
ಕೇಂದ್ರ ಲೋಕಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆ
UPSC result:ಯುಪಿಎಸ್ಸಿ ಫಲಿತಾಂಶ ಪ್ರಕಟ, 20ಕ್ಕೂ ಹೆಚ್ಚು ಕನ್ನಡಿಗರಿಗೆ ಯಶಸ್ಸು
UPSC result: ರಾಜ್ಯದಿಂದ ಇಪ್ಪತು ಜನರು ಆಯ್ಕೆಯಾಗಿದ್ದು ಖುಷಿಯ ವಿಚಾರ. ಕಠಿಣ ಅಭ್ಯಾಸ ಮತ್ತು ಪರಿಶ್ರಮ ಫಲ ನೀಡಿದೆ. ನಿಮ್ಮ ಸಾಧನೆ ಉನ್ನತ ಹುದ್ದೆಗಳ ಕನಸು ಕಂಡಿರುವ ಯುವ ಮನಸುಗಳಿಗೆ ಸ್ಪೂರ್ತಿಯಾಗಲಿದೆ
ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯ 2024 ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು ಉತ್ತರಪ್ರದೇಶದ ಪ್ರಯಾಗ್‌ರಾಜ್ ಮೂಲದ ಶಕ್ತಿ ದುಬೆ ಪ್ರಥಮ ರ್ಯಾಂಕ್ ಪಡೆದಿದ್ದು ಹರ್ಷಿತಾ ಗೋಯಲ್ ಹಾಗೂ ಡೋಂಗ್ರೆ ಅರ್ಚಿತ್ ಪರಾಗ್ ದ್ವಿತೀಯ ಹಾಗೂ ತೃತೀಯ ರ್ಯಾಂಕ್ ಪಡೆದಿದ್ದಾರೆ. ಕರ್ನಾಟಕದ ರಂಗಮಂಜು 24ನೇ ರ್ಯಾಂಕ್ ಪಡೆದಿದ್ದು ರಾಜ್ಯಕ್ಕೆ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಭಿನಂದನೆ:
ರಾಜ್ಯದಿಂದ ಇಪ್ಪತು ಜನರು ನಾಗರಿಕ ಸೇವೆಗೆ ಆಯ್ಕೆಯಾಗಿರುವುದು ಖುಷಿಯ ವಿಚಾರ. ನಿಮ್ಮ ಕಠಿಣ ಅಭ್ಯಾಸ ಮತ್ತು ಪರಿಶ್ರಮ ಇಂದು ಫಲ ನೀಡಿದೆ. ನಿಮ್ಮ ಸಾಧನೆ ಭವಿಷ್ಯದಲ್ಲಿ ಉನ್ನತ ಹುದ್ದೆಗಳ ಕನಸು ಕಂಡಿರುವ ಲಕ್ಷಾಂತರ ಯುವ ಮನಸುಗಳಿಗೆ ಸ್ಫೂರ್ತಿಯಾಗಲಿದೆ. ದಕ್ಷತೆ. ನಿಷ್ಠೆ. ಸೇವಾ ಬದ್ಧತೆ ಮತ್ತು ಪ್ರಾಮಾಣಿಕತೆ ನಿಮ್ಮ ಔದ್ಯೋಗಿಕ ಜೀವನದ ಹಾದಿಯ ಗುರಿಯಾಗಿರಲಿ. ರಾಷ್ಟ್ರದ ಅಭಿವೃದ್ದಿಯಲ್ಲಿ ನಿಮ್ಮ ಕೊಡುಗೆಯನ್ನು ಎದುರು ನೋಡುತ್ತಿರುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸಿಎಂ ಸಂದೇಶ ತಿಳಿಸಿದ್ದಾರೆ.
ರಾಜ್ಯದಿಂದ ಆಯ್ಕೆಯಾದವರು:
ರಾಣಿಬಿನ್ನೂರು ತಾಲೂಕಿನ ಡಾ.ಸಚಿನ್ ಗುತ್ತೂರು (41ನೇ) ರ್ಯಾಂಕ್. ಮೈಸೂರಿನ ಪ್ರೀತಿ (263ನೇ) ರ್ಯಾಂಕ್. ಜಿ.ರಶ್ಮಿ 976ನೇ ರ್ಯಾಂಕ್, ಸಾಗರದ ವಿಕಾಸ್ 288ನೇ ರ್ಯಾಂಕ್. ಕೋಲಾರದ ಡಾ. ಆರ್ ಮಾಧವಿ 446ನೇ ರ್ಯಾಂಕ್. ಎ.ಮಧು 544ನೇ ರ್ಯಾಂಕ್. ಐಪಿಎಸ್ ತರಬೇತಿ ಪಡೆಯುತ್ತಿರುವ ಮೈಸೂರಿನ ಜೆ. ಭಾನುಪ್ರಕಾಶ್ 523ನೇ ರ್ಯಾಂಕ್ . ಟಿ. ವಿಜಯ್ ಕುಮಾರ್ 894 ನೇ ರ್ಯಾಂಕ್. ಬಾಗಲಕೋಟೆಯ ಪಾಂಡುರಂಗ ಹಂಬಳಿ 529ನೇ ರ್ಯಾಂಕ್. ವಿಜಯಪುರ ಜಿಲ್ಲೆಯ ರಾಹುಲ್ ಯರಂತೇಲಿ 462ನೇ ರ್ಯಾಂಕ್. ಮಹೇಶ್ ಮಡಿವಾಳ 487 ನೇ ರ್ಯಾಂಕ್ ಹಾಗೂ ಹನುಮಂತಪ್ಪ ನಂದಿ 910ನೇ ರ್ಯಾಂಕ್. ರಾಮನಗರದ ಅಜಯ್ ಕುಮಾರ್ 895ನೇ ರ್ಯಾಂಕ್. ಚನ್ನಗಿರಿಯ ಡಾ. ಎಲ್.ದಯಾನಂದ್ 615ನೇ ರ್ಯಾಂಕ್. ಕಲಬುರಗಿಯ ಮೋಹನ್ ಪಾಟೀಲ್ 984ನೇ ರ್ಯಾಂಕ್. ಸಕಲೇಶಪುರದ ಧನ್ಯಾ 982 ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಸಾಮಾನ್ಯ ವರ್ಗದ 335. ಇಡಬ್ಲ್ಯುಎಸ್ ವರ್ಗದ 109. ಒಬಿಸಿ 318. ಎಸ್‌ಸಿ 160. ಎಸ್‌ಟಿ 87ಮಂದಿ ಸೇರಿದಂತೆ ಒಟ್ಟು 1009 ಜನ ಉತ್ತೀರ್ಣರಾಗಿದ್ದು. ತಾತ್ಕಾಲಿಕ ಪಟ್ಟಿಯಲ್ಲಿ 241 ಅಭ್ಯರ್ಥಿಗಳಿದ್ದು ಓರ್ವ ಅಭ್ಯರ್ಥಿಯ ಫಲಿತಾಂಶ ತಡೆಹಿಡಿಯಲಾಗಿದೆ. ಕಳೆದ ವರ್ಷ ಜೂನ್ ೧೬ ರಂದು ನಡೆದ ಪೂರ್ವಬಾವಿ ಪರೀಕ್ಷೆಗೆ 992599ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಪರೀಕ್ಷೆಗೆ 583213 ಮಂದಿ ಹಾಜರಾಗಿದ್ದು ಮುಖ್ಯಪರೀಕ್ಷೆಗೆ 14627 ಮಂದಿ ಆಯ್ಕೆಯಾಗಿದ್ದರು.