ಟಿ20 ವಿಶ್ವ ಕಪ್:‌  ಪಾಕಿಸ್ತಾನ ಹೊರಗೆ, ಸೂಪರ್ ಎಂಟು ಹಂತಕ್ಕೆ ಅಮೆರಿಕ
x
ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನ ಅಂಕಣವನ್ನು ಮಳೆಯಿಂದ ರಕ್ಷಿಸಲು ಮುಚ್ಚಲಾಯಿತು

ಟಿ20 ವಿಶ್ವ ಕಪ್:‌ ಪಾಕಿಸ್ತಾನ ಹೊರಗೆ, ಸೂಪರ್ ಎಂಟು ಹಂತಕ್ಕೆ ಅಮೆರಿಕ

ಅಮೆರಿಕ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ನಡೆಯಲಿಲ್ಲ.


ಲಾಡರ್‌ಹಿಲ್ (ಫ್ಲೋರಿಡಾ)- ಯುಎಸ್ಎ ತಂಡ ತನ್ನ ಮೊದಲ ಪ್ರಯತ್ನದಲ್ಲಿ ಟಿ 20 ವಿಶ್ವಕಪ್‌ನ ಸೂಪರ್‌ 8ರ ಘಟ್ಟವನ್ನು ತಲುಪಿದೆ. ಅಪಜಯ ಅನುಭವಿಸಿದ ಮಾಜಿ ಚಾಂಪಿಯನ್ ಪಾಕಿಸ್ತಾನ, ಪಂದ್ಯಾವಳಿಯಿಂದ ಹೊರಬಿದ್ದಿದೆ.

ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಕೆನಡಾ ಮತ್ತು ಪಾಕಿಸ್ತಾನದ ವಿರುದ್ಧ ಜಯ ಗಳಿಸಿದ್ದರಿಂದ ಹಾಗೂ ಹಿಂದಿನ ಪಂದ್ಯ ಮಳೆಯಿಂದ ಕೊಚ್ಚಿಹೋಗಿದ್ದರಿಂದ, ಅಮೆರಿಕವು ಸೂಪರ್ ಎಂಟು ಘಟ್ಟವನ್ನು ಮುಟ್ಟಿದೆ.

2009ರಲ್ಲಿ ಕಪ್‌ ಗೆದ್ದುಕೊಂಡ ಪಾಕಿಸ್ತಾನವು ಪಂದ್ಯಾವಳಿಯಿಂದ ಹೊರನಡೆದಿದ್ದು, ಅಮೆರಿಕ ಮುಂದಿನ ಹಂತಕ್ಕೆ ಮುನ್ನಡೆಯಿತು. ಅಮೆರಿಕ ನಾಲ್ಕು ಪಂದ್ಯಗಳಿಂದ ಐದು ಅಂಕಗಳೊಂದಿಗೆ ಲೀಗ್‌ ಅಭಿಯಾನವನ್ನು ಕೊನೆಗೊಳಿಸಿತು. ಪಾಕಿಸ್ತಾನ ಒಂದುವೇಳೆ ಐರ್ಲೆಂಡ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಗೆದ್ದರೂ, ಗರಿಷ್ಠ ನಾಲ್ಕು ಅಂಕ ಗಳಿಸಬಹುದು.

ಕಳೆದ ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, 120 ರನ್‌ ಗುರಿ ಮುಟ್ಟುವಲ್ಲಿ ವಿಫಲವಾಯಿತು. ಅದಕ್ಕೂ ಮೊದಲು, ಡಲ್ಲಾಸ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೂಪರ್ ಓವರ್‌ನಲ್ಲಿ ಆಘಾತಕಾರಿ ಸೋಲು ಅನುಭವಿಸಿತ್ತು. ಸತತ ಸೋಲುಗಳಿಂದಾಗಿ ಪಾಕಿಸ್ತಾನ ಸೂಪರ್ ಎಂಟಕ್ಕೆ ಘಟ್ಟ ತಲುಪುವ ಸಾಧ್ಯತೆ ಕೈ ತಪ್ಪಿದೆ.

ಪಶ್ಚಿಮದ ದೇಶಗಳಲ್ಲಿ ಕ್ರಿಕೆಟ್‌ ನ್ನು ಉತ್ತೇಜಿಸುವ ಐಸಿಸಿ ಯ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ, ಅಮೆರಿಕವು ವೆಸ್ಟ್ ಇಂಡೀಸ್ ಜೊತೆಗೆ ಪಂದ್ಯಾವಳಿಯ ಸಹ ಆತಿಥ್ಯ ವಹಿಸಿದೆ. ಪಂದ್ಯಾವಳಿಯಲ್ಲಿ ಅಮೆರಿಕದ ಈವರೆಗಿನ ಪ್ರದರ್ಶನವನ್ನು ನೋಡಿದರೆ, ಭವಿಷ್ಯದಲ್ಲಿ ಅಮೆರಿಕನ್ನರು ಕ್ರಿಕೆಟ್ ನ್ನು ಪರಿಗಣಿಸುವ ಸಾಧ್ಯತೆ ಹೆಚ್ಚು ಇದೆ. ಕೆನಡಾ ವಿರುದ್ಧ ಸುಮಾರು 200 ರನ್‌ಗಳನ್ನು ಬೆನ್ನಟ್ಟುವ ಮೂಲಕ ಅಮೆರಿಕ ಟೂರ್ನಿಯನ್ನು ಆರಂಭಿಸಿತು. ಆನಂತರ, ಮಾಜಿ ಚಾಂಪಿಯನ್‌ ಪಾಕಿಸ್ತಾನವನ್ನು ಮಣಿಸಿತು.

ಅಮೆರಿಕ ತಂಡದಲ್ಲಿ ಭಾರತೀಯ ಮೂಲದ ಎಂಟು ಕ್ರಿಕೆಟಿಗರು ಇದ್ದಾರೆ. ಅವರಲ್ಲಿ ಹೆಚ್ಚಿನವರು ತಾತ್ಕಾಲಿಕ ಎಚ್1-ಬಿ ವೀಸಾ ಹೊಂದಿ ದ್ದು, ಅಮೆರಿಕ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿದ 180 ವರ್ಷಗಳ ನಂತರ ಕ್ರೀಡೆಯನ್ನು ಪುನರುಜ್ಜೀವನ ಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅಮೆರಿಕ ಮತ್ತು ಕೆನಡಾ ನಡುವೆ 1844ರಲ್ಲಿ ನ್ಯೂಯಾರ್ಕ್‌ನ ಸೇಂಟ್ ಜಾರ್ಜ್ ಕ್ರಿಕೆಟ್ ಕ್ಲಬ್‌ನಲ್ಲಿ ಈ ಪಂದ್ಯ ನಡೆದಿತ್ತು. ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ 33 ವರ್ಷಗಳ ಬಳಿಕ ಮೊದಲ ಟೆಸ್ಟ್‌ ಪಂದ್ಯ ಆಡಿದವು.

ಫ್ಲಾರಿಡಾದ ಲಾಡರ್‌ಹಿಲ್‌ ಚಂಡಮಾರುತದಿಂದ ನಿರಂತರ ಮಳೆ ಹಾಗೂ ಪ್ರವಾಹಕ್ಕೆ ಸಿಲುಕುವ ಸಾಧ್ಯತೆ ಇದ್ದುದರಿಂದ, ಶುಕ್ರವಾರದ ಪಂದ್ಯ ನಡೆಯುವ ಸಾಧ್ಯತೆ ಕ್ಷೀಣವಾಗಿತ್ತು. ಒಂದು ವೇಳೆ ಪಂದ್ಯ ನಡೆದಿದ್ದರೂ, ಎರಡು ಭಾರಿ ಗೆಲುವು ಮತ್ತು ಭಾರತದ ವಿರುದ್ಧಆಟದಿಂದ ಉತ್ತೇಜಿತವಾಗಿರುವ ಅಮೆರಿಕ, ಐರ್ಲೆಂಡ್ ಅನ್ನು ಸೋಲಿಸಿ, ಸೂಪರ್ ಎಂಟು ಹಂತಕ್ಕೆ ಮುನ್ನಡೆಯುವುದು ಖಚಿತವಾಗಿತ್ತು.

Read More
Next Story