ಪೂಜಾ ಖೇಡ್ಕರ್ ಮೇಲೆ ವಂಚನೆ ಕೇಸ್ ದಾಖಲಿಸಿದ ಯುಪಿಎಸ್ಸಿ
x

ಪೂಜಾ ಖೇಡ್ಕರ್ ಮೇಲೆ ವಂಚನೆ ಕೇಸ್ ದಾಖಲಿಸಿದ ಯುಪಿಎಸ್ಸಿ

ಪೂಜಾ ಅವರು ತಮ್ಮ ಹೆಸರು, ಪೋಷಕರ ಹೆಸರು, ಭಾವಚಿತ್ರ, ಸಹಿ, ಸಂಪರ್ಕ ವಿವರ ಮತ್ತು ವಿಳಾಸವನ್ನು ಬದಲಿಸಿದ್ದಾರೆ ಎಂದು ಯುಪಿಎಸ್‌ಸಿ ಆರೋಪಿಸಿದೆ.


ಹೊಸದಿಲ್ಲಿ, ಜು.19- ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಮೇಲಿನ ಅವ್ಯವಹಾರ ಆರೋಪ ಕುರಿತು ತನಿಖೆ ನಡೆಸಿದ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ), ಅಧಿಕಾರಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

ಖೇಡ್ಕರ್ ಅವರು ತಮ್ಮ ಗುರುತನ್ನು ತಿದ್ದಿಕೊಂಡು, ಯುಪಿಎಸ್‌ಸಿ ಅಭ್ಯರ್ಥಿಯೊಬ್ಬರಿಗೆ ಅನುಮತಿಸಿದ ಪ್ರಯತ್ನಕ್ಕಿಂತ ಹೆಚ್ಚು ಬಾರಿ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಆಯೋಗ ಹೇಳಿದೆ.

2022 ರ ಪರೀಕ್ಷೆಯಲ್ಲಿ ಅವರ ಫಲಿತಾಂಶವನ್ನು ರದ್ದುಗೊಳಿಸಬಾರದೇಕೆ ಎಂದು ಕಾರಣ ಕೇಳಿ ನೋಟಿಸ್( ಶೋಕಾಸ್ ನೋಟಿಸ್)‌ ನೀಡಿದೆ ಹಾಗೂ ಮುಂದಿನ ಪರೀಕ್ಷೆಗೆ ಅವರಿಗೆ ಅವಕಾಶ ನೀಡದೆ ಇರುವ ಕುರಿತು ಪರಿಗಣಿಸುತ್ತಿದೆ ಎಂದು ಹೇಳಿದೆ.

ಇದಾದ ಬಳಿಕ, ಯುಪಿಎಸ್‌ಸಿ ದೆಹಲಿ ಪೊಲೀಸರಿಗೆ ದೂರು ನೀಡಿದೆ. ದೂರು ಸ್ವೀಕರಿಸಿದ್ದು, ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ʻಯುಪಿಎಸ್‌ಸಿ ನಿಗದಿಗೊಳಿಸಿದ್ದಕ್ಕಿಂತ ಹೆಚ್ಚುವರಿ ಬಾರಿ ಪರೀಕ್ಷೆ ತೆಗೆದುಕೊಳ್ಳಲು ಗುರುತು ತಿದ್ದಿರುವ ಕುರಿತು ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ವಿರುದ್ಧ ಯುಪಿಎಸ್‌ಸಿ, ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಕ್ರೈಂ ಬ್ರಾಂಚ್‌ ತನಿಖೆಯನ್ನು ಕೈಗೆತ್ತಿಕೊಂಡಿದೆ,ʼ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ನಾಗರಿಕ ಸೇವೆ ಪರೀಕ್ಷೆಗೆ ನಕಲು, ವಂಚನೆ ಮತ್ತು ಅಂಗವೈಕಲ್ಯ ಕೋಟಾದ ದುರುಪಯೋಗ ಆರೋಪ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಅಂಗವಿಕಲರ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೂಜಾ ಅವರು ತಮ್ಮ ಹೆಸರು, ಪೋಷಕರ ಹೆಸರು, ಅವರ ಭಾವಚಿತ್ರ, ಸಹಿ, ಸಂಪರ್ಕ ವಿವರ ಮತ್ತು ವಿಳಾಸವನ್ನು ಬದಲಿಸಿದ್ದಾರೆ ಎಂದು ಯುಪಿಎಸ್‌ಸಿ ಆರೋಪಿಸಿದೆ.

ಹುದ್ದೆ ತೊರೆದ ಪೂಜಾ: ಸುದ್ದಿ ಪ್ರಕಟವಾಗುತ್ತಿದ್ದಂತೆ ಪೂಜಾ ಅವರು ಮಹಾರಾಷ್ಟ್ರದ ವಾಶಿಂನ ತಮ್ಮ ಹುದ್ದೆಯನ್ನು ತೊರೆದಿದ್ದಾರೆ. ಅವ ರು ಪ್ರೊಬೇಷನರಿ ಆಗಿ ಸೇವೆ ಸಲ್ಲಿಸುತ್ತಿದ್ದರು. ಸರ್ಕಾರಿ ವಿಶ್ರಾಂತಿ ಗೃಹದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ,ʻನ್ಯಾಯಾಲಯ ತನ್ನ ಕೆಲಸ ಮಾಡಲಿದೆ. ನಾನು ಶೀಘ್ರವೇ ಹಿಂತಿರುಗುತ್ತೇನೆ,ʼ ಎಂದು ಹೇಳಿದರು.

ʻಆಯೋಗದ ಪ್ರಕ್ರಿಯೆಗಳು ಸಮಗ್ರತೆಯನ್ನು ಎತ್ತಿಹಿಡಿಯುತ್ತವೆ. ಆಯೋಗ ಸಾಂವಿಧಾನಿಕ ಆದೇಶಕ್ಕೆ ಬದ್ಧವಾಗಿ ಕಾರ್ಯ ನಿರ್ವಹಿಸ ಲಿದೆ. ನ್ಯಾಯಸಮ್ಮತತೆ ಮತ್ತು ನಿಯಮಗಳ ಕಟ್ಟುನಿಟ್ಟು ಅನುಸರಣೆಗೆ ಆದ್ಯತೆ ನೀಡುತ್ತದೆ,ʼ ಎಂದು ಆಯೋಗ ಹೇಳಿದೆ.

ಆರೋಪಗಳೇನು?: ಖೇಡ್ಕರ್ ಅವರು ಪುಣೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿ ಸಮಯದಲ್ಲಿ ಹುದ್ದೆಯನ್ನು ಮೀರಿದ ಸವಲತ್ತುಗಳಿಗೆ ಬೇಡಿಕೆಯಿಡುವ ಮೂಲಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಜೊತೆಯವರನ್ನು ಬೆದರಿಸುತ್ತಾರೆ. ಖಾಸಗಿ ಕಾರು( ಆಡಿ) ಮೇಲೆ ಕೆಂಪು- ನೀಲಿ ದೀಪ(ಉನ್ನತ ಶ್ರೇಣಿಯ ಅಧಿಕಾರಿಗಳು ಮಾತ್ರ ಬಳಸಬಹುದು) ಇರಿಸಿಕೊಂಡಿರುವುದಲ್ಲದೆ, ವಾಹನದ ಮೇಲೆ ಮಹಾರಾಷ್ಟ್ರ ಸರ್ಕಾರ ಎಂದು ಬರೆಯಲಾಗಿದೆ ಎಂದು ಆರೋಪಿಸಲಾಗಿದೆ. ಪುಣೆ ಜಿಲ್ಲಾಧಿಕಾರಿ ಈ ವಿಷಯ ಎತ್ತಿದ ನಂತರ, ಖೇಡ್ಕರ್ ಅವರನ್ನು ವಿದರ್ಭ ಪ್ರದೇಶದ ವಾಶಿಂ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾಯಿಸಲಾಯಿತು.

2022ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆ ಬಳಿಕ ಐಎಎಸ್‌ ಶ್ರೇಣಿ ನೀಡಿ, ಮಹಾರಾಷ್ಟ್ರ ಕೇಡರ್ ಆಗಿ ನಿಯೋಜಿಸಲಾಯಿತು. ಅಂಗ ವೈಕಲ್ಯ, ಇತರ ಹಿಂದುಳಿದ ವರ್ಗ ಅಥವಾ ಒಬಿಸಿ (ಕೆನೆಪದರವಲ್ಲದ) ಮೀಸಲು ದುರುಪಯೋಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜುಲೈ 11 ರಂದು ಏಕಸದಸ್ಯ ತನಿಖಾ ಸಮಿತಿಯನ್ನು ರಚಿಸಿತು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಕುಮಾರ್ ದ್ವಿವೇದಿ ಸಮಿತಿಯ ನೇತೃತ್ವ ವಹಿಸಿದ್ದರು.

ಯುಪಿಎಸ್‌ಸಿ ಪರೀಕ್ಷೆ: ಐಎಎಸ್, ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್)ಯ ಅಧಿಕಾರಿಗಳನ್ನು ಆಯ್ಕೆ ಮಾಡಲು ನಾಗರಿಕ ಸೇವೆಗಳ ಪರೀಕ್ಷೆಯನ್ನು ಯುಪಿಎಸ್‌ಸಿ ಪ್ರತಿ ವರ್ಷ ಮೂರು ಹಂತಗಳಲ್ಲಿ ನಡೆಸುತ್ತದೆ: ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ.

ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರುವ ಒಬಿಸಿ ಅಭ್ಯರ್ಥಿಗಳು ಕೆಲವು ಸರ್ಕಾರಿ ಉದ್ಯೋಗಗಳ ನೇಮಕದಲ್ಲಿ ಕೆನೆಪದರವಲ್ಲದ ಮೀಸಲು ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

Read More
Next Story