
Farmers Protest | ನೋಯ್ಡಾದಲ್ಲಿ ಪ್ರತಿಭಟನಾ ನಿರತ 160ಕ್ಕೂ ಹೆಚ್ಚು ರೈತರ ಬಂಧನ, ಕೇಸ್ ದಾಖಲು
ಪೊಲೀಸರು "ನೂರಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ನೂರಾರು ರೈತರನ್ನು ಬಂಧಿಸಿ ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ಹೊರಹಾಕಿದ್ದಾರೆ ಎಂದು ರೈತ ಸಂಘ ಹೇಳಿಕೆಯಲ್ಲಿ ತಿಳಿಸಿದೆ.
ನಾನಾ ಬೇಡಿಕೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ದಿಲ್ಲಿಗೆ ರ್ಯಾಲಿ ಪ್ರತಿಭಟನೆ ನಿಲ್ಲಿಸಿ ನೋಯ್ಡಾದ 'ದಲಿತ ಪ್ರೇರಣಾ ಸ್ಥಳ'ದಲ್ಲಿ ಧರಣಿ ನಡೆಸುತ್ತಿದ್ದ ಭಾರತೀಯ ಕಿಸಾನ್ ಪರಿಷತ್ ಅಧ್ಯಕ್ಷ ಸುಖ್ಬೀರ್ ಯಾದವ್ 'ಖಲೀಫಾ' ಸೇರಿದಂತೆ 160ಕ್ಕೂ ಹೆಚ್ಚು ಪ್ರತಿಭಟನಾನಿರತ ರೈತರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಕರೆ ಮೇರೆಗೆ ಸೋಮವಾರ ಉತ್ತರ ಪ್ರದೇಶದ ವಿವಿಧ ಭಾಗಗಳಿಂದ ಗೌತಮ್ ಬುದ್ಧ ನಗರದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಒಂದು ವಾರದೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಷ್ಟ್ರ ರಾಜಧಾನಿಗೆ ತಮ್ಮ ಮೆರವಣಿಗೆಯನ್ನು ಪುನರಾರಂಭಿಸುವುದಾಗಿ ಬೆದರಿಕೆ ಹಾಕಿದ್ದರು. ಅವರಲ್ಲಿ ಹಲವರ ಮೇಲೆ ಕೇಸ್ ದಾಖಲಾಗಿದೆ.
ಪೊಲೀಸರ ಕ್ರಮವನ್ನು ಖಂಡಿಸಿದ ಎಸ್ಕೆಎಂ, ಶಾಂತಿಯುತ ಪ್ರತಿಭಟನೆಯ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಪೊಲೀಸರು "ನೂರಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ನೂರಾರು ರೈತರನ್ನು ಬಂಧಿಸಿ ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ಹೊರಹಾಕಿದ್ದಾರೆ ಎಂದು ರೈತ ಸಂಘ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಸೆಕ್ಷನ್ 170 ರ ಅಡಿಯಲ್ಲಿ ಮಧ್ಯಾಹ್ನ 1.30 ರ ಸುಮಾರಿಗೆ 160 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಶಿವ ಹರಿ ಮೀನಾ ತಿಳಿಸಿದ್ದಾರೆ.
ಬಂಧಿತರಲ್ಲಿ ಮಹಿಳೆಯರು ಮತ್ತು ಖಲೀಫಾ ಮತ್ತು ಭಾರತೀಯ ಕಿಸಾನ್ ಯೂನಿಯನ್ (ಪಶ್ಚಿಮ ಉತ್ತರ ಪ್ರದೇಶ) ರಾಜ್ಯ ಅಧ್ಯಕ್ಷ ಪವನ್ ಖತಾನಾ ಅವರಂತಹ ಹಲವಾರು ರೈತ ಮುಖಂಡರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಾಕಾರರನ್ನು ನೋಯ್ಡಾದ ಲುಕ್ಸರ್ ಜೈಲಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೋರಾಟ ಮುಂದುವರಿಕೆ
ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟವನ್ನು ಮುಂದುವರಿಸುವುದಾಗಿ ಖಲೀಫಾ ಪಿಟಿಐಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ.
ಬಂಧನಗಳನ್ನು ಖಂಡಿಸಿದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಜಾಫರ್ ನಗರದ ಸಿಸೌಲಿ ಗ್ರಾಮದ ಕಿಸಾನ್ ಭವನದಲ್ಲಿ ಈ ವಿಷಯದ ಬಗ್ಗೆ ಪಂಚಾಯತ್ ಕರೆದಿದೆ, ಅಲ್ಲಿ ಬುಧವಾರ ಪ್ರತಿಭಟನೆಯನ್ನು ಹೆಚ್ಚಿಸಲು ನಿರ್ಧರಿಸಿದೆ.
ಎಸ್ಕೆಎಂ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ "ರೈತರ ರಾಷ್ಟ್ರವ್ಯಾಪಿ ಆಂದೋಲನವಾಗಿ ಬದಲಾಗುತ್ತದೆ" ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಎಚ್ಚರಿಸಿದ್ದಾರೆ.
" ರೈತರಿಗೆ ನ್ಯಾಯಯುತ ಪರಿಹಾರ ಪಾವತಿಸದೆ. ಸರ್ಕಾರವು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಅನ್ಯಾಯದ ವಿಧಾನದ ವಿರುದ್ಧದ ಪ್ರತಿಭಟನೆ ಇದಾಗಿದೆ. ಇದು ರೈತರ ರಾಷ್ಟ್ರವ್ಯಾಪಿ ಆಂದೋಲನವಾಗಿ ಬದಲಾಗುತ್ತದೆ" ಎಂದು ಟಿಕಾಯತ್ ಹೇಳಿದ್ದಾರೆ.
ಈ ಪ್ರತಿಭಟನೆಯಲ್ಲಿ ಗೌತಮ್ ಬುದ್ಧ ನಗರದ ರೈತರು ಏಕಾಂಗಿಯಲ್ಲ ಮತ್ತು ನ್ಯಾಯದ ಹೋರಾಟಕ್ಕಾಗಿ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಅಲ್ಲಿ ನಿಯೋಜಿಸಲಾಗಿದೆ ಎಂದು ಟಿಕಾಯತ್ ಹೇಳಿದ್ದಾರೆ.

