಕಟ್ಟು: ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಕುಸಿಯುತ್ತಿದೆ. ಹೆಚ್ಚುವರಿ ಕಾರ್ಮಿಕ ಬಲದಿಂದಾಗಿ, ಕೂಲಿ ಕೆಲಸ ಮಾಡುವವರಿಗೆ ಸ್ಥಳೀಯವಾಗಿ ತಿಂಗಳಿಗೆ 20 ದಿನಕ್ಕಿಂತ ಹೆಚ್ಚು ಕೆಲಸ ಸಿಗುತ್ತಿಲ್ಲ. ಆದರೆ, ಕೆಲವು ಋತುಗಳಲ್ಲಿ ಅನೇಕ ಕಡೆ ಕಾರ್ಮಿಕರ ಕೊರತೆ ಇರುತ್ತದೆ. ಈ ಅಸಂಗತತೆಯನ್ನು ಹೇಗೆ ವಿವರಿಸುವುದು? ʻಸರಕಾರದಿಂದ ಉಚಿತ ಆಹಾರಧಾನ್ಯ ಸಿಗುವುದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲʼ ಎಂದು ಮನೋಜ್ ದುಬೆ ಹೇಳಿದರು. ಕಾರ್ಮಿಕರ ಕೊರತೆ ಎದುರಿಸುತ್ತಿರುವ ಅನೇಕ ಶ್ರೀಮಂತ ರೈತರು ಈ ಅಭಿಪ್ರಾಯವನ್ನು ಒಪ್ಪುತ್ತಾರೆ. ಸುಗ್ಗಿ ಕಾಲದಲ್ಲಿ ಕಾರ್ಮಿಕರ ಕೊರತೆ ಉಂಟಾದರೆ, ದಿನವೊಂದಕ್ಕೆ 400 ರೂ. ಕೂಲಿ ಕೊಟ್ಟು ಕೆಲಸ ಮಾಡಿಸುತ್ತಾರೆ ಎಂದು ದುಬೆ ಹೇಳಿದರು.

ಇದನ್ನು ಕುಶ್ವಾಹ ಒಪ್ಪಿಕೊಂಡರು: ʻಯುವಕರು ಕೂಲಿ ಕೆಲಸ ಅಥವಾ ಸ್ವಂತ ಹೊಲದಲ್ಲಿ ಕೃಷಿ ಕೆಲಸ ಮಾಡಲು ಉತ್ಸುಕರಾಗಿಲ್ಲ.ಊರ ಲ್ಲಿದ್ದಾಗ ಹೊಲದಲ್ಲಿ ಕೆಲಸ ಮಾಡುವ ಬದಲು ಸುಮ್ಮನೆ ಇರುತ್ತಾರೆ. ಹಿರಿಯರು ಮಾತ್ರ ಕೃಷಿ ಮಾಡುತ್ತಾರೆ. ಇದರಿಂದ ಜಮೀನುಗಳು ಪಾಳು ಬಿದ್ದಿವೆ’ ಎಂದು ಹೇಳಿದರು.

ಉದ್ಯೋಗ ಭರವಸೆ: ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಸ್ವಸಹಾಯ ಸಂಘಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಕೌಸಾಂಬಿಯ ಸಣ್ಣ ರೈತ ರಾಮನರೇಶ್ ಹೇಳಿದರು. ʻಯೋಗಿ ಆದಿತ್ಯನಾಥ್ ಸರಕಾರ ಮಹಿಳೆಯರಿಗೆ ಸರಕಾರಿ ಉದ್ಯೋಗದ ಭರವಸೆ ನೀಡುತ್ತಿದೆ. ಒಬ್ಬ ಎಸ್‌ಎಚ್‌ಜಿ ಸದಸ್ಯನಿಗೆ ಕೆಲಸ ಸಿಕ್ಕರೆ, ಉಳಿದವರು ಇಂಥ ಕೆಲಸದ ಭ್ರಮೆ ಬೆಳೆಸಿಕೊಳ್ಳುತ್ತಾರೆ,ʼ ಎಂದು ಹೇಳಿದರು.

ಅಜಂಗಢದ ಹಿರಿಯ ಕಮ್ಯುನಿಸ್ಟ್ ನಾಯಕ ಮತ್ತು ಉತ್ತರ ಪ್ರದೇಶ ಕಿಸಾನ್ ಸಭಾದ ಅಧ್ಯಕ್ಷ ಜೈಪ್ರಕಾಶ್ ನಾರಾಯಣ್‌ ಅವರು ಔರಾ ಗ್ರಾಮದಲ್ಲಿ 1 ಎಕರೆ ಜಮೀನು ಹೊಂದಿದ್ದಾರೆ. ʻನನ್ನ ಹಳ್ಳಿಯಿಂದ 20 ಯುವಕರು ಕೆಲಸ ಮಾಡಲು ನಗರಕ್ಕೆ 25-30 ಕಿಮೀ ಹೋಗುತ್ತಾರೆ,ʼ ʻಅನೇಕರು ಆಟೋ ಚಾಲನೆ ಮಾಡುತ್ತಾರೆ. ಹಳ್ಳಿಗಳಲ್ಲಿ ಸಣ್ಣ ಅಂಗಡಿ ನಡೆಸುತ್ತಾರೆ. ಅತ್ಯಂತ ಹಿಂದುಳಿದ ಜಾತಿಗಳ ಯುವಕರು( ಮೌರ್ಯರು, ಪ್ರಜಾಪತಿಗಳು, ನಿಷಾದ್‌ಗಳು ಮತ್ತು ಚೌಹಾನ್‌ಗಳು) ಬಿಜೆಪಿ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಇದು ಹೊಸ ವಿದ್ಯಮಾನʼ ಎಂದರು.

ವಲಸೆ ಪ್ರವೃತ್ತಿ ಹೆಚ್ಚಳ: ಗ್ರಾಮೀಣ ಸಂಕಷ್ಟದ ಇನ್ನೊಂದು ದ್ಯೋತಕವೆಂದರೆ ವಲಸೆ ಹೆಚ್ಚಳ. ಮನೋಜ್ ದುಬೆ ಅವರ ಹಳ್ಳಿಯ 40-50 ರೈತ ಯುವಕರು ಪ್ರಯಾಗರಾಜ್‌ನಲ್ಲಿ ಇ-ಕಾಮರ್ಸ್ ವಿತರಣೆ, 10-15 ಓಲಾ ಟ್ಯಾಕ್ಸಿ ಚಾಲನೆ ಮಾಡುತ್ತಾರೆ. ಆದರೆ, ಇಂಥ ಉದ್ಯೋಗಾವಕಾಶಗಳು ಕಡಿಮೆ ಆಗುತ್ತಿವೆ ಮತ್ತು ಮಹಿಳೆಯರು ಅಂತಹ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲʼ. ಮಿರ್ಜಾಪುರ ಮತ್ತು ಪಕ್ಕದ ಜಿಲ್ಲೆಗಳ ಯುವಕರು ಇತ್ತೀಚೆಗೆ ದಕ್ಷಿಣ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಸಲೀಂ ಹೇಳಿದರು.

ಗಲ್ಫ್ ರಾಷ್ಟ್ರಗಳಿಗೆ ಹೋಗಲು ಉತ್ಸುಕರಾಗಿದ್ದಾರೆ ಎಂದು ಕುಶ್ವಾಹ ಹೇಳಿದರು. ಇಸ್ರೇಲ್, ಸಿರಿಯಾ ಅಥವಾ ಇರಾಕ್‌ನಲ್ಲೂ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಅವರ ಹಳ್ಳಿಯಿಂದ 30-40 ಯುವಕರು ಸೌದಿ ಅರೇಬಿಯಾ, ಏಳು ಅಥವಾ ಎಂಟು ಮಂದಿ ಇಟಲಿಗೆ ಕೃಷಿ ಕಾರ್ಮಿಕರಾಗಿ ಹೋಗಿದ್ದಾರೆ ಎಂದು ಸಖಾ ಹೇಳಿದರು. ತಿಂಗಳಿಗೆ 80,000-90,000 ರೂ.ಗಳಿಸುತ್ತಾರೆ. ಆದರೆ, ಅವರನ್ನು ಅಲ್ಲಿಗೆ ಕಳುಹಿಸುವ ಏಜೆಂಟ್‌ಗಳಿಗೆ 5-8 ಲಕ್ಷ ರೂ. ಕೊಡಬೇಕಾಗುತ್ತದೆ.

ಅಶಾಂತಿಯನ್ನು ಪ್ರಚೋದಿಸಿಲ್ಲ: ಗ್ರಾಮೀಣ ಸಂಕಷ್ಟ ಅಶಾಂತಿಯನ್ನು ಪ್ರಚೋದಿಸಿಲ್ಲ. ಮೇಲ್ಜಾತಿಗಳು, ಒಬಿಸಿಗಳು ಮತ್ತು ದಲಿತ ಶಕ್ತಿಗಳ ನಡುವೆ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಿದೆ. ಒಬಿಸಿ-ಮೇಲ್ಜಾತಿ ಪುರುಷರಿಂದ ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚುತ್ತಿದ್ದು, ಹತ್ಯಾಕಾಂಡ ಮತ್ತು ಜಾತಿ ಹತ್ಯೆಗಳು ಕಡಿಮೆಯಾಗಿವೆ. ಮೇಲ್ಜಾತಿಗಳು ಇದು ತಮ್ಮದೇ ಸರ್ಕಾರವೆಂದು ಭಾವಿಸುವುದರಿಂದ, ತಮ್ಮ ಪ್ರಾಬಲ್ಯ ಮುಂದುವರಿಯುವ ವಿಶ್ವಾಸ ಹೊಂದಿದ್ದಾರೆ.

ಇನ್ನೊಂದು ವಿವರಣೆಯೆಂದರೆ, ಬಿಎಸ್‌ಪಿ ಮತ್ತು ಎಸ್‌ಪಿ ಅಧಿಕಾರದಲ್ಲಿ ಇದ್ದುದರಿಂದ, ದಲಿತರು ಮತ್ತು ಒಬಿಸಿಗಳು ಶಕ್ತಿ ಗಳಿಸಿದ್ದಾರೆ ಮತ್ತು ಪ್ರತಿರೋಧ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದ್ದರಿಂದ, ಗ್ರಾಮಾಂತರದಲ್ಲಿ ಸ್ನಾಯುಬಲ ಸಮತೋಲನದಲ್ಲಿದೆ. ಸಹರಾನ್‌ಪುರದ ಅನುಭವ ಮತ್ತು ಭೀಮ್ ಆರ್ಮಿಯ ಉದಯದ ನಂತರ ಜಾತಿ ಹತ್ಯೆ ಮಾಡಿ ತಪ್ಪಿಸಿಕೊಳ್ಳುವುದು ಸುಲಭವಲ್ಲ ಎಂದು ಗೊತ್ತಾಗಿದೆ.

ಎಸ್ಪಿಗೆ ಪ್ರಯೋಜನ: ಪಂಚಾಯತಿಗಳಿಗೆ ಹೆಚ್ಚು ಅಧಿಕಾರವಿಲ್ಲ ಎಂದು ಮನೋಜ್ ದುಬೆ ಹೇಳಿದರು. ಆದರೆ, ಪಂಚಾಯಿತಿಯ ಪ್ರಧಾನ ಅತ್ಯಂತ ಶಕ್ತಿಶಾಲಿ, ಅತ್ಯಂತ ಭ್ರಷ್ಟ ಮತ್ತು ಅತ್ಯಂತ ಜನವಿರೋಧಿ ಎಂದು ಸಲೀಂ ಅಭಿಪ್ರಾಯಪಡುತ್ತಾರೆ.ಧರ್ಮ ಸಂಬಂಧಿ ಕೋಮು ಸಂಘರ್ಷ ಗ್ರಾಮಾಂತರದಲ್ಲಿ ತೀವ್ರವಾಗಿಲ್ಲ. ಆದರೆ, ಯಾದವರು ಮತ್ತು ಇತರ ಒಬಿಸಿಗಳ ನಡುವೆ ಹಗೆತನ ಇದೆ. ಯಾದವರು ಮತ್ತು ದಲಿತರು ನಡುವೆ ಸಂಭವನೀಯ ಸಾಮಾಜಿಕ ಮರುಜೋಡಣೆಯ ಸೂಚನೆಯಿದೆ.

ದಲಿತ ನಾಯಕರಾದ ಅಯೋಧ್ಯೆಯ ಅವದೇಶ್ ಪ್ರಸಾದ್, ದಿವಂಗತ ಘುರಾರಾಮ್ ಅವರ ಅನುಯಾಯಿಗಳು, ಬಲ್ಲಿಯಾದಲ್ಲಿ ಮಿಥೈಲಾಲ್ ಭಾರತಿ, ಆರ್‌ಕೆ ಭೀಮ್, ದಯಾರಾಮ್ ಪಾಲ್, ಮೌ ಪಟ್ಟಣದ ಅಶೋಕ್ ಗೌತಮ್ ಮತ್ತು ಲಕ್ನೋದಲ್ಲಿ ಕಮಲಕಾಂತ್ ಗೌತಮ್ ಅವರುಗಳು ಎಸ್‌ಪಿಯಲ್ಲಿ ಪ್ರಾಮುಖ್ಯತೆ ಪಡೆಯುತ್ತಿದ್ದಾರೆ.

ಕೆಲವೆಡೆ ದಲಿತರು ಎಸ್‌ಪಿಯತ್ತ ವಾಲುತ್ತಿದ್ದಾರೆ. ಎಸ್ಪಿ ಮೊದಲ ಪಟ್ಟಿಯಲ್ಲಿ ಮೂವರು ದಲಿತ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ. ಬಿಜೆಪಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಮಾಯಾವತಿ ಮುಖ್ಯರಲ್ಲ ಎಂದು ಬಿಎಸ್‌ಪಿ ಕಾರ್ಯಕರ್ತರು ಎಸ್‌ಪಿ ಅಡಿಯಲ್ಲಿ ಒಂದಾಗುತ್ತಿದ್ದಾರೆ. ಬಿಜೆಪಿ-ಎಸ್‌ಪಿ ಧ್ರುವೀಕರಣ ಹೊರಹೊಮ್ಮುತ್ತಿದೆ.

ಅಭಿಪ್ರಾಯ ಸಂಗ್ರಹ: 2022 ರಲ್ಲಿ ಗಾಜಿಪುರ, ಮೌ ಮತ್ತು ಅಜಂಗಢದಲ್ಲಿ ಮಾತ್ರವಲ್ಲದೆ, ಪಶ್ಚಿಮ ಯುಪಿಯ ಮೈನ್‌ಪುರಿ ಮತ್ತು ಕನ್ನೌಜ್‌ನಂತಹ ಕ್ಷೇತ್ರಗಳಲ್ಲೂ ಎಸ್‌ಪಿಗೆ ಒಲವು ವ್ಯಕ್ತವಾಗಿದೆ. ಅಲ್ಲಿ ಜಾಟರು ಬಿಜೆಪಿಯಿಂದ ದೂರವಾಗಿದ್ದಾರೆ ಮತ್ತು ಜಾಟ್-ಮುಸ್ಲಿಮ್ ಹೊಂದಾಣಿಕೆ ಎಸ್ಪಿಗೆ ಅನುಕೂಲಕರ ವಾಗಬಹುದು. ಧರಣಿ ನಿರತ ರೈತರ ಮೇಲೆ ಕಾರು ಚಲಾಯಿಸಿದ ಬಿಜೆಪಿ ಸಚಿವ ಅಜಯ್ ಮಿಶ್ರಾ ತೇನಿ ಅವರಿಗೆ ಜಾಟ್ ರೈತರು ಪ್ರತಿರೋಧ ತೋರಿಸಿದ್ದು, ಲಖಿಂಪುರ-ಖೇರಿಯಲ್ಲೂ ಎಸ್ಪಿಗೆ ಲಾಭ ಆಗಬಹುದು. ವರುಣ್ ಗಾಂಧಿ ಅವರನ್ನು ಬದಲಿಸಿದರೆ, ಪಿಲಿಭಿತ್‌ನಲ್ಲಿಯೂ ಲಾಭದ ಸಾಧ್ಯತೆ ಇದೆ.

ಹೆಚ್ಚಿನ ಸಮೀಕ್ಷೆಗಳು ಬಿಜೆಪಿಗೆ 70 ಅಥವಾ ಹೆಚ್ಚು ಸ್ಥಾನ ಬರಲಿದೆ ಎನ್ನುತ್ತವೆ. ಆದರೆ, ಫೆಡರಲ್‌ ಭೇಟಿ ಮಾಡಿದವರು ಎಸ್‌ಪಿ ಮತ್ತು ಕಾಂಗ್ರೆಸ್ ಕನಿಷ್ಠ 15-20 ಸ್ಥಾನ ಗೆಲ್ಲುತ್ತಾರೆ ಎಂದು ಹೇಳಿದರು. ರಾಮಮಂದಿರ ಮತ್ತು ಬಿಜೆಪಿಯ ಜಾಹೀರಾತುಗಳು ಹೆಚ್ಚುವರಿ ಮತಗಳನ್ನು ತರುವುದಿಲ್ಲ. ಚುನಾವಣೆ ಬಾಂಡ್‌ಗಳಿಂದ ಬಿಜೆಪಿಯು ಪಾಕಿಸ್ತಾನಿ ಕಂಪನಿಗಳಿಂದ 400 ಕೋಟಿ ರೂ. ಪಡೆದುಕೊಂಡಿದೆ ಎಂಬ ಸಾಮಾಜಿಕ ಮಾಧ್ಯಮದ ಕೂಗುಗಳು ಬಿಜೆಪಿಯ ಇಮೇಜ್ ನ್ನು ಸ್ವಲ್ಪಮಟ್ಟಿಗೆ ಕೆಡಿಸಬಹುದು.

ಮೋದಿ ಅವರಿಗೆ ಅನುಕೂಲ: ಗ್ರಾಮೀಣ ಆದಾಯದಲ್ಲಿ ಕೃಷಿಯ ಪಾಲು ಶೇ.38 ಕ್ಕೆ ಇಳಿಕೆ, ಉಷ್ಣ ಅಲೆ, ಪ್ರವಾಹ ಮತ್ತು ಆಲಿಕಲ್ಲು, ಸಬ್ಸಿಡಿ ಕಡಿತ, ಉಕ್ರೇನ್ ಯುದ್ಧದ ನಂತರ ಹಣದುಬ್ಬರ ಹೆಚ್ಚಳ, ಏಪ್ರಿಲ್ 2021 ರಲ್ಲಿ ಕೃಷಿ ಒಳಸುರಿಗಳ ಬೆಲೆ ತೀವ್ರ ಹೆಚ್ಚಳ ಗ್ರಾಮೀಣ ಸಂಕಷ್ಟದ ಇತರ ಕೆಲವು ಅಂಶಗಳು.

ಆದರೆ, ಬಿಕ್ಕಟ್ಟು ಬಿಜೆಪಿಗೆ ಹಾನಿಯಾಗುವಷ್ಟು ತೀವ್ರವಾಗಿಲ್ಲ; 2004 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಕಂಡ ಸೋಲಿನ ಪುನರಾವರ್ತನೆಯಾಗುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಒಟ್ಟಾರೆ ಸಮತೋಲನ ಮೋದಿ ಅವರ ಪರವಾಗಿಯೇ ಇರಬಹುದು. ಗೆಲುವಿನ ಆಧಾರದ ಮೇಲೆ ಗ್ರಾಮೀಣ ಸಂಕಷ್ಟದ ನೈಜ ಚುನಾವಣೆ ಪರಿಣಾಮವನ್ನು ಅಳೆಯಲು ಜೂನ್ 4 ರವರೆಗೆ ಕಾಯಬೇಕಿದೆ.

Read More
Next Story