ಹತ್ರಾಸ್: ಸತ್ಸಂಗದಲ್ಲಿ ಕಾಲ್ತುಳಿತದಿಂದ 100ಕ್ಕೂ ಅಧಿಕ ಸಾವು
ಹತ್ರಾಸ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಲ್ರೈ ಗ್ರಾಮದಲ್ಲಿ ನಡೆದ ಸತ್ಸಂಗದಲ್ಲಿ 15000 ಕ್ಕೂ ಹೆಚ್ಚು ಜನ ಜಮಾಯಿಸಿದ್ದರು ಎಂದು ಇಟಾದ ಹಿರಿಯ ಪೊಲೀಸ್ ಅಧೀಕ್ಷಕ ರಾಜೇಶ್ ಕುಮಾರ್ ಸಿಂಗ್ ಹೇಳಿದರು.
ʻಇಪ್ಪತ್ತೇಳು ಮೃತದೇಹಗಳು ಇಟಾದ ಆಸ್ಪತ್ರೆಗೆ ಬಂದಿವೆ. ಮೃತರಲ್ಲಿ 23 ಮಹಿಳೆಯರು, ಮೂವರು ಮಕ್ಕಳು ಮತ್ತು ಒಬ್ಬ ಪುರುಷ ಇದ್ದಾರೆ,ʼ ಎಂದು ಸುದ್ದಿಗಾರರಿಗೆ ತಿಳಿಸಿದರು.
ಜನದಟ್ಟಣೆಯಿಂದ ಕಾಲ್ತುಳಿತ ಸಂಭವಿಸಿದೆ ಎಂದು ಸಿಕಂದ್ರಾ ರಾವ್ ಪೊಲೀಸ್ ಠಾಣೆ ಎಸ್‌ಎಚ್‌ಒ ಆಶಿಶ್ ಕುಮಾರ್ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಆಗ್ರಾ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಅಲಿಘಡ ವಿಭಾಗೀಯ ಆಯುಕ್ತರನ್ನು ಒಳಗೊಂಡ ತಂಡ ಘಟನೆಯ ತನಿಖೆ ನಡೆಸಲಿದೆ.
ನಡೆದಿದ್ದೇನು?:
ಹೊರ ತೆರಳುವ ಮಾರ್ಗ ಕಿರಿದಾಗಿದ್ದರೆ, ಕಾಲ್ತುಳಿತ ಸಂಭವಿಸುತ್ತದೆ. ಹತ್ರಾಸ್ ನಲ್ಲಿ ನಡೆದಿದ್ದೇನು ಎಂಬುದು ಈವರೆಗೆ ಅಧಿಕೃತವಾಗಿ ತಿಳಿದುಬಂದಿಲ್ಲ. ಆರಂಭಿಕ ವರದಿಗಳ ಪ್ರಕಾರ, ಸತ್ಸಂಗದ ಅಂತಿಮ ಹಂತದಲ್ಲಿ ನೂಕುನುಗ್ಗಲು ನಡೆದಿದೆ. ಅತಿ ಜನದಟ್ಟಣೆ ಕಾರಣ ಎಂದು ಸಿಕಂದ್ರಾ ಪೊಲೀಸ್ ಠಾಣೆ ಎಸ್‌ಎಚ್‌ಒ ಅಶಿಶ್ ಕುಮಾರ್ ತಿಳಿಸಿದ್ದಾರೆ.
ಸತ್ಸಂಗವನ್ನು ಧಾರ್ಮಿಕ ಮುಖಂಡ ಹಾಗೂ ಅವರ ಪತ್ನಿ ನಡೆಸಿಕೊಡುತ್ತಿದ್ದರು. ಆಗ ನೂಕುನುಗ್ಗಲು ನಡೆದಿದೆ. ಸಾಕಾರ್ ವಿಶ್ವ ಹರಿ ಭೋಲೆ ಬಾಬಾ ಎಂಬ ಬ್ಯಾನರ್ ನಡಿ ಕಳೆದ ಎರಡು ದಶಕಗಳಿಂದ ಇಂಥ ಸತ್ಸಂಗಗಳನ್ನು ನಡೆಸಿಕೊಡಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ʻಇಟಾ ಮತ್ತು ಹತ್ರಾಸ್ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ನಡೆದ ಸತ್ಸಂಗಕ್ಕೆ ತಾತ್ಕಾಲಿಕ ಅನುಮತಿ ಪಡೆಯಲಾಗಿತ್ತುʼ ಎಂದು ಆಲಿಗಢದ ಐಜಿಪಿ ಶಲಭ್ ಕುಮಾರ್ ಹೇಳಿದ್ದಾರೆ.ʻಇಂದು ಸಿಕಂದ್ರಾ ರಾವ್ ನಲ್ಲಿ ನಡೆದ ಸತ್ಸಂಗದಲ್ಲಿ 15,000 ಕ್ಕೂ ಅಧಿಕ ಮಂದಿ ಸೇರಿದ್ದರು. ಕಾಲ್ತುಳಿತಕ್ಕೆ ಕಾರಣವೇನು ಎಂಬುದು ನಿರ್ದಿಷ್ಟವಾಗಿ ಗೊತ್ತಿಲ್ಲ. ಆದರೆ, ಹೆಚ್ಚಿನ ಸಾವುಗಳು ಉಸಿರುಗಟ್ಟುವಿಕೆಯಿಂದ ಸಂಭವಿಸಿವೆʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಪಘಾತ ಸ್ಥಳದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ, ತಕ್ಷಣ ಆಸ್ಪತ್ರೆಗಳಿಗೆ ಕರೆದೊಯ್ಯುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.